ಮಕ್ಕಳ ಕೈಗೆ ಮೊಬೈಲ್ ಕೊಡಿ !

ಮಕ್ಕಳ ಕೈಗೆ ಮೊಬೈಲ್ ಕೊಡಿ !

ಹಾಂ, ಮತ್ತೊಮ್ಮೆ ಲೇಖನದ ಶೀರ್ಷಿಕೆ ಓದಿ, ತಪ್ಪಾಗಿ ಓದಿಲ್ಲ ಎಂದು ಖಾತ್ರಿ ಪಡಿಸಿಕೊಂಡಿರಾ? ಒಮ್ಮೆ ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ 'ಆನ್ ಲೈನ್' ತರಗತಿಗಳಿಗಾಗಿ ಮಕ್ಕಳ ಕೈಗೆ ಮೊಬೈಲ್ ನೀಡಿದ್ದನ್ನು ಇನ್ನೂ ಬಿಡಿಸಲು ಆಗುತ್ತಿಲ್ಲ ಎಂದು ತಲೆ ಬಿಸಿಯಲ್ಲಿರುವಾಗ ಇವನ್ಯಾರು ಮತ್ತೆ ಅವರ ಕೈಗೆ ಮೊಬೈಲ್ ಕೊಡಿ ಎಂದು ಹೇಳುತ್ತಿರುವವನು ಎಂದು ಕೋಪಗೊಂಡಿರುವಿರಾ? ಬೇಜಾರು ಮಾಡಬೇಡಿ, ನಾನು ಮೊಬೈಲ್ ಮಕ್ಕಳ ಕೈಗೆ ಕೊಡಿ ಎಂದು ಹೇಳಿರುವುದು ಒಂದು ಸದುದ್ದೇಶದಿಂದ. ಮಕ್ಕಳು ನಮ್ಮ ಬಾಹ್ಯಾಕಾಶ, ಬ್ರಹ್ಮಾಂಡದ ಪರಿಚಯವನ್ನು ತಮ್ಮ ಅಂಗೈಯಲ್ಲೇ ಇರುವ ವಸ್ತುವಿನಲ್ಲಿ ನೋಡಿ ಅದರ ಬಗ್ಗೆ ಅಧಿಕ ಜ್ಞಾನವನ್ನು ಸಂಪಾದಿಸಲಿ ಎಂದು. ಬನ್ನಿ, ಮೊಬೈಲ್ ಎಂಬ ಪುಟ್ಟ ಸಾಧನದಿಂದ ಏನೆಲ್ಲಾ ತಿಳಿದುಕೊಳ್ಳಬಹುದು ಎಂದು ಗಮನಿಸುವ. 

ನಾವು ಬಾಹ್ಯಾಕಾಶದಲ್ಲಿರುವ ಸಾವಿರಾರು ನಕ್ಷತ್ರಗಳ ಹೆಸರುಗಳನ್ನು, ಅವುಗಳ ಸ್ಥಾನಗಳನ್ನು ತಿಳಿದುಕೊಳ್ಳಲು ಯಾವುದೇ ಖಗೋಳ ಕೇಂದ್ರ ಅಥವಾ ಪ್ಲಾನಿಟೋರಿಯಂಗಳಿಗೆ ಹೋಗುವ ಅವಶ್ಯಕತೆಯಿಲ್ಲ. ಗ್ರಂಥಾಲಯಗಳಿಗೆ ತೆರಳಿ ದಪ್ಪ ದಪ್ಪದ ಪುಸ್ತಕಗಳನ್ನು ತಡಕಾಡಬೇಕಿಲ್ಲ, ದುಬಾರಿ ಟೆಲಿಸ್ಕೋಪ್ ಗಳನ್ನು ಖರೀದಿಸಿ ಆಕಾಶಕ್ಕೆ ಹಿಡಿದು ನೋಡಬೇಕಾಗಿಲ್ಲ. ಇಂದು ಎಲ್ಲವೂ ನಮ್ಮ ಕಣ್ಣಳತೆಯಲ್ಲೇ ಮೊಬೈಲ್ ಎಂಬ ಮಾಯಾ ಸಾಧನದಿಂದ ಲಭ್ಯ. ಮೊಬೈಲ್ ನಿಂದ ಇರುವ ಉತ್ತಮ ಉಪಯೋಗಗಳಲ್ಲಿ ಇದೂ ಒಂದು. ಆಂಡ್ರಾಯಿಡ್ ಮತ್ತು ಐ ಫೋನ್ ಬಳಕೆದಾರರಿಗೆ ಹಲವಾರು ನಕ್ಷತ್ರ ವೀಕ್ಷಣೆಯ ಅಪ್ಲಿಕೇಷನ್ ಗಳು ಉಚಿತವಾಗಿಯೇ ದೊರೆಯುತ್ತವೆ. ಕೊಂಚ ಅಧಿಕ ಮಾಹಿತಿಗಳನ್ನು ತಿಳಿಯಲು ಕೆಲವೊಂದು ಅಪ್ಲಿಕೇಷನ್ಸ್ ಗಳನ್ನು ಖರೀದಿ ಮಾಡುವ ಅವಕಾಶವೂ ಇದೆ. 

