ಮಕ್ಕಳ ಪ್ರವಾಸಕ್ಕೆ ಬಸ್ ಕಲ್ಪಿಸಿ

ಮಕ್ಕಳ ಪ್ರವಾಸಕ್ಕೆ ಬಸ್ ಕಲ್ಪಿಸಿ

ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಬಹುಮುಖ್ಯ ಭಾಗ. ಆದರೆ, ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವಂಥ ಮಕ್ಕಳ ಪ್ರವಾಸದ ಕನಸಿಗೆ ಬಸ್ಸುಗಳ ಕೊರತೆ ತಣ್ಣೀರೆರಚುತ್ತಿರುವುದು ವಿಪರ್ಯಾಸ. ರಾಜ್ಯದಲ್ಲಿ “ಶಕ್ತಿ" ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಸಾಕಷ್ಟು ಮಹಿಳೆಯರ ಓಡಾಟಕ್ಕೆ ‘ಶಕ್ತಿ' ಆಸರೆಯಾಗಿರುವುದು ಖುಷಿಯ ಸಂಗತಿಯೇ ಆದರೂ, ಈ ಯೋಜನೆ ಪರಿಣಾಮ ಶೈಕ್ಷಣಿಕ ಪ್ರವಾಸಕ್ಕೆ ಬಸ್ಸುಗಳ ಕೊರತೆ ಉದ್ಭವಿಸಿರುವುದು ಸ್ವೀಕಾರಾರ್ಹವಲ್ಲ.

ಮೊದಲೆಲ್ಲ ಸರಕಾರಿ ಶಾಲೆಗಳಲ್ಲಿನ ಮಕ್ಕಳ ಪ್ರವಾಸಕ್ಕೆ ಖಾಸಗಿ ಬಸ್ಸುಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ, ಅಪಘಾತ ಪ್ರಕರಣ ಹೆಚ್ಚಳವಾದ್ದರಿಂದ ಹಾಗೂ ಮಕ್ಕಳಿಗೆ ಪ್ರಯಾಣದ ವೇಳೆ ಅಸುರಕ್ಷತೆ ಎದುರಾದ ಕಾರಣ ಖಾಸಗಿ ಬಸ್ಸುಗಳ ಅವಲಂಬನೆಯನ್ನು ತಗ್ಗಿಸಲು ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸಿತು. ಅಲ್ಲದೆ, ಖಾಸಗಿ ಬಸ್ಸು ಸಂಸ್ಥೆಗಳು ಮನಬಂದಂತೆ ಹಣ ಕೇಳಲು ಮುಂದಾದಾಗ, ಶೈಕ್ಷಣಿಕ ಪ್ರವಾಸದ ವೆಚ್ಚವು ಮಕ್ಕಳ ಪೋಷಕರಿಗೆ ಹೊರೆಯಾಗುತ್ತದೆಂಬ ದೃಷ್ಟಿಯಿಂದ “ಮಕ್ಕಳ ಪ್ರವಾಸಕ್ಕೆ ಸರಕಾರಿ ಬಸ್ಸುಗಳನ್ನೇ ಬಳಸಿ" ಎಂದು ಇಲಾಖೆ ನೀಡಿದಂಥ ಆದೇಶ ವಿದ್ಯಾರ್ಥಿಗಳ ಹಿತಕ್ಕಾಗಿಯೇ ಆಗಿತ್ತು.

