ಮಗಳು ಭಾರ ಅಲ್ಲ, ಮಗಳು ಮನೆಯ ಲಕ್ಷ್ಮಿ..!
ಮಗಳು ಒಂದು ಎಂಥ ಸುಖ, ಎಂಥ ಪಯಣವೆಂದರೆ, ಆ ದೇವರು ತನ್ನ ಭಕ್ತನ ಮೇಲೆ ತುಂಬಾ ಹೆಚ್ಚು ಸಂತೃಪ್ತಗೊಂಡರೆ, ಸಂತೋಷಗೊಂಡರೆ, ಆಗ ಆತ ಆ ಭಕ್ತನಿಗೆ ಮಗಳ ಸುಖದ ವರ ಕೊಡುತ್ತಾನೆ, ಆ ಮಗಳಿಗೋಸ್ಕರ, ಆ ಸಹೋದರಿಯರಿಗೋಸ್ಕರ, ಈ ಬರಹವನ್ನು ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಪೂರ್ತಿಯಾಗಿ ಓದಿದಾಗ ನಿಮ್ಮ ಮನಸು ಸಹಾ ತುಂಬಿ ಬರುತ್ತದೆ.
ಮಗಳು ಮದುವೆ ಮಂಟಪದಿಂದ ಅತ್ತೆಯ ಮನೆಗೆ ಹೋಗುತ್ತಾಳೆ, ಆಗ ಆಕೆ ಬೇರೆಯವಳಾಗಿ ಕಾಣುವುದಿಲ್ಲ, ಆದರೆ, ಆಕೆ ತವರುಮನೆಗೆ ಬಂದಾಗ ಮುಖ ತೊಳೆದು ಎದುರಿಗೇ ಇರುವ ಟವೆಲ್ ನ ಬದಲಿಗೆ ತನ್ನ ಬ್ಯಾಗಿನಲ್ಲಿರುವ ಕರವಸ್ತ್ರದಿಂದ ಮುಖ ಒರೆಸಿಕೊಂಡಾಗ, ಆಕೆ ಬೇರೆಯವಳಾಗಿ ಕಾಣುತ್ತಾಳೆ.
ಆಕೆ ಅಡುಗೆ ಮನೆಯಲ್ಲಿ ಬಾಗಿಲಲ್ಲಿ ಅಪರಿಚಿತಳಾಗಿ ನಿಂತಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ, ವಾಷಿಂಗ್ ಮಷೀನ್ ಬಳಸಲೇ, ಫ್ಯಾನ್ ಹಾಕಲೇ ಎಂದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ, ಟೇಬಲ್ ಮೇಲೆ ಊಟ ಬಡಿಸಿದ್ದಾಗಲೂ ಆಕೆ ಮುಚ್ಚಳ ತೆಗೆದು ನೋಡುವುದಿಲ್ಲ, ಆಗ ಆಕೆ ಬೇರೆಯವಳಾಗಿ ಕಾಣುತ್ತಾಳೆ.
ದುಡ್ಡು ಎಣಿಸುತ್ತಿದ್ದಾಗ ದೃಷ್ಟಿಯನ್ನು ಆ ಕಡೆ ಈ ಕಡೆ ತಿರುಗಿಸಿದಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ, ಮಾತುಮಾತಿಗೂ ತಮಾಷೆ ಮಾಡಿ ನಗುವ ನಾಟಕ ಮಾಡುತ್ತಿರುವಾಗ ಆಕೆ ಬೇರೆಯವಳಾಗಿ ಕಾಣುತ್ತಾಳೆ ಹಾಗೂ ಮರಳಿ ಹೋಗುವಾಗ, ಮತ್ತೆ ಯಾವಾಗ ಬರುತ್ತೀಯಾ, ಎಂದಾಗ ನೋಡೋಣ ಯಾವಾಗ ಬರಲು ಆಗುತ್ತದೋ ಎಂದು ಉತ್ತರ ನೀಡುವಾಗ ಆಕೆ ಶಾಶ್ವತವಾಗಿ ಬೇರೆಯವಳಾಗಿಬಿಟ್ಟಳು, ಹೀಗೆ ಅನಿಸುತ್ತದೆ.
