ಮಖಾನಾ ಬೀಜದ ಬಗ್ಗೆ ಗೊತ್ತೇ?

ಮಖಾನಾ ಬೀಜದ ಬಗ್ಗೆ ಗೊತ್ತೇ?

ಮೇಲಿನ ಚಿತ್ರದಲ್ಲಿ ನೀವು ನೋಡುತ್ತಿರುವುದೇನು ಎಂದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಸಣ್ಣ ಸಣ್ಣ ಹತ್ತಿಯ ಉಂಡೆಯಂತೆ ಅಥವಾ ಹಕ್ಕಿಯ ಮೊಟ್ಟೆಯಂತೆ ಕಾಣುವ ಈ ವಸ್ತುವೇ ಮಖಾನಾ ಬೀಜಗಳು. ಇತ್ತೀಚೆಗೆ ಬಹಳವಾಗಿ ಕೇಳಿ ಬರುತ್ತಿರುವ ಮಖಾನಾ (ತಾವರೆ ಬೀಜ) ಬೀಜದ ವಿವರಗಳು ನಿಮಗೆ ತಿಳಿದಿದೆಯೇ? ಈ ಬೀಜಗಳ ಸಂಗ್ರಹಣೆ ಹೇಗೆ? ಅದನ್ನು ಖಾದ್ಯಕ್ಕೆ ಬಳಸುವಂತೆ ಮಾಡಲು ಹೇಗೆ ಸಂಸ್ಕರಿಸುತ್ತಾರೆ? ಬಹುತೇಕ ಮಂದಿಗೆ ಈ ಬಗ್ಗೆ ತಿಳಿದಿಲ್ಲ. ನಮ್ಮ ಕರ್ನಾಟಕದಲ್ಲಿ ಇನ್ನೂ ಈ ತಾವರೆ ಬೀಜದ ಖಾದ್ಯಗಳ ಪರಿಚಯ ಅಷ್ಟಾಗಿ ಆಗಿಲ್ಲ. ಆದರೆ ಉತ್ತರ ಭಾರತದೆಡೆ ಇದನ್ನು ಯಥೇಚ್ಛವಾಗಿ ಬಳಸುತ್ತಾರಂತೆ. ಕಳೆದ ತಿಂಗಳು ಸಂಪದದಲ್ಲಿ ತಾವರೆ ಬೀಜದ ಮಸಾಲೆ ಎಂಬ ಹೊಸರುಚಿಯನ್ನು ಗಮನಿಸಿದ್ದೆ. ಆಗ ಈ ಬೀಜಗಳ ಬಗ್ಗೆ ತಿಳಿಯುವ ಕುತೂಹಲ ನನಗೆ ಉಂಟಾಯಿತು.

ಮಖಾನಾ ಬೀಜ (Fox Nut) ಅಥವಾ ತಾವರೆ ಬೀಜವನ್ನು ಬಿಹಾರ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿಯ ಕೆರೆ, ಕೊಳಗಳಲ್ಲಿ ಇವುಗಳು ನೈಸರ್ಗಿಕವಾಗಿಯೂ ಮತ್ತು ಕೆಲವೆಡೆ ಬೀಜವನ್ನು ಬಿತ್ತಿಯೂ ಬೆಳೆಯುತ್ತಾರೆ. ದೇಶದಲ್ಲಿ ಉತ್ಪಾದನೆಯಾಗುವ ೯೦% ತಾವರೆ ಬೀಜಗಳು ಬಿಹಾರ ರಾಜ್ಯದಲ್ಲೇ ಉತ್ಪತ್ತಿಯಾಗುತ್ತವೆ. ಬಿಹಾರವಲ್ಲದೇ, ಪಶ್ಚಿಮ ಬಂಗಾಲ, ಅಸ್ಸಾಂ, ಒಡಿಸ್ಸಾ, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮಖಾನಾವನ್ನು ಬೆಳೆಯಲಾಗುತ್ತದೆ. ಬಿಹಾರದಲ್ಲಿ ಇವುಗಳ ಬೆಳವಣಿಗೆಗಾಗಿಯೇ ಸುಮಾರು ಐವತ್ತು ಸಾವಿರ ಕೆರೆಗಳನ್ನು ಸಿದ್ಧಪಡಿಸಲಾಗಿದೆ. ಬಿಹಾರ ರಾಜ್ಯದ ದರ್ಭಾಂಗಾ ಜಿಲ್ಲೆಯಲ್ಲಿ ಮೊದಲಬಾರಿಗೆ ಈ ಮಖಾನಾ ಹೂವು ಕಂಡು ಬಂತು ಎಂದು ದಾಖಲೆಗಳು ಹೇಳುತ್ತವೆ. 

