ಮಣಿಪುರ : ಬುಡಕಟ್ಟು ಮಹಿಳಾ ರಾಷ್ಟ್ರಪತಿಗಳ ಸಂವೇದನೆ ಅಗತ್ಯ

ಮಣಿಪುರ : ಬುಡಕಟ್ಟು ಮಹಿಳಾ ರಾಷ್ಟ್ರಪತಿಗಳ ಸಂವೇದನೆ ಅಗತ್ಯ

ಜೇನುಗೂಡಿಗೆ ಕಲ್ಲು ಹೊಡೆದಾಗಿದೆ. ಹೆಜ್ಜೇನುಗಳು ರೊಚ್ಚಿಗೆದ್ದಿವೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಅನೇಕರು ಸತ್ತಿದ್ದಾರೆ. ಕೆಲವರು ನರಳುತ್ತಾ ಅಸಹಾಯಕರಾಗಿ ಬಿದ್ದಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮತ್ತಷ್ಟು ಜನ ಓಡಿ ಹೋಗಿದ್ದಾರೆ.

ಕಲ್ಲು ಹೊಡೆದವರು ಆಕಸ್ಮಿಕವಾಗಿಯೋ ಅಥವಾ ಉದ್ದೇಶಪೂರ್ವಕವಾಗಿಯೇ ಹೊಡೆದರೋ ಗೊತ್ತಿಲ್ಲ. ಅಲ್ಲದೇ ಈ‌ ಪ್ರಮಾಣದ ದಾಳಿ ಹೊಡೆದವರಿಗೆ ನಿರೀಕ್ಷಿತವೋ ಅಥವಾ ಅನಿರೀಕ್ಷಿತವೋ ಗೊತ್ತಾಗುತ್ತಿಲ್ಲ.‌ ಈಗ ಅದು ಕಲ್ಲು ಹೊಡೆದವರ ನಿಯಂತ್ರಣವೂ ಮೀರಿರುವಂತೆ ಕಾಣುತ್ತಿದೆ. ಜೇನುಗಳ ದಾಳಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ.  ಜೇನುನೊಣಗಳ ದಾಳಿ ಮುಂದುವರಿಯುತ್ತಲೇ ಇದೆ. ಕಲ್ಲು ಹೊಡೆದವರೇ ಗಾಬರಿಯಾಗಿದ್ದಾರೆ. ಜನ ಗೊಂದಲದಲ್ಲಿದ್ದಾರೆ.

ಎರಡು ತಿಂಗಳ ಮಣಿಪುರದ ನಾಗರಿಕ ಯುದ್ಧವನ್ನು ಸಾಂಕೇತಿಕವಾಗಿ ಹೀಗೆ ವಿಮರ್ಶೆಗೆ ಒಳಪಡಿಸಬಹುದು. ದೇಶಾದ್ಯಂತ ಚರ್ಚೆಗಳು ಪ್ರಾರಂಭವಾಗಿದೆ. ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ ವಿರೋಧಿಗಳ ಕುತಂತ್ರದ ಬಗ್ಗೆಯೂ  ಮಾತುಕತೆಗಳು ಸಾಗುತ್ತಿವೆ.

ಜೊತೆಗೆ ಅನೇಕರ ಮುಖವಾಡಗಳು, ಸಂಕುಚಿತ ಮನೋಭಾವ, ಸಮಗ್ರ ಚಿಂತನೆಯ ಕೊರತೆಗಳು ಹೊರ ಬರುತ್ತಿವೆ. ಭಾರತದ ನೆಲದಲ್ಲಿ ಹಿಂಸೆ ಅತ್ಯಂತ ಭಯಾನಕ ರೀತಿಯಲ್ಲಿ ಕಣ್ಣ ಮುಂದೆಯೇ ಘಟಿಸುತ್ತಿರುವಾಗ ಸರಿ ತಪ್ಪುಗಳ ರಾಜಕೀಯ, ಧಾರ್ಮಿಕ ಮತ್ತು ಸೈದ್ದಾಂತಿಕ ಕಾರಣಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಗಡ್ಡಕ್ಕೆ ಬೆಂಕಿ ಬಿದ್ದಾಗ ಅದರಲ್ಲಿ ಸಿಗರೇಟು ಹಚ್ಚಿಕೊಳ್ಳುವ ಮನಸ್ಥಿತಿಯಂತೆ ಭಾಸವಾಗುತ್ತದೆ.

