ಮಕ್ಕಳ ಮುಗ್ಧ ಮನಸ್ಸು

ಮಕ್ಕಳ ಮುಗ್ಧ ಮನಸ್ಸು

ಶಿಕ್ಷಣ ಕ್ಷೇತ್ರದ ಕೇಂದ್ರ ಬಿಂದುವೇ ಶಿಕ್ಷಕರು. ಮಕ್ಕಳಿಗೆ ಮನೆಯಲ್ಲಿ ಆರಂಭವಾಗುವ ಪ್ರೀತಿ, ವಾತ್ಸಲ್ಯದಿಂದ ತುಂಬಿದ ಶಿಕ್ಷಣ ಶಾಲೆಗಳಲ್ಲಿ ಮುಂದುವರೆಯುತ್ತದೆ. ವೃತ್ತಿಯಲ್ಲಿ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿ. ವೃಧ್ಧಾಪ್ಯದವರೆಗೂ ಗೌರವ ಮತ್ತು ಪ್ರೀತಿಯನ್ನು ಗಳಿಸುವ‌ ಶ್ರೇಷ್ಠ ಹುದ್ದೆ.

ಅದೃಷ್ಟದ ಫಲವಾಗಿ ನಾನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತ್ತಡ್ಕ ಇಲ್ಲಿಗೆ‌ ಶಿಕ್ಷಕಿಯಾಗಿ ನೇಮಕಗೊಂಡು ವೃತ್ತಿಗೆ ಕಾಲಿಟ್ಟಿದ್ದೆ. ಸುಮಾರು ಇನ್ನೂರ ನಲವತ್ತು ಮಕ್ಕಳಿಂದ ಕೂಡಿದ್ದ ಶಾಲೆಯಲ್ಲಿ ಎಂಟು ಜನ ಶಿಕ್ಷಕರು ಸೇವೆ‌ ಸಲ್ಲಿಸುತ್ತಿದ್ದೆವು. ಶಾಲೆಯ ಪರಿಸರ, ಮಕ್ಕಳ ಪ್ರೀತಿ, ಆ ಊರಿನ ಜನರ‌ ಒಡನಾಟ, ಗೌರವ ನನಗಿನ್ನೂ ಮನಃಪಟಲದಲ್ಲಿ ಹಚ್ಚಹಸಿರಾಗಿ ಉಳಿದಿದೆ. ಹೆಚ್ಚಾಗಿ ಕುಂಬಾರರ ಕುಟುಂಬಗಳು ಅಲ್ಲಿ ನೆಲೆಯಾಗಿವೆ. ಜೊತೆಗೆ ಇನ್ನಿತರ ವರ್ಗದ ಕುಟುಂಬಗಳು ಸಹಜೀವನ ನಡೆಸುತ್ತಲಿವೆ. ಈ‌ ಶಾಲೆಯಲ್ಲಿ ಕಲಿಯುವ ಮಕ್ಕಳು ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಊರಿಗೆ ಗೌರವವನ್ನು ತಂದುಕೊಡುತ್ತಿದ್ದಾರೆ. ಉನ್ನತೀಕರಿಸಿದ ಶಾಲೆಯಾದುದರಿಂದ ಎಂಟನೇ‌ ತರಗತಿಯವರೆಗೆ ತರಗತಿಗಳು ನಡೆಯುತ್ತದೆ. ಈ ಊರಿನಲ್ಲಿ ಮೊದಲಬಾರಿಗೆ ಶಿಕ್ಷಕಿ ವೃತ್ತಿ ಸಿಕ್ಕಿರುವುದು ನನ್ನ ಸೌಭಾಗ್ಯವೇ ಸರಿ. 

