ಮಡಚಿಟ್ಟ ಕಾಮನಬಿಲ್ಲು

ಮಡಚಿಟ್ಟ ಕಾಮನಬಿಲ್ಲು

ಕಳೆದ ದಿನಗಳ ಲೆಕ್ಕವಿಟ್ಟಿಲ್ಲ
ಬರುವ ಭಾವಗಳಿಗೆ ಲೆಕ್ಕ ಇಡುವುದು ಹೇಗೆ,,,
ಒಂದೊಂದು ನಕ್ಷತ್ರ ಮಿನುಗುವಾಗಲೂ 
ಒಂದೊಂದು ಮಿಡಿತ ಎದೆಯೊಳಗೆ,
 
ಮುಗಿಲ ಎತ್ತರದ ಕಾಮನಬಿಲ್ಲು
ಮನದ ಎತ್ತರಕ್ಕೆ ಮುದುಡಿ ನಿಂತರೆ,,,,
ಮೌನ ಸ್ವಾಗತ ಎದೆಯ ಆಲಾಪನೆಗೆ, 
 
ನೇರ ಸ್ವರ್ಗಕ್ಕೆ ಏಣಿ ಹಾಕಿದರೂ 
ಮಧುರ ಭೂಮಿಯ ಬಿಟ್ಟು ಹೋಗುವ ಆಸೆ ಇಲ್ಲ,,,
ಇಲ್ಲಿ ಮುದ್ದು ಮುದ್ದು ಭಾವಗಳಿವೆಯಲ್ಲ,,,
 
ಕನ್ನಡಿಯ ಕಣ್ಣಿಗೆ ನಾನು ಹೇಗೆ ಕಾಣಿಸಿದೆನೋ,,,
ಅವಲತ್ತುಕೊಳ್ಳಲೇ ಇಲ್ಲ ಅದು,,,,
ನನ್ನೆಲ್ಲ ಹುಚ್ಚಾಟಕ್ಕೆ, ಅದರಷ್ಟಕ್ಕೆ ಅದು,
ಜಗತ್ತು ಹುಚ್ಚಾಪಟ್ಟೆ ನರ್ತಿಸಿದರೂ
ನನ್ನಂತೆ ನಾನು ಬದುಕಲು, ಕನ್ನಡಿಯ ನೋಡಿ ಕಲಿಯಬೇಕಿದೆ,,,
 
ಪೇಪರಿನ ಮೇಲೆ ಬರೆದ 
ಸಾವಿರಾರು ನ್ಯಾಯ ಅನ್ಯಾಯದ ಸಾಲುಗಳು,,,
ಕೊನೆಗೆ ಕಾನೂನಾದರೂ,
ಬರುವ ಹುಚ್ಚು ಆಲೋಚನೆಗಳನ್ನು ತಡೆಹಿಡಿಯಬಲ್ಲವೇ ?
 
ಕಾಂಚಾಣವನ್ನು ಬಾಲಕ್ಕೆ ಕಟ್ಟಿಕೊಂಡು,
ಜಣ-ಜಣ ಶಬ್ದಕ್ಕೆ ಕುಣಿಯುವ ನಾವು,,,,
ಶಬ್ಧ ಮೌನವಾದಾಗ,
ಮೌನದ ಸಂವೇದನೆಯನ್ನು ಆಸ್ವಾದಿಸಲಾಗದೆ 
ಸಾಯುತ್ತೇವೆ.
 
-ಜಿ ಕೆ ನ