ಮಣಿಹಾರ

ಮಣಿಹಾರ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್ ಎನ್ ಪಂಜಾಜೆ
ಪ್ರಕಾಶಕರು
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಭುವನೇಶ್ವರಿ ನಗರ, ಬೆಂಗಳೂರು -೫೬೦೦೮೫
ಪುಸ್ತಕದ ಬೆಲೆ
ರೂ. ೧೭೦.೦೦, ಮುದ್ರಣ: ೨೦೨೨

ವಿವಿಧ ಯಕ್ಷಗಾನ ಪ್ರಕಾರಗಳ ಬಗ್ಗೆ ಮಾಹಿತಿ ನೀಡುವ ‘ಮಣಿಹಾರ' ಎಂಬ ಪುಸ್ತಕವನ್ನು ಬರೆದಿದ್ದಾರೆ ಲೇಖಕರಾದ ಎಸ್ ಎನ್ ಪಂಜಾಜೆ. ಸುಮಾರು ೧೬೦ ಪುಟಗಳ ಈ ಕೃತಿಯು ಯಕ್ಷಗಾನ ಪ್ರೇಮಿಗಳಿಗೆ ಹಾಗೂ ಯಕ್ಷಗಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಜ್ಞಾನಾಸಕ್ತರಿಗೆ ಬಹಳ ಉಪಕಾರಿಯಾಗಿದೆ.  “ಯಕ್ಷಗಾನ ಮತ್ತು ಅದರ ಸೋದರ ಕಲೆಗಳನ್ನು ಒಟ್ಟಾಗಿ ಕಂಡು ಅವುಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಕಲಾಸಕ್ತರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಸ್ತುತ ಯಕ್ಷಗಾನ ಕಲೆಯಲ್ಲಿನ ಜಾಗತೀಕರಣದ ಪ್ರಭಾವದಿಂದಾಗಿರುವ ಸಣ್ಣಪುಟ್ಟ ತಲ್ಲಣಗಳಿಗೆ ಉತ್ತರಿಸುವ ಕಾರ್ಯ ಆಗಬೇಕಿದೆ" ಎನ್ನುತ್ತಾರೆ ಲೇಖಕ ಎಸ್. ಎನ್‌ ಪಂಜಾಜೆ. ಅವರು ತಮ್ಮ ಮಾತಿನಲ್ಲಿ ಹೇಳಿದ ವಿಷಯಗಳ ಆಯ್ದ ಭಾಗ ಇಲ್ಲಿದೆ...

“ಕರ್ನಾಟಕದ ಸಮಗ್ರ ಯಕ್ಷಗಾನ ಪ್ರಕಾರಗಳನ್ನು ಒಂದೇ ಸೂರಿನೆಡೆಗೆ ತರುವುದು, ತನ್ಮೂಲಕ ಅದನ್ನು ಮುಂದಿನ ತಲೆಮಾರಿಗೆ ಉಳಿಸುವ ಹೊಂಗನಸು ಯಕ್ಷಗಾನ ಕಲೆಯ ಸಂಘಟಕನು, ಆರಾಧಕನು ಆದ ನನ್ನ ಕನಸು. ಈ ನಿಟ್ಟಿನಲ್ಲಿ ನಾನು `ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ’ ಎಂಬ ಕಲಾವೇದಿಕೆಯನ್ನು ಎರಡು ದಶಕಗಳ ಹಿಂದೆಯೇ ಪ್ರತಿಷ್ಠಾಪಿಸಿ ಪ್ರತಿವರ್ಷ ಅಖಿಲ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವೆ.

ಯಕ್ಷಗಾನದ ವಿವಿಧ ಪ್ರಕಾರಗಳಾದ ಸಣ್ಣಾಟ, ದೊಡ್ಡಾಟ, ಕೃಷ್ಣ ಪರಿಜಾತ, ಘಟ್ಟದ ಕೋರೆ, ತೆಂಕುತಿಟ್ಟು, ಬಡಗತಿಟ್ಟು, ಬಡಾ ಬಡಗತಿಟ್ಟು ಮುಂತಾದವುಗಳಲ್ಲದೇ ಮಕ್ಕಳ ಯಕ್ಷಗಾನ, ಏಕವ್ಯಕ್ತಿ ಯಕ್ಷಗಾನ, ತಾಳಮದ್ದಳೆ ಮುಂತಾದ ರಂಗಪ್ರಯೋಗಗಳನ್ನು ಉಳಿಸುವುದು, ಅವುಗಳ ಸಾಮ್ಯತೆ-ವ್ಯತ್ಯಾಸ, ಪ್ರಭಾವ ಪ್ರೇರಣೆಗಳನ್ನು ಗುರುತಿಸುವುದು, ಕಲಾವಿದರ ನಡುವೆ ಪರಸ್ಪರ ಸಂವಾದ, ಪ್ರಾತ್ಯಕ್ಷಿಕೆ- ಕಮ್ಮಟ ಇತ್ಯಾದಿಗಳನ್ನು ನಡೆಸುವುದು ನಮ್ಮ ಪ್ರತಿಷ್ಠಾನದ ಮುಖ್ಯ ಕಾರ್ಯಗಳಾಗಿದ್ದವು.

