ಮಣ್ಣಿನಡಿಯ ಗೊಬ್ಬರದಾಳುಗಳು

ಮಣ್ಣಿನಡಿಯ ಗೊಬ್ಬರದಾಳುಗಳು

“ಸಂಶೋಧನಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಒಂದಿನ ಅಲ್ಲಿ ೯,೦೦೦ ಹಕ್ಕಿಗಳು ಸತ್ತು ಬಿದ್ದಿದ್ದವು. ಹೊಲಕ್ಕೆ ಸಿಂಪಡಿಸಿದ ವಿಷ ರಾಸಾಯನಿಕದಿಂದ ಸತ್ತ ಕೀಟಗಳನ್ನು ತಿಂದು ಹಕ್ಕಿಗಳು ಸತ್ತಿದ್ದವು. ಇದರಿಂದ ನಷ್ಟ ಯಾರಿಗೆ?

ಭಾರತದಲ್ಲಿ ಪ್ರತಿ ವರುಷ ವಿವಿಧ ಬೆಳೆಗಳಿಗೆ ಕೃಷಿಕರು ಸಿಂಪಡಿಸುವ ಮಾರಕ ಪೀಡೆನಾಶಕ ರಾಸಾಯನಿಕಗಳ ತೂಕ ಒಂದು ಲಕ್ಷ ಟನ್. ಯಾವ್ಯಾವುದಕ್ಕೆ ಎಷ್ಟೆಷ್ಟು? ಅದರಲ್ಲಿ ಶೇಕಡಾ ೪೫ ಹತ್ತಿ ಬೆಳೆಗೆ; ಶೇಕಡಾ ೨೨ ಭತ್ತದ ಬೆಳೆಗೆ; ಶೇಕಡಾ ೯ ಗೋಧಿ ಬೆಳೆಗೆ; ಶೇಕಡಾ ೯ ತರಕಾರಿಗಳಿಗೆ; ಶೇಕಡಾ ೭ ಪ್ಲಾಂಟೇಷನ್ ಬೆಳೆಗಳಿಗೆ; ಶೇಕಡಾ ೪ ದ್ವಿದಳಧಾನ್ಯಗಳಿಗೆ; ಉಳಿದ ಶೇಕಡಾ ೪ ಇತರ ಬೆಳೆಗಳಿಗೆ ಸಿಂಪಡಣೆ. ಇದರಿಂದಾಗಿ ಏನಾಗಿದೆ? ಎಲ್ಲ ಆಹಾರಧಾನ್ಯಗಳೂ, ದ್ವಿದಳಧಾನ್ಯಗಳೂ, ಹಣ್ಣುತರಕಾರಿಗಳೂ, ಕಾಫಿ, ಟೀ ಪಾನೀಯಗಳೂ ವಿಷಮಯವಾಗಿವೆ. ಇವನ್ನು ಸೇವಿಸುವ ನಮ್ಮ ಮತ್ತು ಮಕ್ಕಳ ಆರೋಗ್ಯ ಏನಾದೀತು?

ಹತ್ತಿ ಹೊಲಗಳಲ್ಲಿ ಆಗುತ್ತಿರುವ ಅನಾಹುತ ಗಮನಿಸಿ. ನಮ್ಮ ದೇಶದ ಒಟ್ಟು ಬೆಳೆಪ್ರದೇಶದ ಕೇವಲ ಶೇಕಡಾ ೫ರಲ್ಲಿ ಹತ್ತಿ ಕೃಷಿ. ಆದರೆ, ಬಳಸುವ ಒಟ್ಟು ರಾಸಾಯನಿಕ ಪೀಡೆನಾಶಕಗಳ ಅರ್ಧಪಾಲನ್ನು ಹತ್ತಿ ಬೆಳೆಯೊಂದಕ್ಕೇ ಸಿಂಪಡಿಸುತ್ತಾರೆ. ಒಂದೇ ಹಂಗಾಮಿನಲ್ಲಿ ೧೮ರಿಂದ ೨೦ ಸಲ ಸಿಂಪಡಿಸುತ್ತಾರೆ. ಪ್ರತಿಯೊಂದು ಸಲ ಸಿಂಪಡಣೆ ಮಾಡಿದಾಗಲೂ ರೈತನ ಸಾಲ ಹೆಚ್ಚುತ್ತದೆ. ಯಾಕೆಂದರೆ ಅವೆಲ್ಲ ದುಬಾರಿ ವಿಷಗಳು. ಕೊನೆಗೂ ಬೆಳೆ ಕೈಗೆ ಬರೋದಿಲ್ಲ. ಯಾಕೆಂದರೆ ಪ್ರತಿರೋಧ ಬೆಳೆಸಿಕೊಂಡ ಕೀಟಗಳು ಕೀಟನಾಶಕಗಳಿಗೆ ಸಡ್ಡು ಹೊಡೆದು, ಬೆಳೆಗೆ ಹಾನಿ ಮಾಡುತ್ತವೆ. ಇವೆಲ್ಲದರ ಒಟ್ಟು ಪರಿಣಾಮ - ಹತ್ತಿ  ಬೆಳೆಗಾರ ಸಾಲದಲ್ಲಿ ಮುಳುಗುತ್ತಾನೆ. ಕೊನೆಗೆ ಹತಾಶನಾದ ಆತನಿಗೆ ಉಳಿಯುವುದು ಆತ್ಮಹತ್ಯೆಯ ಹಾದಿ.