ನೀವು ಇರುವ ಸ್ಥಳದಿಂದಲೇ, ನಿಮ್ಮ ತಲೆಯ ಮೇಲ್ಗಡೆ ಇರುವ ಬಾಹ್ಯಾಕಾಶದಲ್ಲಿ ಅಡಗಿರುವ ಹಲವಾರು ಆಕಾಶಕಾಯಗಳನ್ನು ನಿಮ್ಮ ಕೈಯಲ್ಲಿರುವ ಮೊಬೈಲ್ ಬಳಸಿ ಅವುಗಳ ಹೆಸರು, ದೂರ, ಸ್ಥಾನ ಮೊದಲಾದುವುಗಳನ್ನು ಅರಿತುಕೊಳ್ಳಬಹುದು. ಇವುಗಳಲ್ಲಿ ನಕ್ಷತ್ರಗಳು, ಧೂಮಕೇತುಗಳು, ನಕ್ಷತ್ರ ಪುಂಜಗಳು, ಗ್ರಹಗಳು, ಬರಿಕಣ್ಣಿಗೆ ಕಾಣಿಸದ ತಾರೆಗಳು ಎಲ್ಲವೂ ನಿಮ್ಮ ಮೊಬೈಲ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ. ನಿಮ್ಮ ಹಾಗೂ ಮಕ್ಕಳ ಆಸಕ್ತಿಯನ್ನು ತಣಿಸಬಲ್ಲ ಕೆಲವೊಂದು ಆಪ್ ಗಳ ವಿವರ ಇಲ್ಲಿ ನೀಡಲಾಗಿದೆ. ಈ ಆಪ್ ಗಳನ್ನು ನಿಮ್ಮ ಮೊಬೈಲ್ ಗೆ ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ಅದರ ಬಗ್ಗೆ ಇರುವ ವಿವರಗಳನ್ನು ತಿಳಿದುಕೊಂಡು ಸುರಕ್ಷಿತವೆಂದು ಖಾತ್ರಿ ಪಡಿಸಿಕೊಳ್ಳಬೇಕಾಗಿ ವಿನಂತಿ. ಏಕೆಂದರೆ ಒಂದೇ ಬಗೆಯ ಒಂದಕ್ಕಿಂತ ಹೆಚ್ಚಿನ ಆಪ್ ಗಳು ಇರುತ್ತವೆ. ಅಕ್ಷರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿರುತ್ತವೆ ಅಷ್ಟೇ.

ಅತ್ಯುತ್ತಮ ನಕ್ಷತ್ರ ವೀಕ್ಷಣೆಯ ಆಪ್ ಗಳು: (ಇವುಗಳು ಆಂಡ್ರಾಯಿಡ್ ಹಾಗೂ ಐಫೋನ್ ಎರಡರಲ್ಲೂ ಲಭ್ಯ)

ಸ್ಟಾರ್ ವಾಕ್ ೨ (Star Walk 2) : ಇದೊಂದು ಉಚಿತವಾದ ಆಪ್. ನಿಮ್ಮ ಮೊಬೈಲ್ ನ ಜಿಪಿಎಸ್ ಲೋಕೇಶನ್ ಮೂಲಕ ಕರಾರುವಕ್ಕಾಗಿ ನಕ್ಷತ್ರಗಳ ಸ್ಥಾನಗಳನ್ನು ಹೇಳುತ್ತದೆ. ನೂತನ ತಂತ್ರಜ್ಞಾನದ ಪರಿಣಾಮವಾಗಿ ಟೆಲಿಸ್ಕೋಪ್ ನಲ್ಲಿ ನೋಡಿದಂತಹ ಅನುಭವವಾಗುತ್ತದೆ.

