ಮಜೇದಾರ್ ಮೈಕ್ರೋಸ್ಕೋಪು

ಮಜೇದಾರ್ ಮೈಕ್ರೋಸ್ಕೋಪು

ಪುಸ್ತಕದ ಲೇಖಕ/ಕವಿಯ ಹೆಸರು
ಕೊಳ್ಳೇಗಾಲ ಶರ್ಮ
ಪ್ರಕಾಶಕರು
ಭೂಮಿ ಬುಕ್ಸ್, ಶೇಷಾದ್ರಿಪುರಂ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೧೪೪.೦೦, ಮುದ್ರಣ: ೨೦೨೨

“ಮಜೇದಾರ್ ಮೈಕ್ರೋಸ್ಕೋಪು" ಎನ್ನುವ ವಿಭಿನ್ನ ಹೆಸರಿನ ಪುಸ್ತಕವನ್ನು ಬರೆದವರು ಖ್ಯಾತ ವಿಜ್ಞಾನ ಲೇಖಕರಾದ ಕೊಳ್ಳೇಗಾಲ ಶರ್ಮ ಇವರು.  “ವಿಜ್ಞಾನ ಜಗತ್ತನ್ನು ಕೆಲವರು ಐವರಿ ಟವರ್ (ದಂತಗೋಪುರ) ಎನ್ನುವುದೂ ಉಂಟು. ಅಲ್ಲಿನ ನಡವಳಿಕೆಗಳು, ಅಲಿಖಿತ ನೀತಿ, ನಿಯಮಾವಳಿಗಳು, ಸಂಬಂಧಗಳು ಹಾಗೂ ಸಾಧನಗಳೆಲ್ಲವೂ ಬಳಸುವ ಭಾಷೆ, ಹೊರಗಿನವರಿಗೆ ವಿಚಿತ್ರ ಎನ್ನಿಸುವುದುಂಟು" ಎನ್ನುತ್ತಾರೆ ಕೊಳ್ಳೇಗಾಲ ಶರ್ಮರು. ಇವರು  "ಮಜೇದಾರ್ ಮೈಕ್ರೋಸ್ಕೋಪು" ಕೃತಿಗೆ ಬರೆದ ಲೇಖಕರ ನುಡಿಯ ಪ್ರಮುಖ ಮಾತುಗಳು ಹೀಗಿವೆ... 

“ವಿಜ್ಞಾನ ಲೇಖನಗಳಲ್ಲಿ ಹಲವು ಬಗೆಗಳಿವೆ. ಸುದ್ದಿ, ವಿಚಾರ, ನುಡಿಚಿತ್ರಗಳ ಬಗ್ಗೆಯಲ್ಲ ಈ ಮಾತು, ಉದ್ದೇಶಕ್ಕೆ ಅನುಗುಣವಾಗಿ ಕನಿಷ್ಟ ಮೂರು ಬಗೆಯನ್ನು ನೋಡಬಹುದು. ಮೊದಲನೆಯದು ವಿಜ್ಞಾನವನ್ನು ಕಲಿಯಲಿ ಎಂದು ನೀಡುವ ಪಾಠದಂತಹ ಲೇಖನಗಳು, ಎರಡನೆಯದು ಹೊಸ, ಹೊಸ ಸಂಶೋಧನೆಗಳನ್ನು ಪರಿಚಯಿಸುವಂಥದ್ದು. ಮೂರನೆಯದು, ವಿಜ್ಞಾನ ಹಾಗೂ ಸಮಾಜದ ನಡುವಣ ಸಂಬಂಧವನ್ನು ಬಯಲಾಗಿಸುವಂಥದ್ದು, ಅಂಕಣಕಾರನಾಗಿ ಎರಡನೆಯ ಬಗೆಯ ಸುದ್ದಿಗಳನ್ನೇ ಬರೆಯುತ್ತಾ ಬಂದವನಿಗೆ ಇನ್ನೇನಾದರೂ ಮಾಡಬೇಕೆನ್ನಿಸಿತ್ತು. ಆ ಸಂದರ್ಭದಲ್ಲಿ "ಈದಿನ" ವೆಬ್ ಪತ್ರಿಕೆಯ ಎಸ್‌. ಕುಮಾರ್ ಒಂದು ಅಂಕಣ ಬರೆಯಲು ಆಹ್ವಾನ ನೀಡಿದರು. ಮತ್ತೆ ಅಂಕಣವೇ? ಎಂದು ಹಿಂಜರಿಯುತ್ತಿದ್ದವನಿಗೆ ಸಹ್ಯಾದ್ರಿ ನಾಗರಾಜ್ ಕರೆ ಮಾಡಿ, 'ವೆಬ್ ಪತ್ರಿಕೆಯಾದ್ದರಿಂದ ಅಂಕಣದಂತೆ ಸೀಮಿತವಾಗಿರಬೇಕಿಲ್ಲ. ಲೇಖನ ದೊಡ್ಡದಿದ್ದರೂ ಆದೀತು' ಎಂಬ ಭರವಸೆ ಕೊಟ್ಟರು. ಹೀಗಾಗಿ ಮೂರನೆಯ ಬಗೆಯ ಲೇಖನವನ್ನು ಬರೆಯುವ ಪ್ರಯೋಗಕ್ಕೆ ಧೈರ್ಯ ಮಾಡಿದೆ. ಇವೆಲ್ಲ ಲೇಖನಗಳೂ ೨೦೨೨ರ ಏಪ್ರಿಲಿನಿಂದ ಅಕ್ಟೋಬರ್ ಅವಧಿಯಲ್ಲಿ ಪ್ರಕಟವಾದುವು. ವಿವಿಧ ವಿಜ್ಞಾನ ವಿಷಯಗಳನ್ನು, ಹಿನ್ನೆಲೆಯಲ್ಲಿ ನೋಡಿದ ಲೇಖನಗಳು ಇವು.