ಇದರ ಬದಲಾಗಿ ಪ್ರಾಕೃತಿಕ ವಿಧಾನಗಳನ್ನು ಬಳಸಿದ್ದರೆ, ವಿಷ ರಾಸಾಯನಿಕಗಳ ವೆಚ್ಚವೂ ಉಳಿಯುತ್ತಿತ್ತು; ಫಸಲೂ ಕೈಗೆ ಬರುತ್ತಿತ್ತು. ಯಾಕೆಂದರೆ, ಹತ್ತಿ ಬೆಳೆಗೆ ಹಾನಿ ಮಾಡುವ ಕೀಟಗಳು ಕೇವಲ ೧೦ ಜಾತಿಯವು. ಆದರೆ ಅವುಗಳನ್ನು ತಿನ್ನುವ ೩೦ಕ್ಕೂ ಹೆಚ್ಚು ಜಾತಿಯ ಕೀಟಗಳಿವೆ. ಕೀಟನಾಶಕಗಳನ್ನು ಸಿಂಪಡಿಸದಿದ್ದರೆ ಇವೆಲ್ಲವೂ ಉಳಿಯುತ್ತಿದ್ದವು ಮತ್ತು ಇವೆರಡು ವರ್ಗದ ಕೀಟಗಳ ಸಂಖ್ಯೆಯಲ್ಲಿ ಸಮತೋಲನ ಉಂಟಾಗಿ, ಬೆಳೆಗೆ ಕನಿಷ್ಠ ಹಾನಿ ಆಗುತ್ತಿತ್ತು.

ಹಲವಾರು ಬೆಳೆಗಳ ಕೀಟ ಹತೋಟಿಗಾಗಿ ನಾವು ಹಕ್ಕಿಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು. ಅದಕ್ಕಾಗಿ ನಾವು ಹಕ್ಕಿಗಳನ್ನು ಉಳಿಸಬೇಕು. ದಕ್ಷಿಣ ಭಾರತದ ೪೪೦ ಹಕ್ಕಿಗಳು ತಿನ್ನುವುದು ಕೀಟಗಳನ್ನು ಮಾತ್ರ. ಒಂದು ಜೊತೆ ಮೈನಾ ಹಕ್ಕಿ ಒಂದು ವರುಷದಲ್ಲಿ ೨,೨೦,೦೦೦ ಕೀಟಗಳನ್ನು ಭಕ್ಷಿಸುತ್ತದೆ. ಇದಕ್ಕಿಂತ ಪರಿಣಾಮಕಾರಿ ಕೀಟನಾಶದ ವಿಧಾನ ಬೇರಾವುದಿದೆ? ಇಂತಹ ಪ್ರಕೃತಿಯ ಸತ್ಯಸಂಗತಿಗಳನ್ನು ತಿಳಿಯುತ್ತ ಹೋದಂತೆ ರಾಸಾಯನಿಕ ಕೃಷಿಯಿಂದಾಗಿ ಹೇಗೆ ದಾರಿ ತಪ್ಪಿದ್ದೇವೆಂದು ನಮಗೆ ತಿಳಿಯುತ್ತದೆ.”

