ಮಡಿವಾಳ ಮಾಚಿದೇವರ ಜಯಂತಿ

ಮಡಿವಾಳ ಮಾಚಿದೇವರ ಜಯಂತಿ

ಫೆಬ್ರವರಿ ೧, ೨೦೨೧ರಂದು ರಾಜ್ಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಯಾರು ಈ ಮಾಚಿದೇವರು? ಮಡಿವಾಳ (ಅಗಸ) ಸಮುದಾಯಕ್ಕೆ ಏಕೆ ಇವರು ಸ್ಮರಣೀಯರು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ.

ಬಿಜಾಪುರ (ಇಂದಿನ ವಿಜಯಪುರ) ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಹನ್ನೆರಡನೇ ಶತಮಾನದಲ್ಲಿ ಅಂದರೆ ಕ್ರಿ.ಶ.೧೧೨೦ ರಿಂದ ಕ್ರಿ.ಶ.೧೧೩೦ರ ನಡುವೆ ಮಾಚಯ್ಯ (ಮಾಚಿದೇವ) ರು ಜನಿಸಿದರು ಎಂದು ಹೇಳಲಾಗುತ್ತದೆ. ಇವರ ಹೆತ್ತವರು ಪರ್ವತಯ್ಯ ಹಾಗೂ ಸುಜ್ಞಾನಮ್ಮ.  ಹಿಪ್ಪರಗಿಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ತುಂಬಿರಲು ಹೊಳೆಗೋಲ ಹಂಗಿಲ್ಲದೆ ಶಿವನನ್ನು ನೆನೆದಾಗ ನದಿಯು ಇಬ್ಭಾಗವಾಗಿ ದಾರಿ ತೋರಿತು. ಈ ಮಾರ್ಗದಿಂದ ಮಾಚಿದೇವನು ನಡೆದುಕೊಂಡು ಬರುತ್ತಾನಂತೆ.

ಮಡಿವಾಳನಾಗಿ ಮಾಚಯ್ಯ ಹುಟ್ಟಿದಕ್ಕೂ ಕಾರಣವಿದೆ. ಪುರಾಣಗಳ ಪ್ರಕಾರ ಶಿವನ ಆಜ್ಞೆಯಂತೆ ದಕ್ಷ ಪ್ರಜಾಪತಿಯ ಸಂಹಾರ ಮಾಡಿ ಅತ್ಯಂತ ಉತ್ಸಾಹದಿಂದ ವೀರಭದ್ರನು ಶಿವನನ್ನು ಕಾಣಲು ಬರುತ್ತಾನೆ. ಶಿವನ ಸಭೆಯೊಳಗೆ ಬರುವಾಗ ವೀರಭದ್ರನ ಉತ್ತರೀಯದಿಂದ ರಕ್ತದ ಬಿಂದುಗಳು ಶಿವನ ಆಸ್ಥಾನದ ಗಣಗಳಿಗೆ ತಗಲುತ್ತದೆ. ವಿಜಯದ ಉನ್ಮಾದದಲ್ಲಿದ್ದ ವೀರಭದ್ರನಿಗೆ ತನ್ನ ಬಟ್ಟೆಯಲ್ಲಿ ರಕ್ತ ಚೆಲ್ಲಿರುವುದು ಗಮನಕ್ಕೆ ಬಂದಿರುವುದಿಲ್ಲ. ಇದನ್ನು ಕಂಡ ಈಶ್ವರನು ನಿನ್ನಿಂದ ತಪ್ಪಾಗಿದೆ ವೀರಭದ್ರಾ, ನೀನು ರಕ್ತವನ್ನು ಸಭಾಸದರ ಮೇಲೆ ಚೆಲ್ಲಿ ಅವರನ್ನು ಮಲಿನ ಮಾಡಿಬಿಟ್ಟಿರುವೆ. ಈ ಪಾಪಕ್ಕಾಗಿ ನೀನು ಭೂಮಿಯಲ್ಲಿ ಮಡಿವಾಳನಾಗಿ ಜನಿಸಿ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕ ಮಾಡಬೇಕು. ಹೀಗೆ ಮಾಡುವುದರಿಂದ ನಿನ್ನ ಪಾಪವು ಕ್ರಮೇಣವಾಗಿ ಕಮ್ಮಿಯಾಗಲಿದೆ ಎಂದು ಹೇಳುತ್ತಾನೆ. ಶಿವನ ಮಾತಿನಂತೆ ವೀರಭದ್ರನು ಭೂಲೋಕದಲ್ಲಿ ಮಾಚಿದೇವನಾಗಿ ಜನಿಸುತ್ತಾನೆ. ಅವನು ದೈವಾಂಶ ಸಂಭೂತನಾಗಿರುತ್ತಾನೆ.

