ಮಡಿವಂತಿಕೆ ಬಿಡಿ:ಸಮ್ಮೇಳನಾಧ್ಯಕ್ಷ
ಬೆಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ವೆಂಕಟಸುಬ್ಬಯ್ಯನವರು ಶತಕದ ಸಮೀಪದಲ್ಲಿರುವ ಜ್ಞಾನವೃದ್ಧರಾದರೂ,ಭಾಷೆಯಲ್ಲಿ ಮಡಿವಂತಿಕೆ ಬೇಡ ಎನ್ನುವ ಅಭಿಪ್ರಾಯದವರು.ಕಂಪ್ಯೂಟರ್,ಮೌಸ್,ಮಾನಿಟರ್,ಸ್ಕ್ಯಾನರ್,ಆಪರೇಟಿಂಗ್ ಸಿಸ್ಟಮ್ ಮುಂತಾದ ಪದಗಳನ್ನು ಇದ್ದ ಹಾಗೆಯೇ ಕನ್ನಡವನ್ನು ಮಾತನಾಡುವಾಗ ಬಳಸಿ.ಏನೇನೋ ಅನುವಾದಿಸಿ,ಕನ್ನಡವನ್ನು ಕುಲಗೆಡಿಸಬೇಡಿ ಎಂದವರ ಸಲಹೆ.ಹೀಗೆ ಮಾಡಿದರೆ,ಕನ್ನಡಕ್ಕೂ ಇಂಗ್ಲೀಷಿಗೂ ಅಂತರ ಕಡಿಮೆಯಾಗುತ್ತದೆ.ಕನ್ನಡಕ್ಕೆ ಹೆಚ್ಚು ಪದಗಳು ಸೇರಿ ಭಾಷೆ ಶ್ರೀಮಂತವಾಗುತ್ತದೆ.ಹಾಗೆಂದು ಅಚ್ಚ ಕನ್ನಡ ಶಬ್ದಗಳನ್ನು ಬಳಸದೇ ಇರಬೇಡಿ.ಇದ್ದದ್ದನ್ನು ಉಳಿಸಿ,ಹೊಸ ಶಬ್ದಗಳನ್ನು ಸೇರಿಸಿ,ಭಾಷೆಯನ್ನು ಬೆಳೆಸಿದರೆ ವ್ಯವಹಾರ ಸುಲಭ ಎನ್ನುವುದು ಅವರ ಸ್ಪಷ್ಟ ನುಡಿ.ಏನಂತೀರಾ?
--------------------------
ಐಪಿ ವಿಳಾಸಗಳು ಬರಿದು!
ಮೂವತ್ತೆರಡು ಸ್ಥಾನಗಳ ಐಪಿ ವಿಳಾಸ ಬಳಸುವ ಐಪಿವರ್ಶನ್ ನಾಲ್ಕು ಶಿಷ್ಟಾಚಾರವು ಸುಮಾರು 4.3 ಬಿಲಿಯನ್ ಐಪಿ ವಿಳಾಸಗಳನ್ನು ಹುಟ್ಟು ಹಾಕಿತ್ತು.ಆದರೆ ಈ ವಿಳಾಸಗಳು ಈಗಾಗಲೇ ಅಂತರ್ಜಾಲ ತಾಣಗಳನ್ನು ನಡೆಸುವವರಿಗೆ ನೀಡಲಾಗಿದೆ.ಅಧಿಕೃತವಾಗಿ ವಿಳಾಸಗಳನ್ನು ವಿತರಿಸುವ ಕಾರ್ಯಾಲಯದಲ್ಲಿನ್ನು ಐಪಿ ವಿಳಾಸಗಳಿಲ್ಲ.ಕಾಳಸಂತೆಯ ದಂಧೆಯಲ್ಲಿ ವಿಳಾಸಗಳನ್ನು ಪಡೆಯಬಹುದು-ಆದರಿವು ಬಲು ದುಬಾರಿಯಾದಾವು!ನೂರಿಪ್ಪತ್ತೆಂಟು ಸ್ಥಾನಗಳ ಐಪಿ ವಿಳಾಸ ನೀಡುವ ಮುಂದಿನ ಶಿಷ್ಟಾಚಾರವನ್ನು ಬಳಸಲು ಕಂಪ್ಯೂಟರ್ ಜಾಲಗಳನ್ನು ಹೊಸ ಯಂತ್ರಾಂಶ ಮತ್ತು ತಂತ್ರಾಂಶಗಳ ಮೂಲಕ ಸಿದ್ಧಗೊಳಿಸುವ ಪ್ರಕ್ರಿಯೆಗೆ ಇನ್ನು ತೀವ್ರ ಚಾಲನೆ ಸಿಗಬೇಕಾಗಿದೆ.
