ಮಕ್ಕಳ ಸಾಮಾನ್ಯ ಜ್ಞಾನದ ಮಟ್ಟ ಕುಸಿಯುತ್ತಿದೆಯೇ?

ಮಕ್ಕಳ ಸಾಮಾನ್ಯ ಜ್ಞಾನದ ಮಟ್ಟ ಕುಸಿಯುತ್ತಿದೆಯೇ?

ಇದು ಕೆಲವು ವರ್ಷಗಳ ಹಿಂದಿನ ಕಥೆ. ನಮ್ಮ ಊರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರತೀ ವರ್ಷ ನಡೆಯುತ್ತದೆ. ಆಯೋಜಕ ಸಮಿತಿಯು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಕಳೆದ ಹಲವಾರು ವರ್ಷಗಳಿಂದ ನಾನು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸುವ ತಂಡದ ಸದಸ್ಯನಾಗಿದ್ದೇನೆ. ಪ್ರತೀ ವರ್ಷ ಭಕ್ತಿ ಗೀತೆ, ಜಾನಪದ ನೃತ್ಯ, ಭರತನಾಟ್ಯ, ರಂಗೋಲಿ ಹೀಗೆ ಸ್ಪರ್ಧೆಗಳು ನಡೆಯುತ್ತವೆ. ಸ್ಪರ್ಧೆಗಳಲ್ಲಿ ಸ್ವಲ್ಪ ಬದಲಾವಣೆ ಇರಲಿ ಎಂದು ಒಂದು ವರ್ಷ ನಾನು ರಸ ಪ್ರಶ್ನೆ ಅಥವಾ ಕ್ವಿಜ್ ಸ್ಪರ್ಧೆ ನಡೆಸುವ ಎಂದು ಸಲಹೆ ನೀಡಿದೆ. ಸಮಿತಿಯು ಒಪ್ಪಿಗೆ ನೀಡಿ ಪ್ರಶ್ನೆಗಳನ್ನು ತಯಾರು ಮಾಡುವ ಜವಾಬ್ದಾರಿಯನ್ನು ನನ್ನ ಹೆಗಲಿಗೇ ಹಾಕಿತು. ನಮ್ಮಲ್ಲಿ ಜೂನಿಯರ್, ಸೀನಿಯರ್ ವಿಭಾಗಗಳಿರುವುದರಿಂದ ಬೇರೆ ಬೇರೆ ರೀತಿಯ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಬೇಕಾಯಿತು. ಪ್ರತೀ ಪ್ರಶ್ನೆಗೆ ೪ ಉತ್ತರಗಳೂ ಇದ್ದುವು. ಸರಿ ಉತ್ತರಕ್ಕೆ ಟಿಕ್ ಮಾಡಿದರೆ ಸಾಕಿತ್ತು. ಆದರೆ ಆ ವರ್ಷದ ಫಲಿತಾಂಶ ನಿರಾಶಾದಾಯಕವಾಗಿತ್ತು. ಒಂದು ಗಂಟೆಯಲ್ಲಿ ೪೦ ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತು. ಆದರೆ ೪೦ ಪ್ರಶ್ನೆಗಳಲ್ಲಿ ದೊರೆತ ಗರಿಷ್ಟ ಸರಿ ಉತ್ತರ ೧೮ ಮಾತ್ರ. ೫೦%ಕ್ಕೂ ಕಮ್ಮಿ. ಸಮಿತಿಯವರಿಗೆ ಭಾರೀ ನಿರಾಶೆಯಾಯಿತು. ಪ್ರಶ್ನೆ ಪತ್ರಿಕೆ ಕನ್ನಡದಲ್ಲಿ ಮಾತ್ರ ಇದ್ದುದರಿಂದ ಹೀಗಾಯಿತು ಎಂದು ಕೆಲವರ ಅಭಿಪ್ರಾಯ. ಮಕ್ಕಳು ಎಲ್ಲಾ ಆಂಗ್ಲ ಮಾಧ್ಯಮ ಶಾಲೆಗೆ ಹೋಗುವುದಲ್ಲಾ ಕನ್ನಡ ಗೊತ್ತಾಗುವುದಿಲ್ಲ ಎಂದು ಅಭಿಪ್ರಾಯಗಳು ಬಂದವು. ಮುಂದಿನ ವರ್ಷ ನಾನು ಆಂಗ್ಲ ಭಾಷೆಯಲ್ಲೂ ಪ್ರಶ್ನೆ ಪತ್ರಿಕೆ ಮಾಡಿದೆ. ಆಗಲೂ ನಿರಾಶೆಯಾಯಿತು ೫೦ % ಕ್ಕಿಂತಲೂ ಅಧಿಕ ಅಂಕಗಳು ಯಾರಿಗೂ ದೊರೆಯಲಿಲ್ಲ. ಜೂನಿಯರ್ ವಿಭಾಗದಲ್ಲಿ ನಾನು ಸೂರ್ಯನು ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ ಎಂದು ಕೇಳಿದಕ್ಕೆ ಸುಮಾರು ೪ ಮಂದಿ ತಪ್ಪು ಉತ್ತರವನ್ನು ನೀಡಿದ್ದರು. ಮಕ್ಕಳ ಸಾಮಾನ್ಯ ಜ್ಞಾನದ ಮಟ್ಟ ನೋಡಿ ನಾನು ದಂಗಾದೆ. ಮುಂದಿನ ವರ್ಷದಿಂದ ರಸಪ್ರಶ್ನೆ ಸ್ಪರ್ಧೆ ರದ್ದಾಯಿತು. ಮಕ್ಕಳ ಸಾಮಾನ್ಯ ಜ್ಞಾನದ ಸಂಗತಿ ಹೀಗೇಕೆ ಆಯಿತು?