ಇಂತಹ ಹಲವು ಯೋಜನೆಗಳಲ್ಲಿ ಈ ಕ್ಷೇತ್ರದ ಸಾಧಕರು ನೀಡಿದ ಮೌಲ್ಯಯುತ ಲೇಖನಗಳನ್ನು ಒಂದೆಡೆ ಸಂಗ್ರಹಿಸಿ ಈ ಕೃತಿಯ ಮೂಲಕ ನೀಡುವ ಪ್ರಯತ್ನ ನನ್ನದಾಗಿದೆ. ತನ್ಮೂಲಕ ಕನ್ನಡ ಸಂಸ್ಕೃತಿಯ ಮೂಲ ಸೆಲೆಯಾಗಿರುವ ಯಕ್ಷಗಾನ ಕಲೆಯ ಕುರಿತಾಗಿ ನಾಡಿನಾದ್ಯಂತ ನಡೆಯುವ ಸಂಶೋಧನೆ, ಸಾಹಿತ್ಯ ಪ್ರಕಟಣೆ, ಮಾಹಿತಿ ಸಂಗ್ರಹಣೆ, ಇನ್ನು ಹಲವು ಪ್ರಕಾರಗಳ ಸಂವಾದಕ್ಕೆ ಈ ಕೃತಿಯು ಸಂಪನ್ಮೂಲವಾಗಲಿದೆ ಎಂಬುದು ನಮ್ಮ ಅಭಿಮತ.

ಯಕ್ಷಗಾನ ಮತ್ತು ಅದರ ಸೋದರ ಕಲೆಗಳನ್ನು ಒಟ್ಟಾಗಿ ಕಂಡು ಅವುಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಕಲಾಸಕ್ತರಿಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಸ್ತುತ ಯಕ್ಷಗಾನ ಕಲೆಯಲ್ಲಿನ ಜಾಗತೀಕರಣದ ಪ್ರಭಾವದಿಂದಾಗಿರುವ ಸಣ್ಣಪುಟ್ಟ ತಲ್ಲಣಗಳಿಗೆ ಉತ್ತರಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಯಕ್ಷಗಾನ ಕಲೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕುರಿತ ಈ ಕ್ಷೇತ್ರದ ತಜ್ಞರಿಂದ ವಿದ್ವಾಂಸರಿಂದ ಬರೆಸಿದ ಲೇಖನಗಳ ಸಂಗ್ರಹವಾಗಿರುವ `ಮಣಿಹಾರ’ ಕೃತಿ ಉತ್ತಮ ಆಕರ ಕೃತಿಯಾಗಲಿದೆ.

ಯಕ್ಷಗಾನ ಕಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅರಿತವರು ಹಾಗೂ ಕಲೆಯ ವಿವಿಧ ಅಂಗಗಳಲ್ಲಿ ತಲಸ್ಪರ್ಶಿ ಅಧ್ಯಯನ ಮಾಡಿರುವ ಹಿರಿಯರು ಈ ಕೃತಿಯ ಮೂಲಕ ತಮ್ಮ ಅನುಭವದ ಸಾರವನ್ನು ಓದುಗರಿಗೆ ನೀಡಿದ್ದಾರೆ. ನಾಲ್ಕಾರು ಪ್ರಭೇದಗಳಲ್ಲಿ ಪ್ರಾದೇಶಿಕ ತಿಟ್ಟು-ಮಟ್ಟುಗಳಲ್ಲಿ ವಿಕಾಸಗೊಂಡಿರುವ ಕಲಾಪ್ರಕಾರವೊಂದರ ಅಧ್ಯಯನ ಅತ್ಯಂತ ಜಟಿಲವಾದ ಸಂರ್ಕೀಣವಾದ ಒಂದು ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರಚಲಿತವಾಗಿರುವ ಪ್ರಭೇದಗಳನ್ನು ಅಲ್ಲಿನ ಕಲಾಸೂಕ್ಷ್ಮತೆಗಳನ್ನು ಪರಿಚಯಿಸುವ ಪ್ರಯತ್ನವೂ ಕೂಡ ಕೃತಿಯ ಮೂಲಕ ಸಾಧ್ಯವಾಗಲಿದೆ. ಈ ಮೌಲ್ಯಯುತ ಹೊತ್ತಿಗೆಯ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡರೆ ನಮ್ಮ ಈ ಪ್ರಯತ್ನ ಸಾರ್ಥಕವಾಗಲಿದೆ.”