ಮಣ್ಣಿಗೆ ಸಾವಯವ ಅಂಶದ ಅವಶ್ಯಕತೆ

ಕ್ಕಷಿ ಯೋಗ್ಯ ಮಣ್ಣು ಎಂದರೆ ಅದು ಸಾವಯವ ವಸ್ತುಗಳ ಸೇರಿಕೆಯಿಂದ ಉಂಟಾದ ಮಣ್ಣು. ಎಲ್ಲಾ ಮಣ್ಣಿನಲ್ಲೂ ಸಾವಯವ ಅಂಶ ಇರುವುದಿಲ್ಲ. ನೆಲದ ಆಡಿ ಭಾಗದ ಜೇಡಿ( ಶೇಡಿ) ಮಣ್ಣಿನಲ್ಲಿ ಯಾವುದೇ ಸಾವಯವ ಅಂಶ ಇಲ್ಲದ ಕಾರಣ ಅದು ಕೃಷಿ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಈ ಮಣ್ಣನ್ನು ಮೇಲೆ ಎತ್ತಿ ಹಾಕಿದಾಗ ಅದರಲ್ಲಿ ಹಾವಸೆಗಳು ಬೆಳೆದು, ಕ್ರಮೇಣ ಹುಲ್ಲು ಬೆಳೆದು ನಿಧಾನವಾಗಿ ಅದಕ್ಕೆ ಸಾವಯವ ವಸ್ತುಗಳು ಸೇರಲ್ಪಟ್ಟು ಫಲವತ್ತತೆಯತ್ತ ಸಾಗುತ್ತದೆ.
ಈ ಕ್ರಮದಿಂದ ನಮ್ಮ ಹಿರಿಯರು ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಕೃಷಿ ಮಾಡಿ ಉತ್ತಮ ಫಸಲು ಪಡೆಯುತ್ತಿದ್ದರು. ಆಗ ಅವರು ಕೃಷಿಗೆ ಬಳಸುತ್ತಿದ್ದ ಭೂಮಿಯ ಗುಣವೂ ಹಾಗೆಯೇ ಇತ್ತು. ನಾವು ಈಗ ರಾಸಾಯನಿಕ ಮೂಲದಲ್ಲಿ ಪೋಷಕಾಂಶಗಳಾಗಿ ಕೊಡುವುದೆಲ್ಲವೂ ಅವರು ಕೃಷಿ ಮಾಡುತ್ತಿದ್ದ ಭೂಮಿಯಲ್ಲಿ ಇರುತ್ತಿತ್ತು. ಕಾರಣ ಇಷ್ಟೇ ಆ ಮಣ್ಣು ಸಾವಯವ ಸಮೃದ್ಧ ಮಣ್ಣಾಗಿರುತ್ತಿತ್ತು.
ಮಣ್ಣಿನ ಎಲ್ಲಾ ರೀತಿಯ ಜೀವಂತಿಕೆಗೆ ಸಾವಯವ ವಸ್ತುಗಳೇ ಆಧಾರ. ಮಣ್ಣಿನ ಸಾವಯವ ವಸ್ತುಗಳೆಂದರೆ ಅವು ಬರೇ ಸಸ್ಯ ಕಳಿತು ಉಂಟಾಗುವಂತದ್ದಲ್ಲ. ಇದರಲ್ಲಿ ಹಲವಾರು ಮೂಲವಸ್ತುಗಳು ಸೇರಿಕೊಂಡು ಇರುತ್ತವೆ. ಅವುಗಳೆಂದರೆ
೧. ಸಕ್ಕರೆ, ಪಿಷ್ಟ, ಸೆಲ್ಯುಲೋಸ್, ಮತ್ತು ಶರ್ಕರ ಪಿಷ್ಟಾದಿಗಳು,
೨. ಲಿಗ್ನಿನ್,
೩. ಟ್ಯಾನಿನ್
೪. ಕೊಬ್ಬು, ಎಣ್ಣೆಗಳು, ಮೇಣಗಳು.