ಸೇವೆ ಸಲ್ಲಿಸುವ ಸಂದರ್ಭದಲ್ಲಿ ಏಳನೇ ತರಗತಿಯಲ್ಲಿ ಶ್ರದ್ಧಾ ಎಂಬ ಹುಡುಗಿ ಕಲಿಯುತ್ತಿದ್ದಳು. ಕೃಷ್ಣವರ್ಣೆ ಸ್ಪುರದ್ರೂಪಿ. ನಾಟಕ, ಭರತನಾಟ್ಯ ಎಲ್ಲದಕ್ಕೂ ಸೈ. ಆದರೆ ಕಲಿಕೆಯಲ್ಲಿ ಸಾಧಾರಣ ಹುಡುಗಿ. ಅವಳ ಅಮ್ಮ..... "ಶ್ರದ್ಧಾಳಿಗೆ ಓದಲು ಹೇಳಿ ಅವಳು ಹುಶಾರಾಗಬೇಕು" ಅಂತ ದಿನಾಲು ಹೇಳುತ್ತಾ ಇರುತ್ತಿದ್ದರು. ನಾನು ಅವಳನ್ನು ಪ್ರೀತಿಯಿಂದ ಮಾತಾಡಿಸಿಕೊಂಡು ಕಲಿಯಲು ಪ್ರೇರಣೆಯನ್ನು ನೀಡುತ್ತಿದ್ದೆ. ಅವಳಿಗೂ ನನ್ನ ಮೇಲೆ ಪ್ರೀತಿ ಗೌರವ. ಕಲಿಕೆಯಲ್ಲಿ ತೊಡಗಿಕೊಂಡು ಜಾಣೆ ಆದಳು. ನನ್ನ ಮೇಲೆ ಅಮ್ಮನ ಮೇಲಿರುವಂತೆ ಮೋಹ, ಅಕ್ಕರೆ. ಸುಳ್ಯದಿಂದ ಉಪ್ಪಿನಂಗಡಿಗೆ ದಿನಂಪ್ರತಿ ಓಡಾಡಲು ಕಷ್ಟವಾದುದರಿಂದ ನಾನು ಸುಳ್ಯಕ್ಕೆ ನಿಯೋಜನೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಹುಡುಗಿ ಮಂಕಾದಳು ಅಳಲು ಆರಂಭಿಸಿದಳು. ತರಗತಿಯ‌ ಮಕ್ಕಳು ಅಳಲಾರಂಭಿಸಿದರು. ಹುಡುಗಿ ನಾನು ನಿಯೋಜನೆಗೊಳ್ಳುತ್ತಿದ್ದಂತೆ ಅನ್ನ ನೀರು ತೆಗೆದುಕೊಳ್ಳಲು ನಿರಾಕರಿಸಿದಳು. ನನಗೂ ಚಿಂತೆ, ಮನೆಯವರಿಗೂ ಚಿಂತೆಯಾಯಿತು. ಪ್ರತಿ ದಿನ ನನ್ನ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಕಣ್ಣೀರು ಹಾಕುತ್ತಿದ್ದಳು. ದಿನಂಪ್ರತಿ ಕರೆ ಮಾಡಿ ಮಾತನಾಡುವ ಕೆಲಸ ಕೆಲವು ದಿನಗಳವರೆಗೆ ನಡೆಯಿತು. ನಿಧಾನಕ್ಕೆ ‘ಟೀಚರ್ ನೀವು ಖುಷಿಯಾಗಿರಿ’ ಅನ್ನುತ್ತಿದ್ದಳು. ಮಕ್ಕಳ ಮನಸ್ಸು ಶುಭ್ರತೆ ಮತ್ತು ಮುಗ್ಧತೆಯಿಂದ ಕೂಡಿರುತ್ತದೆ ಎಂಬುದಕ್ಕೆ ಈ ಹುಡುಗಿ ನನಗೆ ಸಾಕ್ಷಿಯಾದಳು. ಅವಳ ಪ್ರೀತಿ, ಒಲುಮೆ ನನ್ನ ಮನದಲ್ಲಿ ಈಗಲೂ ಇದೆ. ನೆನಪಾದಾಗ ಕರೆಮಾಡಿ ಮಾತಾನಾಡುತ್ತಿರುತ್ತಾಳೆ. ನಾನು ಹೇಳಿದ‌ ಹಿತನುಡಿಗಳನ್ನು ನೆನೆಸಿಕೊಂಡು ನಿಮ್ಮಿಂದ ನಾನು ತುಂಬಾ ಕಲಿತೆ ಟೀಚರ್, ನೀವು ನನಗೆ ಒಳ್ಳೆಯ ಮಾರ್ಗದರ್ಶಕರು ಅನ್ನುತ್ತಾಳೆ. ನನಗೆ ನನ್ನ ಶಿಷ್ಯೆ ಅಂದುಕೊಳ್ಳಲು ಹೆಮ್ಮೆಯಾಗುತ್ತಿದೆ. ಬಡ ಕುಟುಂಬದಿಂದ ಬೆಳೆದ ಹುಡುಗಿ. ಇವಳ ಅಮ್ಮ ಅಂಗನವಾಡಿ ಸಹಾಯಕಿ ಹುದ್ದೆಯಲ್ಲಿದ್ದಾರೆ. ಇವಳ ತಂಗಿಯೂ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ಇದೀಗ ಶ್ರದ್ಧಾ ಶ್ರದ್ಧೆಯಿಂದ ಓದಿ ಬಿ.ಎ ಪದವಿಯನ್ನು ಮುಗಿಸಿಕೊಂಡು ಭರತನಾಟ್ಯ ವಿದ್ವತ್ ಅಭ್ಯಾಸ ಮಾಡುತ್ತಿದ್ದಾಳೆ. ಭರತನಾಟ್ಯ ಗುರುಗಳಿಗೂ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದಾಳೆ. ಇವಳ ಕಲಾಬದುಕು ಮತ್ತು ವೃತ್ತಿಬದುಕು ಶುಭದಾಯಕವಾಗಿರಲಿ ಎಂದು ಆಶಿಸುತ್ತೇನೆ.

-ಮಮತಾ ಕೆ, ಸುಳ್ಯ.

ಚಿತ್ರ ಕೃಪೆ: ಇಂಟರ್ನೆಟ್ ತಾಣ