ಮಜಾ ಇರೋದು ಕಾಲೆಳೆಯುವುದರಲ್ಲಲ್ಲ, ಕೈ ಹಿಡಿದು ನಡೆಸುವುದರಲ್ಲಿ...

ಮಜಾ ಇರೋದು ಕಾಲೆಳೆಯುವುದರಲ್ಲಲ್ಲ, ಕೈ ಹಿಡಿದು ನಡೆಸುವುದರಲ್ಲಿ...

ನನ್ನ ಲೇಖನವನ್ನು ಒಂದು ಸಣ್ಣ ಕಥೆಯ ಮೂಲಕವೇ ಆರಂಭಿಸಬೇಕೆಂದಿರುವೆ. ಏನಂತೀರಾ ಫ್ರೆಂಡ್ಸ್? ಸರಿ ಈಗ ಕಥೆ ಕೇಳಿ. ಹಲವಾರು ವರ್ಷಗಳ ಹಿಂದೆ ವಿದೇಶವೊಂದರಲ್ಲಿ ಪ್ರಪಂಚದಲ್ಲಿರುವ ಎಲ್ಲ ಅಪರೂಪದ ಜೀವಿಗಳ ಪ್ರದರ್ಶನ ನಡೆಯಿತಂತೆ. ಭೂಮಿಯ ಮೇಲೆ ಜೀವಿಸುವ, ಸಾಗರದ ತಳದಲ್ಲಿ ಬದುಕುವ ಹೀಗೆ ಸಾವಿರಾರು ಜೀವ ಜಂತುಗಳ ಪ್ರದರ್ಶನ ನಡೆಯಿತು. ಪ್ರತೀ ದಿನ ಹಲವಾರು ಮಂದಿ ಈ ಅಪರೂಪದ ಪ್ರದರ್ಶನಕ್ಕೆ ಭೇಟಿ ನೀಡಿ ತಾವು ಜೀವಮಾನದಲ್ಲಿ ನೋಡದ ಜೀವ ಜಂತುಗಳನ್ನು ವೀಕ್ಷಿಸಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಲ್ಲೇ ಇರುತ್ತಿದ್ದ ಗೈಡ್ ಅಥವಾ ಮಾಹಿತಿದಾರನ ಬಳಿ ಕೇಳುತ್ತಿದ್ದರು. ಎಲ್ಲಾ ಪ್ರಾಣಿ-ಜೀವಿಗಳನ್ನು ಪಂಜರದಲ್ಲೋ, ಮುಚ್ಚಿದ ಗಾಜಿನ ಜಾಡಿಯಲ್ಲೋ ಅಥವಾ ರಟ್ಟಿನ ಪೆಟ್ಟಿಗೆಯಲ್ಲೋ ಇರಿಸಿದ್ದರು. ಆದರೆ ಭಾರತದಿಂದ ಪ್ರದರ್ಶನಕ್ಕೆ ಇಡಲಾದ ಜೀವಿಗಳ ಗಾಜಿನ ಗಾಡಿಗೆ ಮುಚ್ಚಳವೇ ಇರಲಿಲ್ಲ. ಕುತೂಹಲ ಭರಿತ ವೀಕ್ಷಕರು ಗೈಡ್ ಬಳಿ ಈ ವಿಷಯ ಕೇಳಿದರು. ಅದಕ್ಕೆ ಗೈಡ್ ಹೇಳಿದ ಭಾರತದಿಂದ ಬಂದ ಈ ಅಪರೂಪದ ಜೀವಿ ಏಡಿಗಳು. ಇವುಗಳು ಥೇಟ್ ಭಾರತೀಯರಂತೆಯೇ, ಒಂದು ಏಡಿ ಮೇಲೇರಿ ಜಾಡಿಯ ಬಾಗಿಲಿನ ಹತ್ತಿರ ತಲುಪಿದಾಗ ಇನ್ನೊಂದು ಏಡಿ ಅದರ ಕಾಲು ಎಳೆದು ತಾನು ಎದುರು ಹೋಗ ಬೇಕೆಂದು ಬಯಸುತ್ತಿತ್ತು. ಆ ಏಡಿಯನ್ನು ಇನ್ನೊಂದು ಏಡಿ, ಇನ್ನೊಂದನ್ನು ಮತ್ತೊಂದು ಹೀಗೆ ಯಾವ ಏಡಿಯೂ ಜಾಡಿಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಆದುದರಿಂದ ಆ ಜಾಡಿಗೆ ಮುಚ್ಚಳ ಹಾಕುವ ಅವಶ್ಯಕತೆಯೇ ಇಲ್ಲ ಎಂದ. ಇದು ಕೆಲವು ಭಾರತೀಯರ ಕೆಟ್ಟ ಸಂಸ್ಕೃತಿಯನ್ನು ಹೇಳುವ ಕಾಲ್ಪನಿಕ ಕಥೆ. ಕಥೆ ಕಾಲ್ಪನಿಕವಾದರೂ ಸತ್ಯ ಇಲ್ಲವೆಂದಿಲ್ಲ. 