೫. ರಾಳಗಳು, ಅಂಟುಗಳು
೬. ಬಣ್ಣಗಳು
೭. ಸಸಾರಜನಕಗಳು
೮. ಸುಣ್ಣ, ರಂಜಕ, ಗಂಧಕ, ಕಬ್ಬಿಣ, ಮೆಗ್ನೀಶಿಯಂ ಮತ್ತು ಪೊಟಾಶಿಯಂ ಸೇರಿದಾಗ ಅದು ಸಾವಯವ ಸಮೃದ್ಧ ಮಣ್ಣಾಗುತ್ತದೆ. ಇವೆಲ್ಲಾ ಒಳಗೊಂಡ ಮಣ್ಣಿನಲ್ಲಿ ಒಂದು ಚೈತನ್ಯ ಇರುತ್ತದೆ. ಇಲ್ಲಿ ಬಿತ್ತಲ್ಪಟ್ಟ ಬೀಜ, ನೆಡಲ್ಪಟ್ಟ ಸಸ್ಯ ಉತ್ತಮವಾಗಿ ಬೆಳೆಯುತ್ತದೆ.
* ಸಾವಯವ ಪದಾರ್ಥಗಳು ಹೇರಳವಾಗಿದ್ದ ಮಣ್ಣು ಬಿಡು ಬಿಡುವಾಗಿರದೆ ಅಂಟಾಗಿರುತ್ತದೆ. ಇದರ ಮೇಲೆ ನೀರು ಬಿದ್ದಾಗ ಮಣ್ಣು ಕೊಚ್ಚಣೆ ಉಂಟಾಗುವುದಿಲ್ಲ.
* ಸಾವಯವ ಪದಾರ್ಥಗಳು ಕೊಳೆತಂತೆಲ್ಲಾ ಹೊಸ ಹೊಸ ಸಂಯುಕ್ತ ಪದಾರ್ಥಗಳು ಹುಟ್ಟಿಕೊಳ್ಳುತ್ತವೆ. ಅವು ಮಣ್ಣಿನ ಕಣವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣಿನಲ್ಲಿ ಕಾಳಿನಂತಹ ರಚನೆ ಉಂಟಾಗಿ ಒಳ್ಳೆಯ ಗಾಳಿಯಾಡುವಿಕೆ ಏರ್ಪಟ್ಟು, ಸಡಿಲತೆ ಉಂಟಾಗಿ ನೀರು ಚೆನ್ನಾಗಿ ಒಳಗೆ ಇಂಗಲ್ಪಡುತ್ತದೆ.
* ಸಾವಯವ ಪದಾರ್ಥಗಳಿಂದ ಮಣ್ಣಿನಲ್ಲಿ ಹೆಚ್ಚು ಛಿದ್ರಾವಕಾಶಗಳು ಉಂಟಾಗುತ್ತದೆ, ಇದು ಬೇರುಗಳಿಗೆ ಅಧಿಕ ಆಮ್ಲಜನಕ ದೊರಕಿಸಿಕೊಟ್ಟು ಸಸ್ಯ ಬೆಳವಣಿಗೆಗೆ ಅನುಕೂಲಮಾಡಿಕೊಡುತ್ತದೆ.
* ಸಾವಯವ ಸಮೃದ್ಧ ಮಣ್ಣಿನಲ್ಲಿ ಪೊಷಕಾಂಶಗಳನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ಬಿಡುಗಡೆ ಮಾಡುವ ಶಕ್ತಿ ಇರುತ್ತದೆ. ಸಾವಯವ ಸಮೃದ್ಧ ಮಣ್ಣಿನಲ್ಲಿ ಗಣನೀಯ ಪ್ರಮಾಣದಲ್ಲಿ ರಂಜಕ, ಗಂಧಕ ಇರುವ ಕಾರಣ ಬೆಳೆಗಳಿಗೆ ಬೆಳವಣಿಗೆ ಪ್ರಚೋದಕಗಳು, ಜೀವ ವಿರೋಧಕಗಳು, ಸೂಕ್ಷ್ಮ ಪೋಷಕಾಂಶಗಳು ನೈಸರ್ಗಿಕವಾಗಿ ದೊರೆಯುತ್ತದೆ.