----------------------------------
ಧ್ವನಿ ಮೂಲಕ ನೌಕರಿ ಬೇಟೆ!
ಮಾತಿನ ಮೂಲಕವೇ ಕೆಲಸ ಮಾಡಿಸಿಕೊಳ್ಳುವುದು ಸಹಜಕ್ರಿಯೆ.ಭಾರತದಲ್ಲಿ ಜನರ ಒಲವು ಮೊಬೈಲನ್ನು ಮಾತಿಗಾಗಿ ಬಳಸುವುದೇ ಆಗಿದೆ.ಇದನ್ನರಿತು ರಿಲಾಯೆನ್ಸ್ ಮೊಬೈಲ್ ಅವರು ಮಾತಿನ ಮೂಲಕ ಕೆಲಸ ಅರಸುವ ವಿಧಾನಕ್ಕೆ ಸಹಾಯ ಮಾಡಲು ಹೊರಟಿದೆ.ಈ ಸೇವೆಯಲ್ಲಿ ಕೆಲಸಕ್ಕೆ ಆಳನ್ನು ಹುಡುಕುವವರು,ತಮ್ಮ ಅಗತ್ಯಗಳನ್ನು,ತಮ್ಮಲ್ಲಿ ಕೆಲಸಕ್ಕೆ ಬೇಕಾದ ಕೌಶಲಗಳ ಬಗ್ಗೆ ಮಾತನಾಡಿ,ತಾವು ನೀಡಬಹುದಾದ ಸಂಬಳ,ಸವಲತ್ತು,ಕೆಲಸದ ಅವಧಿಯ ಬಗ್ಗೆ ಮಾಹಿತಿ ನೀಡಬಹುದು.ಅದೇ ರೀತಿ ನೌಕರಿ ಬೇಕಾದವರು,ತಮ್ಮ ಕೌಶಲಗಳು,ಕೆಲಸ ಬೇಕಾದ ಸ್ಥಳ,ಸಂಬಳ-ಸವಲತ್ತಿನ ಬಗ್ಗೆ ಮಾತನಾಡಬಹುದು.ಎರಡೂ ಸರಿ ಹೊಂದುವುದು ಕಂಡು ಬಂದರೆ,ಒಬ್ಬರು ಇನ್ನೊಬ್ಬರನ್ನು ಕರೆ ಮಾಡಿ ಮಾತನಾಡಬಹುದು.ಕಿರು ಸಂದೇಶವನ್ನೂ ಕಳುಹಿಸಿ ಸಂಪರ್ಕಿಸಬಹುದು.ಈ ಸೇವೆಯು ಮೌಲ್ಯವರ್ಧಿತ ಸೇವೆಯಾಗಿ ಗ್ರಾಹಕರಿಗೆ ಒದಗುವುದರಿಂದ,ಮಾಸಿಕ ದರ ಅನ್ವಯವಾಗುತ್ತದೆ.ಆದರೆ ದರ ಆಕರ್ಷಕವಾಗಿದ್ದು,ಪ್ರತಿದಿನಕ್ಕೆ ರೂಪಾಯಿ ವೆಚ್ಚದಲ್ಲಿ ಲಭ್ಯ.