ನಮ್ಮ ರಾಜ್ಯದಲ್ಲಿ ಬೆಳೆಯುವ ತಾವರೆಗೂ ಅಲ್ಲಿನ ತಾವರೆಗೂ ವ್ಯತ್ಯಾಸಗಳಿವೆ. ಅಲ್ಲಿಯ ತಾವರೆ ಗಿಡದ ಎಲೆಗಳು ಬಹಳ ದೊಡ್ಡದಾಗಿರುತ್ತವೆ. ಅವುಗಳಲ್ಲಿ ನೇರಳೆ ಬಣ್ಣದ ಹೂವು (ನಮ್ಮ ನೈದಿಲೆಯಂತೆ) ಅರಳುತ್ತದೆ. ದರ್ಭಾಂಗಾ ಜಿಲ್ಲೆಯಲ್ಲಿ ಪ್ರಾರಂಭವಾದ ಕೃಷಿ ಈಗ ಸಹಸ್ಸಾ, ಪೂರ್ಣಿಯಾ, ಕಟಿಹಾರ, ಕಿಶನ್ ಗಂಜ್ ಜಿಲ್ಲೆಗಳಿಗೆ ಹಬ್ಬಿದೆ. ಇಲ್ಲಿನ ಜಮೀನುಗಳು ಇವುಗಳ ಬೆಳೆಗೆ ಸೂಕ್ತವಾದ ಪರಿಸರ, ಮಣ್ಣು , ನೀರು ಹೊಂದಿರುವುದರಿಂದ ಇಲ್ಲಿ ಚೆನ್ನಾಗಿ ಬೆಳೆ ಬೆಳೆಯುತ್ತದೆ. ಇಲ್ಲಿ ಮಖಾನಾ ಕೃಷಿ ಮಾಡಲು ಈಗೀಗ ಕೆಲವರು ತಮ್ಮ ಜಮೀನನ್ನು ಲೀಸ್ ಆಧಾರದಲ್ಲಿ ಕೊಡಲು ಪ್ರಾರಂಭಿಸಿದ್ದಾರೆ. ಇದರಿಂದ ಅವರು ಸುಮ್ಮನೇ ವ್ಯರ್ಥವಾಗಿ ಬಿದ್ದಿದ್ದ ಜಮೀನಿನಿಂದಲೂ ಲಾಭ ಪಡೆದುಕೊಳ್ಳುತ್ತಿದ್ದಾರೆ. 

