ಮಣಿಪುರ ಹಿಂಸೆ ಹತ್ತಿಕ್ಕಲು ಇನ್ನಷ್ಟು ತ್ವರಿತ ಕ್ರಮ ಅಗತ್ಯ

ಮಣಿಪುರ ಹಿಂಸೆ ಹತ್ತಿಕ್ಕಲು ಇನ್ನಷ್ಟು ತ್ವರಿತ ಕ್ರಮ ಅಗತ್ಯ

ಒಂದೂವರೆ ತಿಂಗಳ ಹಿಂದೆ ನಡೆದ ಹಿಂಸಾಚಾರದ ಬಳಿಕ ಮಣಿಪುರ ಸಹಜಸ್ಥಿತಿಗೆ ಮರಳುತ್ತಲೇ ಇಲ್ಲ. ಬುಧವಾರವಷ್ಟೇ ೯ ಮಂದಿಯನ್ನು ಕೊಲ್ಲಲಾಗಿದೆ. ಇದು ಮೇ ೩ರಂದು ಆರಂಭವಾದ ಮಣಿಪುರ ಸಂಘರ್ಷದ ಬಳಿಕ ಒಂದೇ ಬಾರಿಗೆ ನಡೆದ ಬೃಹತ್ ಹತ್ಯೆ. ಮತ್ತೊಂದೆಡೆ ಮಣಿಪುರ ಸಚಿವ ಸಂಪುಟದಲ್ಲಿರುವ ಏಕೈಕ ಮಹಿಳಾ ಮಂತ್ರಿಯ ಮನೆಗೂ ಬೆಂಕಿ ಹಚ್ಚಲಾಗಿದೆ. ಈ ನಡುವೆ, ಗುರುವಾರ ಕೂಡ ಹಲವೆಡೆ ಹಿಂಸಾಚಾರ ನಡೆದಿದ್ದು, ಹಲವಾರು ಮನೆಗಳು ಧಗಧಗಿಸಿವೆ. ಇದೆಲ್ಲಾ ಅಂತ್ಯವಾಗುವುದು ಯಾವಾಗ ಎಂಬುದೇ ಕಾಣುತ್ತಿಲ್ಲ. ಮಣಿಪುರದಲ್ಲಿನ ಸಂಘರ್ಷವನ್ನು ತಿಳಿಗೊಳಿಸಲು ಕೇಂದ್ರ ಸರಕಾರ ಶಾಂತಿ ಸಮಿತಿಯನ್ನು ರಚನೆ ಮಾಡಿದೆ. ಹಿಂಸೆಗೆ ಕಾರಣರಾದವರನ್ನು ಸದೆಬಡಿಯಲು ಸಿಬಿಐ ಹಾಗೂ ನ್ಯಾಯಾಂಗ ತನಿಖೆಗೂ ಆದೇಶಿಸಿದೆ. ಅದೆಲ್ಲಾ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಕ್ರಮಗಳಾಯಿತು. ಆದರೆ ಕುಸಿದುಬಿದ್ದಿರುವ ಕಾನೂನು-ಸುವ್ಯವಸ್ಥೆ ಮರುಸ್ಥಾಪನೆಗಾಗಿ, ಮಣಿಪುರದ ನಾಗರಿಕರು ನಿರ್ಭೀತಿಯಿಂದ ಮೊದಲಿನಂತೆ ರಸ್ತೆಗಳಲ್ಲಿ ಓಡಾಡುವುದು ಯಾವಾಗ ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಈಗಾಗಲೇ ಮಣಿಪುರ ಹಿಂಸಾಚಾರ ೧೧೦ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ೫೦ ಸಾವಿರಕ್ಕೂ ಹೆಚ್ಚು ಜನರು ವಲಸೆ ಹೋಗಿದ್ದಾರೆ. ಉಳಿದವರು ಯಾವಾಗ ಮನೆಗೆ ಬೆಂಕಿ ಬೀಳುತ್ತೋ, ಯಾವಾಗ ಗುಂಡಿಕ್ಕಿ ಕೊಲ್ಲುತ್ತಾರೋ ಎಂಬ ಆತಂಕದಲ್ಲೇ ದಿನ ದೂಡುವಂತಾಗಿದೆ. ಅಂತಹ ದಯನೀಯ ಸ್ಥಿತಿ ಅನುಭವಿಸಿದವರಿಗೇ ಗೊತ್ತು. 

ಬಲಾಢ್ಯವಾಗಿರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡ ಮೀಸಲಾತಿಗೆ ಪರಿಗಣಿಸಲು ಹೈಕೋರ್ಟ್ ಆದೇಶಿಸಿದ್ದು, ಗುಡ್ಡಗಾಡು ಕುಕಿ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಮೇ ೩ರಂದು ಆ ಜನರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಹಿಂಸಾಚಾರ ಆರಂಭವಾಯಿತು. ಕುಕಿ ಹಾಗೂ ಮೈತೇಯಿಗಳು ಪರಸ್ಪರ ಸಂಘರ್ಷಕ್ಕೆ ಇಳಿದರು. ಬೆಂಕಿ ಹಚ್ಚಿದರು. ಜನರನ್ನು ನಿರ್ದಯವಾಗಿ ಕೊಂದು ಹಾಕಿದರು. ಅಕ್ಷರಶಃ ಜನಾಂಗೀಯ ಹತ್ಯೆಗಳೇ ಆದವು. ಬಂಡುಕೋರರ ಪ್ರವೇಶವಾಯಿತು. ಶಸ್ತ್ರಾಸ್ತ್ರ ಬಳಸಿ ಜನರನ್ನು ಕೊಲ್ಲುವ ಪ್ರಹಸನಗಳು ನಡೆದವು. ಮಣಿಪುರದಲ್ಲಿ ಈ ಹಿಂಸಾಚಾರದಿಂದಾಗಿ ಮೈತೇಯಿ-ಕುಕಿಗಳು ಪರಸ್ಪರ ನಂಬದಾಗಿದ್ದಾರೆ. ಆ ಎರಡೂ ಸಮುದಾಯಗಳ ನಡುವೆ ಮತ್ತೆ ವಿಶ್ವಾಸ, ಬಾಂಧವ್ಯ ವೃದ್ಧಿಸಿದರಷ್ಟೇ ಮಣಿಪುರ ಮೊದಲಿನಂತಾಗಬಹುದು. ಈಗಾಗಲೇ ಮಣಿಪುರದಲ್ಲಿ ಸೇನಾ ಪಡೆಗಳು ಬೀಡುಬಿಟ್ಟಿದ್ದರೂ ಸಂಘರ್ಷ ಸಂಪೂರ್ಣವಾಗಿ ನಿಂತಿಲ್ಲ. ಮತ್ತಷ್ಟು ಸೇನೆ ನಿಯೋಜನೆ ಜೊತೆಗೆ ವಿಶ್ವಾಸ ವೃದ್ಧಿಕ್ರಮಗಳು , ಶಾಂತಿ ಸಭೆಗಳು, ಹಿಂಸಾವಾದಿಗಳನ್ನು ಮಟ್ಟ ಹಾಕುವ ಪ್ರಕ್ರಿಯೆಯನ್ನು ತೀವ್ರಗೊಳಿಸಿ ಕೇಂದ್ರ-ರಾಜ್ಯ ಸರ್ಕಾರಗಳು ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಿದೆ. ಹಿಂಸೆಯಿಂದಾಗಿ ಜನಸಾಮಾನ್ಯರು ಈಗಾಗಲೇ ಅನುಭವಿಸಿರುವುದು ಸಾಕು.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೬-೦೬-೨೦೨೩