ಮಣಿಪಾಲ ಎಂಡ್ ಪಾಯಿಂಟ್ ನಲ್ಲಿ…

ಮಣಿಪಾಲ ಎಂಡ್ ಪಾಯಿಂಟ್ ನಲ್ಲಿ…

ಮಣಿಪಾಲ ನಗರವು ತನ್ನ ಭವ್ಯವಾದ ಶೈಕ್ಷಣಿಕ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಅತ್ಯಾಧುನಿಕ ಎಲ್ಲಾ ಆರೋಗ್ಯ ಚಿಕಿತ್ಸೆಗಳ ಆಸ್ಪತ್ರೆಗಳು ಇಲ್ಲಿವೆ. ಕರಾವಳಿ ತೀರದ ಅಷ್ಟೇ ಅಲ್ಲದೆ ರಾಜ್ಯದ, ದೇಶದ ಅತ್ಯುತ್ತಮ ಆಸ್ಪತ್ರೆಗಳ ಊರು ಮಣಿಪಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಅದು ಅಲ್ಲದೆ ಮಣಿಪಾಲವು ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ನಗರವಾಗಿದೆ. ಇಲ್ಲಿನ ಭೌಗೋಳಿಕ ಸ್ಥಳವು ಅದನ್ನು ಮತ್ತಷ್ಟು ರಮಣೀಯ ಸ್ಥಳವನ್ನಾಗಿ ಮಾಡಿದೆ. ಇಲ್ಲಿನ ಆಯಕಟ್ಟಿನ ಬಂಡೆಯ ಅಂಚಿನಲ್ಲಿರುವ ಸ್ಥಳವನ್ನು ಎಂಡ್ ಪಾಯಿಂಟ್ ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಇದನ್ನು ಸನ್ಸೆಟ್ ಪಾಯಿಂಟ್ ಎಂದೂ ಕರೆಯುತ್ತಾರೆ. ಇದು ನೀಡುವ ಭವ್ಯವಾದ ನೋಟಕ್ಕಾಗಿ ಅನೇಕ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಈ ಮಣಿಪಾಲ ಎಂಡ್ ಪಾಯಿಂಟ್ ಅಲ್ಲಿ ನಿಂತರೆ ಪ್ರಕೃತಿಯನ್ನು ಅದರ ಮೂಲರೂಪದಲ್ಲಿ ಅನುಭವಿಸಬಹುದು. 

ಹಚ್ಚಹಸಿರಿನ ಕಣಿವೆಗಳಿಂದ ಆವೃತವಾಗಿರುವ ಎಂಡ್ ಪಾಯಿಂಟ್ ನಿಧಾನವಾಗಿ ಹರಿಯುವ ಸ್ವರ್ಣಾ ನದಿಯನ್ನು ಕಡೆಗಣಿಸುವ ಹಾಗೆ ಭಾಸವಾಗುತ್ತದೆ. ಪಶ್ಚಿಮಕ್ಕೆ ವಿಶಾಲವಾದ ಅಂತ್ಯವಿಲ್ಲದ ಅರೇಬಿಯನ್ ಸಮುದ್ರದ ವಿಹಂಗಮ ನೋಟ, ಸುತ್ತಲೂ ಪಶ್ಚಿಮ ಘಟ್ಟಗಳ ಭವ್ಯತೆಯು ಹಸಿರುಟ್ಟ ಭೂಮಿ ತಾಯಿಯ ಭವ್ಯ ದೃಶ್ಯವನ್ನು ನೋಡಬಹುದು. ಈ ಸ್ಥಳವು ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ಕಣಿವೆಗಳು ಆಳವಾದ ಹಸಿರು ಬಣ್ಣಕ್ಕೆ ತಿರುಗಿದಾಗ ತಾಜಾ ನೋಟವನ್ನು ನೀಡುತ್ತದೆ. ಈ ಸ್ಥಳವು ಪ್ರಶಾಂತತೆಯ ವ್ಯಕ್ತಿತ್ವ ರೂಪದಂತೆ ಕಾಣುತ್ತದೆ. ಪ್ರಕೃತಿಯ ಒಡನಾಟದಲ್ಲಿ ಇಲ್ಲಿ ಗಂಟೆಗಟ್ಟಲೆ ಕಳೆಯಬಹುದು.

ಇಲ್ಲಿ ಪ್ರವಾಸಿಗರಿಗೆ ಹೆಚ್ಚುವರಿ ಪ್ರಯೋಜನಕ್ಕಾಗಿ ಉದ್ಯಾನವನ ಮತ್ತು ಬೆಣಚುಕಲ್ಲುಗಳ ವಾಕಿಂಗ್ ಟ್ರ್ಯಾಕ್ ಕೂಡ ಇದೆ. ಪ್ರವೇಶ ದ್ವಾರದಿಂದ ಲುಕ್‌ಔಟ್ ಪಾಯಿಂಟ್‌ಗೆ ನಡೆಯಲು ಸುಮಾರು 2ಕಿ.ಮೀ. ವರೆಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮತ್ತು ಸ್ನೇಹಿತರೊಂದಿಗೆ ನೀವು ಅಡ್ಡಾಡಿ ಆನಂದಿಸಬಹುದು. "ಆಧುನಿಕ ಭರಾಟೆಯ ನಡುವೆಯೂ ಎಂದೆಂದಿಗೂ ಮಾಸದ ಪ್ರಾಕೃತಿಕ ಸೌಂದರ್ಯದ ಜೊತೆಗೆ ಕಣ್ಮನ ಸೆಳೆಯುವ ಭೂಮಿ - ಆಕಾಶವನ್ನು ಒಂದಾಗಿಸುವ ವಿಹಂಗಮ ನೋಟ ಇಲ್ಲಿದೆ. ವೈದ್ಯಕೀಯ, ಶಿಕ್ಷಣ ಹಾಗೂ ತಂತ್ರಜ್ಞಾನದೊಡಲಿಗೆ ಈ ಪ್ರಾಕೃತಿಕ ಸೌಂದರ್ಯವು ಒಂದು ಮುಕುಟ ಪ್ರಾಯವಿದ್ದಂತೆ.

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು