ಮಣಿಪುರದ ಅಗ್ನಿ ಜ್ವಾಲೆಗೆ ನಮ್ಮ ಕಣ್ಣ ನೀರಿನ ಹನಿ ಬಿಂದು…!
ದೂರದ ಸಪ್ತ ಸೋದರಿಯ ನಾಡಲ್ಲಿ ಒಂದಾದ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕೆಲವು ದೇಶಗಳಂತೆ ಭಾರತದ ಈ ಪುಟ್ಟ ಸುಂದರ ನಾಡು ಅರಾಜಕತೆಯಲ್ಲಿ ಬೇಯುತ್ತಿದೆ. ಅಲ್ಲಿನ ಅನೇಕ ಜನ ದೊಂಬಿ ಗಲಭೆ ಸಾವುಗಳನ್ನು ಕಣ್ಣಾರೆ ಕಂಡು ಅವರನ್ನು ರಕ್ಷಿಸಲು ವಿಫಲವಾದ ವ್ಯವಸ್ಥೆಗೆ ದಿಕ್ಕಾರ ಕೂಗಿ ಅನಾಥ ಪ್ರಜ್ಞೆಯಿಂದ ಬಳಲಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ. ಆದರೆ ಆಡಳಿತ ವ್ಯವಸ್ಥೆ ಯಾವ ಕಾರಣಕ್ಕೋ ಏನೋ ನಿರೀಕ್ಷಿಸಿದಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಜೈ ಭೀಮ್ ನಂತ ದುರ್ಘಟನೆಯ ಸಿನಿಮಾ ನೋಡಲು ಅನೇಕ ಮತಾಂಧ ಅನಾಗರಿಕ ಮನಸ್ಸುಗಳು ಕಾಯುತ್ತಿರಬಹುದೇ? ಸಿನಿಮಾ ಕಾದಂಬರಿಗಳಲ್ಲಿ ನಡೆಯುವ ಕಾಲ್ಪನಿಕ ಘಟನೆಗಳಿಗೆ ಅಪಾರ ಪ್ರಮಾಣದ ಆಕ್ರೋಶ ವ್ಯಕ್ತಪಡಿಸಿ ಭಾವುಕರಾಗುವ ಜನ ಕಣ್ಣ ಮುಂದಿನ ನೈಜ ಘಟನೆಗಳಿಗೆ ನಿರ್ಭಾವುಕರಾಗುವ ಕುರುಡುತನ ಏಕೋ....
ನಮ್ಮಿಂದ ಆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೆ ಇರಬಹುದು. ಆದರೆ ಆ ಜನಗಳ ಪರವಾಗಿ ಹಿಂಸೆಯ ವಿರುದ್ಧ ನಾವು ಕನಿಷ್ಠ ಪ್ರಮಾಣದ ಪ್ರತಿಭಟನೆ ಮಾಡಬಹುದಲ್ಲವೇ. ಏಕೆಂದರೆ ಇದು ಶಾಂತಿಯ ನೆಲ. ನಮ್ಮ ಮನಸ್ಸುಗಳು ಪ್ರೀತಿಯ ಜಲಧಾರೆಗಳು. ಬೆಂಗಳೂರಿನಿಂದ ಸುಮಾರು 2600 ಕಿಲೋಮೀಟರ್ ದೂರದ ಮಣಿಪುರದ ಜನರನ್ನು ಸಾಂತ್ವನಗೊಳಿಸುವ ಉದ್ದೇಶದಿಂದ ನಾವು ನೇರವಾಗಿ ತಲುಪುವುದು ಸಾಮಾನ್ಯರಾದ ನಮಗೆ ಕಷ್ಟ. ಆದರೆ ಕನಿಷ್ಠ ಅವರಿಗಾಗಿ ನಮ್ಮ ನೈತಿಕ ಬೆಂಬಲ ಸೂಚಿಸಲು ಮತ್ತು ನಮ್ಮ ಆತ್ಮ ತೃಪ್ತಿಗಾಗಿ, ಜೊತೆಗೆ ವ್ಯವಸ್ಥೆಯ ವೈಫಲ್ಯದ ವಿರುದ ಸಣ್ಣ ಧ್ವನಿ ಎತ್ತಲು ಒಂದು ಸಮಾನ ಮನಸ್ಕ ಗೆಳೆಯರು ಸೇರುತ್ತಿದ್ದೇವೆ.
