ಮಗನ ಪ್ರೀತಿ ಹಾಗೂ ತಂತ್ರಜ್ಞಾನ

ಮಗನ ಪ್ರೀತಿ ಹಾಗೂ ತಂತ್ರಜ್ಞಾನ

ಹೀಗೆ ಕೆಲವು ತಿಂಗಳು ಹಿಂದೆ, ನಾನು ಮತ್ತು ನನ್ನ ಹಿರಿಯ ಮಗ ಒಂದು ಪಾನಿಪೂರಿ ಬಂಡಿಯ ಹತ್ತಿರ ನಿಂತಿದ್ದೆವು. ನನ್ನ ಮಗನಿಗೆ ಪಾನಿಪೂರಿ ತಿನ್ನುವ ಆಸೆ ಆಯಿತು. ನಾನು ಬೇಡ, ಆ ನೀರು ಗಲೀಜು ಅಂತ ಹೇಳಿದರೂ ಅವನು ಕೇಳಲಿಲ್ಲ..

ಹಾಗಾದರೆ, ಅಲ್ಲಿ ನೋಡಿ, ಅದೆಷ್ಟೋ ಜನ, ತಮ್ಮ ತಮ್ಮ ವಾಹನ ಪಾರ್ಕ್ ಮಾಡಿ, ಪಾನಿಪೂರಿ ತಿನ್ನುತ್ತಿಲ್ಲವೆ ..? ಮತ್ತೇ ಅವರಿಗೆ ಏನೂ ಆಗುವದಿಲ್ಲವೇನು...? ಹೀಗೆಲ್ಲ ಪ್ರಶ್ನೆ ಕೇಳುತ್ತಿರುವಾಗ, ನಾ ಏನೆಂದು ಉತ್ತರ ಕೊಡಲಿ. ಹೋಗಲಿ, ತಿನ್ನು, ಅಂತ ಅವನ ಜೊತೆ ಆ ಪಾನಿಪೂರಿ ಬಂಡಿ ಯ ಹತ್ತಿರ ಹೋದೆವು .

ಸಂಜೆಯ ವೇಳೆ, ತುಂಬಾ ರಶ್ ಇತ್ತು, ಅನೇಕ ಗೃಹಿಣಿಯರೂ, ಲೈನ್ ನಲ್ಲಿ ನಿಂತು ಪಾನಿಪೂರಿಯ ರುಚಿಯನ್ನು ಸವಿಯು ತಿದ್ದರು. ನಮ್ಮ ಪಾಳಿ ಬರಲು ಇನ್ನೂ ಸಮಯವಿತ್ತು. ನಾನು ದೂರ ನಿಂತು ನೋಡ್ತಾ ಇದ್ದೆ. ಅನೇಕ ಜನ ಅಲ್ಲಿ ನೆರೆದಿದ್ದರು, ಎಲ್ಲರೂ ಪಾನಿಪೂರಿ ತಿನ್ನಲು.

ಅಲ್ಲಿ ಒಬ್ಬ ವಯೋ ವೃದ್ಧರು, ವಯಸ್ಸು 70ರ ಆಸು ಪಾಸು. ಅವರು ಮಾತ್ರ, ಆ ಪಾನಿಪೂರಿ ಗಾಡಿಯ ಹತ್ತಿರ ನಿಂತು, ಒಣಪುರಿಯನ್ನು ಆ ಚಾಟ್ ಅಂಗಡಿಯ ಬುಟ್ಟಿಯಿಂದ, ಒಂದೊಂದೇ ಎತ್ತಿ ಬಾಯಿಗೆ ಹಾಕುತ್ತಿದ್ದರು. ನಂಗೆ ಸ್ವಲ್ಪ ಸೋಜಿಗ ವಾಯಿತು. ಹೀಗೇಕೆ ಇವರು ವರ್ಸ್ತಿಸುತ್ತಿದ್ದಾರೆ? ಅವರ ಬಟ್ಟೆಬರೆಗಳಿಂದ ನೋಡಲಿಕ್ಕೆ ಅವರು ಒಬ್ಬ ವಿದ್ಯಾವಂತ ಶ್ರೀಮಂತ ಮನೆತನದ ವ್ಯಕ್ತಿಯ ತರಹ ಕಾಣುತ್ತಿದ್ದರು. ಮತ್ತೆ ವರ್ತನೆ ಒಬ್ಬ ಅನಾಗರಿಕರ ತರಹ.