    ಒಂದೊಮ್ಮೆ ಏಡಿಗಳು ಪರಸ್ಪರ ಕಾಲೆಳೆಯದೇ ಕೈ ಹಿಡಿದಿದ್ದರೆ ಎಲ್ಲಾ ಏಡಿಗಳು ಸ್ವತಂತ್ರರಾಗುತಿದ್ದವು. ಆದರೆ ನಮಗೆ ಕಾಲು ಎಳೆಯುವುದಲ್ಲಿರುವ ಆಸಕ್ತಿ ಕೈ ಹಿಡಿದು ಸಹಾಯ ಮಾಡುವುದರಲ್ಲಿ ಇರುವುದಿಲ್ಲ. ನಮ್ಮ ಈಗಿನ ಜೀವನದಲ್ಲೇ ನೋಡಿ, ಎಲ್ಲೆಲ್ಲೋ ಯಾಕೆ ನಿಮ್ಮ ಕಚೇರಿಯಲ್ಲೆ ಗಮನಿಸಿ. ಯಾರಾದರೊಬ್ಬರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಅದರಿಂದ ಅವರು ಮಾಲೀಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿದ ತಕ್ಷಣ ನಮ್ಮ ಹೊಟ್ಟೆ ಉರಿಯತೊಡಗುತ್ತದೆ. ಅವರನ್ನು ಹೇಗೆ ಕಾಲೆಳೆದು ಬೀಳಿಸುವುದು ಎನ್ನುವ ಯೋಜನೆ ಮಾಡುವುದರಲ್ಲೇ ನಮ್ಮ ಮುಂದಿನ ದಿನಗಳು ಕಳೆದು ಹೋಗುತ್ತವೆ. ದೈನಂದಿನ ಯಾವುದೇ ಚಟುವಟಿಕೆಗಳಲ್ಲಿ ನಮಗೆ ಆಸಕ್ತಿಯೇ ಹೊರಟು ಹೋಗಿರುತ್ತದೆ. ಮನೆಯಲ್ಲಿ ಮಕ್ಕಳು ಮಾತಾಡಲು ಬಂದರೆ ನಮಗೆ ಆಸಕ್ತಿ ಇಲ್ಲ. ತಂದೆ ತಾಯಿಯ ಮಾತನ್ನು ಗಮನಿಸಿಸುವ ಯೋಚನೆ ಇಲ್ಲ. ಹೆಂಡತಿ ಮಾತನಾಡಿದರಂತೂ ನಮ್ಮ ಮೈ ಉರಿದೇ ಹೋಗುತ್ತದೆ. ಇದು ಯಾಕೆ ಹೀಗೆ? ಮೇಲೆ ಹೇಳಿದ ಕಥೆ ಬುದ್ದಿ ಇಲ್ಲದ ಏಡಿಗಳ ಬಗ್ಗೆ ಆದರೆ ಈ ವಿಷಯ ಬುದ್ದಿ ಇರುವ ಮಾನವನ ಬಗ್ಗೆ. ಅಸೂಯೆಯಿಂದ ಯಾರಿಗೆ ಒಳ್ಳೆದು ಆಗಿದೆ? ಕಚೇರಿಯ ನಮ್ಮ ಸಹೋದ್ಯೋಗಿಯ ಪ್ರಗತಿಯ ಬಗ್ಗೆ ಅಸೂಯೆ ಪಡೋದು ಬಿಟ್ಟು ಅವರನ್ನು ಅಭಿನಂದಿಸಿ ಅವರಿಂದ ಒಳ್ಳೆಯ ಮಾಹಿತಿ ಪಡೆದು ನಮ್ಮ ವಿಭಾಗದ ಕೆಲಸ ಕಾರ್ಯದಲ್ಲಿ ಪ್ರಯೋಗಿಸಿದರೆ ನಾವೂ ಸಫಲತೆಯ ಏಣಿ ಹತ್ತ ಬಹುದಲ್ಲವೇ? ನಾವು ಇದನ್ನು ಆಲೋಚಿಸಿಯೇ ಇರುವುದಿಲ್ಲ.