ಭಾರತವಲ್ಲದೇ ಚೀನಾ, ಜಪಾನ್, ಕೊರಿಯಾ ಹಾಗೂ ರಷ್ಯಾಗಳಲ್ಲೂ ಮಖಾನಾದ ಉತ್ಪಾದನೆಯಾಗುತ್ತದೆ. ಬಿಹಾರದಲ್ಲಿ ಮಖಾನಾದ ತಳಿಯನ್ನು ‘ಕುರೂಪಾ ಅಕರೂಟ' ಎಂದು ಕರೆಯುತ್ತಾರೆ. ಅಲ್ಲಿ ಇದು ಬಿಹಾರದ ಡ್ರೈ ಫ್ರುಟ್ (ಒಣ ಹಣ್ಣು) ಎಂದೇ ಖ್ಯಾತಿ ಪಡೆದಿದೆ. ಕುರೂಪಾ ಜಾತಿಯ ಗಿಡಗಳು ಕೆರೆಯ ಮೇಲ್ಗಡೆ ತೇಲುತ್ತಿದ್ದು, ದೊಡ್ಡ ದೊಡ್ಡ ಎಲೆಗಳನ್ನು ಹೊಂದಿರುತ್ತವೆ. ಮಖಾನಾ ಬೆಳೆಯ ಉತ್ಪತ್ತಿ ಡಿಸೆಂಬರ್ ತಿಂಗಳಿಂದ ಜುಲೈ ತಿಂಗಳವರೆಗೆ ನಡೆಯುತ್ತದೆ. ಆದರೀಗ ಕೃಷಿ ತಂತ್ರಜ್ಞಾನದಲ್ಲಾದ ಬೆಳವಣಿಗೆಯಿಂದ ಮಖಾನಾ ಬೀಜಗಳು ವರ್ಷದಲ್ಲಿ ಎರಡು ಬಾರಿ ಸಿಗುತ್ತವೆ. ಅಂದರೆ ಐದೈದು ತಿಂಗಳಿಗೆ ಒಂದೊಂದು ಬೆಳೆ ಸಿಗುತ್ತದೆ. ಇದಕ್ಕೆ ತುಂಬಾ ಆಳವಿಲ್ಲದ ಕೆರೆಯ ಅಗತ್ಯವಿದೆ. ಬೀಜ ಬಿತ್ತುವ ಮೊದಲು ಕೆರೆಯನ್ನು ಕಳೆಮುಕ್ತವಾಗುವಂತೆ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಬೀಜ ಬಿತ್ತುವುದಕ್ಕೆ ಡಿಸೆಂಬರ್ ನಿಂದ ಜನವರಿ ತಿಂಗಳು ಉತ್ತಮ. ಪ್ರತೀ ಹೆಕ್ಟೇರಿಗೆ ಸುಮಾರು ೮೦ ಕಿ.ಗ್ರಾಂ ಬೀಜ ಬೇಕಾಗುತ್ತದೆ. ನೇರವಾಗಿ ಕೆರೆಯಲ್ಲಿ ಬೀಜ ಚೆಲ್ಲುವುದರ ಬದಲು ಕೆರೆಯ ಹೊರಗಡೆ ಗಿಡಗಳನ್ನು ತಯಾರಿಸಿ, ನಂತರ ಅವುಗಳನ್ನು ಕೆರೆಯಲ್ಲಿ ಹೂಳಲೂ ಬಹುದು. ಇದರಿಂದ ಗಿಡಗಳೂ ಚೆನ್ನಾಗಿ ಬೆಳೆಯುತ್ತವೆ. ಮಖಾನಾ ಬೆಳೆಗೆ ಯಾವುದೇ ರೀತಿಯ ರಾಸಾಯನಿಕಗಳ, ಗೊಬ್ಬರಗಳ ಅಗತ್ಯವಿರುವುದಿಲ್ಲ. 