ವಿಜ್ಞಾನ ಜಗತ್ತನ್ನು ಕೆಲವರು ಐವರಿ ಟವರ್ (ದಂತಗೋಪುರ) ಎನ್ನುವುದೂ ಉಂಟು. ಅಲ್ಲಿನ ನಡವಳಿಕೆಗಳು, ಅಲಿಖಿತ ನೀತಿ, ನಿಯಮಾವಳಿಗಳು, ಸಂಬಂಧಗಳು ಹಾಗೂ ಸಾಧನಗಳೆಲ್ಲವೂ ಬಳಸುವ ಭಾಷೆ, ಹೊರಗಿನವರಿಗೆ ವಿಚಿತ್ರ ಎನ್ನಿಸುವುದುಂಟು. ವಿಜ್ಞಾನದ ಚಟುವಟಿಕೆಗಳು ವಿಕಾಸವಾದ ಬಗೆ ಅವುಗಳಿಗೆ ಕಾರಣ. ಈ ಜಗತ್ತು ಕನ್ನಡದ ಓದುಗರಿಗೆ, ಜಾಲಿ ಕಿಟಕಿಯ ಮೂಲಕ ಕಂಡ ಒಳಾಂಗಣದಂತೆ, ಅಲ್ಲಲ್ಲಿ ಕೆಲವರ ಬರೆಹಗಳ ಮೂಲಕ ಕಂಡು ಬರುತ್ತದೆಯಾದರೂ, ಆ ಲೋಕವನ್ನು ಪ್ರವೇಶಿಸದವರಿಗೆ ಬಹುತೇಕ ನಿಗೂಢ. ಇಲ್ಲಿನ ಬರೆಹಗಳಲ್ಲಿ ಬಹುತೇಕ ವಿಜ್ಞಾನಿಗಳಿಗೆ ಸಾಮಾನ್ಯ ಎನ್ನಿಸುವ, ಸಾಮಾನ್ಯರಿಗೆ ವಿಚಿತ್ರ ಎನ್ನಿಸುವ ವಿಜ್ಞಾನ ಲೋಕದ ಪರಿಯನ್ನು ಪರಿಯಿಸುವಂತಹ ಲೇಖನಗಳು.