ಇಂತಹ ಕಣ್ಣು ತೆರೆಸುವ ಸಂಗತಿಗಳನ್ನು ತಿಳಿಸಿದವರು ಶ್ರೀಮತಿ ರೇವತಿ. ಅವರು "ತಮಿಳ್ನಾಡು ಸಾವಯವ ಕೃಷಿ ಸಂಘಟನೆ”ಯ ಅಧ್ಯಕ್ಷೆ. ೮ ಆಗಸ್ಟ್ ೨೦೦೫ರಂದು ಮಂಗಳೂರಿನ ರೋಷನಿ ನಿಲಯದಲ್ಲಿ "ಸುಸ್ಥಿರ ಕೃಷಿ ವಿಚಾರಗೋಷ್ಠಿ”ಯಲ್ಲಿ ಸ್ಲೈಡುಗಳನ್ನು ತೋರಿಸುತ್ತ ಇಂಗ್ಲಿಷಿನಲ್ಲಿ ವಿಷಯ ಮಂಡನೆ ಮಾಡಿದರು. ಮಂಗಳೂರಿನ ಕೃಷಿಕ ಸನ್ನಿ ಡಿಸೋಜಾರಿಂದ ಉಪನ್ಯಾಸದ ಕನ್ನಡ ಭಾಷಾಂತರ. ಸುಮಾರು ಮುನ್ನೂರು ಕೃಷಿಕರು ಮೈಯೆಲ್ಲ ಕಿವಿಯಾಗಿ ಕೇಳಿದರು.

ತಮ್ಮ ಉಪನ್ಯಾಸದ ಆರಂಭದಲ್ಲಿ ರೇವತಿ ಮೂರು ಪ್ರಶ್ನೆ ಕೇಳಿದ್ದರು: ನಿಮ್ಮಲ್ಲಿ ಎಷ್ಟು ಜನ ರೈತರು? ಅವರಲ್ಲಿ ಎಷ್ಟು ಜನ ಸಾಲ ಇಲ್ಲದೆ ಬದುಕುತ್ತಿದ್ದೀರಿ? ಎಷ್ಟು ಜನರ ಕುಟುಂಬದ ಸದಸ್ಯರೆಲ್ಲರೂ ಆರೋಗ್ಯವಂತರಾಗಿ, ರೋಗರಹಿತರಾಗಿ ಇದ್ದಾರೆ? ಅವರ ಮೊದಲ ಪ್ರಶ್ನೆಗೆ ಉತ್ತರವಾಗಿ ಎಲ್ಲರೂ ಕೈ ಎತ್ತಿದ್ದರು. ಆದರೆ, ಎರಡನೇ ಮತ್ತು ಮೂರನೇ ಪ್ರಶ್ನೆಗೆ ಉತ್ತರವಾಗಿ ಮೇಲಕ್ಕೆದ್ದದ್ದು ಕೆಲವೇ ಕೈಗಳು. ಅವರು ಹೇಳಬೇಕಿದ್ದ ವಿಷಯದ ಬಿಸಿ ಆಗಲೇ ಅಲ್ಲಿ ನೆರೆದಿದ್ದವರಿಗೆ ತಟ್ಟಿತ್ತು.

ತನ್ನ ಪ್ರಶ್ನೆಗಳಿಗೆ ಸಭಿಕರ ಪ್ರತಿಕ್ರಿಯೆ ಗಮನಿಸಿದ ರೇವತಿ ಹೇಳಿದರು, “ಇಲ್ಲಿ ಮಾತ್ರವಲ್ಲ, ಪಂಜಾಬ್, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳಿಗೆ ಹೋದರೂ ಇದೇ ಕತೆ ಮತ್ತು ವ್ಯಥೆ. ರೈತರು ಸಾಲ ಮತ್ತು ರೋಗಗಳ ಸುಳಿಗಳಲ್ಲಿ ಸಿಲುಕಿದ್ದಾರೆ."

ಯಾಕೆ ಹೀಗಾಯಿತೆಂದು ರೇವತಿ ವಿವರಿಸಿದರು: "ನಮ್ಮ ದೇಶದಲ್ಲಿ ೧೦,೦೦೦ ವರುಷಗಳಿಂದ ಕೃಷಿ ಮಾಡುತ್ತಿದ್ದೇವೆ. ಆದರೆ ಶತಮಾನಗಳ ಅನುಭವದ ಪಾಠಗಳನ್ನು ನಾವು ಕಳೆದ ಐವತ್ತು ವರುಷಗಳಲ್ಲಿ ಮರೆತಿದ್ದೇವೆ. ಉದಾಹರಣೆಗೆ ಐವತ್ತು ವರುಷಗಳ ಮುಂಚೆ ಪೀಡೆ ಹತೋಟಿಗೆ ನಾವು ಏನು ಬಳಸುತ್ತಿದ್ದೆವು? ಹಸುರುಬೇಲಿ ಮತ್ತು ಇಲಿಬೋನು ಮಾತ್ರ. ಈಗ ಬಹುರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುವ ಹಲವಾರು ವಿಷರಾಸಾಯನಿಕಗಳನ್ನು ಕೃಷಿಗೆ ಬಳಸಿ ಈ ದುಸ್ಥಿತಿಗೆ ಬಂದಿದ್ದೇವೆ.