ಸ್ಕೈ ಸಫಾರಿ (Sky Safari) ಉಚಿತ/ಖರೀದಿ: ಸಾವಿರಾರು ವರ್ಷಗಳ ಹಿಂದೆ ನೀವಿರುವ ಜಾಗದಿಂದ ಆಕಾಶ ಹೇಗೆ ಕಾಣಿಸುತ್ತಿತ್ತು, ಮುಂದಿನ ಭವಿಷ್ಯದಲ್ಲಿ ಹೇಗೆ ಕಾಣಿಸಬಹುದು ಎಂದು ತಿಳಿಸುವ ಸ್ವಾರಸ್ಯಕರವಾದ ಆಪ್ ಇದು. ಮುಂದಿನ ದಿನಗಳಲ್ಲಿ ಕಂಡು ಬರುವ ಧೂಮಕೇತುಗಳು, ಕ್ಷುದ್ರಗ್ರಹಗಳು, ಉಲ್ಕಾಪಾತಗಳು ಮೊದಲಾದುವುಗಳ ಮಾಹಿತಿಗಳು ಸಿಗುತ್ತವೆ.

ಸ್ಟಾರ್ ಟ್ರಾಕರ್ (Star Tracker) ಉಚಿತ: ಈ ಆಪ್ ಸೂರ್ಯ ಚಂದ್ರ ಹಾಗೂ ನಕ್ಷತ್ರಗಳ ಬಗ್ಗೆ ತ್ರೀಡಿ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಮಾಹಿತಿ ನೀಡುತ್ತದೆ. ನಿಮ್ಮ ಮೊಬೈಲ್ ನಕ್ಷತ್ರ ವೀಕ್ಷಣಾಲಯದಂತೆ ಕಾರ್ಯ ನಿರ್ವಹಿಸುತ್ತಾ ನಕ್ಷತ್ರಪುಂಜಗಳ ವಿವರಣೆ ನೀಡುತ್ತದೆ.

ಸ್ಕೈ ವ್ಯೂ ಲೈಟ್ (Sky View Lite) ಉಚಿತ: ಈಗಷ್ಟೇ ಬಾಹ್ಯಾಕಾಶದ ಬಗ್ಗೆ ಕುತೂಹಲ ಮೂಡಿ, ಇನ್ನಷ್ಟು ಕಲಿಯುವ ಆಸಕ್ತಿ ಇರುವವರಿಗಾಗಿ ಈ ಆಪ್. ಅಲ್ಟ್ರಾ ರೆಡ್ ಹಾಗೂ ತ್ರೀ ಡಿ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶಕ ನಕ್ಷತ್ರಗಳ ಹಾಗೂ ನಕ್ಷತ್ರ ಪುಂಜಗಳ ಬಗ್ಗೆ ವಿವರಗಳನ್ನು ನೀಡುತ್ತದೆ. ಈ ಆಪ್ ಅನಗತ್ಯ ವಿವರಗಳನ್ನು ತಿಳಿಸದೇ ಮುಖ್ಯವಾದ ಅಂಶಗಳನ್ನು ಮಾತ್ರ ಹೇಳುತ್ತದೆ.

ನಾಸಾ ಆಪ್ (NASA App) ಉಚಿತ: ಈ ಆಪ್ ಅಂತರಾಷ್ಟ್ರೀಯ ಅಂತರಿಕ್ಷ ನಿಲ್ದಾಣದ ಬಗ್ಗೆ ನಾಸಾದ ಅಧಿಕೃತ ಆಪ್. ಇದರಿಂದ (International Space Station) ನಮಗೆ ಭೂಮಿ ಹೇಗೆ ಕಾಣಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದರ ಜೊತೆ ಲೈವ್ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದಾಗಿದೆ. ನಾಸಾದ ಬಗ್ಗೆ ಅಧಿಕ ಮಾಹಿತಿಯನ್ನೂ ಪಡೆದುಕೊಳ್ಳಬಹುದು.

