ಮಣಿಪುರದಲ್ಲಿನ ಹಿಂಸಾಚಾರ ನಿಯಂತ್ರಣಕ್ಕೆ ಕ್ರಮಗಳು ಅಗತ್ಯ
ಈಶಾನ್ಯ ಭಾರತದ ಪುಟ್ಟ ರಾಜ್ಯಗಳಲ್ಲಿ ಒಂದಾಗಿರುವ ಮಣಿಪುರ ಹೊತ್ತಿ ಉರಿಯುತ್ತಿದೆ. ಎರಡು ಜನಾಂಗೀಯ ಗುಂಪುಗಳ ನಡುವಣ ದಶಕಗಳ ಸಂಘರ್ಷ ಈಗ ಭುಗಿಲೆದ್ದಿರುವ ಪರಿಣಾಮ ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚಲಾಗುತ್ತಿದೆ. ಮಣಿಪುರ ಸರ್ಕಾರ ಐದು ದಿನಗಳ ಕಾಲ ಇಂಟರ್ನೆಟ್ ಸ್ಥಗಿತ ಗೊಳಿಸಿದ್ದು, ಹಲವಾರು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿದೆ. ಅರೆಸೇನಾ ಪಡೆಗಳು ಹಾಗೂ ಸೇನೆಯನ್ನು ನಿಯೋಜನೆ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿಂಸೆಯಿಂದಾಗಿ ಮಣಿಪುರದ ಜನರು ಭಯಭೀತರಾಗಿದ್ದಾರೆ. ಮನೆ ತೊರೆದು ಅಡಗಿ ಕೂತಿದ್ದಾರೆ. ಎಲ್ಲಿ ತಮ್ಮ ಮಕ್ಕಳು ಶಬ್ಧ ಮಾಡಿದರೆ ದಂಗೆಕೋರರಿಗೆ ಇರುವಿಕೆ ಗೊತ್ತಾಗಿಬಿಡುತ್ತದೆಯೋ ಎಂಬ ಕಾರಣಕ್ಕೆ ಚಿಣ್ಣರಿಗೆ ನಿದ್ರೆ ಔಷಧಿ ಕುಡಿಸಿ ಮಲಗಿಸಲಾಗುತ್ತಿದೆ ಎಂಬ ಮನಕಲಕುವ ವರದಿಗಳು ಬರುತ್ತಿವೆ. ಏತನ್ಮಧ್ಯೆ, ಮಣಿಪುರ ಮೂಲದ ಪ್ರಸಿದ್ಧ ಬಾಕ್ಸರ್ ಮೇರಿ ಕೋಮ್ ಅವರು ತಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ, ದಯಮಾಡಿ ಸಹಾಯ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಟ್ವೀಟ್ ಮಾಡಿ ಅಂಗಲಾಚಿದ್ದಾರೆ. ಯಾವುದೇ ರಾಜ್ಯ ಶಾಂತಿಯಿಂದ ಇರಬೇಕು. ಈ ರೀತಿ ಹಿಂಸಾಚಾರ ಸಂಭವಿಸಿ ಹೊತ್ತಿ ಉರಿಯುವುದು, ಜನರು ಅಭದ್ರತೆಯಲ್ಲಿ ದಿನಗಳನ್ನು ದೂಡುವುದು ಯಾರಿಗೂ ಒಳ್ಳೆಯದಲ್ಲ.
ಮಣಿಪುರದಲ್ಲಿ ಈಗ ಹಿಂಸಾಚಾರ ನಡೆಯುತ್ತಿರುವುದಕ್ಕೆ ಮೇಲ್ನೋಟಕ್ಕೆ ಕಂಡು ಬರುವ ಕಾರಣ ಅಲ್ಲಿನ ಹೈಕೋರ್ಟ್ ನೀಡಿರುವ ಆದೇಶ. ಮೀಟಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಕಣಿವೆ ಪ್ರದೇಶದಲ್ಲಿರುವ ಮೀಟಿ ಸಮುದಾಯ ಮಣಿಪುರ ಜನಸಂಖ್ಯೆಯಲ್ಲಿ ಶೇ ೫೩ರಷ್ಟಿದೆ. ರಾಜಕೀಯವಾಗಿ ಬಲಾಢ್ಯವಾಗಿದೆ. ಆ ಸಮುದಾಯಕ್ಕೆ ಎಸ್ ಟಿ ಮೀಸಲು ಕೊಟ್ಟರೆ ತನ್ನ ಅಸ್ತಿತ್ವಕ್ಕೆ ಕುತ್ತು ಬರುತ್ತದೆ ಎಂಬುದು ಗುಡ್ಡಗಾಡುಗಳಲ್ಲಿ ವಾಸಿಸುವ ಕುಕಿ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ ಬುಧವಾರ ಪ್ರತಿಭಟನೆ ನಡೆಸುತ್ತಿದ್ದಾಗ ಪರಸ್ಪರ ಘರ್ಷಣೆ ನಡೆದು ಹಿಂಸಾಚಾರದ ರೂಪ ಪಡೆದುಕೊಂಡಿದೆ. ಅಸಲಿ ಕಾರಣವೇನೆಂದರೆ, ಮೀಟಿಗಳು ತಾವು ಮೂಲ ನಿವಾಸಿಗಳು ಎಂದು ಹೇಳಿಕೊಳ್ಳುತ್ತಾರೆ. ಕುಕಿಗಳ ಜನಸಂಖ್ಯೆ ಡಿಢೀರನೆ ಹೆಚ್ಚಾಗಿದೆ. ನೆರೆಯ ಮ್ಯಾನ್ಮಾರ್ ನಿಂದ ಅಕ್ರಮ ನುಸುಳುಕೋರರು ಬರುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಸಣ್ಣ ಪ್ರಮಾಣದಲ್ಲಿದ್ದ ಈ ಆಕ್ರೋಶ ಈಗ ಸ್ಫೋಟಗೊಂಡು ಅನಾಹುತ ಸೃಷ್ಟಿಸಿದೆ. ಮಣಿಪುರದಲ್ಲಿ ಶಾಂತಿ ಪುನರ್ ಸ್ಥಾಪಿಸುವುದು ತಕ್ಷಣದ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲಾಗದು ಎಂದು ಜನರೂ ಅರ್ಥ ಮಾಡಿಕೊಳ್ಳಬೇಕು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ:೦೫-೦೫-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