ದಿನೇ ದಿನೇ ಹಿಂಸೆಯ ಬೆಂಕಿ ಜ್ವಾಲೆಗಳು ಇಡೀ ಮಣಿಪುರವನ್ನು ಹೆಣಪುರವಾಗಿ ಪರಿವರ್ತಿಸಿ ಸುಡುತ್ತಿರುವಾಗ ಮಹಾನ್ ಚಿಂತಕರು, ದೇಶಭಕ್ತರು, ಪಕ್ಷಗಳ ವಕ್ತಾರರು ಇತ್ಯಾದಿಗಳು ಶಾಂತಿ ಸ್ಥಾಪಿಸುವ ಏಕೈಕ ಗುರಿ ಹೊಂದಿರದೆ ಸಾವಿರಾರು ಕಿಲೋಮೀಟರ್ ಗಳ ದೂರದ ಸಾಮಾನ್ಯ ತಿಳಿವಳಿಕೆಗೆ ನಿಲುಕದ ಒಂದು ಸಾಮಾಜಿಕ ಸಾಂಸ್ಕೃತಿಕ ಸಮಸ್ಯೆಗಳನ್ನು ತಮಗೆ ತೋಚಿದಂತೆ ಮಾತನಾಡುತ್ತಾ, ಲೇಖನ, ಭಾಷಣ, ವಿಡಿಯೋಗಳನ್ನು ಹರಿ ಬಿಡುತ್ತಾ ಹಿಂಸೆಯನ್ನೇ ನಿರ್ಲಕ್ಷಿಸಿರುವುದು ದುರಂತ. ಇದನ್ನೇ ವಾಟ್ಸಾಪ್ ಯುನಿವರ್ಸಿಟಿ ಎಂದು ಕರೆಯುವುದು. ಏಕೆಂದರೆ ಈ ಸಂದರ್ಭದಲ್ಲಿ ಶಾಂತಿ ಹೊರತುಪಡಿಸಿದ ಇತರ ಎಲ್ಲಾ ಅಭಿಪ್ರಾಯ ಅನಿಸಿಕೆಗಳು ಬೇಜವಾಬ್ದಾರಿ ಎಂದೇ ಆಗುತ್ತದೆ.

ಸರಿ ತಪ್ಪುಗಳ ಚರ್ಚೆ ಏನಿದ್ದರೂ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಮರಳಿ ಸ್ಥಾಪನೆಯಾದ ನಂತರವೇ ಆಗಬೇಕಾದ ಕೆಲಸ. ಈಗ ಮಣಿಪುರದ ವಿಷಯದಲ್ಲಿ ಕೈಗೊಳ್ಳಬೇಕಾದ ಪ್ರಪ್ರಥಮ ಕೆಲಸ ಶಾಂತಿ ಸ್ಥಾಪನೆ. ಅದಕ್ಕೆ ಆಡಳಿತ ವ್ಯವಸ್ಥೆ ಕೆಲವು ಕ್ರಮಗಳನ್ನು ತಕ್ಷಣವೇ ರೂಪಿಸಬೇಕು.

1) ರಾಷ್ಟ್ರಪತಿಗಳು ಸಂಪುಟ ಕಾರ್ಯದರ್ಶಿಯವರಿಂದ ಮಣಿಪುರದ ಬಗ್ಗೆ ವರದಿ ಪಡೆದು ಪ್ರಧಾನಿಯವರನ್ನು ಕೂಡಲೇ ತಮ್ಮ ಕಚೇರಿಗೆ ಕರೆಸಿಕೊಂಡು ಅತಿ ಶೀಘ್ರ ಕ್ರಮಕ್ಕೆ ಆದೇಶಿಸುವುದು.

2) ಪ್ರಧಾನಿಯವರು ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಹಿಂಸೆ ನಿಗ್ರಹಿಸಲು ಒಂದು ಒಪ್ಪಿತ ತೀರ್ಮಾನ ಕೈಗೊಳ್ಳಬೇಕು.

3) ಪ್ರಧಾನ ಮಂತ್ರಿಗಳು  ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೊವಲ್, ಪೂರ್ವ ಭಾರತದ ಸೈನ್ಯದ ಹಿರಿಯ ಅಧಿಕಾರಿ, ಕೇಂದ್ರ ಗೃಹ ಕಾರ್ಯದರ್ಶಿ, ಹಿರಿಯ ಮತ್ತು ಮುತ್ಸದ್ದಿ ರಾಜಕೀಯ ಪರಿಣಿತರು ಹೀಗೆ ಒಂದಷ್ಟು ಜನರ ನಿಯೋಗ ಕಳುಹಿಸಿ ಶಾಂತಿ ಸ್ಥಾಪನೆಯ ಮಾರ್ಗಗಳನ್ನು ಪರಿಶೀಲಿಸಬೇಕು.

4) ಇದೇ ತಂಡ ಗಲಭೆ ಮಾಡುತ್ತಿರುವವರ ಪರವಾಗಿ ಇರುವ ನಾಯಕತ್ವವನ್ನು ಗುರುತಿಸಿ ಅವರೊಂದಿಗೆ ಸ್ಥಳೀಯ ಆಡಳಿತ ವ್ಯವಸ್ಥೆಯ ಜೊತೆ ಮಾತುಕತೆಗೆ ವೇದಿಕೆ ಕಲ್ಪಿಸಬೇಕು.

5) ಗಲಭೆಗೆ ಮೂಲ ಕಾರಣವಾದ ವಿಷಯವನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಇದು ಶಾಂತಿ ಮಾತುಕತೆಯ ದೃಷ್ಟಿಯಿಂದ ಮಹತ್ವದ್ದು.

6) ತೀರಾ ಅನಿವಾರ್ಯವಾದಲ್ಲಿ‌ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ಸೈನಿಕ ಕಾರ್ಯಾಚರಣೆಯ‌ ಸಾಧ್ಯತೆಯನ್ನು ಮುಕ್ತವಾಗಿ ಪರಿಶೀಲಿಸಬೇಕು.

7) ಈ ಕಾರ್ಯಾಚರಣೆಗೆ ಮಹಿಳಾ ಪೋಲೀಸ್ ಮತ್ತು ಅರೆ ಸೈನಿಕ ಪಡೆಯ ಮಹಿಳಾ ತುಕಡಿಗಳನ್ನು ದೇಶದ ಇತರ ಭಾಗಗಳಿಂದ ಕರೆಸಬೇಕು. ಏಕೆಂದರೆ ಈ ಗಲಭೆಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗಿದೆ.

8) ಇದನ್ನು ಹೊರತುಪಡಿಸಿಯೂ ರಾಷ್ಟ್ರಪತಿಗಳಿಗೆ, ಪ್ರಧಾನಿಗಳಿಗೆ ಇದರ ಬಗ್ಗೆ ಸಾಕಷ್ಟು ಮಾಹಿತಿ, ಜ್ಞಾನ, ಪರ್ಯಾಯ ಮಾರ್ಗಗಳ ಅರಿವು ಇರುತ್ತದೆ. ಆದರೆ ಅದನ್ನು ಆದ್ಯತೆಯ ಮೇಲೆ ಕ್ರಮ ಜರುಗಿಸುವ ಇಚ್ಛಾಶಕ್ತಿಯ ಕೊರತೆ ಮಣಿಪುರದ ವಿಷಯದಲ್ಲಿ ಕಾಣುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಈ ದೇಶದ ರಾಷ್ಟ್ರಪತಿಗಳು ಒಬ್ಬ ಬುಡಕಟ್ಟು ಮಹಿಳೆ. ನಿಜವಾಗಿ ಅವರು ಸಂವೇದನಾ ಶೀಲರಾಗಿದ್ದರೆ ಈಗಾಗಲೇ ಪ್ರಧಾನಿಗಳಿಗೆ ಒಂದು ಖಡಕ್ ಸೂಚನೆ ಕೊಡಬಹುದಿತ್ತು. ಆ ಅಧಿಕಾರ ಅವರಿಗಿದೆ. ರಾಷ್ಟ್ರದ ರಾಜಧಾನಿಯಲ್ಲಿ ಸುಮಾರು 250 ಕೋಣೆಗಳ ಮನೆಯಲ್ಲಿ ಕುಳಿತು ಜನರ ತೆರಿಗೆ ಹಣದಲ್ಲಿ ಅತ್ಯಂತ ಭದ್ರತೆಯ ನಡುವೆ ದೇಶದ ಪ್ರಥಮ ಪ್ರಜೆ ಎಂಬ ಹೆಗ್ಗಳಿಕೆಯ ರಾಷ್ಟ್ರಪತಿಗಳು ಒಂದು ಸಣ್ಣ ರಾಜ್ಯದ ಅತ್ಯಂತ ಭಯಂಕರ ಹಿಂಸಾತ್ಮಕ ಘರ್ಷಣೆಗಳ ಸಂದರ್ಭದಲ್ಲಿ ಮೌನವಹಿಸಿದರೆ ಮೂರು ಸೈನ್ಯಗಳ ಅಧಿಪತಿಯ ಉಸಿರಾಡುವಿಕೆಯನ್ನೇ ಪ್ರಶ್ನಿಸಬೇಕಾಗುತ್ತದೆ. ಅವರ ಮಾನವೀಯ ನೆಲೆಯನ್ನು ವಿಮರ್ಶಿಸಬೇಕಾಗುತ್ತದೆ.

ಪ್ರಧಾನಿಗಳಿಗೆ ರಾಜಕೀಯ ಹಿತಾಸಕ್ತಿ ಮುಖ್ಯವಾಗಬಹುದು. ಆದರೆ ರಾಷ್ಟ್ರಪತಿಗಳೇಕೆ ಮೌನ. ಬದುಕಿನ ಇಳಿ ಸಂಜೆಯ ಹೊತ್ತಿನಲ್ಲಿ ಅವರು ಮಣಿಪುರದ ಜೀವಗಳ ಬಗ್ಗೆ ಯೋಚಿಸಲಿ ಎಂದು ಆಶಿಸುತ್ತಾ ಮತ್ತು ಮನವಿ ಮಾಡಿಕೊಳ್ಳುತ್ತಾ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