ಮಣಿಪಾಲದಲ್ಲಿ ಕಂಡ ಬೂದು ತಲೆ ಕಬ್ಬಕ್ಕಿ

ಮಣಿಪಾಲದಲ್ಲಿ ಕಂಡ ಬೂದು ತಲೆ ಕಬ್ಬಕ್ಕಿ

ಒಂದು ಬಾರಿ ನಾನು ಮಣಿಪಾಲಕ್ಕೆ ಹೋಗಿದ್ದೆ. ಮಣಿಪಾಲದಲ್ಲಿ ಪಕ್ಷಿ ವೀಕ್ಷಕರ ಗುಂಪೊಂದಿದೆ. ಅವರು ಪ್ರತಿ ಭಾನುವಾರ ಮಣಿಪಾಲದ ಯಾವುದಾದರೂ ಒಂದು ಪ್ರದೇಶಕ್ಕೆ ಹೋಗಿ ಪಕ್ಷಿ ವೀಕ್ಷಣೆ ಮಾಡುತ್ತಾರೆ. ಮಣಿಪಾಲದಲ್ಲಿ ಕಲಿಯುವ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗವಹಿಸುತ್ತಾರೆ. ವರ್ಷದಲ್ಲಿ ಒಂದು ಬಾರಿ ಬೇರೆ ಊರುಗಳಿಂದ ಪಕ್ಷಿ ವೀಕ್ಷಕರು ಅಲ್ಲಿ ಬಂದು ಸೇರಿ ಅಲ್ಲಿನ ಬೇರೆ ಬೇರೆ ಭಾಗಗಳಲ್ಲಿ ಇರುವ ಪಕ್ಷಿಗಳ ಗಣತಿಯನ್ನು ಮಾಡುತ್ತಾರೆ. ಪರಸ್ಪರ ಹಲವಾರು ಹೊಸ ವಿಚಾರಗಳನ್ನು ಹಂಚಿಕೊಂಡು ಕಲಿಯುತ್ತಾರೆ. ಹೀಗೆ ಒಂದು ವರ್ಷ ಪಕ್ಷಿ ವೀಕ್ಷಣೆಗೆ ನಾನು ಹೋಗಿದ್ದಾಗ ಅಲ್ಲೊಂದು ಮುತ್ತುಗದ ಮರ ಕಾಣಿಸಿತು. ಫೆಬ್ರವರಿ ತಿಂಗಳು, ಆದ್ದರಿಂದ ಕೇಸರಿ ಬಣ್ಣದ ಚಂದದ ಹೂಗಳು ತುಂಬಿ ತುಳುಕುತ್ತಿದ್ದವು. ಹೂಗಳ ಆಸು ಪಾಸಿನಲ್ಲಿ ಯಾವುದೋ ಹಕ್ಕಿ ಓಡಾಡುತ್ತಿರುವುದು ಕಾಣಿಸಿತು. ಯಾವುದಿರಬಹುದು ಅಂತ ಬೈನಾಕ್ಯುಲರ್ ನಲ್ಲಿ ನೋಡಿದ್ರೆ, ಒಂದಲ್ಲ ಎರಡಲ್ಲ ಮುತ್ತುಗದ ಹೂಗಳ ಸುತ್ತಮುತ್ತ ಮರದ ತುಂಬೆಲ್ಲ ನೂರಾರು ಹಕ್ಕಿಗಳು.

ತಕ್ಷಣ ನೋಡಲು ಮೈನಾ ಹಕ್ಕಿಯ ರೀತಿಯ ಆಕಾರವನ್ನು ಹೊಂದಿರುವ ಈ ಹಕ್ಕಿಗಳ ತಲೆ ಒಂದಿಷ್ಟು ಬೂದು ಬಣ್ಣ ಇದೆ, ಹೊಟ್ಟೆ ಮೈಗಳೆಲ್ಲ ಕಂದು ಬಣ್ಣ. ಹಳದಿ ಬಣ್ಣದ ಕೊಕ್ಕು ಕಣ್ಣಿನ ಸುತ್ತ ಉಂಗುರದಂತಹ ಚಂದದ ಆಕೃತಿ. ಹೂವಿನ ಮಕರಂಧ ಮತ್ತು ಹೂವಿನ ಕೇಸರವನ್ನು ತಿನ್ನುವುದರಲ್ಲಿ ಹಕ್ಕಿಗಳೆಲ್ಲ ತುಂಬಾ ವ್ಯಸ್ತವಾಗಿದ್ದವು. ಒಮ್ಮಿಂದೊಮ್ಮೆಲೇ ದೊಡ್ಡದೊಂದು ಮೋಡದ ಹಾಗೆ ಮರದಿಂದ ಹಾರಿ ಒಂದಷ್ಟು ದೂರ ಸುತ್ತು ಹಾಕಿ ಬೇರೆಲ್ಲೂ ಹೋಗಿ ಕುಳಿತವು. ಮುಂದೆ ಒಂದು ಕಡೆ ಆಲದ ಮರದಲ್ಲಿ ನೋಡುತ್ತೇವೆ ಮತ್ತೆ ಇದೇ ಹಕ್ಕಿಗಳು. ಆಲದ ಮರದ ಹಣ್ಣುಗಳನ್ನು ತಿನ್ನುತ್ತಾ ಇದ್ದವು. ಹಣ್ಣುಗಳು ಕೀಟಗಳು ಮತ್ತು ಹೂವು, ಹೂವಿನ ಭಾಗಗಳು ಈ ಹಕ್ಕಿಯ ಮುಖ್ಯ ಆಹಾರ. ಇವು ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬರುತ್ತದೆ. ಕೆಲವೊಮ್ಮೆ ಬೇಸಿಗೆ ಕಾಲದಲ್ಲಿ ಹಿಮಾಲಯದ ತಪ್ಪಲು ಪ್ರದೇಶಗಳಿಗೂ ಇವು ವಲಸೆ ಹೋಗುತ್ತವೆಯಂತೆ. ಸದಾ ಗುಂಪಾಗಿರುವುದು ಸದಾ ಕೂಗುತ್ತಾ ಪರಸ್ಪರ ಮಾತನಾಡುತ್ತಾ ಇರುವುದು ಇವುಗಳ ಸಾಮಾನ್ಯ ಅಭ್ಯಾಸ. ಬೇಸಿಗೆ ಕಾಲದಲ್ಲಿ ಕುಟ್ರು ಹಕ್ಕಿಗಳು ಮತ್ತು ಮರಕುಟಿಗಳು ಗೂಡು ಮಾಡಿ ಬಿಟ್ಟಂತಹ ಪೊಟ್ಟರೆಗಳನ್ನು ಇವು ಗೂಡು ಮಾಡಲು ಬಳಸುತ್ತವೆಯಂತೆ. ನಿಮ್ಮ ಆಸುಪಾಸಿನಲ್ಲಿ ಮುತ್ತುಗದ ಮರ (Forest flame) ಹೂ ಬಿಟ್ಟಿದ್ದರೆ ನಿಮಗೂ ನೋಡಲು ಸಿಗಬಹುದು.

ಕನ್ನಡದ ಹೆಸರು: ಬೂದು ತಲೆ ಕಬ್ಬಕ್ಕಿ

ಇಂಗ್ಲೀಷ್ ಹೆಸರು: Chestnut-tailed Starling

ವೈಜ್ಞಾನಿಕ ಹೆಸರು: Sturnia malabarica

ಚಿತ್ರಕೃಪೆ: ಡಾ.ಅಭಿಜಿತ್

-ಅರವಿಂದ ಕುಡ್ಲ, ಬಂಟ್ವಾಳ