ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು !

ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು !

ಬರಹ

ಮಕ್ಕಳ ಸಾಹಿತ್ಯ, ಮತ್ತು ಅವರಿಗೆ ಬೇಕಾದ ಕಥೆಗಳು !  ಭಾರತದಲ್ಲಿ ಮಕ್ಕಳ ಸಾಹಿತ್ಯ ಪರಂಪರೆ ಬಹಳ ಪ್ರಾಚೀನವಾದದ್ದು ! ಇದು, ಬಹುಶಃ ವಿಷ್ಣು ಶರ್ಮರು ಬರೆದ 'ಪಂಚತಂತ್ರ,' ದಿಂದ ಪ್ರಾರಂಭವಾಗಿರಬಹುದು. ಇಲ್ಲಿ ಪ್ರಯೋಗಿಸುವ ತಂತ್ರವೆಂದರೆ, ಯವುದೋ ರಾಜಕುಮಾರನಿಗೆ, ಕಥೆಯ ರೂಪದಲ್ಲಿ ನೀತಿ ಬೊಧಿಸುವ ರೀತಿ; ಕಥೆಗಳಲ್ಲಿ ಕಾಡುಪ್ರಾಣಿಗಳು ತಮ್ಮ ಸಹಜ ಸ್ಥಿತಿಯಲ್ಲೂ ಮನುಷ್ಯರಂತೆಯೇ, ಯೋಚಿಸುತ್ತ ಮಕ್ಕಳ ಮನಸ್ಸನ್ನು ಸೆರೆಹಿಡಿಯುವ ಅದ್ಭುತ ರೀತಿ, ಅನನ್ಯವಾಗಿದೆ ! ಮಕ್ಕಳ ಕಲ್ಪನಾಲೋಕದಲ್ಲಿ ನೀತಿಯನ್ನೂ ಬೋಧಿಸುವ ’ಈಸೊಪನ ಕಥೆಗಳು ’ ಕೂಡ, 'ಪಂಚತಂತ್ರ' ದಿಂದ ಪ್ರಭಾವಿತವಾದವುಗಳೇ ! ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ  ಯುಗದಲ್ಲೂ ವಿಶ್ವದ ವಿವಿಧ ಜನಾಂಗದ ಮಕ್ಕಳು ಕಥೆ ಕೇಳುವ, ಅಥವ ಹೇಳುವ ಪರಿಪಾಠವನ್ನು ಬಿಟ್ಟಿಲ್ಲ ! ಆದರೆ ಹಿಂದೊಮ್ಮೆ ಪ್ರಾರಂಭವಾಗುತ್ತಿದ್ದ, 'ಒಂದಾನೊಂದು ಕಾಲದಲ್ಲಿ..' ಎನ್ನುವ ಶೈಲಿ ಸ್ವಲ್ಪ ಬದಲಾಗಿರಬಹುದು ಅಷ್ಟೆ !

ಅಡುಗೋಲಜ್ಜಿಯ ಕಥೆಯಲ್ಲಿ ಬರುವ, ರಾಜಕುಮಾರ, ರಾಜಕುಮಾರಿ, ಬ್ರಹ್ಮರಾಕ್ಷಸ, ಇತ್ಯಾದಿಗಳು ಮಾಯವಾಗಿ, ಈಗಿನ ಕಥೆಗಳು ಶುಧ್ಧ ಮನರಂಜನೆಯ ಕೆಂದ್ರದಲ್ಲೇ ಸುತ್ತುತ್ತವೆ. ಬುಧ್ಧಿ ಚಾತುರ್ಯಕ್ಕೆ ಹೆಸರಾದ, 'ಅಕ್ಬರ್ ಬೀರ್ಬಲ್', 'ತೆನಾಲಿ ರಾಮಕೃಷ್ಣ', ಮಕ್ಕಳನ್ನು ನಗಿಸಿ ಪ್ರಸನ್ನತೆಯನ್ನು ಪಸರಿಸುವಲ್ಲಿ ಸಹಾಯ ಮಾಡುತ್ತವೆ.