-------------------------------------------------
ಕಾಮಸೂತ್ರ:ಎಚ್ಚೆರೆಚ್ಚರ
ಕಾಮಸೂತ್ರ ಎನ್ನುವ ಹೆಸರಿನೊಂದಿಗೆ ಬರುವ ಪವರ್‌ಪಾಯಿಂಟ್ ಸ್ಲೈಡುಗಳ ಬಗ್ಗೆ ಎಚ್ಚರವಿರಲಿ.ಇವು ಕ್ಲಿಕ್ಕಿಸಿದರೆ,ಬ್ರೌಸರಿನಲ್ಲಿ ತೆರೆದುಕೊಂಡು,ಕಂಪ್ಯೂಟರನ್ನು ದಾಳಿಕೋರರ ಕೈಗೊಪ್ಪಿಸುವ ತಂತ್ರಾಂಶವನ್ನು ಚಾಲು ಮಾಡುತ್ತವೆ.ಒಮ್ಮೆ ಈ ವೈರಸ್ ತಂತ್ರಾಂಶಕ್ಕೆ ಕಂಪ್ಯೂಟರ್ ಪಕ್ಕಾದರೆ,ಮುಂದೆ ಕಂಪ್ಯೂಟರು ದಾಳಿಕೋರನ ಕೈವಶವಾಗುತ್ತದೆ.ಆತನು ಬೇಕೆಂದರೆ ವಶವಾದ ಕಂಪ್ಯೂಟರಿನ ಕಡತಗಳನ್ನು ಬಳಸಿಕೊಳ್ಳಬಹುದು.ಹಾಗೆಯೇ,ಪ್ರತಿ ಕೀಲಿಯ ಬಳಕೆಯನ್ನು ಅರಿಯಬಹುದು.
-----------------------------------------
ಓದುಗರ ಪ್ರತಿಕ್ರಿಯೆಗಳು
*ನಿಶ್ಚಲಂಕೆಯನ್ನು ನಂಬರ್ ಪೋರ್ಟೇಬಿಲಿಟಿಗೆ ಸಮಾನರ್ಥಕವಾಗಿ,ಬಹುಮಾನ ನೀಡಿದ್ದಕ್ಕೆ ಓದುಗ ಕೆ.ಐ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಿಶ್ಚಲ ಮತ್ತು ಅಂಕೆ ಕ್ರಮವಾಗಿ ಸಂಸ್ಕೃತ ಮತ್ತು ಕನ್ನಡ ಶಬ್ದಗಳು-ಅವನ್ನು ಸಂಧಿ ಮಾಡಬಾರದು.ಮಾಡಿದರೂ ಅದು ಸವರ್ಣ ದೀರ್ಘ ಸಂಧಿ ಆಗಬೇಕು-ಲೋಪ ಸಂಧಿ ಅಲ್ಲ.ಅಲ್ಲದೆ ಅಂಕೆ ದೂರವಾಣಿ ಸಂಖ್ಯೆಗೆ ಬಳಸಲಾಗದು.ಅಂಕೆ ಏಕವಚನ,ಸಂಖ್ಯೆ ಬಹುವಚನ.ಈ ಉತ್ತರದ ಆಯ್ಕೆ,ಉಳಿದ ಉತ್ತರಗಳಿಗೆ ಹೋಲಿಸಿದಾಗ; ಅದರ ನಾವೀನ್ಯತೆ ಗಮನಿಸಿ ಆಯ್ದುದೇ ವಿನ: ಪರ್ಯಾಯ ಪದವಾಗಿ ಅಲ್ಲ.
*ಕಳೆದವಾರದ ಬರಹದಲ್ಲಿ,ಆಂಡ್ರಾಯಿಡ್ ೩.೦ ಎಸ್ಡಿಕೆಯ ಹೆಸರು ಹನೀಕೂಂಬ್ ಎಂದು ಪ್ರಕಟಿಸಲಾಗಿತ್ತು.ನಿಜವಾಗಿ ಹೊಸ ಆವೃತ್ತಿಯ ಗುಪ್ತನಾಮ ಹನೀಕೂಂಬ್ ಎಂದಾಗಬೇಕಿತ್ತು.ಈ ತಪ್ಪಿನ ಬಗ್ಗೆ ಗಮನ ಸೆಳೆದ "ಉದಯವಾಣಿ" ಓದುಗ ಕಾರ್ಕಳದ ತಂತ್ರಜ್ಞ ವಾಸುದೇವ ಕಾಮತ್‌ಗೆ ಕೃತಜ್ಞತೆಗಳು.
