ಮಣಿಪುರ ಎಲ್ಲ ಬಂಡುಕೋರರ ಜತೆಗೂ ಸಂಧಾನ ಸೂತ್ರ ಅಗತ್ಯ

ಆರು ದಶಕಗಳಿಂದ ಮಣಿಪುರದಲ್ಲಿ ಬಂಡುಕೋರ ಚಟುವಟಿಕೆಯನ್ನು ನಡೆಸಿಕೊಂಡು ಬಂದಿದ್ದ ಯು ಎನ್ ಎಲ್ ಎಫ್ (ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್) ನ ಒಂದು ಬಣ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವುದು ನಿಜಕ್ಕೂ ಐತಿಹಾಸಿಕ ಬೆಳವಣಿಗೆ. ಯು ಎನ್ ಎಲ್ ಎಫ್ ಒಂದು ಬಣದ ಬಂಡುಕೋರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದನ್ನು ಹಾಗೂ ಶಾಂತಿ ಒಪ್ಪಂದಕ್ಕೆ ಮಣಿಪುರ ಸರಕಾರದ ಜತೆ ಸಹಿ ಹಾಕಿದ್ದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಬಹಳ ಹಿಂದೆಯೇ ಆಗಬೇಕಿತ್ತು. ಆ ರಾಜ್ಯದಲ್ಲಿ ಇನ್ನೂ ಹಲವಾರು ಬಂಡುಕೋರ ಸಂಘಟನೆಗಳಿದ್ದು, ಅವುಗಳ ಜೊತೆಗೂ ಇದೇ ರೀತಿಯ ಒಪ್ಪಂದವೇರ್ಪಟ್ಟರೆ ಆ ರಾಜ್ಯದಲ್ಲಿ ಶಾಂತಿ ನೆಲೆಸುವುದರಲ್ಲಿ ಅನುಮಾನವಿಲ್ಲ. ಕಳೆದ ಮೇ ತಿಂಗಳಿನಲ್ಲಷ್ಟೇ ಮಣಿಪುರ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿತ್ತು. ಆ ಹಿಂಸೆ ವಿಕೋಪಕ್ಕೆ ಹೋಗಲು ಈ ಬಂಡುಕೋರ ಸಂಘಟನೆಗಳ ಪಾತ್ರವೂ ದೊಡ್ದದಿತ್ತು. ಇದೀಗ ಅಂತಹ ಸಂಘಟನೆಯ ಒಂದು ಬಣದ ಜತೆ ಶಾಂತಿ ಒಪ್ಪಂದವೇರ್ಪಟ್ಟಿದೆ. ಯು ಎನ್ ಎಲ್ ಎಫ್ ನ ಮತ್ತೊಂದು ಬಣ ಮಾತುಕತೆಗೆ ವಿರುದ್ಧವಾಗಿದೆ. ಹೀಗಾಗಿ ಅದು ತನ್ನ ತೀವ್ರಗಾಮಿ ಹೋರಾಟವನ್ನು ಮುಂದುವರೆಸುವ ಸಾಧ್ಯತೆ ಇದೆ. ಅದನ್ನೂ ಮನವೊಲಿಸುವ ಕೆಲಸ ಆಗಬೇಕಿದೆ.
ಆರಂಬಂ ಸಮರೇಂದ್ರ ಎಂಬಾತ ಯು ಎನ್ ಎಲ್ ಎಫ್ ನ ಸಂಸ್ಥಾಪಕ. ಮಣಿಪುರ ಭಾರತಕ್ಕೆ ಸೇರ್ಪಡೆಯಾಗಿದ್ದನ್ನು ವಿರೋದಿಸಿ ಪ್ರತ್ಯೇಕ ಮಣಿಪುರ ದೇಶ ಸ್ಥಾಪನೆಗಾಗಿ ಈತ ೧೯೬೪ರಲ್ಲಿ ಯು ಎನ್ ಎಲ್ ಎಫ್ ಹುಟ್ಟು ಹಾಕಿದ್ದ. ಈ ಸಂಘಟನೆ ಈಶಾನ್ಯ ರಾಜ್ಯಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎರಡನೇ ಅತ್ಯಂತ ಹಳೆಯ ಬಂಡುಕೋರ ಗುಂಪು. ೧೯೪೭ರಲ್ಲೇ ಪ್ರಾರಂಭವಾದ ನಾಗಾ ನ್ಯಾಷನಲ್ ಕೌನ್ಸಿಲ್ ಇದಕ್ಕಿಂತ ಹಳೆಯದು. ಈ ಸಂಘಟನೆಯಲ್ಲಿ (ಎರಡೂ ಬಣ ಸೇರಿ) ೫೦೦ ಮಂದಿ ಬಂಡುಕೋರರಿದ್ದಾರೆ. ಆ ಪೈಕಿ ಎಷ್ಟು ಮಂದಿ ಶರಣಾಗಿದ್ದಾರೆ ಎಂಬ ಲೆಕ್ಕ ಗೊತ್ತಾಗಬೇಕಿದೆ. ೧೯೯೦ರಲ್ಲಿ ಶಸ್ತ್ರಸಜ್ಜಿತ ಹೋರಾಟವನ್ನೂ ಆರಂಭಿಸಿದ್ದ ಈ ಸಂಘಟನೆ ಈ ವರೆಗೆ ಸುಮಾರು ೫೦ ಯೋಧರನ್ನು ಕೊಂದು ಹಾಕಿದ ಹಿನ್ನಲೆ ಹೊಂದಿದೆ. ಮಣಿಪುರದ ಪ್ರಬಲ ಮೈತ್ರೇಯಿ ಸಮುದಾಯಕ್ಕೆ ಸೇರಿದ ಸಂಘಟನೆ ಇದು. ಅದರಲ್ಲಿನ ಒಂದು ಬಣ ಸಂಧಾನ ಮಾಡಿಕೊಂಡು, ಸಮಾಜದ ಮುಖ್ಯವಾಹಿನಿಗೆ ಮರಳಲು ಹಾತೊರೆಯುತ್ತಿದೆ ಎಂಬುದನ್ನು ಅರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ವೇದಿಕೆ ಸಿದ್ಧಪಡಿಸಲಾಗಿತ್ತು. ಅದಕ್ಕೆ ಫಲ ಸಿಕ್ಕಿದೆ. ಇಂತಹ ಸಂಧಾನ ಪ್ರಕ್ರಿಯೆಗಳ ಅಗತ್ಯ ಹೆಚ್ಚಿದೆ. ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಅದು ಅನಿವಾರ್ಯವೂ ಹೌದು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೧-೧೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