ನಮ್ಮ ದೇಶದ 'ಮಹಾಭಾರತ', 'ರಾಮಾಯಣ' ಗಳಂತಹ ಮಹಾಕಾವ್ಯಗಳ ಕಥೆ, ಉಪಕಥೆಗಳ 'ವಜ್ರದ ಗಣಿಗಳು,' ಯಾವ ದೇಶದಲ್ಲೂ, ಇಷ್ಟು ದೊಡ್ಡ ಪ್ರಮಾಣದಲ್ಲಿಲ್ಲ ! ಧಾರ್ಮಿಕ ಹಿನ್ನೆಲೆ, ಅಧ್ಯಾತ್ಮ ಜ್ನಾನಗಳ ಅಮೂಲ್ಯ ಭಂಡಾರಗಳಾದ ಇವು, ಜೀವನದ ಮೌಲ್ಯಗಳಾದ, ಶ್ರಧ್ಧೆ, ದಯೆ, ತ್ಯಾಗ, ಆತ್ಮವಿಶ್ವಾಸ, ಗೌರವ ಗಳನ್ನು ಜಾಗೃತಗೊಳಿಸುತ್ತವೆ.  ’ಹರಿದಾಸರ ಕಥೆಗಳು,” ’ಶ್ರೀ ಕೃಷ್ಣನ ಬಾಲಲೀಲೆ, ’ಯನ್ನು ಆಧರಿಸಿದ ಕಥೆಗಳು, ’ಬಸವಣ್ಣನವರ ವಚನಗಳು,’  ’ಸರ್ವಜ್ಞನ ವಚನಗಳು ’, ಜೀವನ ಕಲೆಯನ್ನು ಬೋಧಿಸುವ 'ಅನರ್ಘ್ಯ' ರತ್ನಗಳು.

ಬಾಲ ಸಾಹಿತ್ಯಕ್ಕೆ ಡಾ.ಶಿವರಾಮಕಾರಂತರ ಕೊಡುಗೆ, ಅವರ್ಣನೀಯ ! ಒಂದು ಮಹಾ ಸಂಸ್ಥೆಮಾಡುವ ಕೆಲಸವನ್ನು ಒಬ್ಬ ಕಾರಂತರು, ಮಾಡಿ ತೊರಿಸಿದ್ದಾರೆ ! ’ಕುವೆಂಪು, ’ ”ರಾಜರತ್ನಂ, ’ ’ಪಂಜೆ ಮಂಗೇಶರಾಯರು ’, ಮಾಡಿರುವ ಕೆಲಸಗಳು ಅನನ್ಯ. ಕುವೆಂಪುರವರ,  'ಬೊಮ್ಮನ ಹಳ್ಳಿಯ ಕಿಂದರಿ ಜೋಗಿ', ' ಜಿ. ಪಿ. ರಾಜರತ್ನಂರವರ, ’ಬಣ್ಣದ ತಗಡಿನ ತುತ್ತೂರಿ', ಮರಯಲಾರದ ಪದ್ಯಗಳು. ಡಾ. ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರು ಒಳ್ಳೆಯ ಗೀತೆಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ. ಡಾ. ಎಚ್.ಎಸ್. ವೆಂಕಟೇಶ ಮೂರ್ತಿಗಳು, ಹಾಗೂ ಇನ್ನಿತರರು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ, ನಾನು ಓದಿದ, ಒಂದು ಪುಸ್ತಕ, ಬಹು ವಿಶಿಷ್ಠವಾದದ್ದು; ಅದನ್ನು ಇಲ್ಲಿ ಪ್ರಸ್ತಾಪ ಮಾಡುವುದು ಅತಿ ಮುಖ್ಯ, ಹಾಗೂ ಅನಿವಾರ್ಯವೆಂದು ನಾನು ಭಾವಿಸುತ್ತೇನೆ.

ಇದು ಅಮೆರಿಕದಲ್ಲಿ ವಾಸಿಸುತ್ತಿರುವ, ಭಾರತೀಯ-ಅಮೆರಿಕದ ನೊಬ್ಬನು, ಬರೆದದ್ದು, ಎಂದು ಮೇಲ್ನೊಟಕ್ಕೆ ಕಾಣುವುದು, ಇದರ ವಿಶೇಷತೆ ! ಇನ್ನೊಂದು ಪ್ರಮುಖ ವಿಷಯವೆಂದರೆ,'ಕಥೆ ಕೇಳುವ ಆಸಕ್ತಿ' ಯನ್ನು ಅಲ್ಲಿನ ಮಕ್ಕಳಲ್ಲಿ ಹುಟ್ಟುಹಾಕಿದ್ದು, ನಮ್ಮ ಅಪ್ಪಟ ಕನ್ನಡಿಗ, ಭೌತಶಾಸ್ತ್ರದ ಪ್ರಾಧ್ಯಾಪಕರಾದ, ಡಾ.ಚಂದ್ರಾರವರು !