ಒಂದು ಸಂಗತಿ ಯೋಚಿಸಿ ನೋಡಿ. ಸಂತೋಷದ ಸಂಗತಿ ಇದ್ದರೆ ಎಲ್ಲರೊಡನೆ ಹಂಚಿ ಅದು ಇನ್ನಷ್ಟು ಹೆಚ್ಚಾಗುತ್ತದೆ. ಅದೇ ದುಃಖದ ವಿಚಾರ ಹಂಚಿ ಕೊಂಡಷ್ಟು ಕಮ್ಮಿ ಆಗುತ್ತದೆ. ಅದೇ ದೇವರ ಮಾಯೆ ಅನ್ನೋದು. ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ನಾವು ಯೋಚಿಸ ಬೇಕು. ದುಡಿಯ ಬೇಕು. ಯಶಸ್ಸಿಗೆ ಅಡ್ಡದಾರಿಗಳು ಇರುವುದಿಲ್ಲವಂತೆ. ಕಷ್ಟ ಪಟ್ಟು ದುಡಿಯಬೇಕು ಮತ್ತು ಗಳಿಸಬೇಕು. ಕೆಲಸ ಯಾವುದಾದರೇನು? ಪ್ರಾಮಾಣಿಕತೆಯಿದ್ದರೆ ಸಫಲತೆ ನಮ್ಮ ಹಿಂದೆಯೇ ಬರುತ್ತದೆ. 
ಈಗಿನ ಯುವಕರು ಆಟದ ಮೈದಾನದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಹಿಂದೆ ಇರುತ್ತಾರೆ. ಅದು ಹೀಗೆ ಇದು ಹಾಗೆ ಅನ್ನುತ್ತಾ ತಮ್ಮ ಭವಿಷ್ಯವನ್ನು ಕತ್ತಲೆಯಲ್ಲೇ ಕಳೆಯುತ್ತಾರೆ. ಇದೆಲ್ಲಾ ನಮಗೆ ಗೊತ್ತಿರುವ ಸಂಗತಿಗಳೇ ಅಲ್ವಾ ಎಂದು ನಾವು ಯೋಚಿಸುತ್ತೇವೆ. ಆದರೆ ಸುಧಾರಿಸಿ ಕೊಳ್ಳುವುದಿಲ್ಲ. ದುಡಿದ ಹಣವನ್ನೆಲ್ಲಾ ಕುಡಿತಕ್ಕೇ ಖರ್ಚು ಮಾಡುವ ವ್ಯಕ್ತಿಗೆ ಅದು ತಪ್ಪೆಂದು ಗೊತ್ತಿರುವುದಿಲ್ಲವಾ? ಖಂಡಿತಾ ಗೊತ್ತಿರುತ್ತೆ. ಆದರೆ ಕುಡಿತದ ಚಟ ಅವನನ್ನು ಯಾಮಾರಿಸಿ ಬಿಡುತ್ತದೆ. ಅದರ ಪರಿಣಾಮ ಅವನಿಗೆ ಗೊತ್ತಾಗುವಷ್ಟರಲ್ಲಿ ಅವನು ಸಾವಿನ ಸಮೀಪ ಬಂದಿರುತ್ತಾನೆ. ಇದೆಲ್ಲಾ ಕೆಲವು ಸ್ಯಾಂಪಲ್‌ಗಳಷ್ಟೇ. ಮುಂದೆ ಇನ್ನೂ ಬರೆಯಲು ಇದೆ. 