ಈ ಮಖಾನಾ ಗಿಡವು ತನಗೆ ಬೇಕಾದ ಆಹಾರವನ್ನು ಕೆರೆಯಲ್ಲಿ ಸಿಗುವ ಇತರ ಗಿಡಗಳು, ಪಾಚಿಯಂತಹ ಸಸ್ಯಗಳಿಂದ ಪಡೆದುಕೊಳ್ಳುವುದರಿಂದ ಗೊಬ್ಬರ ಕೊಡುವ ಕೆಲಸವೂ ಇರುವುದಿಲ್ಲ. ಚೆನ್ನಾಗಿ ಬೆಳೆದ ಗಿಡಗಳಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ನೇರಳೆ, ಕೆಂಪು, ಗುಲಾಬಿ ಮಿಶ್ರಿತ ಹೂವುಗಳು ಅರಳುತ್ತವೆ. ಈ ಹೂವುಗಳನ್ನು ‘ನೀಲ ಕಮಲ' ಎಂದು ಕರೆಯುತ್ತಾರೆ. ಈ ಹೂವುಗಳು ಸುಮಾರು ೩-೪ ದಿನಗಳ ತನಕ ಕೆರೆಯ ಮೇಲ್ಗಡೆ ತೇಲಿಕೊಂಡಿದ್ದು ನಂತರ ಅದು ನೀರಿನ ಒಳಗೆ ಹೋಗುತ್ತದೆ. ಆ ಸಮಯದಲ್ಲಿ ಅವುಗಳಲ್ಲಿ ಬೀಜಗಳ ಉತ್ಪಾದನೆಯಾಗುತ್ತವೆ. ಈ ಬೀಜಗಳು ಮುಂದಿನ ಎರಡು ತಿಂಗಳಲ್ಲಿ ಕಾಯಿಗಳಾಗಿ ಪರಿವರ್ತನೆ ಹೊಂದುತ್ತವೆ. ಒಂದು ಗಿಡದಲ್ಲಿ ಸುಮಾರು ೧೫-೨೦ ಕಾಯಿಗಳಿರುತ್ತವೆ. ಪ್ರತೀ ಕಾಯಿಯಲ್ಲಿ ೨೦ರವರೆಗೆ ಮಖಾನಾ ಬೀಜಗಳಿರುತ್ತವೆ. ಜೂನ್-ಜುಲೈ ತಿಂಗಳಲ್ಲಿ ಈ ಕಾಯಿಗಳು ನೀರಿನ ಮೇಲ್ಮಟ್ಟದಲ್ಲಿ ತೇಲುತ್ತಾ ನಂತರ ನೀರಿಗೆ ಕಳಚಿ ಬೀಳುತ್ತವೆ. ಬಿಹಾರದ ಸ್ಥಳೀಯ ಭಾಷೆಯಲ್ಲಿ ಈ ಕಾಯಿಗಳನ್ನು ‘ಗೋರಿಯಾ’ ಎಂದು ಕರೆಯುತ್ತಾರೆ. ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಆ ಕಾಯಿಯೊಳಗಿನ ಬೀಜಗಳು ಹೊರ ಬರುತ್ತವೆ. ಬೀಜಗಳು ಕಪ್ಪು ಬಣ್ಣದವುಗಳಾಗಿದ್ದು, ಆಕಾರದಲ್ಲಿ ಸಣ್ಣ ಗೋಲಿಯಾಕಾರದಲ್ಲಿರುತ್ತವೆ. ಇವುಗಳನ್ನು ನೀರಿನಿಂದ ಹೊರತೆಗೆದು (ನೀರಿನಿಂದ ತೆಗೆಯಲು ವಿಶೇಷ ಆಕಾರದ ಬೆತ್ತದ ಬುಟ್ಟಿಯನ್ನು ಬಳಸುತ್ತಾರೆ) ಬಿಸಿಲಿನಲ್ಲಿ ಒಣಗಿಸುತ್ತಾರೆ. ಆಗ ಆ ಬೀಜಗಳು ಗಾಢ ಕಪ್ಪುಬಣ್ಣಕ್ಕೆ ತಿರುಗುತ್ತವೆ. ಈ ಬೀಜಗಳನ್ನು ಅದರ ಆಕಾರಕ್ಕೆ ಅನುಗುಣವಾಗಿ ಗ್ರೇಡಿಂಗ್ ಮಾಡಲಾಗುತ್ತದೆ.