ಆದರೆ, ಆಕೆ ಗಾಡಿಯಲ್ಲಿ ಕುಳಿತು, ಮೌನವಾಗಿ ತನ್ನ ಕಣ್ಣುಗಳನ್ನು ಪಕ್ಕಕ್ಕೆ ತಿರುಗಿಸಿ, ಒಣಗಿಸುವ ಪ್ರಯತ್ನ ಮಾಡುವಾಗ ಆ ಬೇರೆತನ ಒಂದು ಕ್ಷಣದಲ್ಲಿ ಹರಿದು ಹೋಗಿಬಿಡುತ್ತದೆ. ನನಗೆ ಪಾಲು ಬೇಡ ಅಣ್ಣಾ, ನನಗೆ ಪಾಲು ಬೇಡ, ನನ್ನ ತವರನ್ನು ಸಿಂಗರಿಸಿ ಇಡು, ನನಗೇನು ಕೊಡಬೇಡ ಅಣ್ಣಾ, ಪ್ರೀತಿಯಷ್ಟೇ ಸಾಕು ನನಗೆ, ನನ್ನ ಅಪ್ಪನ ಮನೆಯಲ್ಲಿ ನನ್ನ ನೆನಪನ್ನು ಶೇಖರಿಸಿ ಇಡು, ಮಕ್ಕಳ ಮನಸ್ಸಿನಲ್ಲಿ ನನ್ನ ಗೌರವವನ್ನು ಕಾಪಾಡು, ಈ ಮನೆಯ ಮಗಳಾಗಿದ್ದೇನೆ ಈ ಸನ್ಮಾನವನ್ನು ಕಾಪಾಡು.
ಆಕೆ ತಾಯಿಯ ಉಡುಗೆ ತೊಟ್ಟಾಗ ಆಕೆ ಮಗಳಿಂದ ತಾಯಿಯಾಗುತ್ತಾಳೆ. ಮಗಳಿಂದ ತಾಯಿಯವರೆಗಿನ ಪಯಣ, ನಿಶ್ಚಿಂತೆಯಿಂದ ಚಿಂತೆಯವರೆಗೆ ಪಯಣ, ಅಳುವುದರಿಂದ ಸುಮ್ಮನಾಗಿಸುವರೆಗಿನ ಪಯಣ, ತುಂಟತನದಿಂದ ಗಂಭೀರತೆಯಡೆಗಿನ ಪಯಣ, ಮೊದಲು ಆಕೆ ಸೆರಗಿನಲ್ಲಿ ಅಡಗಿಕೊಳ್ಳುತ್ತಿದ್ದಳು, ಈಗ ಬೇರೆಯವರನ್ನು ಸೆರಗಿನಲ್ಲಿ ಅಡಗಿಸಿಕೊಳ್ಳುತ್ತಾಳೆ, ಮೊದಲು ಆಕೆ ಬೆರಳು ಸುಟ್ಟುಹೋದರೂ ಇಡೀ ಮನೆಯನ್ನು ತಲೆಯ ಮೇಲೆ ಎತ್ತಿಕೊಳ್ಳುತ್ತಿದ್ದಳು, ಈಗ ಕೈ ಸುಟ್ಟುಹೋದರೂ ಅಡುಗೆ ಮಾಡುತ್ತಾಳೆ. ಮೊದಲು ಚಿಕ್ಕ ಚಿಕ್ಕ ಮಾತಿಗೂ ಅತ್ತುಬಿಡುತ್ತಿದ್ದಳು, ಈಗ ದೊಡ್ಡ ದೊಡ್ಡ ಮಾತುಗಳನ್ನೂ ಹೃದಯಲ್ಲಿ ಮುಚ್ಚಿಡುತ್ತಾಳೆ.