* ಸಾವಯವ ಪದಾರ್ಥಗಳು ಕೊಳೆಯುವಾಗ ಆಮ್ಲ ಮತ್ತು ಇಂಗಾಲದ ಡೈ ಆಕ್ಷೈಡ್ ಹುಟ್ಟುತ್ತದೆ. ಇವುಗಳ ಸಂಪರ್ಕದಿಂದ, ಖನಿಜಗಳಲ್ಲಿರುವ ಪೊಟ್ಯಾಷ್ ಬೆಳೆಗಳಿಗೆ ಲಭ್ಯವಾಗುತ್ತದೆ.
* ಮಣ್ಣಿನ ಎಲ್ಲಾ ಗುಣಗಳಲ್ಲಿ ಅದರ ರಸಸಾರದ ಬದಲಾವಣೆ ಅತೀ ಮಹತ್ವದ್ದು. ರಸಸಾರ ತಟಸ್ಥವಾಗಿದ್ದರೆ ಮಣ್ಣು ಫಲವತ್ತಾಗಿದೆ ಎಂದರ್ಥ. ಸಾವಯವ ವಸ್ತುಗಳು ಹೇರಳವಾಗಿರುವ ಮಣ್ಣಿನ ರಸ ಸಾರ ಬೇಗ ಬದಲಾವಣೆ ಆಗುವುದಿಲ್ಲ.
* ಕೆಲವರು ನಾವು ಬರೇ ೧-೨ ಬುಟ್ಟಿ ಆಡಿನ ಗೊಬ್ಬರವಷ್ಟೇ ಹಾಕಿ ಉತ್ತಮ ಇಳುವರಿ ಪಡೆಯುತ್ತೇವೆ ಎನ್ನುತ್ತಾರೆ. ಅವರ ಮಣ್ಣಿನಲ್ಲಿ ಆ ಗುಣ ಇರುವ ಸಾಧ್ಯತೆ ಇಲ್ಲದಿಲ್ಲ. ಮಣ್ಣು ಸಾವಯವ ಸಮೃದ್ಧವಾಗಿದ್ದಾಗ ಅದರಲ್ಲಿ ಹ್ಯೂಮಸ್ ಅಂಶ ಹೆಚ್ಚು ಇರುತ್ತದೆ. ಹ್ಯೂಮಸ್ ಹೆಚ್ಚಾದಾಗ ಸುಣ್ಣ, ಮೆಗ್ನೀಶಿಯಂ ಹಾಗೂ ಪೊಟಾಶಿಯಂ ಹೆಚ್ಚು ಸಂಗ್ರಹವಿರುತ್ತದೆ. ಅದನ್ನು ಕಡಿಮೆ ಹಾಕಿದಾಗಲೂ ಕೊರತೆ ತೋರಿಸುವುದಿಲ್ಲ.
* ಹ್ಯೂಮಸ್ ಅಂಶ ಹೊಂದಿದ ಮಣ್ಣು ಅಮೋನಿಯಂ ಅಧಿ ಶೋಧನೆ ಮಾಡುವುದರಿಂದ ಅಮೋನಿಯಾ ಗೊಬ್ಬರಗಳು ನಾಶವಾಗುವುದಿಲ್ಲ.
* ಸಾವಯವ ವಸ್ತುಗಳು ಹೇರಳವಾಗಿರುವ ಮಣ್ಣಿನಲ್ಲಿ, ಎರೆಹುಳು, ಇರುವೆ, ಇಲಿ ಹೆಗ್ಗಣ, ಮುಂತಾದವುಗಳು ಜಾಸ್ತಿ. ಈ ಜೀವಿಗಳು ಮಣ್ಣನ್ನು ಕೆದಕಿ ತಿರುವಿ ಹಾಕುವ ಕಾರಣ, ಮಣ್ಣು ಸಡಿಲಗೊಂಡು ಮಣ್ಣಿಗೆ ಸರಿಯಾದ ಹವೆಯಾಡುವಿಕೆ ಹಾಗೂ ಇಂಗುವಿಕೆ ಗುಣಗಳು ಬರುತ್ತವೆ.