ಮಾಚಿದೇವ ಯಾ ಮಾಚಯ್ಯ ಮಡಿವಾಳ ಕುಟುಂಬದಲ್ಲಿ ಜನಿಸಿದ್ದರಿಂದ ಬಾಲ್ಯದಿಂದಲೂ ತನ್ನ ಕಾಯಕಕ್ಕೆ ನಿಷ್ಟನಾಗಿರುತ್ತಾನೆ. ಅವನಿಗೆ ತನ್ನ ಕಾಯಕವೇ ಭಕ್ತಿ. ಇದನ್ನು ಪರೀಕ್ಷಿಸಲು ಒಮ್ಮೆ ಶಿವನಿಗೆ ಮನಸ್ಸಾಗುತ್ತದೆ. ಅವನು ಜಂಗಮನ ವೇಷ ಧರಿಸಿ ಬರುತ್ತಾನೆ. ಮಾಚಯ್ಯನ ಹತ್ತಿರ ಬಂದು ನನ್ನ ಬಟ್ಟೆಗಳು ಮಲಿನವಾಗಿವೆ. ಅದನ್ನು ನಿನ್ನ ಪತ್ನಿ ಮಲ್ಲಿಗೆಮ್ಮನ ಎದೆಯನ್ನು ಬಗೆದು ಆ ನೆತ್ತರಿನಲ್ಲಿ ತೊಳೆದು ಕೊಡಬೇಕು, ಆಗಲೇ ಅದರ ಕೊಳೆ ಹೋಗುತ್ತದೆ ಅನ್ನುತ್ತಾನೆ. ಮಾಚಯ್ಯನು ತನ್ನ ಕಾಯಕವನ್ನೇ ನಂಬಿದವನು. ಪ್ರತಿಯೊಬ್ಬ ಗ್ರಾಹಕನೂ ದೇವರೇ. ಈ ಶರತ್ತಿಗೆ ಒಪ್ಪಿ ತನ್ನ ಹೆಂಡತಿ ಮಲ್ಲಿಗೆಮ್ಮನ ಹೃದಯ ಬಗೆದು ರಕ್ತದಲ್ಲಿ ಒಗೆದು ಶುಚಿ ಮಾಡಿಕೊಡುತ್ತಾನೆ. ಅವನ ಈ ಕಾಯಕ ನಿಷ್ಟೆಯನ್ನು ಗಮನಿಸಿ ಶಿವನು ಪ್ರಸನ್ನನಾಗಿ ಅವನಿಗೂ ಅವನ ಪತ್ನಿಗೂ ಆಶೀರ್ವಾದ ಮಾಡುತ್ತಾನೆ.

ಕಾಯಕ ಮಾಡದ ಸೋಮಾರಿಗಳಂತೆ ತಿರುಗಾಡಿಕೊಂಡಿದ್ದವರ, ಬಡವರನ್ನು ಶೋಷಿಸುವವರ ಬಟ್ಟೆಗಳನ್ನು ಯಾವತ್ತೂ ಮಾಚಯ್ಯ ಶುಚಿ ಮಾಡುತ್ತಿರಲಿಲ್ಲ. ದುರ್ಗುಣಗಳನ್ನು ಹೊಂದಿರುವವರ ಬಟ್ಟೆಗಳನ್ನು ಅವನು ಮುಟ್ಟಿಯೂ ನೋಡುತ್ತಿರಲಿಲ್ಲ. 

ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಮಹತ್ವದ್ದು. ಕಲ್ಯಾಣಕ್ಕೆ ಬರುವ ಸರ್ವರನ್ನು ಮಾಚಿದೇವರೇ ಪರೀಕ್ಷಿಸಿ ಊರಿನ ಒಳಗೆ ಬಿಡುತ್ತಿದ್ದರಂತೆ. ಮಾಚಿದೇವರ ಅನುಮತಿಯಿಲ್ಲದೇ ಕಲ್ಯಾಣಪುರದ ಪ್ರವೇಶ ಅಸಾಧ್ಯವಾಗಿತ್ತು. ಮಾಚಿದೇವರ ಘನತೆಗೆ ಹಾಗೂ ನಂಬಿಕೆಗೆ ಇದೊಂದು ಸಾಕ್ಷಿ ಅಷ್ಟೇ. ಬಸವಣ್ಣನವರೂ ಮಾಚಿದೇವರನ್ನು 