ಬೀಜಗಳನ್ನು ಬೆಂಕಿಯಲ್ಲಿ ಕಾಯಿಸಿ ಅದನ್ನು ಒಂದು ವಿಶೇಷವಾದ ಮರದ ಹಲಗೆಯಿಂದ ಒಡೆದು ಅದರಿಂದ ಬಿಳಿ ಬಣ್ಣದ ಮಖಾನ ಬೀಜಗಳನ್ನು ಉತ್ಪಾದಿಸುತ್ತಾರೆ. ಇದು ನಮ್ಮ ಜೋಳದ ಕಾಳಿನಿಂದ ಪಾಪ್ ಕಾರ್ನ್ ತಯಾರಿಸಿದ ರೀತಿ. ಹೇಗೆ ಜೋಳವನ್ನು ಬಿಸಿ ಮಾಡಿದಾಗ ಅದು ಒಡೆದು ಒಂದು ರೀತಿಯ ಬಿಳಿ ಬಣ್ಣದ ಪಾಪ್ ಕಾರ್ನ್ ಸಿಗುತ್ತದೆಯೋ ಅದೇ ರೀತಿ ಕಪ್ಪು ಬಣ್ಣದ ಮಖಾನಾ ಬೀಜಗಳನ್ನು ಬಿಸಿ ಮಾಡಿ ಒಡೆದಾಗ ಬಿಳಿ ಬಣ್ಣದ ಮಖಾನಾ ಬೀಜಗಳು (ಲಾಯಿ) ಸಿಗುತ್ತವೆ. ಇವುಗಳನ್ನು ತಯಾರಿಸಲು ತರಭೇತಿ ಹೊಂದಿದ ಕಾರ್ಮಿಕರು ಬೇಕಾಗುತ್ತದೆ. ಇಲ್ಲವಾದಲ್ಲಿ ಬೀಜಗಳು ಒಡೆಯದೇ ಸುಮಾರು ೨೫ % ನಷ್ಟವಾಗುವ ಸಾಧ್ಯತೆ ಇದೆ. ಒಂದು ಕಿಲೋ ಬಿಳಿ ಬಣ್ಣದ (ನಮಗೆ ಮಾರುಕಟ್ಟೆಯಲ್ಲಿ ದೊರೆಯುವ) ಮಖಾನಾ ಬೀಜಗಳು ಬೇಕಾದಲ್ಲಿ ೩ ಕಿಲೋ ಕಪ್ಪು ಮಖಾನಾ ಬೀಜಗಳ ಅಗತ್ಯವಿದೆ. 

ಬಿಹಾರದಲ್ಲಿ ಹಲವಾರು ಮಂದಿ ತಮ್ಮ ನಿರುಪಯುಕ್ತ ಜಮೀನಿನಲ್ಲಿ ಮಖಾನಾ ಬೀಜಗಳ ಕೃಷಿ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಮಖಾನಾ ಬೀಜಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಕಿಲೋ ಒಂದಕ್ಕೆ ಸಾವಿರ ರೂಪಾಯಿಯವರೆಗೆ ದರವಿದೆ. ಇದು ತುಂಬಾ ಹಗುರವಾಗಿರುತ್ತದೆ. ಮಖಾನಾ ಬೀಜ ಬಿತ್ತಿದ ಬಳಿಕ ೬ ರಿಂದ ೯ ಇಂಚು ನೀರು ಕೊಳದಲ್ಲಿ ನಿಲ್ಲುವಂತೆ ಮಾಡುವುದು ಅತ್ಯಂತ ಅಗತ್ಯ. ಬಿಹಾರದ ದರ್ಭಾಂಗದಲ್ಲಿ ಕೃಷಿ ಇಲಾಖೆಯವರು ‘ಮಖಾನ ಅನುಸಂಧಾನ ಕೇಂದ್ರ’ವನ್ನು ತೆರೆದಿದ್ದಾರೆ. ಇಲ್ಲಿಯ ವಿಜ್ಞಾನಿಗಳು ಈ ಬೆಳೆಯಲ್ಲಿ ಹೊಸ ಹೊಸ ತಳಿಗಳು ಹಾಗೂ ಉತ್ತಮ ಫಸಲನ್ನು ತೆಗೆಯುವ ವಿವಿಧ ತಂತ್ರೋಪಾಯಗಳನ್ನು ಶೋಧಿಸುತ್ತಿದ್ದಾರೆ. ಇದನ್ನು ಗಮನಿಸಿದ ಉತ್ತರ ಪ್ರದೇಶದ ಸರಕಾರವೂ ಈಗ ಮಖಾನ ಬೆಳೆಯನ್ನು ಬೆಳೆಯುವ ಮನಸ್ಸು ಮಾಡಿದೆ. ಮಖಾನಾ ಬೆಳೆಗಾರರಿಗೆ ಈಗ ಬ್ಯಾಂಕ್ ಸಾಲವನ್ನೂ ನೀಡುತ್ತಿದೆ. ಬೆಳೆದ ಬೆಳೆಗೆ ಉತ್ತಮ ಧಾರಣೆಯೂ ಇರುವುದರಿಂದ ಕೃಷಿಕನು ಮಾರುಕಟ್ಟೆಯನ್ನು ಹುಡುಕಿಕೊಂಡು ಅಲೆಯಬೇಕಾಗಿಲ್ಲ. 

