ಮಗುವಿನ ಮನಸ್ಸಿನ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ ಇಂದು ಜನ್ಮದಿನದ ಸಂಭ್ರಮ

ಮಗುವಿನ ಮನಸ್ಸಿನ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ ಇಂದು ಜನ್ಮದಿನದ ಸಂಭ್ರಮ

ಸಾಹಿತ್ಯ ಲೋಕಕ್ಕೆ ಡಾ. ಎಚ್ಚೆಸ್ವಿ ಎಂದೇ ಚಿರಪರಿಚಿತರಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗಿಂದು ಜನ್ಮದಿನದ ಸಂಭ್ರಮ (ಜನನ: ೨೩-೦೬-೧೯೪೪). ಕವನಗಳು ನನ್ನಿಂದ ಮುನಿಸಿಕೊಂಡಿದ್ದರೂ ವೆಂಕಟೇಶಮೂರ್ತಿಯವರ ಬಗ್ಗೆ ಸ್ವಲ್ಪ ಸ್ವಲ್ಪ ಓದಿ ಕೊಂಡದ್ದಿದೆ. ನಾನಿಲ್ಲಿ ಅವರ ಕವನಗಳ ಬಗ್ಗೆ ಬರೆಯುದಿಲ್ಲ. ಆದರೆ ಅವರ ಬಗ್ಗೆ ಸ್ವಲ್ಪವಾದರೂ ಬರೆದರೆ ಅವರ ಜನ್ಮದಿನಕ್ಕೆ ಶುಭ ಕೋರಿದ ಹಾಗೆ ಆಗುತ್ತದೆ ಎಂಬ  ಕಿಂಚಿತ್ತು ನಂಬಿಕೆ ನನ್ನದು.

ಡಾ. ಎಚ್ಚೆಸ್ವಿ ಯವರು ಕೇವಲ ಕವಿಯಾಗಿ ಮಾತ್ರ ಸಾಹಿತ್ಯ ಲೋಕಕ್ಕೆ ಪರಿಚಿತರಲ್ಲ. ಅವರು ನಾಟಕ, ಪ್ರಬಂಧ, ಮಕ್ಕಳ ಸಾಹಿತ್ಯ, ಕಾದಂಬರಿ, ಅನುವಾದ, ವಿಮರ್ಶೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ ಮತ್ತು ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಇವರು ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ ಪದದ ಗೌರವಕ್ಕೂ ಪಾತ್ರರಾಗಿದ್ದಾರೆ. 

ಡಾ. ಎಚ್ಚೆಸ್ವಿ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಹೊದಿಗ್ಗೆರೆ ಎಂಬ ಗ್ರಾಮದಲ್ಲಿ. ಇವರು ನಾರಾಯಣ ಭಟ್ ಹಾಗೂ ನಾಗರತ್ನಮ್ಮ ಇವರ ಸುಪುತ್ರರು. ತಾಯಿಯೇ ಮೊದಲು ಗುರು ಎಂಬ ಮಾತೊಂದಿದೆ. ಅದು ವೆಂಕಟೇಶಮೂರ್ತಿಯವರ ಜೀವನದಲ್ಲಿ ಸಫಲವಾಗಿದೆ. ಏಕೆಂದರೆ ಇವರ ತಾಯಿ ನಾಗರತ್ನಮ್ಮನವರು ಶಿಕ್ಷಕಿಯಾಗಿದ್ದರು. ಆದುದರಿಂದ ಬಾಲ್ಯದಿಂದಲೇ, ಮನೆಯೇ ಪಾಠಶಾಲೆ ಎಂಬಂತೆ ಇವರಿಗೆ ಉತ್ತಮವಾದ ವಿದ್ಯಾರ್ಜನೆಗೆ ನಾಂದಿಯಾಯಿತು. ಮುಂದೆ ಶಾಲೆಯಲ್ಲಿ ಇವರ ಕನ್ನಡ ಅಧ್ಯಾಪಕರಾಗಿದ್ದ ನರಸಿಂಹ ಶಾಸ್ತ್ರಿಗಳು ಇವರಿಗೆ ಅಂದಿನ ಖ್ಯಾತ ಸಾಹಿತಿಗಳ ಸಾಹಿತ್ಯದ ಪರಿಚಯ ಮಾಡಿಕೊಟ್ಟರು. ತಮ್ಮ ಬಳಿ ಇದ್ದ ಕುವೆಂಪು, ಕಾರಂತ, ಗೊರೂರು, ಮಾಸ್ತಿ, ಬೇಂದ್ರೆ ಇಂತಹ ಸಾಹಿತಿಗಳು ರಚಿಸಿದ ಪುಸ್ತಕಗಳ ಪರಿಚಯ ಮಾಡಿಕೊಟ್ಟರು. ಇದು ಬಾಲ್ಯದಲ್ಲೇ ವೆಂಕಟೇಶಮೂರ್ತಿಯವರ ಸೃಜನಶೀಲ ಮನಸ್ಸಿನ ಬೇರುಗಳಿಗೆ ನೀರುಣಿಸಿದಂತಾಯಿತು. ಮುಂದೆ ತಾವು ಸ್ವತಃ ರಚಿಸಿದ ಕವನ ಸಂಕಲನ ‘ಪರಿವೃತ್ತ' ವನ್ನು ತಮ್ಮ ಬಾಲ್ಯದ ಗುರುಗಳಾದ ನರಸಿಂಹ ಶಾಸ್ತ್ರಿಗಳಿಗೆ ಅರ್ಪಿಸಿದ್ದಾರೆ. ಈ ಮೂಲಕ ಗುರುವಿಗೆ ಸೂಕ್ತ ಗುರುದಕ್ಷಿಣೆಯನ್ನು ನೀಡಿದ್ದಾರೆ. 