ಮೊದಲು ಸಹೋದರ, ಸ್ನೇಹಿತರ ಜೊತೆಗೆ ಜಗಳ ಮಾಡುತ್ತಿದ್ದಳು, ಈಗ ಅವರ ಜೊತೆಗೆ ಮಾತನಾಡಲೂ ಕಾತರಿಸುತ್ತಾಳೆ. ಅಮ್ಮಾ, ಅಮ್ಮಾ, ಎಂದು ಮನೆಯ ತುಂಬಾ ಓಡಾಡುತ್ತಿದ್ದವಳು, ಈಗ ಅಮ್ಮಾ ಎಂಬ ಶಬ್ದ ಕೇಳಿ ನಿಧಾನವಾಗಿ, ಮುಗುಳ್ನಗುತ್ತಾಳೆ. ಹತ್ತು ಗಂಟೆಗೆ ಎದ್ದರೂ ಬೇಗ ಎದ್ದುಬಿಟ್ಟೆ ಎಂದು ಹೇಳುತ್ತಿದ್ದವಳು, ಈಗ ಏಳು ಗಂಟೆಗೆ ಎದ್ದರೂ, ತಡವಾಯಿತು, ಎಂದುಕೊಳ್ಳುತ್ತಾಳೆ. ತನ್ನ ಕೋರಿಕೆಗಳನ್ನು ತೀರಿಸಿಕೊಳ್ಳುವುದರಲ್ಲಿ ಒಂದು ವರ್ಷವೇ ಮುಗಿದುಹೋಗುತ್ತಿತ್ತು, ಈಗ ಒಂದು ಬಟ್ಟೆಯನ್ನು ಕೊಳ್ಳಲೂ ಕಾತರಿಸುತ್ತಾಳೆ. ಆಗ ಇಡೀ ದಿನ ಖಾಲಿ ಇದ್ದರೂ ಬಿಜಿ ಇದ್ದೇನೆ ಎಂದು ಹೇಳುತ್ತಿದ್ದಳು, ಈಗ ಇಡೀ ದಿನ ಕೆಲಸ ಮಾಡಿದರೂ, ಕೈಲಾಗದವಳು ಅನಿಸಿಕೊಳ್ಳುತ್ತಾಳೆ.
ಒಂದು ಪರೀಕ್ಷೆಗೋಸ್ಕರ ಇಡೀ ವರ್ಷ ಓದುತ್ತಿದ್ದವಳು, ಈಗ ಅಣಿಯಾಗದೆಯೇ ಪ್ರತಿದಿನ ಪರೀಕ್ಷೆ ಎದುರಿಸುತ್ತಾಳೆ, ಯಾವಾಗ ಮಗಳು ತಾಯಿಯಾದಳೋ, ಯಾವಾಗ ಮಗಳ ಪಯಣ ತಾಯಿಯ ಪಯಣದಲ್ಲಿ ಬದಲಾಯಿತೋ ಗೊತ್ತಿಲ್ಲ, ಯಾವಾಗ ಮಗಳು ದೊಡ್ಡವಳಾಗಿಬಿಟ್ಟಳೋ ಗೊತ್ತಿಲ್ಲ, ಮಗಳು ವರ್ತಮಾನ, ಮಗಳು ಭವಿಷ್ಯ, ಮಗಳು ಎಂದರೆ ಬೆಲೆ ಕಟ್ಟಲಾಗದು.
ಮಗಳು ಎಂದರೆ ಮುಗ್ಧೆ, ಮಗಳು ಎಂದರೆ ಪ್ರೀತಿ, ಆದರೂ ಮಗಳು ಏಕೆ ಭಾರ ಎಂದು ಕಾಣುತ್ತಾಳೆ. ಮಗಳೇ ಅಲ್ಲವೇ ದೇವೀರೂಪದಲ್ಲಿ ಕಾಣಿಸೋದು, ಮಗಳೇ ಅಲ್ಲವೇ ನಮ್ಮ ವಂಶವನ್ನು ಬೆಳೆಸಲು ಕಾರಣವಾದದ್ದು. ಮಗಳು ಭಾರ ಅಲ್ಲ, ಮಗಳು ಮನೆಯ ಲಕ್ಷ್ಮಿ, ಮಗಳು ಮನೆಯ ಸಮೃದ್ಧಿ, ಮನೆಯ ಕಾರುಣ್ಯ. ಮಗಳಿಗೆ ಗೌರವ ಕೊಡಿ, ಮಗಳನ್ನು ಪ್ರೀತಿಸಿ.
ನನಗೆ ಬರಹ ತುಂಬಾ ಇಷ್ಟವಾಯಿತು, ಅದಕ್ಕೆ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ.
( ಸಂಗ್ರಹಿಸಿದ್ದು)
ಚಿತ್ರದಲ್ಲಿ: ಆದ್ಯಾ ಗಣೇಶ್ ರಾವ್ , ಲಾಸ್ ಏಂಜಲೀಸ್