ಕೆಲವೊಮ್ಮೆ ನಾವು ಸುಮ್ಮನೇ ಸಮಸ್ಯೆಯ ಜಾಲದಲ್ಲಿ ಬೀಳುತ್ತೇವೆ. ಯಾಕೆ ಗೊತ್ತಾ? ನಾವು ನೋ ಅಥವಾ ಇಲ್ಲ ಎನ್ನುವ ಬದಲು ಬಹಳಷ್ಟು ಸಲ ಒತ್ತಡಕ್ಕೆ ಒಳಗಾಗಿ ಯೆಸ್ ಅಥವಾ ಹೌದು ಎಂದಿರುತ್ತೇವೆ. ಉದಾಹರಣೆಗೆ ನಿಮ್ಮ ಗೆಳೆಯನೋರ್ವನಿಗೆ ತುಂಬಾ ದೊಡ್ಡ ಮೊತ್ತದ ಹಣಕಾಸಿನ ಸಾಲದ ನೆರವು ಬೇಕಾಗಿರುತ್ತದೆ. ಅವನು ಅದಕ್ಕಾಗಿ ಯಾವುದೋ ಬ್ಯಾಂಕ್ ಅಥವಾ ಫೈನಾನ್ಸ್ ಹತ್ತಿರ ಮಾತುಕತೆಯನ್ನು ಮಾಡಿ ಮುಗಿಸಿರುತ್ತಾನೆ. ಸಾಲ ಕೊಡುವವರು ಗ್ಯಾರಂಟಿ ಅಥವಾ ಸಾಕ್ಷಿ ಬೇಕೆಂದು ಕೇಳಿಯೇ ಕೇಳುತ್ತಾರೆ. ಆ ಗೆಳೆಯನಿಗೆ ನಿಮ್ಮ ನೆನಪಾಗುತ್ತೆ. ನೀವು ಮೊದ ಮೊದಲಿಗೆ ಒಪ್ಪುವುದಿಲ್ಲ. ಆದರೆ ಅವನ ಬಲವಂತಕ್ಕೆ ನೋ ಎನ್ನುವ ಕಡೆ ಯೆಸ್ ಎಂದು ಹೇಳಿ ಬಿಡುತ್ತೀರಿ ಎಂದು ಅಂದು ಕೊಳ್ಳಿ. ನಿಮಗೆ ನಿಮ್ಮ ಗೆಳೆಯನ ಸಾಮರ್ಥ್ಯ ಮತ್ತು ದೌರ್ಬಲ್ಯಗಳೆರಡು ಮೊದಲೇ ಗೊತ್ತಿರುತ್ತವೆ. ಅಷ್ಟು ದೊಡ್ಡ ಮೊತ್ತದ ಸಾಲವನ್ನು ಮರುಪಾವತಿ ಮಾಡುವಷ್ಟು ಅವನ ಹತ್ತಿರ ಆಸ್ತಿಯಿಲ್ಲ ಎಂದೂ ಗೊತ್ತಿರುತ್ತದೆ. ಆದರೂ ಅವನ ಸಾಲಕ್ಕೆ ನೀವು ಬಾದ್ಯಸ್ಥರಾಗಿ ಬಿಡುತ್ತೀರಿ. ಕೇವಲ ಒಂದು ಯೆಸ್ ಹೇಳುವ ಮೂಲಕ. ನಿಜಕ್ಕೂ ಈ ಬಲವಂತದ ಗೆಳೆತನ ನಿಮಗೆ ಬೇಕಾ? ನಾವು ಯೋಚಿಸ ಬೇಕಾದ ಸಂಗತಿ ಅಲ್ವಾ?
ಇದೊಂದೇ ಸಂಗತಿಯಲ್ಲ. ಮದುವೆ, ಆಸ್ತಿ ಖರೀದಿ, ಉದ್ದಿಮೆಯ ಪ್ರಾರಂಭ ಹೀಗೆ ಹತ್ತು ಹಲವಾರು ವಿಷಯಗಳಲ್ಲಿ ನೋ ಅನ್ನುವಡೆ ಯೆಸ್ ಎಂದು ಹೇಳಿ ನಂತರ ತಾಪತ್ರಯಕ್ಕೆ ಸಿಕ್ಕಿ ಬೀಳುತ್ತೀರಿ. ಕಷ್ಟ ಕಾಲಕ್ಕೆ ಗೆಳೆಯರಿಗೆ ಸಹಾಯ ಮಾಡಲೇ ಬೇಕು ಅದರಲ್ಲಿ ತಪ್ಪಿಲ್ಲ ಆದರೆ ಒಮ್ಮೆ ಯೋಚಿಸಿ ಮುಂದುವರೆಯಿರಿ ಅನ್ನೋದೇ ನನ್ನ ಆಶಯ. ಕಾಲೆಳೆಯುವವರ ಸಂತತಿಗಿಂತ ಕೈ ಹಿಡಿದು ಮೇಲೆತ್ತುವವರ ಸಂಖ್ಯೆಯೇ ಅಧಿಕ. ಇಲ್ಲವಾದರೆ ಕಾಡಿನಲ್ಲಿ ಜಿಂಕೆಗಳ ಸಂಖ್ಯೆಗಿಂತಲೂ ಹುಲಿಗಳ ಸಂಖ್ಯೆಯೇ ಹೆಚ್ಚು ಇರಬೇಕಿತ್ತು. ಕೊಲ್ಲುವವನಿಗಿಂತ ಕಾಯುವವನೇ ದೊಡ್ಡವ. ಏನಂತೀರಾ?
ಚಿತ್ರ: ಅಂತರ್ಜಾಲದಿಂದ