‘ನಿತ್ಯೋತ್ಸವ'ದ ಕವಿಗಳಾದ ನಿಸಾರ್ ಅಹಮದ್ ಅವರಿಂದ ಪ್ರೇರಣೆಗೊಂಡು ಡಾ. ಎಚ್ಚೆಸ್ವಿ ಅವರ ಮನಸ್ಸು ಪ್ರಕೃತಿಯ ಸೊಬಗನ್ನು ತಮ್ಮ ಕಾವ್ಯದಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತದೆ. ಅದರಲ್ಲಿ ಅವರು ಸಫಲರೂ ಆಗುತ್ತಾರೆ. ನಿಸಾರ್ ಅಹಮದ್ ಅವರ ಒಡನಾಟ ವೆಂಕಟೇಶಮೂರ್ತಿಯವರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸುತ್ತದೆ. ನಿಸಾರ್ ಅವರನ್ನು ಈಗಲೂ ವೆಂಕಟೇಶಮೂರ್ತಿಯವರು ತಮ್ಮ ಕಾವ್ಯ ಗುರು ಎಂದೇ ಗೌರವಿಸುತ್ತಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ.ಎ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆಯುತ್ತಾರೆ. ‘ಕನ್ನಡದಲ್ಲಿ ಕಥನ ಕವನಗಳು' ಎಂಬ ಮಹಾ ಪ್ರಬಂಧವನ್ನು ಬರೆದು ಪಿ.ಹೆಚ್. ಡಿ ಪದವಿಯನ್ನು ಪಡೆಯುತ್ತಾರೆ. ತಮ್ಮ ವೃತ್ತಿ ಜೀವನವನ್ನು ಮಲ್ಲಾಡಿ ಎಂಬ ಊರಿನ ಶಾಲೆಯಲ್ಲಿ ಕ್ರಾಫ್ಟ್ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಂತರ ಹೆಚ್ಚಿನ ವ್ಯಾಸಂಗ ಮಾಡಿ ಸುಮಾರು ೩೦ ವರ್ಷ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. 