(ಪತ್ರಗಳ ಪೂರ್ಣ ಪಾಠಗಳಿಗಾಗಿ http://ashok567.blogspot.comನ ಪ್ರತಿಕ್ರಿಯೆಗಳತ್ತ ಕಣ್ಣು ಹಾಯಿಸಿ.
---------------------------------
ಕರಾವೋಕೆ ಟ್ರ್ಯಾಕ್ ಗೆಲ್ಲಿ!
ಈ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿ,ಬಸಂತ್ ಕುಮಾರ್ ಕುತ್ಯಾರ್ ವಿರಚಿತ 5 ಕರಾವೋಕೆ ಸಂಗೀತ ಟ್ರ್ಯಾಕ್ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು www.bacchusongs.com
*ಈ ವಾರ ಅಂತರ್ಜಾಲದ ಮಟ್ಟಿಗೆ ಒಂದು ಪರ್ವ(ಯುಗ) ಮುಗಿದಂತಾಗಿದೆ.ಯಾಕೆ?
*ಹೊಸ "ಯುಗ"ದಲ್ಲಿ ಅಗುವ ಬದಲಾವಣೆಯೇನು?
(ಉತ್ತರಗಳನ್ನು basanthk23@gmail.comಗೆ ಮಿಂಚಂಚೆ ಮಾಡಿ,ವಿಷಯ:NS17 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
* ಮೊಬೈಲ್ ಫೋನಿನ ಮೈಕ್ ಗ್ರಹಿಸಿದ, ಬಳಕೆದಾರನ ಸ್ಪರ್ಶ ಉಂಟು ಮಾಡುವ ಸದ್ದಿನ ಪ್ರಮಾಣದ ಮೂಲಕ,ಆತನು ಸ್ಪರ್ಶಿಸಿದ ಜಾಗವನ್ನು ಲೆಕ್ಕ ಹಾಕುವ ಕ್ರಮವಿಧಿಯನ್ನು ತಂತ್ರಾಂಶದಲ್ಲಿ ಅಳವಡಿಸಿ,ಹಳೆ ಮೊಬೈಲ್ ಪೋನ್‌ಗಳನ್ನು ಸ್ಪರ್ಶಸಂವೇದಿ ತೆರೆಯವಾಗಿ ಮಾಡಲು ಸಾಧ್ಯವಾಗಿದೆ.
*ನಮ್ಮ ಮೇಲ್ಮನೆಯ ಕಾಸು-ಕುಡಿಕೆ ಬರಹಗಳು ಇರುವ ಬ್ಲಾಗ್ www.avadhi.wordpress.com.ಬಹುಮಾನ ಗೆದ್ದವರು ಕೇಶವ ಗಬ್ಬಲಡ್ಕ.ಅಭಿನಂದನೆಗಳು.
------------------------------------------------------------
ಮುರಳೀಧರ ಉಪಾಧ್ಯ ಹಿರಿಯಡ್ಕರ ಬ್ಲಾಗ್
ಸಾಹಿತಿ,ವಿಮರ್ಶಕ ಮುರಳೀಧರ ಉಪಾಧ್ಯರ ಬ್ಲಾಗ್ http://mupadhyahiri.blogspot.comನಲ್ಲಿ ಅಂತರ್ಜಾಲದಲ್ಲಿ ಬೆಳಕು ಕಾಣುತ್ತಿದೆ.ಅವರ ವಿಮರ್ಶಾ ಬರಹಗಳು,ಲೇಖನಗಳಿಲ್ಲಿವೆ.ಇಂಗ್ಲೀಷ್,ಕನ್ನಡ ಎರಡೂ ಭಾಷೆಗಳನ್ನು ಬಳಸಿರುವ ಬ್ಲಾಗಿನಲ್ಲಿ ಇತರ ಹೊರಗಿನ ಕೊಂಡಿಗಳನ್ನೂ ನೀಡಲಾಗಿದೆ.ಹಲವು ಪತ್ರಿಕಾ ಬರಹಗಳ ಕೊಂಡಿಗಳನ್ನೂ ನೀಡಿ,ಬ್ಲಾಗನ್ನು ಆಕರ್ಷಕವಾಗಿಸಲಾಗಿದೆ.ಈ ಬ್ಲಾಗಿಗೆ ಕೆ ಎಸ್ ಸೋಮಯಾಜಿಗಳೂ ಬರಹಗಳನ್ನು ಒದಗಿಸುತ್ತಿದ್ದಾರೆ.
