ಮಜ್ಜಿಗೆ ಬಳಸಿ ಆರೋಗ್ಯದಾಯಕ ಸೌಂದರ್ಯ ಪಡೆಯಿರಿ

ನಾವು ಬಳಸುವ ಸೌಂದರ್ಯವರ್ಧಕಗಳಲ್ಲಿ ಹಾನಿಕಾರಕ ರಾಸಾಯನಿಕಗಳಿರುವ ಸಾಧ್ಯತೆಯಿರುತ್ತದೆ. ಈ ಕಾರಣದಿಂದ ನಮ್ಮ ತ್ವಚೆಯು ಅರಳುವ ಬದಲು ಮುದುಡುವ ಎಲ್ಲಾ ಸಾಧ್ಯತೆಗಳಿರುತ್ತವೆ. ಕೆಲವು ಸಮಯದ ಹಿಂದೆ ಹುಡುಗಿಯೊಬ್ಬಳು ಬಳಸಿದ ಲಿಪ್ ಸ್ಟಿಕ್ ನಿಂದ ಆಕೆಯ ಬಾಳೇ ನರಕವಾಗಿ ಹೋಯಿತಂತೆ, ಅದೇ ರೀತಿ ಒಬ್ಬಳು ಮುಖಕ್ಕೆ ಬಳಿಸಿದ ಕ್ರೀಂ ನಿಂದ ಆಕೆ ಬೆಳ್ಳಗಾಗುವ ಬದಲು ಕಪ್ಪಾಗಿ ಹೋದಳಂತೆ. ಹೀಗೆ ಹಲವಾರು ಘಟನೆಗಳನ್ನು ನೀವೆಲ್ಲಾ ಕೇಳಿರಬಹುದು. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸೌಂದರ್ಯವರ್ಧಕಗಳನ್ನು ಬಳಸುವ ಮೊದಲು ನಮ್ಮ ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿ ನೈಜ ಸೌಂದರ್ಯವನ್ನು ಪಡೆಯಬಹುದಲ್ಲವೇ?
ಹಳೆಯ ಕಾಲದಲ್ಲಿ ನಮ್ಮ ಅಜ್ಜಿ-ಮುತ್ತಜ್ಜಿಯವರು ಯಾವುದೇ ಸೌಂದರ್ಯವರ್ಧಕಗಳನ್ನು ಬಳಸುತ್ತಿರಲಿಲ್ಲ. ಆದರೂ ಅವರ ತ್ವಚೆಯು ಬಹಳ ಸೊಗಸಾಗಿರುತ್ತಿತ್ತು. ಅಜ್ಜಿಯರು ಮುದುಕಿಯರಾದರೂ ಮುಖ ಸುಕ್ಕುಗಟ್ಟಿದ್ದರೂ ಚರ್ಮದ ಕಾಂತಿ ಹಾಳಾಗುತ್ತಿರಲಿಲ್ಲ. ನಾವು ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳನ್ನು ಹೊಂದಿರುವ ಸೌಂದರ್ಯವರ್ಧಕಗಳನ್ನು ಬಳಸಿ, ಅದರ ಚಟಕ್ಕೆ ಬಲಿ ಬೀಳುವಂತೆ ಮಾಡುತ್ತೇವೆ. ಒಂದು ರೀತಿಯಲ್ಲಿ ಮಾದಕ ದ್ರವ್ಯಕ್ಕೆ ದಾಸರಾದಂತೆ.
ನಮ್ಮ ಮನೆಯಲ್ಲೇ ಇರುವ ಹಾಲಿನ ಉತ್ಪನ್ನವಾದ ಮಜ್ಜಿಗೆಯಿಂದ ನಾವು ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದಾಗಿದೆ. ಮಜ್ಜಿಗೆಯು ನಮ್ಮ ನರ ಹಾಗೂ ಚರ್ಮಗಳಿಗೆ ಆರೋಗ್ಯಕರವಾದ ಅಂಶಗಳನ್ನು ರವಾನೆ ಮಾಡುವುದರ ಜೊತೆಗೆ ಸೂರ್ಯನ ಅಧಿಕ ಶಾಖದಿಂದಲೂ ರಕ್ಷಿಸುತ್ತದೆ. ಮಜ್ಜಿಗೆಯಲ್ಲಿರುವ ಆರೋಗ್ಯದಾಯಕ ಬ್ಯಾಕ್ಟೀರಿಯಾಗಳು ಚರ್ಮದ ಹೊಳಪನ್ನು ಇನ್ನಷ್ಟು ವೃದ್ಧಿಸುವಂತೆ ಮಾಡುತ್ತದೆ. ಈ ನಮ್ಮ ಪಾರಂಪರಿಕ ಜ್ಞಾನ ಪದ್ಧತಿ ಈಗ ಪಾಶ್ಚಾತ್ಯ ದೇಶಗಳಲ್ಲೂ ಜನಪ್ರಿಯವಾಗತೊಡಗಿದೆ.
