ಮಕ್ಕಳ ದಿನಾಚರಣೆಗೆ ಎರಡು ಕವನಗಳು

ಮಕ್ಕಳ ದಿನಾಚರಣೆಗೆ ಎರಡು ಕವನಗಳು

ಕವನ

ಇಂದು ನವಂಬರ ೧೪ ವಿಶೇಷ ದಿನ. ಶಾಲೆಗಳಿರುತ್ತಿದ್ದರೆ ಮಕ್ಕಳಿಗೆ ಒಂದು ರೀತಿಯಲ್ಲಿ ಸಂಭ್ರಮ ಸಡಗರ. ಚಾ ಚಾ ನೆಹರೂರವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ನಾಡಿನ ಸಮಸ್ತ ಮಕ್ಕಳಿಗೆ ಶುಭವಾಗಲೆಂದು ಹಿರಿಯರಾದಿಯೆಲ್ಲರು ಹಾರೈಸೋಣ . ಆ ಪ್ರಯುಕ್ತ ಒಂದು ದೇಶಭಕ್ತಿ ಗೀತೆ .... ಜೈ ಹೊ 

ಮಕ್ಕಳೆಲ್ಲ ಬನ್ನಿರೆಲ್ಲ...

ಮಕ್ಕಳೆಲ್ಲ ಬನ್ನಿರೆಲ್ಲ

ದೇಶಗೀತೆ ಹಾಡುವ 

ದೇಶಗೀತೆಯನ್ನು ಹಾಡಿ

ನಾವು ಒಂದೆ ಎನ್ನುವ 

 

ಜೀವ ಧರ್ಮ ದಯದ ಭಾವ

ನಮ್ಮದೆಂದು ಹೇಳುವ

ಸತ್ಯ ಧರ್ಮ ಯಶದ ಗೀತೆ

ಹಾಡಿ ನಾವು ಕುಣಿಯುವ

 

ರಾಷ್ಟ್ರ ಪ್ರೇಮ ಮನುಜ ಕುಲಕೆ

ಅಚಲವೆಂದು ಸಾರುವ

ದೇಶ ಪ್ರೇಮ ಈಶ ಪ್ರೇಮ

ನಮ್ಮದೆನುತ ಸಾಗುವ 

 

ಕಿರಿಯರಲ್ಲಿ ಸ್ವಾತಂತ್ರ್ಯವ

ತುಂಬುವಂತೆ ಮಾಡುವ

ದೇಶ ಭಕ್ತರನ್ನು ಪಡೆದು

ಯೋಗ್ಯರಾಗಿ ಬಾಳುವ

-ಹಾ ಮ ಸತೀಶ

****

ಬನ್ನಿರಿ ಮಕ್ಕಳೆ...

ಬನ್ನಿರಿ ಮಕ್ಕಳೆ ಸಾಗರ ನೋಡಿರಿ

ಹಾಡುತ ನಲಿಯುತ  ಆಡೋಣ|

ಹಾರುವ ತೆರೆಗಳ ಜೊತೆಯಲಿ ಕೂಡುತ

ಓಡುವ ಮೋಡವ ನೋಡೋಣ||

 

ಮರಳಿನ ದಿಬ್ಬದಿ ಕಟ್ಟಿದ ಮನೆಗೆ

ಕಲ್ಲಿನ ಕೋಟೆಯ ಕಟ್ಟೋಣ|

ಹರಿಯುವ ನೀರಿಗೆ ಒಡ್ಡನು ಕಟ್ಟುತ

ಹನಿ ನೀರಾವರಿ ಹರಿಸೋಣ||

 

ದೋಣಿಯ ಏರಿ ಸಾಗರ ದಾಟಿ

ನೇಸರನಂಗಳ ಸೇರೋಣ|

ಕಚಗುಳಿಯಿಕ್ಕುವ ತಣ್ಣನೆ ಗಾಳಿಗೆ

ಸಂಜೆಯ ಸೊಗಸನು ಸವಿಯೋಣ||

 

ತೆಂಗಿನ ಮರಗಳ ತೋರಣ ನೋಡು

ಸಮುದ್ರ ದೇವರ ನಮಿಸೋಣ|

ಬೆಟ್ಟದ ಹೂವಿನ ಮಾಲೆಯ ಮಾಡಿ

ಮತ್ಸ್ಯ ದೇವತೆಗೆ ತೊಡಿಸೋಣ||

 

-ಜನಾರ್ದನ ದುರ್ಗ 

 

ಚಿತ್ರದಲ್ಲಿ : ವಿಹಾನಿ, ಧ್ರುವಿ ಹಾಗೂ ಆದ್ಯಾ ಪ್ರಕಾಶ್, ಬೋಂದೇಲ್, ಮಂಗಳೂರು 

 

ಚಿತ್ರ್