ನಾನು ಗಮನಿಸಿದ ಪ್ರಕಾರ ಈಗಿನ ಕಾಲದ ಮಕ್ಕಳು ನಿಜಕ್ಕೂ ಸ್ಮಾರ್ಟ್ ಆದರೆ ಅವರಿಗೆ ಜಗತ್ತಿನ ಆಗುಹೋಗುವಿನ ಪರಿಚಯವಿಲ್ಲ ಎಂದು ನನ್ನ ನಂಬಿಕೆ. ಪಾಲಕರು ಮಕ್ಕಳಿಗೆ ಕೆಲವೊಂದು ಸಾಮಾನ್ಯ ಜ್ಞಾನದ ವಿಷಯ ತಿಳಿಸುವುದೇ ಇಲ್ಲ. ನಮ್ಮ ದೇಶದ ಪ್ರಧಾನಿ, ರಾಷ್ಟಪತಿ, ರಾಜ್ಯದ ರಾಜ್ಯಪಾಲ, ಮುಖ್ಯಮಂತ್ರಿ, ಕ್ರೀಡೆ, ಸಿನೆಮಾ ವಾರ್ತೆ ಇವೆಲ್ಲಾ ಗೊತ್ತೇ ಇರದಿದ್ದರೆ ಹೇಗೆ? ಇಂತಹ ಹಲವಾರು ಪ್ರಶ್ನೆಗಳಿಗೆ ಮಕ್ಕಳು ತಪ್ಪು ಉತ್ತರವನ್ನೇ ಬರೆದಿದ್ದರು. ದೂರದರ್ಶನದಲ್ಲಿ ಬರುವ ವಾರ್ತೆಗಳನ್ನು ಪಾಲಕರು ನೋಡಲು ಹೇಳುವುದೇ ಇಲ್ಲ. ಮನೆಗೊಂದು ವಾರ್ತಾ ಪತ್ರಿಕೆ (ಕನ್ನಡ ಅಥವಾ ಇಂಗ್ಲೀಷ್) ತರಿಸುವುದೇ ಇಲ್ಲ. ಅವರ ಪ್ರಕಾರ ಅದಕ್ಕೆ ಹಾಕುವ ಹಣ ದಂಡ. ಮೊಬೈಲ್ ನಲ್ಲೇ ಎಲ್ಲಾ ಸಿಗುತ್ತದೆ ಅಲ್ವಾ? ಎಂಬ ಉತ್ತರ ಬರುತ್ತದೆ. ಮೊಬೈಲ್ ನೋಡಿ ಒಂದು ಸೀಮಿತ ವಿಷಯದಲ್ಲಿ ಮಾತ್ರ ತಮ್ಮ ಮಗ/ಮಗಳು ಬುದ್ಧಿವಂತರಾಗುತ್ತಿದ್ದಾರೆ ಎಂಬ ಅರಿವು ಪಾಲಕರಿಗೆ ಗೋಚರಿಸುತ್ತಿಲ್ಲ. ನನಗೆ ಈಗಲೂ ಬೆಳಿಗ್ಗೆ ಒಂದಾದರೂ ದಿನ ಪತ್ರಿಕೆ ಓದದಿದ್ದರೆ ಸಮಾಧಾನವಾಗುವುದಿಲ್ಲ. ಆದರೆ ಇಂದಿನ ಮಕ್ಕಳು ಪತ್ರಿಕೆ ಓದುವುದಿಲ್ಲ. ದೈನಂದಿನ ಆಗುಹೋಗುವಿನ ಬಗ್ಗೆ ತಿಳಿದಿರುವುದಿಲ್ಲ. ಅದೇ ಬೇಸರದ ಸಂಗತಿ. ನೀವು ಬೇಕಾದಲ್ಲಿ ಗಮನಿಸಿ. ಈ ವಾರ್ತಾ ಪತ್ರಿಕೆ, ನಿಯತಕಾಲಿಕಗಳನ್ನು ಓದುವವರು ೩೦ ವರ್ಷಕ್ಕೆ ಮೇಲ್ಪಟ್ಟವರೇ. ಅದಕ್ಕಿಂತ ಕೆಳಗಿನ ಜನಾಂಗದವರು ಓದುವ ಅಭ್ಯಾಸ ಬಿಟ್ಟೇ ಬಿಟ್ಟಿದ್ದಾರೆ. ಏನಿದ್ದರೂ ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಮಾತ್ರ. ಅದರಲ್ಲೂ ಜ್ಞಾನಾಭಿವೃದ್ಧಿಯ ತಾಣಗಳನ್ನು ಗಮನಿಸುತ್ತಾರೆಯೇ? ತುಂಬಾ ಕಡಿಮೆ. 