ಸ್ಟಾರ್ ಚಾರ್ಟ್ (Star Chart) ಉಚಿತ: ನಿಮ್ಮ ಮೊಬೈಲ್ ಅನ್ನು ಆಕಾಶದತ್ತ ಎತ್ತಿ ಹಿಡಿದಾಗ ನಿಮ್ಮ ಸ್ಥಾನದಲ್ಲಿರುವ ನಕ್ಷತ್ರಗಳನ್ನು ಪರಿಚಯಿಸುವ ಆಪ್ ಇದು. ಅದೇ ಮೊಬೈಲ್ ಅನ್ನು ನೆಲದ ಕಡೆ ತಿರುಗಿಸಿದಾಗ, ನಿಮ್ಮ ವಿರುದ್ಧ ದಿಕ್ಕಿನಲ್ಲಿರುವ ನಕ್ಷತ್ರಗಳು ಹಾಗೂ ಗ್ರಹಗಳ ಬಗ್ಗೆ ತಿಳಿಸಿಕೊಡುತ್ತದೆ.

ಸೋಲಾರ್ ವಾಕ್ (Solar Walk) ಖರೀದಿ: ಈ ಆಪ್ ಖರೀದಿಗಾಗಿ ಮಾತ್ರ ಲಭ್ಯವಿದ್ದು, ಕೊಂಚ ದುಬಾರಿಯಾಗಿದೆ. ಆದರೆ ಈ ಅಪ್ಲಿಕೇಷನ್ ಮಕ್ಕಳಿಗಾಗಿಯೇ ತಯಾರಿಸಿರುವುದರಿಂದ ನಮ್ಮ ಸೂರ್ಯ ಮಂಡಲ, ನಕ್ಷತ್ರಗಳನ್ನು ವಿಡಿಯೋ ತುಣುಕುಗಳ ಮೂಲಕ ತಿಳಿಸುತ್ತದೆ. ಅತ್ಯುತ್ತಮ ಅಲ್ಟ್ರಾ ರೆಡ್ ಹಾಗೂ ತ್ರೀ ಡಿ ತಂತ್ರಜ್ಞಾನದ ಮುಖಾಂತರ ಕಾರ್ಯ ನಿರ್ವಹಿಸುವುದರಿಂದ ಈ ಆಪ್ ಮೂಲಕ ಉತ್ತಮವಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

ಮೇಲೆ ತಿಳಿಸಿದ ಆಪ್ ಗಳು ಕೆಲವು ಮಾತ್ರ. ಇನ್ನೂ ಹಲವಾರು ಆಪ್ ಗಳು ನಿಮ್ಮ ಮೊಬೈಲ್ ಸ್ಟೋರ್ ನಲ್ಲಿ ಲಭ್ಯ. ಅದರ ಬಗ್ಗೆ ಅರಿತು ಉಪಯೋಗಿಸಿದರೆ ನಿಮ್ಮ ಮಕ್ಕಳಿಗೆ ಬಾಹ್ಯಾಕಾಶದ ಬಗ್ಗೆ ಅಧಿಕ ಮಾಹಿತಿ ದೊರೆಯುತ್ತದೆ. ನಿಮ್ಮ ಬಳಿ ಟೆಲಿಸ್ಕೋಪ್ ಇದ್ದರೆ, ಅದರ ಉಪಯೋಗ ಹಾಗೂ ಬಳಕೆಯ ಬಗ್ಗೆಯೂ ತಿಳಿಸುವ ಆಪ್ ಗಳು ಲಭ್ಯವಿದೆ. ಈಗಿನ ತಂತ್ರಜ್ಞಾನ ಯುಗದಲ್ಲಿ ನಿಮ್ಮ ಮಕ್ಕಳ ಮೊಬೈಲ್ ಕಿತ್ತುಕೊಳ್ಳುವುದರ ಮೂಲಕ ಜ್ಞಾನಾರ್ಜನೆಯಿಂದ ವಂಚಿತರನ್ನಾಗಿಸಬೇಡಿ. ಹದವರಿತು, ಮಹತ್ವದ ಆಪ್ ಗಳನ್ನು ಬಳಸುವುದರ ಬಗ್ಗೆ ತಿಳಿಸಿಕೊಡಿ. ಇದರಿಂದ ಅವರ ಜ್ಞಾನ ಭಂಡಾರ ಬೆಳೆಯುತ್ತದೆ.

(ಮಾಹಿತಿ: ಸೂತ್ರ ಪತ್ರಿಕೆ)

ಚಿತ್ರ; ಅಂತರ್ಜಾಲ ತಾಣ