ಮಜಾ ಭಾರತದ ಗುರುವೇ ನಮ್ಮ ಗುರು ಕಿರಣ್

ಮಜಾ ಭಾರತದ ಗುರುವೇ ನಮ್ಮ ಗುರು ಕಿರಣ್

ಮನೆಯಲ್ಲಿ ಕುಳಿತು ದೂರದರ್ಶನ ನೋಡುವವರಿಗೆಲ್ಲ ಮಜಾ ಭಾರತ ಅಚ್ಚು ಮೆಚ್ಚಿನ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಅದರಲ್ಲಿನ ತೀರ್ಪುಗಾರರ ಪೈಕಿ ಓರ್ವವೇ ನಮ್ಮವರೇ ಆದ ಗುರು ಕಿರಣ್. ಗುರು ಕಿರಣ್ ಕಾರ್ಯಕ್ರಮದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿ ಅವರ ಅಭಿನಯದಲ್ಲಿನ ಕುಂದು ಕೊರತೆಗಳನ್ನು ತಿದ್ದುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಅನುಭವ ಅವರಿಗೆ ಬಂದದ್ದಾದರೂ ಹೇಗೆ ಎಂದರೆ ಅವರ ಹಿಂದಿನ ದಿನಗಳು ನೆನಪಾಗುವುದು ಸಹಜ. ಈಗ ಕನ್ನಡ ಚಿತ್ರರಂಗದಲ್ಲಿ ಸಂಗೀತ ಎಂದರೆ ಗುರುಕಿರಣ್ ಎಂದು ಹೆಸರುವಾಸಿಯಾಗಿದೆ. ಗುರು ನಿಜಕ್ಕೂ ಉತ್ತಮ ಸಂಗೀತಗಾರ ಮತ್ತು ಹಾಡುಗಾರರೂ ಹೌದು. ನಟನೆಯಲ್ಲೂ ಸೈ ಅನಿಸಿಕೊಂಡಿದ್ದಾರೆ. 
    ಮಂಗಳೂರಿನ ಸಂಗೀತ ರಸಮಂಜರಿಗಳಿಗೆ ಸಂಗೀತ ನೀಡುತ್ತಾ, ಹಾಡುತ್ತಾ ಇಲ್ಲಿಯ ಜನರನ್ನು ರಂಜಿಸುತ್ತಾ ಒಂದು ದಿನ ನಮ್ಮೂರ ಈ ಹುಡುಗ ಬೆಂಗಳೂರಿನ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹೆಸರು ಮಾಡುವುದು ಕುಡ್ಲದವರಿಗೆ ಅಚ್ಚರಿಯ ಸಂಗತಿಯೇ ಸರಿ. ಆದರೆ ಪ್ರತಿಭೆಯನ್ನು ತುಂಬಾ ದಿನ ಮುಚ್ಚಿ ಇಡಲಾಗದು. ಸೂರ್ಯನನ್ನು ಕೊಡೆಯಿಂದ ಮುಚ್ಚಲಾಗುವುದೇ? ಅದೇ ರೀತಿ ಗುರು ಕಿರಣ್ ಸಂಗೀತ ವೈವಿಧ್ಯಮಯ. ಪ್ರತೀ ಚಿತ್ರದಲ್ಲಿ ಹೊಸತನವನ್ನು ಕಾಯ್ದುಕೊಳ್ಳುವ ಇವರದ್ದು ಪಾಶ್ಚಾತ್ಯ ಸಂಗೀತದ ಧಾಟಿ ಎಂದು ಹೇಳುವವರಿದ್ದಾರೆ. ಆದರೆ ಗುರು ಬದಲಾಗಿದ್ದಾರೆ. ಅಬ್ಬರದ ಸಂಗೀತದ ಪೊರೆಯನ್ನು ಕಳಚಿ ಶಾಸ್ತ್ರೀಯ ಸಂಗೀತದತ್ತ ಒಲವು ಬೆಳೆಸುತ್ತಾ ಬಂದಿದ್ದಾರೆ. ಈಗ ಕನ್ನಡ ಚಿತ್ರರಂಗದಲ್ಲಿ ಸಂಗೀತ ಎಂದರೆ ಗುರುಕಿರಣ್ ಎಂದು ಹೆಸರುವಾಸಿಯಾಗಿದೆ. ಗುರು ನಿಜಕ್ಕೂ ಉತ್ತಮ ಸಂಗೀತಗಾರ ಮತ್ತು ಹಾಡುಗಾರರೂ ಹೌದು. ನಟನೆಯಲ್ಲೂ ಸೈ ಅನಿಸಿಕೊಂಡಿದ್ದಾರೆ.