ಅವರು ಮಿಸ್ಸೌರಿಯ 'ಯೂನಿವರ್ಸಿಟಿ ಆಫ್ ಮಿಸ್ಸೌರಿ, ಕೊಲಂಬಿಯ,' ದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದರೂ, ವೇಳೆ ಕಲ್ಪಿಸಿಕೊಂಡು, 'ಬಾಲವನ', 'ಶಾಂತಿ ಮಂದಿರ' ಗಳಂತಹ ಜನಹಿತ, ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಮಕ್ಕಳಿಗೆ ಅವರು ಹೇಳುವ ಕಥೆಗಳೆಂದರೆ ಪ್ರಾಣ' ! ಅವರು ಬರೆದು ಪ್ರಕಟಿಸಿರುವ ೨೯ ಕಥೆಗಳ ಸಂಕಲನವೇ, " ಟೇಲ್ಸ್ ಫ್ರಮ್ ಇಂಡಿಯನ್ ಎಪಿಕ್ಸ್' ; ಇಲ್ಲಿ ಪ್ರಕಟಿಸಿರುವ ಕಥೆಗಳು, ಮಕ್ಕಳ ವಿಸ್ಮಯ ಜಗತ್ತನ್ನು ತಟ್ಟಿ ಎಬ್ಬಿಸುವ ರೀತಿಯಲ್ಲಿವೆ. 'ವಾಲ್ಮೀಕಿ', 'ಶ್ರವಣ', 'ಭಗೀರಥ', 'ರಾಮ -ಸೀತ', 'ಸತ್ಯ ಹರಿಶ್ಚಂದ್ರ', 'ಶಕುಂತಲ', 'ಸಾವಿತ್ರಿ', 'ದೂರ್ವಾಸ', 'ಸತೀ ಸುಕನ್ಯ'. ಈ ಕಥೆಗಳು’ ಫಾಂಟಮ್”ಅಥವಾ, ’ಟಿನ್ ಟಿನ್ ’ ಗಿಂತ ರೋಮಾಂಚಕ !

ಅಮೆರಿಕದ ಮಕ್ಕಳ, ಮತ್ತು ಅವರ ಪೋಷಕರ ಒತ್ತಾಯಕ್ಕೆ ಮಣಿದು 'ಭಾರತದ ಮಹಾಕಾವ್ಯ ಗಳಿಂದ ಆಯ್ದ ಕಥೆಗಳು." ಹೊರ ಬಂದಿದೆ. ಇದರ ಒಂದು ಪ್ರತಿ, ನಮ್ಮ ಮುಂಬೈ 'ಕರ್ನಾಟಕ ಸಂಘ'ದ, ಪುಸ್ತಕಾಲಯದಲ್ಲೂ ನೋಡಿದ ನೆನಪು. ಹಾ ! ಇದು ಇಂಗ್ಲೀಷಿನಲ್ಲಿದೆ ! ನಮ್ಮ ಮಕ್ಕಳಿಗೆ ಬಹಳ ಸುಲಭವಾಗಿ ಅರ್ಥವಾಗುವುದರಲ್ಲಿ ಅನುಮಾನವಿಲ್ಲ ! ಅಮೆರಿಕದಲ್ಲಿ ಆದದ್ದು ಎಂದ ಮಾತ್ರಕ್ಕೆ ಅತಿ ಶ್ರೇಷ್ಠವೆಂದು ಪರಿಗಣಿಸಿ,  ತಕ್ಷಣ ಎಲ್ಲಿಲ್ಲದ ಪ್ರಾಮುಖ್ಯತೆ  ಮಾನ್ಯತೆಗಳು  ದೊರೆಯುವುದು, ಒಂದು ಅರ್ಥಹೀನವಾದ ಬೆಳವಣಿಗೆ. ಅಮೆರಿಕನ್ನರು ಕಾಣುವ ಮಾನದಂಡಗಳೇ ಬೇರೆ. ನಾವು ನಮ್ಮ ಆದ್ಯತೆಗಳನ್ನು ಗುರುತಿಸಿ, ಗುಣಕ್ಕೆ ಬೆಲೆಕೊಡುವ ಪರಿಪಾಠವನ್ನು ಮಾಡುವುದನ್ನು ಕಲಿಯಬೇಕು !