‘ಮಡಿವಾಳ ಮಡಿವಾಳನೆಂಬರು

ಮಡಿವಾಳನೆಂಬುದನಾದರೂ ಅರಿಯರು, 

ಎನ್ನ ಆಣವ ಮಾಯಾ ಕಾರ್ಮಿಕಗಳೆಂಬ ಮಲತ್ರಯದಲ್ಲಿ ಹೊದುಕುಳಿಗೊಂಡ

ಮನದ ಮೈಲಿಗೆಯ ತಂದು,

ತನ್ನ ಮನೆಗೆ ಕೊಂಡುಹೋಗಿ ಹಾಕಿದೆಡೆ,

ಕೈಮುಟ್ಟಿದೆಡೆ ಆಗದೆಂದು ತನ್ನ ಪಾದದೊಳಗೆ ಮೆಟ್ಟಿ 

ಅಲುಬಿ ಸಳೆದನಯ್ಯ,

ತನ್ನ ನಿರ್ಮಲವ ಕೊಟ್ಟನೆನಗೆ,

ಆ ಕೊಟ್ಟ ಬೀಳುಡಿಗೆಯ ಹೊದೆದುಕೊಂಡೆನಾಗಿ,

ಮಡಿವಾಳ ಮಾಚಿದೇವ ತಂದೆಯ ಕೃಪೆಯಿಂದಲಾನು 

ಬದುಕಿದೆನಯ್ಯಾ, ಕೂಡಲ ಸಂಗಮದೇವಾ’

ಎಂದು ಹೊಗಳಿದ್ದಾರೆ. 

ಮಾಚಿದೇವರು ತಮ್ಮ ಸಂದೇಶದಲ್ಲಿ ಹೇಳುತ್ತಾರೆ ‘ಪ್ರಾಣಿಗಳನ್ನು ಕೊಲ್ಲದಿರುವುದೇ ಧರ್ಮ, ಬೇಕೆನ್ನದಿರುವುದೇ ತಪಸ್ಸು. ಪರವಧುವಿನಲ್ಲಿ ಆಸೆಯಿಲ್ಲದಿರುವುದೇ ಜಪ. ಇಂತಹವರಲ್ಲಿ ದೇವರು ವಾಸವಾಗಿರುತ್ತಾನೆ. ಆದ್ದರಿಂದ ಸಕಲಜೀವಿಗಳಲ್ಲಿ ದಯೆ ಇರಬೇಕೆನ್ನುತ್ತಾರೆ. ಬ್ರಹ್ಮ ಪದವಿ, ವಿಷ್ಣು ಪದವಿ, ರುದ್ರ ಪದವಿ, ಇಂದ್ರಪದವಿ ಇನ್ನಾವುದೇ ಪದವಿಗಳು ಬೇಡ. ಇವೆಲ್ಲವಕ್ಕೂ ಒಡೆಯನಾದ ಶಿವನ ಶರಣರ ಮನೆಯಲ್ಲಿ ಸೇವಕನಾಗಿ ಹುಟ್ಟುವ ಪದವಿ ಕರುಣಿಸು ಕಲಿದೇವಾ ಎಂದಿದ್ದಾರೆ. ಉನ್ನತ ಸೇವಾಮನೋಭಾವವಿರುವನೇ ದೊಡ್ಡವನು. ಸ್ವಾರ್ಥ, ಪ್ರತಿಷ್ಟೆಗಳು ಬೇಡವೆಂದಿದ್ದಾರೆ.’

ಎಷ್ಟೊಂದು ಔಚಿತ್ಯ ಪೂರ್ಣ ನುಡಿಗಳು ಅಲ್ಲವೇ?.

ವಚನ ಸಾಹಿತ್ಯ ರಕ್ಷಣೆಯ ದಂಡನಾಯಕರೆಂದೇ ಮಾಚಿದೇವರನ್ನು ಕರೆಯುತ್ತಾರೆ. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅನುಪಮವಾದದ್ದು. ಶರಣ ಸಮೂಹವನ್ನು ರಕ್ಷಿಸಿ, ವಚನ ಸಾಹಿತ್ಯವನ್ನು ಉಳವಿಗೆ ತಲುಪಿಸಿದ ಮಹಾನ್ ದಂಡನಾಯಕನೇ ಮಾಚಿದೇವ. ಹೀಗೆ ಹಲವಾರು ಸಮಯ ಜ್ಞಾನ ಪ್ರಸಾರ ಮಾಡುತ್ತಾ ಮಾಚಿದೇವರು ದೇವರಹಿಪ್ಪರಗಿಯಲ್ಲಿ ಪರಮಾತ್ಮನಲ್ಲಿ ಲೀನವಾಗುತ್ತಾರೆ.

ಮಾಹಿತಿ ಕೃಪೆ: ಶ್ರೀ ಸಂಗಮೇಶ ಕಲಹಾಳ (ವಿಜಯವಾಣಿ ಫೆಬ್ರವರಿ ೧, ೨೦೨೧)

ಚಿತ್ರ ಕೃಪೆ: ಅಂತರ್ಜಾಲ ತಾಣ