-------------------------------------------------
ರೇಷನ್ ಕಾರ್ಡ್:ಆನ್‌ಲೈನ್
ಪಡಿತರ ಚೀಟಿ ವಿವರವನ್ನು ಅಂತರ್ಜಾಲ ಮೂಲಕವೇ ಸಲ್ಲಿಸಲು ಬೆಂಗಳೂರಿನ ಗ್ರಾಹಕರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.ಸಲ್ಲಿಸಬೇಕಾದ ಚೀಟಿ,ವಿದ್ಯುತ್ ಬಿಲ್ ಮತ್ತು ಅನಿಲ ಸಂಪರ್ಕದ ವಿವರವನ್ನು ಸ್ಕ್ಯಾನ್ ಮಾಡಿ,ಆನ್‌ಲೈನಿನಲ್ಲೇ ಸಲ್ಲಿಸಲು ಅವಕಾಶವಿದೆ.ನೌಕರಿಯಲ್ಲಿರುವವರು,ರಜೆ ಹಾಕಿ ಅಂಗಡಿಗೆ ಮುಖತ: ಭೇಟಿ ನೀಡುವುದನ್ನು ತಪ್ಪಿಸುವ ಸ್ತುತ್ಯರ್ಹ ಪ್ರಯತ್ನವಿದು.ವೆಬ್ ವಿಳಾಸ:http://web5.kar.nic.in/fcslpg/main.aspx
------------------------------
ಟ್ವಿಟರ್ ಚಿಲಿಪಿಲಿ
*ಆಶಾವಾದದದ ಪರಮಾವಧಿ:ತನ್ನ ಸೆಕ್ರೆಟರಿಯನ್ನು ಮದುವೆಯಾದರೆ,ಆಮೇಲೂ ಆಕೆ ತನ್ನ ಮಾತಿನಂತೆ ನಡೆದಾಳು ಎನ್ನುವ ಬಾಸ್‌ನ ಲೆಕ್ಕಾಚಾರ.
*ಮೈಸೂರಿನಲ್ಲಿ ಎರಡ್ಮೂರು ದಿನಗಳಿಂದ ನಳ್ಳಿನೀರು ಪೂರೈಕೆ ಸ್ಥಗಿತ ಹೊಂದುವುದಕ್ಕೂ,ಹಾಲು ಪೂರೈಕೆಯಾಗದ್ದಕ್ಕೂ ಸಂಬಂಧ ಇದೆಯೇ?ಅಲ್ಲ,ಅದು ಕಾಕತಾಳೀಯವೇ?
*ತೆರೆದ ಮನಸ್ಸುಗಳನ್ನು ರಿಪೇರಿಗಾಗಿ,ಇವತ್ತು ಮುಚ್ಚಲಾಗಿದೆ.
*ಪೀಜಾ ಹಟ್ ಬೋರ್ಡ್:ಪೀಜಾಗಳು ಮಾತ್ರ ಹೊಗೆ(ಸ್ಮೋಕ್)ಯಾಡಬಹುದು...
UDAYAVANI
*ಅಶೋಕ್‌ಕುಮಾರ್ ಎ
Comments
ಉ: ಮಡಿವಂತಿಕೆ ಬಿಡಿ:ಸಮ್ಮೇಳನಾಧ್ಯಕ್ಷ