ಆದ್ದರಿಂದ, ನಾವೆಲ್ಲರೂ ನಮ್ಮ ಪಾರಂಪರಿಕ ಸುಸ್ಥಿರ ಕೃಷಿಯ ಪಾಠಗಳನ್ನು ಹೊಸತಾಗಿ ಕಲಿಯಬೇಕಾಗಿದೆ. ಸಾವಯವ ಕೃಷಿ ಶುರು ಮಾಡುವ ಮುಂಚೆ ನಾನೊಂದು ಕಬ್ಬಿನ ಹೊಲಕ್ಕೆ ಹೋಗಿದ್ದೆ. ಅದು ಮಹಿಳೆಯೊಬ್ಬಳ ಹೊಲ. ಅವಳು ಪಡೆಯುತ್ತಿದ್ದ ಇಳುವರಿ ಎಕ್ರೆಗೆ ೭೦ ಟನ್. ಅದು ದಾಖಲೆ ಇಳುವರಿ. ತಿಂಗಳಿಗೆ ಎಷ್ಟು ಸಲ ಹೊಲಕ್ಕೆ ನೀರು ಬಿಡುತ್ತೀರಿ? ಎಂಬ ಪ್ರಶ್ನೆಗೆ ಅವಳ ಉತ್ತರ, ಒಂದೇ ಸಲ ಎಂಬುದಾಗಿ! ತನ್ನ ಹೊಲದಲ್ಲಿ ಎಕ್ರೆಗೆ ಐದು ಟನ್ ಕಬ್ಬಿನ ಎಲೆ ಸಿಗುತ್ತದೆ. ಅದನ್ನು ಸುಡೋದಿಲ್ಲ. ಬದಲಾಗಿ ಸಸಿಗಳ ಬುಡಕ್ಕೆ ಮುಚ್ಚಿಗೆ ಹಾಕ್ತೇನೆ; ಹಾಗಾಗಿ ತಿಂಗಳಿಗೊಮ್ಮೆ ನೀರು ಬಿಟ್ಟರೆ ಸಾಕು ಎಂಬ ವಿವರಣೆ ಅವಳಿಂದ."

ಕಬ್ಬಿನ ಬೆಳೆಗೆ ರಾಸಾಯನಿಕ ಗೊಬ್ಬರ ಹಾಕ್ತೀರಾ? ಎಂದು ಕೇಳಿದಾಗ, “ಇಲ್ಲವೇ ಇಲ್ಲ. ಆದರೆ ಲಕ್ಷಗಟ್ಟಲೆ ಆಳುಗಳು ಗೊಬ್ಬರ ಕೊಡ್ತಿದ್ದಾರೆ” ಎಂದಳು. ನಾನು ಆಶ್ಚರ್ಯದಿಂದ ಕಣ್‌ಕಣ್ ಬಿಟ್ಟಾಗ, “ಇಲ್ಲಿದ್ದಾರೆ ನೋಡಿ” ಎನ್ನುತ್ತಾ ಹೊಲದ ಮುಚ್ಚಿಗೆಯ ಕೆಳಗಿನ ಮಣ್ಣು ಕೆದಕಿ ತೋರಿಸಿದಳು. ಅಲ್ಲಿದ್ದವು ನೂರಾರು ಎರೆಹುಳಗಳು.”

"ಹಳ್ಳಿಯ ಆ ಹೆಣ್ಣು ಮಗಳಿಂದ ನಾವಿಂದು ಪಾಠ ಕಲಿಯಬೇಕಾಗಿದೆ” ಎನ್ನುತ್ತಾ ಶ್ರೀಮತಿ ರೇವತಿ ಮಾತು ಮುಗಿಸಿದರು. ಅಲ್ಲಿ ನೆರೆದಿದ್ದ ಕೃಷಿಕರ ಮನಗಳಲ್ಲಿ ಅದಾಗಲೇ ಸುಸ್ಥಿರ ಕೃಷಿಯ ಚಿಂತನೆಯ ಬೀಜ ಮೊಳೆಯುತ್ತಿತ್ತು.