ಇವರ ಲೇಖನಿಯಿಂದ ಮೂಡಿದ ನೂರಾರು ಕವಿತೆಗಳು ಕವನ ಸಂಕಲನಗಳಾಗಿ ಮುದ್ರಿತವಾಗಿವೆ. ಸುಮಾರು ೧೫ಕ್ಕೂ ಅಧಿಕ ಕವನ ಸಂಕಲನಗಳು ಪ್ರಕಟವಾಗಿವೆ. ಅವುಗಳಲ್ಲಿ ಬಾಗಿಲು ಬಡಿವ ಜನಗಳು, ಸಿಂದಾಬಾದ್ ನ ಆತ್ಮಕಥೆ, ಮರೆತ ಸಾಲುಗಳು, ಸೌಗಂಧಿಕಾ, ಇಂದುಮುಖಿ, ಭೂಮಿಯೂ ಒಂದು ಆಕಾಶ ಪ್ರಮುಖವಾದವುಗಳು. ಬಾಣಸವಾಡಿಯ ಬೆಂಕಿ ಮತ್ತು ಪುಟ್ಟಾರಿಯ ಮತಾಂತರ ಇವರ ಕಥಾ ಸಂಕಲನ. ತಾಪಿ, ಅಮಾನುಷರು ಮುಂತಾದ ಕಾದಂಬರಿಗಳು, ಸಾಹಿತ್ಯ ವಿಮರ್ಶೆಗಳು, ಅನುವಾದಗಳು, ಹಕ್ಕಿ ಸಾಲು, ಹೂವಿನ ಶಾಲೆ ಮೊದಲಾದ ಮಕ್ಕಳ ಸಾಹಿತ್ಯ, ಹೋಮಿ ಭಾಬಾ, ಸೋದರಿ ನಿವೇದಿತಾ, ಸಿ.ವಿ.ರಾಮನ್ ಬಗ್ಗೆ ವ್ಯಕ್ತಿ ಚಿತ್ರಗಳು, ಹೆಜ್ಜೆಗಳು, ಕತ್ತಲೆಗೆಷ್ಟು ಮುಖಗಳು ಮುಂತಾದ ನಾಟಕಗಳು, ಕ್ರಿಸ್ಮಸ್ ಮರ ಎಂಬ ಆತ್ಮಕಥನ ಹೀಗೆ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಛಾಪನ್ನು ನಿರಂತರವಾಗಿ ಮೂಡಿಸುತ್ತಾ ಬಂದಿದ್ದಾರೆ. 

ತಮ್ಮ ಬಿಡುವಿಲ್ಲದ ಬರವಣಿಕೆಯ ನಡುವೆಯೂ ಚಲನಚಿತ್ರ ಹಾಗೂ ದೂರದರ್ಶನದ ಧಾರವಾಹಿಗಳಿಗೆ ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಚಿನ್ನಾರಿ ಮುತ್ತ, ಕೋಟ್ರೇಶಿ ಕನಸು, ಕ್ರೌರ್ಯ, ಮತದಾನ ಮುಂತಾದ ಚಲನ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರವಾಹಿಗಳಾದ ಯಾವ ಜನ್ಮದ ಮೈತ್ರಿ, ಮುಕ್ತ, ಸವಿಗಾನ ಮುಂತಾದುವುಗಳಿಗೆ ಶೀರ್ಷಿಕೆ ಹಾಡು (ಟೈಟಲ್ ಸಾಂಗ್) ಗಳನ್ನು ರಚಿಸಿದ್ದಾರೆ. 

ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವೆಂಕಟೇಶಮೂರ್ತಿಯವರಿಗೆ ೭೫ ವರ್ಷ ತುಂಬಿದ ಸಮಯದಲ್ಲಿ ಅವರ ಅತ್ಮೀಯರು, ಸಾಹಿತ್ಯ ಬಂಧುಗಳು ಸೇರಿ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈಗ ಬೆಂಗಳೂರಿನಲ್ಲಿ ವಾಸವಾಗಿರುವ ವೆಂಕಟೇಶಮೂರ್ತಿಯವರು ಮುಂದೆಯೂ ತಮ್ಮ ಸಾಹಿತ್ಯ ಚಟುವಟಿಕೆಗಳನ್ನು ಮುಂದುವರೆಸುತ್ತಾ, ನಮ್ಮಂಥ ಸಾಹಿತ್ಯಾಸಕ್ತರ ಮನಸ್ಸನ್ನು ತಣಿಸಲಿ ಎಂದು ಅವರ ಜನ್ಮದಿನದಂದು ಶುಭ ಹಾರೈಕೆಗಳು.