ಆದರೆ, ಉತ್ತರ ಕರ್ನಾಟಕದ ೭ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ‘ಶಕ್ತಿ' ಯೋಜನೆಯ ಬಳಿಕ ಶೇ. ೮೦ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ‘ಶಕ್ತಿ' ಯೋಜನೆಗೂ ಮೊದಲು ಈ ಭಾಗದಲ್ಲಿ ಪ್ರತಿನಿತ್ಯ ೧೬ ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಈಗ ಈ ಸಂಖ್ಯೆ ೨೬ ಲಕ್ಷವನ್ನು ದಾಟಿದೆ. ಹೆಚ್ಚುವರಿ ಬಸ್ಸುಗಳನ್ನು ಒದಗಿಸಿಲ್ಲದ ಕಾರಣ, ಶಾಲೆಗಳ ಬೇಡಿಕೆಗೆ ತಕ್ಕಂತೆ ಸರಕಾರಿ ಬಸ್ಸುಗಳನ್ನು ಪೂರೈಸಲು ಕೆಕೆಆರ್ ಟಿಸಿ, ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿವೆ. ಮೊದಲೇ ಬಸ್ ಕೊರತೆ ಸಮಸ್ಯೆ ಎದುರಿಸುತ್ತಿರುವ ರಸ್ತೆ ಸಾರಿಗೆ ನಿಗಮಗಳು ಪ್ರಸ್ತುತ ಶಾಲಾ ಪ್ರವಾಸದ ಹಂಗಾಮು ಆರಂಭವಾಗುತ್ತಿದ್ದಂತೆ ಅಸಹಾಯಕ ಧ್ವನಿಯನ್ನು ಹೊರಡಿಸುತ್ತಿವೆ. ‘ಖಾಸಗಿ ಬಸ್ಸುಗಳನ್ನು ಬಳಸಿ' ‘ನಾಲ್ಕೈದು ದಿನಗಳ ಪ್ರವಾಸದ ಬದಲು ೨ ದಿನ ಟೂರ್ ಮಾಡಿ' ಮುಂತಾದ ಪುಕ್ಕಟೆ ಸಲಹೆಗೂ ಕಿವಿಕೊಡಬೇಕಾದ ದುಃಸ್ಥಿತಿ ಶಾಲೆಗಳಿಗೂ ಉದ್ಭವಿಸಿರುವುದು ಶಿಕ್ಷಕರಿಗಷ್ಟೇ ಅಲ್ಲದೆ ಸಹಜವಾಗಿ ಪೋಷಕರಲ್ಲೂ ಆಕ್ರೋಶಕ್ಕೆ ಎಡೆ ಮಾಡಿ ಕೊಟ್ಟಿದೆ.

ಪ್ರವಾಸ ಎನ್ನುವುದು ಮಕ್ಕಳಿಗೆ ಬಹುದೊಡ್ಡ ಪಾಠ. ಕಣ್ತೆತೆರೆದಷ್ಟು ಅಲ್ಲಿ ಕಲಿಯುವಿಕೆಗೆ ಅವಕಾಶಗಳು ನೂರಾರು ಕಾಣಸಿಗುತ್ತವೆ. ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆಯಲು ಅದೊಂದು ಉತ್ತಮ ಅವಕಾಶ. ಕೇವಲ ಜ್ಞಾನದ ವಿಸ್ತಾರವಷ್ಟೇ ಅಲ್ಲ, ಪ್ರವಾಸದಿಂದ ಒಗ್ಗಟ್ಟು, ಸಹಬಾಳ್ವೆ, ಪರಸ್ಪರ ಸಹಕಾರ, ಖುಷಿ ಹಂಚಿಕೊಳ್ಳುವ ಬಗೆ, ಜವಾಬ್ದಾರಿ ನಿರ್ವಹಣೆ-ಮುಂತಾದ ಅನುಭವಗಳೂ ಮಕ್ಕಳಿಗೆ ದಕ್ಕುತ್ತವೆ. ಇಂಥ ಅಮೂಲ್ಯ ಅವಕಾಶಕ್ಕೆ ಬಸ್ಸುಗಳ ಕೊರತೆ ಅಡ್ಡಗಾಲು ಆಗಬಾರದು. ಸಾರಿಗೆ ಇಲಾಖೆ ಕೂಡಲೇ ಮಕ್ಕಳ ಪ್ರವಾಸಕ್ಕೆ ಅಗತ್ಯ ಬಸ್ಸುಗಳನ್ನು ಪೂರೈಸಲು ಮುಂದಾಗಬೇಕು.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೩-೧೧-೨೦೨೩

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