ಅಂಕಣಕಾರರ ಲೇಖನಗಳಿಗೆ ಒಂದು ಸಮಸ್ಯೆ ಇದೆ. ಬರೆಯುತ್ತಿದ್ದಂತೆ ತಟಕ್ಕನೆ ತನ್ನಂತಾನೇ ಕೊನೆಯಾಗಿಬಿಡುತ್ತದೆ. ಇಲ್ಲವೇ ಅಂಕಣದ ತುರ್ತಿನಿಂದಾಗಿಯೊ ಅಂಕಣಕಾರರಿಗೆ ಬೇಸರ ತರಬಾರದೆಂದೋ ಸಂಪಾದಕರು ಅದರಲ್ಲಿ ಇದ್ದುದನ್ನು ಇದ್ದ ಹಾಗೇ ಪ್ರಕಟಿಸಿಬಿಡುವುದೂ ಉಂಟು. ನನ್ನ ಅದೃಷ್ಟ. "ಈದಿನ"ದ ನಾಗರಾಜ್‌ ಪ್ರತಿಯೊಂದು ಲೇಖನವನ್ನೂ ಮೈಕ್ರೋಸ್ಕೋಪಿನಡಿಯಲ್ಲಿ ನೋಡಿದಂತೆ ನೋಡಿ, ನಂತರವೇ ಪ್ರಕಟಿಸಿದ್ದರು. ಅವರ ಕಣ್ಣಪ್ಪಿ ಉಳಿದ ದೋಷಗಳನ್ನು ಇಲ್ಲಿ ನಾಗೇಶ ಹೆಗಡೆಯವರು ತಿದ್ದಿದ್ದಾರೆ. ಇನ್ನು ಉಳಿದಂತೆ ದೋಷಗಳಿದ್ದಲ್ಲಿ ಅದು ನನ್ನದೇ ಅಪರಾಧ.

ನಲವತ್ತು ವರ್ಷಗಳಿಂದ ಬರೆಯುತ್ತಿದ್ದೇನೆ ಎಂದರೆ ಎಷ್ಟು ಪುಸ್ತಕ ಬರೆದಿದ್ದೀರಿ ಎಂದು ಕೇಳುವವರೇ ಜಾಸ್ತಿ. ಇದು ನನ್ನ ಮೂರನೆಯ ಪುಸ್ತಕ. ಅಂತಹ ಸೋಮಾರಿಯನ್ನೂ ಬಡಿದೆಬ್ಬಿಸಿ, ಬರೆಯಿರಿ, ಪುಸ್ತಕ ಮಾಡಿ ಎಂದು ಒತ್ತಾಯಿಸಿದ ಹಿರಿಯ ಅಂಕಣಕಾರ ಟಿ. ಜಿ. ಶ್ರೀನಿಧಿಯ ಪ್ರೀತಿಯ ಕಿರಿಕಿರಿ, ರೋಮಾಂಚನವಾದಾಗ ಆಗುವ ನವೆಯಂತೆ. ನೋವು ಹಾಗೂ ಆನಂದಗಳ ಸಮಾಗಮ, ಸದಾ ಹಸಿರು. ಮಕ್ಕಳ ಹೃದಯದ ದೋಷಗಳನ್ನು ತಿದ್ದಿ ಜೀವ ಕೊಡುವ ವಿ. ಎಸ್. ಕಿರಣ್ ನನ್ನ ಲೇಖನಗಳನ್ನೂ ತಪಾಸಣೆ ಮಾಡದೆ ಬಿಟ್ಟಿಲ್ಲ. ಇನ್ನಷ್ಟು ಮಾಹಿತಿ ಬೇಕಿತ್ತು ಅಂತಲೋ, ಇದು ಬಿಟ್ಟು ಹೋಗಿಬಿಟ್ಟಿದೆ ಅಂತಲೋ ಕಮೆಂಟಿಸಿ ಬರೆವಣಿಗೆಯ ಕುರಿತು ಎಚ್ಚರದಿಂದ ಇರುವಂತೆ ನೋಡಿದ್ದಾರೆ. ೧೪೦ ಪುಟಗಳ ಈ ಪುಸ್ತಕವನ್ನು ವಿಜ್ಞಾನದಲ್ಲಿ ಆಸಕ್ತಿ ಇರುವವರು ಮಾತ್ರವಲ್ಲ, ಪ್ರತಿಯೊಬ್ಬರೂ ಅವಶ್ಯವಾಗಿ ಓದಲೇ ಬೇಕು.