    ಗುರುಕಿರಣ್ ಈಗಲೂ ನೆನಪಿಸುವ ಚಿತ್ರವೆಂದರೆ 'ಆಪ್ತಮಿತ್ರ'. ಅವರೇ ಹೇಳುವಂತೆ ಇಮೇಜ್ ಬದಲಾಯಿಸಿದ ಚಿತ್ರವಂತೆ. ಆ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಬಂದದ್ದೇ ಅಚ್ಚರಿಯ ಸಂಗತಿಯಂತೆ. ಯಾಕೆಂದರೆ ಅಲ್ಲಿಯವರೆಗೆ ಗುರು ಯಾವುದೇ ಶಾಸ್ತ್ರೀಯ ಸಂಗೀತಾಧಾರಿತ ಸಿನೆಮಾಗಳಿಗೆ ಸಂಗೀತ ನೀಡಿರಲಿಲ್ಲ. ಗುರುಕಿರಣ್ ಸಂಗೀತ ಎಂದರೆ ಯುವಕರಿಗೆ ಮಾತ್ರವೇ ಎಂಬ ಅಪವಾದವಿತ್ತು. ಅದನ್ನು ಹೊಡೆದೋಡಿಸಿದ ಚಿತ್ರವೆಂದರೆ 'ಆಪ್ತಮಿತ್ರ'. ಗುರುಕಿರಣ್ ಸಂಗೀತ ನೀಡಿದ ಮೊದಲ ಚಿತ್ರ 'ಎ'. ಹೊಸಬರಿಂದ ಹೊಸತನ ಎಂಬ ಉಪೇಂದ್ರರ ಮಂತ್ರದಂತೆ ಚಿತ್ರ ಸುಪರ್ ಹಿಟ್ ಆಯಿತು. ಸಂಗೀತಗಾರ ಗುರುಕಿರಣ್ ಮೊದಲ ಚಿತ್ರದಲ್ಲೆ ಸೆಂಚುರಿ ಬಾರಿಸಿದರು.
    ಇನ್ನೂ ಗುರುಕಿರಣ್‌ರಿಂದ ಉತ್ತಮ ಸಂಗೀತ ಹೊರಬರಬೇಕಾಗಿದೆ. ಈವರೆಗೆ ಸುಮಾರು ೯೦ ಚಿತ್ರಗಳಿಗೆ ಸಂಗೀತ ನೀಡಿದರೂ ಈಗಲೂ ಸರಳತೆಯಲ್ಲಿ ಇದ್ದಾರೆ. ಮಂಗಳೂರಿಗೆ ಬಂದಾಗ ನಮ್ಮ ಒಳಗೆ ಒಬ್ಬರಾಗಿ ಹಾಡಿ ನಲಿಯುತ್ತಾರೆ. ಸಂಗೀತ ನಿರ್ದೇಶಕನಾಗಿ ಕೈ ತುಂಬಾ ಸಂಪಾದಿಸುವುದು ಅವರ ಉದ್ದೇಶ ಅಲ್ಲವಂತೆ ಅವರಿಗೆ ಸಂಗೀತವೇ ಉಸಿರು-ಪ್ಯಾಶನ್. ಇವರಿಂದ ಇನ್ನಷ್ಟು ಸಂಗೀತ ರಸಧಾರೆ ಹರಿಯಲಿ, ಸಂಗೀತ ಲೋಕ ಸಮೃದ್ಧವಾಗಲಿ ಎಂಬುದೇ ಶುಭ ಹಾರೈಕೆ.
ಚಿತ್ರ ಕೃಪೆ: ಅಂತರ್ಜಾಲ