ಕರ್ನಾಟಕದಲ್ಲಿ ಮಖಾನಾ ಬೆಳೆಯಲು ಇನ್ನೂ ಪ್ರಾರಂಭ ಮಾಡಿಲ್ಲ. ಇಲ್ಲಿಯ ಮಣ್ಣು, ಪರಿಸರ ಮತ್ತು ಕೊಯ್ಲೋತ್ತರ ಸಂಸ್ಕರಣೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕಾಗಿದೆ. ಯಾರಾದರೂ ಕೃಷಿಕರು ಪ್ರಯತ್ನ ಮಾಡಿ ನೋಡಬಹುದಿತ್ತು. (ಯಾರಾದರೂ ಕೃಷಿಕರು ಈ ಬಗ್ಗೆ ಪ್ರಯತ್ನ ಪಟ್ಟಿದ್ದರೆ ದಯವಿಟ್ಟು ತಿಳಿಸಿ.)

೧೦೦ ಗ್ರಾಂ ಮಖಾನಾ ಬೀಜದಲ್ಲಿರುವ ಪೋಷಕಾಂಶಗಳ ವಿವರ:

ಪ್ರೋಟೀನ್ ೧೪.೫೨%, ಕೊಬ್ಬು ೦.೦೧%, ಕೊಲೆಸ್ಟ್ರಾಲ್ ೦%, ಕಬ್ಬಿಣ ೨೨೩೬ ಮಿಲಿ ಗ್ರಾಂ, ಕಾರ್ಬೋಹೈಡ್ರೇಟ್ ೭೬.೯೦%, ರಂಜಕ ೨೩೯೭ ಮಿ.ಗ್ರಾಂ., ಸತು ೬೬ ಮಿ.ಗ್ರಾಂ. ಪ್ರೋಟೀನ್ ಅಂಶ ಹೇರಳವಾಗಿರುವುದರಿಂದ ಇದೊಂದು ಪೌಷ್ಟಿದಾಯಕ ಖಾದ್ಯ ಮೂಲ ಎಂದು ವರ್ಣಿಸಲಾಗಿದೆ. ಕೊಬ್ಬು ಪ್ರಮಾಣ ತೀರಾ ಕಮ್ಮಿ ಇರುವುದರಿಂದ ಆರೋಗ್ಯಕ್ಕೆ ಉತ್ತಮ ಆಹಾರ ಎಂದು ಹೇಳ ಬಹುದಾಗಿದೆ.

 

ಚಿತ್ರ ವಿವರ:೧. ಮಾರುಕಟ್ಟೆಯಲ್ಲಿ ದೊರೆಯುವ ಸಂಸ್ಕರಿತ ಮಖಾನಾ ಬೀಜಗಳು.

    ೨. ಗಿಡದಲ್ಲಿ ಉತ್ಪತ್ತಿಯಾಗುವ ಕಪ್ಪು ವರ್ಣದ ಮಖಾನಾ ಬೀಜಗಳು

೩. ಮಖಾನಾ ಗಿಡದ ‘ನೀಲ ಕಮಲ' ಹೂವು

೪. ಹೂವು ಅರಳಿ ಉದುರಿದ ನಂತರ ಬೀಜಗಳು ಹುಟ್ಟಿರುವುದು

೫. ಮಖಾನಾ ಗಿಡದ ಅಗಲವಾದ ಎಲೆಗಳು

೬. ಮಖಾನಾ ಬೀಜ ಸಂಸ್ಕರಣಾ ನಿರತ ಕಾರ್ಮಿಕರು

ಚಿತ್ರಗಳು: ವಿವಿಧ ಜಾಲತಾಣಗಳಿಂದ ಸಂಗ್ರಹಿತ