ಆದರೂ, ಅವರ ಈ ಕೆಲಸ ನಡೆಯುತ್ತಲೇ ಇತ್ತು. ಸ್ಪಲ್ಪ ವೇಳೆಯಲ್ಲಿ ನನ್ನ ಮಗನ ಪಾಳಿ ಬಂದು, ಅವನು ಆ ಬಂಡಿಯ ಹತ್ತಿರ ಹೋದ. ಅವನ ಕೈಗೆ ಒಂದು ದೊನ್ನೆ ಕೊಟ್ಟು, ಅದರಲ್ಲಿ ಪಾನಿಪೂರಿ ಆ ರಾಡಿ ಮಸಾಲ ನೀರು ಹಾಕಿ ಬಂಡಿಯ ಮನುಷ್ಯ ಕೊಡ್ತಾ ಇದ್ದ. ನನ್ನ ಮಗ ಅದನ್ನು ಬಾಯಿಗೆ ಹಾಕಿ ಚಪ್ಪರಿಸುತ್ತಿದ್ದ. ಆಗಲೂ ಆ ವಯೋವೃದ್ಧರು, ತಮ್ಮ ಕೆಲಸ, ಒಣ ಪುರಿ ತಿನ್ನುವುದನ್ನು ನಿಲ್ಲಿಸಿರಲಿಲ್ಲ.

ನಾನು ಅವರ ಹತ್ತಿರ ಹೋಗಿ, ಅಜ್ಜ, ಹೀಗೇಕೆ.. ಒಣಪೂರಿ ತಿನ್ನುತ್ತಿರುವಿರಿ? ಆ ಮಸಾಲ ನೀರು ಸೇರಿಸಿ ತಿನ್ನಿ. ಅಂದೆ. ಅಜ್ಜ ನನ್ನ ಕಡೆ ಒಮ್ಮೆ ನೋಡಿ, ಕೇಳಿಯೂ ಕೇಳದಂತೆ ಮತ್ತೆ ಅದೇ ಕಾರ್ಯವನ್ನು ಮುಂದುವರಿಸಿದರು. ನನಗೆ ಸ್ವಲ್ಪ ಅನುಮಾನ ಬಂದು, ಪಾನಿಪೂರಿ ಬಂಡಿಯ ಮಾಲೀಕನಿಗೆ ಕೇಳಿದೆ.

‘ಇದೇನಿದು...? ನೀನೂ ಸುಮ್ಮನೆ ಇದ್ದೆಯಲ್ಲ?’

ಅದಕ್ಕೆ ಅವನು, ಕೈ ಸನ್ನೆ ಮಾಡಿ..

‘ಇವನೊಬ್ಬ ಹುಚ್ಚ ಇರಬಹುದು’ ಅಂತ ಸನ್ನೆ ಮಾಡಿ ತೋರಿಸಿ, ತನ್ನ ವ್ಯಾಪಾರದ ಕಡೆ ಲಕ್ಷ್ಯ ಹಾಯಿಸಿದ.

ನನಗೆ ಏನೂ ತೋಚಲಿಲ್ಲ. ಸುಮ್ಮನೆ ಇದ್ದೆ. ಅಷ್ಟರಲ್ಲಿ ನನ್ನ ಮಗನ ಪಾನಿಪೂರಿ ತಿನ್ನುವುದು ಮುಗಿಯಿತು. ಹಣ ಕೊಟ್ಟು ಇನ್ನೇನು ಹೊರಡ ಬೇಕು, ಎನ್ನುವಷ್ಟರಲ್ಲೇ ಒಬ್ಬ, ದೊಡ್ದ ಕಾರ್ ನಿಂದ ಇಳಿದು ಈ ಅಜ್ಜ ಇರುವ ಕಡೆ ಬರ್ತಾ ಇದ್ದ. ಕೈಯಲ್ಲಿ ಮೊಬೈಲ್ ಇದೆ. ಫೋನಿನಲ್ಲಿ ಹೇಳ್ತಾ ಇದ್ದ.

‘ಸಿಕ್ಕರು..ಸಿಕ್ಕರು.. ಇಲ್ಲಿಯೇ ಇದ್ದಾರೆ, ಆಯಿತು ಕರೆದುಕೊಂಡು ಬರುತ್ತೇನೆ’ ಎಂದು ಅವನು ಮಾತಾಡುವುದು ನನ್ನ ಕಿವಿಗೆ ಬಿತ್ತು. ನಾ ಸ್ವಲ್ಪ ತಿರುಗಿ ನೋಡಿದೆ.

ಅವನು 30-35ರ ಆಸುಪಾಸು ವಯಸ್ಸಿನ ಒಬ್ಬ ಶ್ರೀಮಂತ ಮನೆತನದ ವ್ಯಕ್ತಿ ತರಹ ಕಾಣುತಿದ್ದ. ಅವನು ಆ ಬಂಡಿಯ ಹತ್ತಿರ ಬಂದು ಬಂಡಿ ಮಾಲಿಕನ ಹತ್ತಿರ ಹೋಗಿ ವಿಚಾರಿಸಿದ.

‘ಎಷ್ಟಾಯಿತು ದುಡ್ಡು?’