* ಸಾವಯವ ಪದಾರ್ಥಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಬೇಕಾಗುವ ಶಕ್ತಿಯ ಮೂಲವಾಗಿದೆ. ಇದು ಸಾರಜನಕವನ್ನು ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳಿಗೆ ಇಂಗಾಲವನ್ನು ಪೂರೈಸುತ್ತದೆ. ಇಂಗಾಲವಿಲ್ಲದೆ ಅಝಟೋಬ್ಯಾಕ್ಟರ್ ಮತ್ತು ಕ್ಲಾಸ್ಟೀಡಿಯಂ ಬ್ಯಾಕ್ಟೀರಿಯಾಗಳು ಸಾರಜನಕವನ್ನು ಸ್ಥಿರೀಕರಿಸಲಾರವು.
* ಸಾವಯವ ಪದಾರ್ಥಗಳ ಆಛ್ಛಾದನೆಯಿಂದ ಮಣ್ಣಿನಿಂದ ನೀರಿನ ಆವೀಕರಣ ಕಡಿಮೆ. ಇದು ಬೇಸಿಗೆಯಲ್ಲಿ ಮಣ್ಣನ್ನು ಹೆಚ್ಚು ಸುಡದೆ, ಚಳಿಗಾಲದಲ್ಲಿ ಉತ್ತಮ ಉಷ್ಣತೆಯನ್ನೂ ಒದಗಿಸಿ ಬೆಳೆಗಳಿಗೆ ಅನುಕೂಲ ಮಾಡಿಕೊಡುತ್ತದೆ.
* ರಂಜಕ ಸಾಮಾನ್ಯವಾಗಿ ಮಣ್ಣಿನಲ್ಲಿ ಇದ್ದರೂ ಲಭ್ಯವಾಗದ ಸ್ಥಿತಿಯಲ್ಲಿ ಇರುತ್ತದೆ. ಹಾಗಾಗಿ ಬೆಳೆಗಳಿಗೆ ಅದರ ಕೊರತೆ ಉಂಟಾಗುತ್ತದೆ. ಆದರೆ ಸಾವಯವ ಪದಾರ್ಥ ಹೆಚ್ಚು ಇರುವ ಮಣ್ಣಿನಲ್ಲಿ ಸಿಟ್ರೇಟ್,ಅಕ್ಸಲೇಟ್, ಟ್ರಾರ್ಟರೆಟ್ ಮತ್ತು ಲೆಕ್ಟೇಟುಗಳು ತಯಾರಾಗಿ, ಮಣ್ಣಿನಲ್ಲಿ ಕಬ್ಬಿಣ ಮತ್ತು ಅಲ್ಯೂಮೀನಿಯಂಗಳ ಜೊತೆಗೆ ರಂಜಕಕ್ಕಿಂತಲೂ ತ್ವರಿತವಾಗಿ ಸಂಯೋಜನೆಗೊಳ್ಳುತ್ತದೆ. ಇದರಿಂದಾಗಿ ರಂಜಕವು ಸಂಯೋಜನೆಯಲ್ಲಿ ಭಾಗವಹಿಸದೆ, ಹಿಂದೆ ಬಿದ್ದು, ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ.
ಸಾವಯವ ಕೃಷಿ ಯಶಸ್ವಿಯಾಗಬೇಕಿದ್ದರೆ ಆ ಮಣ್ಣು ಸಾವಯವ ಸಂಪನ್ನವಾಗಿರಬೇಕು. ಬರೇ ಕೊಟ್ಟಿಗೆ ಗೊಬ್ಬರ- ಜೀವಾಮೃತ ಕೊಟ್ಟೇ ಅಧಿಕ ಇಳುವರಿ ಬರುತ್ತದೆ ಎಂಬ ಕೆಲವರ ಅನುಭವ ಇದ್ದರೆ, ಅದರ ಹಿಂದೆ ಅವರ ಹೊಲದ ಮಣ್ಣು ಆಗಲೇ ಸಮೃದ್ಧ ಸಾವಯವ ಮಣ್ಣಾಗಿರುತ್ತದೆ ಎಂದು ತಿಳಿಯಬಹುದಷ್ಟೇ.
ಮಾಹಿತಿ: ರಾಧಾಕೃಷ್ಣ ಹೊಳ್ಳ