ಮಣಿಪುರದ ಸದ್ಯದ ಪರಿಸ್ಥಿತಿಯ ಒಂದು ಅವಲೋಕನ ಮತ್ತು ಸಮಾಜದ ಸಾಮಾಜಿಕ ಸ್ಪಂದನೆ ಮತ್ತಷ್ಟು ತೀಕ್ಷ್ಣಗೊಳ್ಳಲು ನಾವು ಮಾಡಬಹುದಾದ ಕರ್ತವ್ಯಗಳ ಬಗ್ಗೆ ಒಂದು ಚರ್ಚೆ ಇರುತ್ತದೆ. ಆಸಕ್ತರು ಭಾಗವಹಿಸಬಹುದು. ಎಲ್ಲರಿಗೂ ಸ್ವಾಗತ.
ಕಾರ್ಯಕ್ರಮದ ವಿವರ: "ಮಣಿಪುರ ಫೈಲ್ಸ್"- ಒಂದು ಮುಕ್ತ ಸಂವಾದ
ಹೊತ್ತು ಉರಿಯುತ್ತಿರುವ ಭಾರತದ ಸಪ್ತ ಸೋದರಿಯರಲ್ಲಿ ಒಂದಾದ ಮಣಿಪುರದ ಜನರಿಗಾಗಿ ಒಂದು ಕಣ್ಣ ಹನಿಯ ಸಾಂತ್ವಾನ ಮತ್ತು ನೈತಿಕ ಬೆಂಬಲ ವ್ಯಕ್ತಪಡಿಸಲು… ಹಿಂಸೆ ನಿಲ್ಲಿಸಿ ಶಾಂತಿ ನೆಲೆಸಲು ಸಂಬಂಧಪಟ್ಟವರು ಶೀಘ್ರ ಕ್ರಮ ಕೈಗೊಳ್ಳಲು ಆಗ್ರಹಿಸಿ ದೇಶದ ಪ್ರಖ್ಯಾತ ಮತ್ತು ಜನಪ್ರಿಯ ವ್ಯಕ್ತಿಗಳು ಮಣಿಪುರಕ್ಕೆ ಭೇಟಿ ನೀಡಿ ಶಾಂತಿಗಾಗಿ ಪ್ರಯತ್ನಿಸಲು ಮನವಿ ಮಾಡಿಕೊಳ್ಳಲು, ಭಾರತದ ಪೂರ್ವ ರಾಜ್ಯಗಳ ಬಗ್ಗೆ ತಿಳಿದವರು ಒಂದಷ್ಟು ಭೌಗೋಳಿಕ - ಸಾಮಾಜಿಕ - ರಾಜಕೀಯ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ದಯವಿಟ್ಟು ಸಮಯ ಮಾಡಿಕೊಂಡು ಭಾಗವಹಿಸಿ.
ಆಗಮಿಸುವ ಎಲ್ಲರೂ ಅತಿಥಿಗಳೇ - ನಾವೆಲ್ಲರೂ ಜನ ಸಾಮಾನ್ಯರು - ವೇದಿಕೆ ನಿಮ್ಮದೇ. ದಿನಾಂಕ 09-07-2023 ಭಾನುವಾರ, ಸಮಯ ಬೆಳಗ್ಗೆ 11 ಗಂಟೆಯಿಂದ 2 ಗಂಟೆಯವರೆಗೆ. ಸ್ಥಳ : ಮಹಾದೇವಿ ತಾಯಿ ಕಿರು ಸಭಾಂಗಣ, ಗಾಂಧಿ ಭವನ, ಶಿವಾನಂದ ವೃತ್ತದ ಬಳಿ, ಬೆಂಗಳೂರು 560001. ಸೂಚನೆ : ಕಾರ್ಯಕ್ರಮದ ನಂತರ ಲಘು ಉಪಹಾರ ಇರುತ್ತದೆ.,
ವಿವರಗಳಿಗೆ: ಯುವರಾಜ್ ಎಂ.(80508 02019)
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