ಅವನು ಹೇಳಿದಷ್ಟು ದುಡ್ಡು ಕೊಟ್ಟು ಆ ವಯೋ ವೃದ್ಧರ ಕೈ ಹಿಡಿದು ತನ್ನ ಕಾರಿನ ಹತ್ತಿರ ಹೋಗುತ್ತಿದ್ದಂತೆ ನಾನು ಅವನ ಹತ್ತಿರ ಹೋಗಿ ಕೇಳಿದೆ..

‘ಸರ್,  ಇವರು ಏನಾಗಬೇಕು ನಿಮಗೆ? ಮತ್ತೆ ಹೀಗೇಕೆ ವರ್ತಿಸುತ್ತಿದ್ದಾರೆ?’

ಅದಕ್ಕೆ ಆ ವ್ಯಕ್ತಿ ಹೇಳಿದ...

‘ಇವರು ನನ್ನ ತಂದೆ ಸರ್, ನಿವೃತ್ತ ಬ್ಯಾಂಕ್ ಅಧಿಕಾರಿ.  ಕೆಲವು ವರ್ಷಗಳ ಹಿಂದೆ ನನ್ನ ತಾಯಿಯ ನಿಧನದ ಬಳಿಕ ಇವರಿಗೆ 

ನೆನಪಿನ ಶಕ್ತಿ ಕಡಿಮೆ ಆಗ್ತಾ ಇದೆ, ವೈದ್ಯರಿಗೆ ತೋರಿಸಿ ಆಯಿತು. ಅಲ್ಜೇಮಿಯರ್ (Alzheimer's) ರೋಗ.. ಅಂತ ನೆನಪು ಕುಂಠಿಸುತ್ತಾ ಹೋಗುವ ಕಾಯಿಲೆಯ ಹೆಸರು. ಇದಕ್ಕೆ ಯಾವ ಪ್ರಭಾವಶಾಲಿ ಔಷಧಿಯೂ ಇಲ್ಲ. ಆದರೆ ಏನು ಮಾಡುವುದು?

ನಾನು ಇವರಿಗೆ ಒಬ್ಬನೇ ಮಗ. ಸ್ವಂತ ಉದ್ದಿಮೆ ಇದೆ. ಕೆಲವೊಮ್ಮೆ ಊರಿನಿಂದ ಹೊರಗೂ ಇರುತ್ತೇನೆ. 24 ತಾಸೂ ಇವರ ಕಡೆ ಲಕ್ಷ್ಯ ಕೊಡಲು ಆಗುತ್ತಿಲ್ಲ. ನಡು ನಡುವೆ ಹೀಗೆಯೇ ಆಗುತ್ತದೆ’

ಅದಕ್ಕೆ ನಾ ಕೇಳಿದೆ ‘ಅದ್ಸರಿ. ನೀವು ಅವರನ್ನು ಓಡಿಕೊಳ್ಳಲು ಆಯಾ ವ್ಯವಸ್ಥೆ ಮಾಡ ಬಹುದಿತ್ತಲ್ವಾ?  ಮತ್ತೆ ಈಗ ಹೇಗೆ ಅವರನ್ನು ಹುಡುಕಿ ಕೊಂಡು ಬಂದೀರಿ?’

ಅದಕ್ಕೆ ಅವರು ಹೇಳಿದ್ದು. ‘ನೋಡಿ ಸ್ವಾಮಿ. ಇವರನ್ನು ನೋಡಿಕೊಳ್ಳಲು ಜನ ಇದ್ದಾರೆ. ಆದರೂ ಕಣ್ತಪ್ಪಿಸಿ ಕೆಲವೊಮ್ಮೆ ಹೊರಗೆ ಬಂದು ಬಿಡುತ್ತಾರೆ. ನಾನು ಚಿಕ್ಕವನಿದ್ದಾಗ ಹೀಗೆಯೇ ಅಲ್ಲಿ ಇಲ್ಲಿ ಆಡಲು ಹೋಗಿ ಮನೆಗೇ ಬರ್ತಾನೆ ಇರಲಿಲ್ಲ.. ಆಗೆಲ್ಲ ಇದೆ ನನ್ನ ತಂದೆ, ಕೆಲಸ ಮುಗಿಸಿ, ದಣಿದು ಮನೆಗೆ ಬಂದರೂ, ಅಮ್ಮನ ಆತಂಕ ನೋಡಿ, ನನ್ನನ್ನು ಹುಡುಕಿ ಕೊಂಡು ಅದೆಷ್ಟೋ ಸಲ ಸರಿಯಾದ ಜಾಗಕ್ಕೇ ಬಂದು ನನ್ನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆಗಿನ ಕಾಲದಲ್ಲಿ ಈಗಿನಂತೆ ಜಿಪಿಎಸ್ ಸೌಲಭ್ಯ (ಮೊಬೈಲ್ ಗಳಲ್ಲಿ ಸ್ಥಳ ಹುಡುಕುವ ತಂತಜ್ಞಾನದ ವ್ಯವಸ್ಥೆ) ಇರಲಿಲ್ಲ. ಆದರೂ ನಮ್ಮಪ್ಪ ಎಂದೂ ಬೇಸರ ಮಾಡದೆ, ತುಂಟನಾದ ನನ್ನನ್ನು, ಬೀದಿ ಬೀದಿಯಲ್ಲಿ, ಜಾತ್ರೆಗಳಲ್ಲಿ, ಹಗಲು ರಾತ್ರಿ ಎನ್ನದೇ ಹುಡುಕಿ ಕೊಂಡು ಮನೆಗೆ ಕರೆದು ತರುತಿದ್ದರು.’