ನೀವು ಎಂದಾದರೂ ಪುಸ್ತಕ ಅಂಗಡಿಗೆ ಭೇಟಿ ನೀಡಿದರೆ ಅಲ್ಲಿ ಪತ್ರಿಕೆಗಳ ಮಾರಾಟ ಹೇಗಿದೆ? ಎಂದು ಕೇಳಿ ನೋಡಿ. ಅವನ ಉತ್ತರ ಖಂಡಿತಾ ನಿರಾಶಾದಾಯಕವಾಗಿರುತ್ತದೆ. ಪತ್ರಿಕೆ ಮಾರಿ ಜೀವನ ಮಾಡುವ ಕಾಲ ಹೋಯ್ತು ಸರ್ ಎಂದು ಖಂಡಿತಾ ಹೇಳುತ್ತಾನೆ. ಅವನ ಪತ್ರಿಕೆಯ ಅಂಗಡಿ ಈಗ ಜನರಲ್ ಸ್ಟೋರ್ ಆಗಿರುತ್ತದೆ. ಮೊದಲೊಂದು ಕಾಲವಿತ್ತು ಪತ್ರಿಕೆಯ ಅಂಗಡಿಯಲ್ಲಿ ಎಷ್ಟೊಂದು ಬಗೆಯ ಪತ್ರಿಕೆಗಳು ಇದ್ದುವು. ಈಗ ಮಕ್ಕಳ ಪುಸ್ತಕಗಳನ್ನೂ ಕೇಳುವವರಿಲ್ಲ. ನಾವು ಸಣ್ಣವರಿರುವಾಗ ಬಾಲಮಂಗಳ, ಬಾಲಮಿತ್ರ, ಚಂದಮಾಮದಂತಹ ಪುಸ್ತಕಗಳನ್ನು ಕಾದು ನಿಂತು ಓದುತ್ತಿದ್ದೆವು. ಆ ದಿನಗಳು, ಅಂದಿನ ರೋಚಕತೆ ಈಗೆಲ್ಲಿ? ಬೆರಳೊತ್ತಿದರೆ ಮೊಬೈಲ್ ನಲ್ಲಿ ಇ-ಪುಸ್ತಕಗಳ ರಾಶಿ ಕಂಡು ಬರುತ್ತದೆ. ಅದನ್ನಾದರೂ ಓದುತ್ತಾರಾ? ನನಗೆ ಸಂಶಯವಿದೆ.

ಪಾಲಕರೇ ನಿಮ್ಮಲ್ಲಿ ಒಂದು ವಿನಂತಿ. ಕನಿಷ್ಟ ಒಂದು ದಿನಪತ್ರಿಕೆಯನ್ನಾದರೂ ಮನೆಗೆ ತರಿಸಿ. ಓದುವ ಅಭ್ಯಾಸ ಅತ್ಯಂತ ಒಳ್ಳೆಯದು. ಕಾದಂಬರಿಯಂತಹ ಪುಸ್ತಕಗಳನ್ನು ಓದಿದರೆ ಇನ್ನೂ ಒಳ್ಳೆಯದು. ಜ್ಞಾನಾಭಿವೃದ್ಧಿಗಾಗಿ, ಮನೋರಂಜನೆಗಾಗಿ ಪುಸ್ತಕಗಳನ್ನು ಓದಿ. ನಿಜಕ್ಕೂ ನಿಮ್ಮ ಮಕ್ಕಳ ಸಾಮಾನ್ಯ ಜ್ಞಾನ ಉತ್ತಮವಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಮಕ್ಕಳು ಪಾಠ ಪುಸ್ತಕದ ಬದನೇಕಾಯಿಯನ್ನೇ ಓದಿ, ಅದನ್ನೇ ಬ್ರಹ್ಮಾಂಡ ಜ್ಞಾನ ಎಂದು ತಿಳಿದು ಉತ್ತಮ ಕೆಲಸವನ್ನೇನೋ ಗಿಟ್ಟಿಸಿಕೊಳ್ಳಬಹುದು. ಆದರೆ ಅವನ ಸಾಮಾನ್ಯ ಜ್ಞಾನ ಅತ್ಯಂತ ಕನಿಷ್ಟ ಮಟ್ಟದಲ್ಲಿರುತ್ತದೆ. ಹೀಗೆ ಆಗದಿರಲಿ. ಅವರಿಗೂ ಕ್ರೀಡೆ, ಸಿನೆಮಾ, ರಾಜಕೀಯ, ವಿಜ್ಞಾನದಲ್ಲಾಗುವ ಬೆಳವಣಿಗೆಗಳ ಬಗ್ಗೆ ಅರಿವು ಮೂಡಲಿ. 

ಚಿತ್ರ: ಅಂತರ್ಜಾಲ ತಾಣದಿಂದ