ನಿಮ್ಮ ಚರ್ಮದ ತ್ವಚೆಯನ್ನು ಕಾಪಾಡಲು ಮತ್ತು ವೃದ್ಧಿಸಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ಬಳಸಿ ನೋಡಿ ಖಂಡಿತಕ್ಕೂ ನಿಮಗೆ ಪ್ರಯೋಜನಕಾರಿಯಾದೀತು.
* ನಿಮ್ಮ ಚರ್ಮವು ಬಿಸಿಲಿನಿಂದ ಒಣಗಿ, ಗಡಸಾಗಿದ್ದರೆ ಎರಡು ಚಮಚ ಟೋಮೆಟೋ ರಸಕ್ಕೆ, ಐದು ಚಮಚ ಮಜ್ಜಿಗೆಯನ್ನು ಸೇರಿಸಿ, ಆ ಭಾಗಕ್ಕೆ ಹಚ್ಚಿ. ಅರ್ಧ ತಾಸಿನ ಬಳಿಕ ತೊಳೆದುಕೊಂಡರೆ ನಿಮ್ಮ ಚರ್ಮವು ನೈಜ ಕಾಂತಿಯನ್ನು ಪಡೆದುಕೊಳ್ಳುತ್ತದೆ.
* ನಿಮ್ಮ ಕುತ್ತಿಗೆಯ ಸುತ್ತಲಿನ ಚರ್ಮವು ಗಡಸಾಗಿದ್ದು, ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಎರಡು ಚಮಚದಷ್ಟು ಈಸ್ಟ್ ಗೆ, ಎರಡು ಚಮಚದಷ್ಟು ಮಜ್ಜಿಗೆ ಸೇರಿಸಿ ಅದನ್ನು ಕುತ್ತಿಗೆಯ ಸುತ್ತಲೂ ಹಚ್ಚಿಕೊಂಡು ೧೫ ನಿಮಿಷಗಳ ನಂತರ ಸ್ವಲ್ಪ ಬಿಸಿಯಾಗಿರುವ ನೀರಿನಲ್ಲಿ ತೊಳೆದುಕೊಂಡರೆ ಚರ್ಮವು ಮೃದುವಾಗುತ್ತದೆ.
* ನಿಮ್ಮ ಮುಖದ ಮೇಲೆ ಪುಟ್ಟ ಪುಟ್ಟ ಚುಕ್ಕಿಗಳು ಇದೆ ಎಂದು ಬೇಸರವೇ? ನಿವಾರಣೆಗಾಗಿ ಈ ಉಪಾಯ ಮಾಡಿ. ಒಂದು ಮೂಲಂಗಿಯನ್ನು ತೆಗೆದುಕೊಂಡು ಪುಟ್ಟ ಪುಟ್ಟ ತುಂಡುಗಳನ್ನಾಗಿ ಕತ್ತರಿಸಿ ಅವನ್ನು ಜಜ್ಜಿ ರಸ ತೆಗೆದುಕೊಂಡು ಅದಕ್ಕೆ ಸಮ ಪ್ರಮಾಣದಲ್ಲಿ ಮಜ್ಜಿಗೆಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಒಂದು ತಾಸಿನ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ನಿಮ್ಮ ಮುಖದಲ್ಲಿರುವ ಕಪ್ಪು ಚುಕ್ಕಿಗಳು ಮಾಯವಾಗುತ್ತವೆ.
