ಮಟ್ಟುಗುಳ್ಳ ಬದನೆ ಪೋಡಿ

ಮಟ್ಟುಗುಳ್ಳ ಬದನೆ ಪೋಡಿ

ಬೇಕಿರುವ ಸಾಮಗ್ರಿ

ಇನ್ನೇನು ಉಡುಪಿಯ ಖ್ಯಾತ, ರುಚಿಕರವಾದ ಮಟ್ಟುಗುಳ್ಳ ಮಾರುಕಟ್ಟೆಗೆ ಬರುವ ಸಮಯ. ಬಂದಾಗ ಅದರಿಂದ ರುಚಿಕರವಾದ ಪೋಡಿ ಮಾಡಿ ನೋಡಿ.

ಮಟ್ಟುಗುಳ್ಳ ಬದನೆ ೨, ಮೆಣಸಿನ ಹುಡಿ ೩ ಚಮಚ, ಅರಶಿನ ಹುಡಿ ೧ ಚಮಚ, ಇಂಗು - ೧ ಚಮಚ, ಅಕ್ಕಿ ಹಿಟ್ಟು - ೨ ಚಮಚ, ರವೆ - ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ

ತಯಾರಿಸುವ ವಿಧಾನ

ಮಟ್ಟುಗುಳ್ಳ ಬದನೆಯನ್ನು ಗುಂಡಾಗಿ ವೃತ್ತಾಕಾರದಲ್ಲಿ ಕತ್ತರಿಸಿರಿ. ಒಂದು ಪಾತ್ರೆಗೆ ತುಂಡರಿಸಿದ ಬದನೆ, ಮೆಣಸಿನ ಹುಡಿ, ಅರಶಿನ, ಇಂಗು, ಉಪ್ಪು ಹಾಕಿ ಚೆನ್ನಾಗಿ ಕಲಸಿ ಎರಡು ನಿಮಿಷ ನೆನೆಯಲು ಬಿಡಿ.

ಅಕ್ಕಿ ಹಿಟ್ಟು ಮತ್ತು ರವೆಯನ್ನು ಮಿಶ್ರ ಮಾಡಿ ಮತ್ತೊಂದು ಬಟ್ಟಲಿನಲ್ಲಿಟ್ಟುಕೊಳ್ಳಬೇಕು. ನಂತರ ತವಾ ಮೇಲೆ ಎಣ್ಣೆ ಹಾಕಿ ಕಾದ ಬಳಿಕ ಮೊದಲೇ ಕಲಸಿಟ್ಟುಕೊಂಡ ಬದನೆಯನ್ನು ಅಕ್ಕಿಹಿಟ್ಟು ಮತ್ತು ರವೆಯಲ್ಲಿ ಹೊರಳಾಡಿಸಿ ತವಾ ಮೇಲೆ ಇಡಬೇಕು. ಬಂಗಾರದ ಹೊಂಬಣ್ಣ ಬರುವವರೆಗೆ ಕಾಯಿಸಿ. ಚಟ್ನಿ ಅಥವಾ ಟೊಮ್ಯಾಟೋ ಸಾಸ್ ಜತೆ ತಿನ್ನಲು ಬಹಳ ಹಿತಕರ.