‘ಸ್ವಾಮಿ, ನಾನೇನೂ ಅಂತಹ ಮಹಾ ಪ್ರಯತ್ನ ಮಾಡಿಲ್ಲ. ನನಗೆ ಗೊತ್ತು ಈ ಕಾಯಿಲೆಯ ಬೇನೆ. ಮರೆವು ರೋಗ. ಅದಕ್ಕಾಗಿ ಈಗ ನಾನು ಅವರ ಪ್ಯಾಂಟಿನ ಕಿಸೆಯಲ್ಲಿ  ಒಂದು ಮೊಬೈಲ್ ಫೋನ್ ಇಟ್ಟಿದ್ದೇನೆ. ಅವರು ಎಲ್ಲಿ ಹೋದರೂ GPS ತಂತ್ರಜ್ಞಾನದ ಮೂಲಕ ಗೊತ್ತು ಮಾಡಿ ಕೊಂಡು ಒಂದು 10 ನಿಮಿಷದಲ್ಲಿ ಬಂದು ಕರೆದುಕೊಂಡು ಹೋಗುತ್ತೇನೆ. ಅವರ ಕಿಸೆಯಲ್ಲಿ ಸ್ವಲ್ಪ ಕಾಸು, ಮನೆಯ ವಿಳಾಸ ಮತ್ತು ಅವರಿಗೆ ಇರುವ ರೋಗದ ಮಾಹಿತಿ ಚೀಟಿ ಕೂಡ ಇಟ್ಟಿರುತ್ತೇನೆ.’ ಎಂದ.

ವಾಹ್. ಎಂತಹ ಒಳ್ಳೆಯ ಐಡಿಯಾ..! ಅವನ ಜ್ಞಾನಕ್ಕೆ ತಲೆ ಬಾಗಿದೆ.. ಅದಕ್ಕೂ ಅವನ ಉತ್ತರ...

‘ಸರ್, ಹಾಗೇನೂ ಅನ್ನಬೇಡಿ. ಅವರು ನನಗಾಗಿ ಮಾಡಿದರ ಎದುರು ನಾನು ಮಾಡುವುದು. ಏನೂ ಅಲ್ಲ. ನನ್ನಪ್ಪ ಹುಡುಕಾಟದ ಮುಂದೆ. ನನ್ನದು ಏನೂ ಅಲ್ಲ. ನನ್ನದು ಏನಿದ್ದರೂ ಎಲ್ಲ ತಂತ್ರಜ್ಞಾನದ್ದೇ ಕೆಲಸ’

ಹೀಗೆ ಹೇಳುತ್ತ , ಏನೂ ಆಗದ ಇದ್ದ ಹಾಗೆ, ಶಾಂತ ಸ್ವಭಾವದ ಆ ಮನುಷ್ಯ ತನ್ನ ತಂದೆಯ ಕೈ ಹಿಡಿದು ಕಾರಿನ ಒಳಗೆ ಕೂಡಿಸಿ, ನನಗೆ ನಮಸ್ಕಾರ ಮಾಡಿ ಹೊರಟು ಹೋದ.

ನಾನು ಸ್ವಲ್ಪ ಹೊತ್ತು ಅವನು ಹೋಗುವುದನ್ನೇ ನೋಡುತ್ತಾ ನಿಂತೆ. ಇಂತಹ ಮಕ್ಕಳೂ ಇದ್ದಾರೆ ಈ ಜಗತ್ತಿನಲ್ಲಿ.  ವಯೋ ವೃದ್ಧ ತಂದೆ, ಮೇಲೊಂದು ಗಂಭೀರ ತರಹದ ಮನೋ ರೋಗ. ನಾವು ನಮ್ಮ ತಂದೆ ತಾಯಿಯರ ಬಗ್ಗೆ, ಎಂದಾದರೂ ಯೋಚಿಸಿದ್ದೇವೆಯೇ? 

(ವಾಟ್ಸಾಪ್ ಆಧಾರಿತ)

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