* ಮಜ್ಜಿಗೆಯ ಅತ್ಯಂತ ಪ್ರಮುಖ ಉಪಯೋಗವೆಂದರೆ ತಲೆಯ ಹೊಟ್ಟಿನ ನಿವಾರಣೆ. ಈಗ ಈ ತಲೆಹೊಟ್ಟು ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದನ್ನು ನಿವಾರಿಸಲು ತಲೆಯ ಸ್ನಾನಕ್ಕೆ ಅರ್ಧ ಗಂಟೆ ಮೊದಲು ಮಜ್ಜಿಗೆಯನ್ನು ಕೂದಲಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ನಂತರ ಸ್ನಾನ ಮಾಡಿ. ಮಜ್ಜಿಗೆ ಬದಲು ಮೊಸರನ್ನು ಬಳಸಿಯೂ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಆದರೆ ಫ್ರಿಡ್ಜ್ ನಲ್ಲಿರುವ ತುಂಬಾ ತಂಪಾದ ಮೊಸರನ್ನು ಬಳಸಬೇಡಿ. ಶೀತ, ಜ್ವರ ಬರುವ ಸಾಧ್ಯತೆ ಇದೆ. ಈ ಕಾರ್ಯವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ನಿಮ್ಮ ತಲೆಹೊಟ್ಟಿನ ಸಮಸ್ಯೆ ಮಂಗಮಾಯವಾಗುತ್ತದೆ. ಕೂದಲೂ ನಯವಾಗಿ ಹೊಳೆಯುತ್ತಿರುತ್ತದೆ. ನೀವು ಈ ಸಮಸ್ಯೆಯನ್ನು ನಿವಾರಿಸಲು ಬಳಸುವ ದುಬಾರಿ ಶ್ಯಾಂಪೂಗಳಿಗಿಂತ ಮಜ್ಜಿಗೆ ಬಹಳ ಉಪಯುಕ್ತ ಎಂದು ಒಂದು ಆಂಗ್ಲ ಪತ್ರಿಕೆ ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
* ಹೆಣ್ಣು ಮಕ್ಕಳಿಗೆ ಹದಿಹರೆಯಕ್ಕೆ ಬರುವಾಗ ಮುಖದಲ್ಲಿ ಮೊಡವೆ ಮೂಡುವುದು ಸಹಜ. ಆದರೆ ಕೆಲವು ಬಾರಿ ಈ ಮೊಡವೆಗಳು ತುಂಬಾ ಇದ್ದು, ಕಿವುಚಿದರೆ ಕಲೆಯಾಗುವ ಸಾಧ್ಯತೆ ಇದೆ. ಮೊಡವೆಯ ಸಮಸ್ಯೆಯನ್ನು ದೂರ ಮಾಡಲು ಕಡಲೇ ಹಿಟ್ಟು ಮತ್ತು ಮೊಸರಿನ ಮಿಶ್ರಣವನ್ನು ತಯಾರಿಸಿಕೊಂಡು ಮುಖಕ್ಕೆ ಪೇಸ್ಟ್ ರೀತಿ ಹಚ್ಚಿರಿ. ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆದುಕೊಂಡರೆ ಮುಖ ಮೊಡವೆ ರಹಿತವಾಗಿ ಚರ್ಮ ಕಾಂತಿಯುತವಾಗಿರುತ್ತದೆ. ಈ ಕ್ರಮವನ್ನು ನಿಯಮಿತವಾಗಿ ಮಾಡುತ್ತಿರಿ.
* ನಿಮಗೆ ನಿದ್ರೆ ಸರಿಯಾಗಿ ಬಾರದೇ ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದಲ್ಲಿ ಸಾಕಷ್ಟು ಮೊಸರನ್ನು ತೆಗೆದುಕೊಂಡು ತಲೆಯನ್ನು ನೀವಿಕೊಂಡು ಒಂದು ಬಟ್ಟೆಯಿಂದ ತಲೆಯನ್ನು ಕಟ್ಟಿಕೊಳ್ಳಿ. ಇದರಿಂದ ತಲೆ ತಂಪಾಗುತ್ತದೆ ಮತ್ತು ಚೆನ್ನಾಗಿ ನಿದ್ರೆ ಬರುತ್ತದೆ. ಶೀತ ಪ್ರವೃತ್ತಿಯವರು ಹೀಗೆ ಮಾಡುವುದು ಒಳ್ಳೆಯದಲ್ಲ.
ಇವಿಷ್ಟೇ ಅಲ್ಲ, ಇನ್ನೂ ಹಲವಾರು ಉಪಯೋಗಗಳು ಮಜ್ಜಿಗೆ-ಮೊಸರು ಇವುಗಳಿಂದ ನಮಗೆ ಲಭ್ಯ ಇದೆ. ನಿಮ್ಮ ದಿನ ನಿತ್ಯದ ಆಹಾರದಲ್ಲಿ ಮೊಸರನ್ನು ಅಥವಾ ಮಜ್ಜಿಗೆಯನ್ನು ಬಳಸಿದರೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಆದುದರಿಂದ ನಿಯಮಿತವಾಗಿ ಮಜ್ಜಿಗೆಯನ್ನು ಬಳಸಿ, ನಿಮ್ಮ ಆಹಾರದಲ್ಲಾದರೂ ಆಗಬಹುದು ಅಥವಾ ನಿಮ್ಮ ಮೈಕಾಂತಿಯನ್ನು ಹೆಚ್ಚಿಸಲಾದರೂ ಆಗಬಹುದು. ಸೌಂದರ್ಯದೊಂದಿಗೆ ಆರೋಗ್ಯದಾಯಕ ಬದುಕು ನಿಮ್ಮದಾಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