ಮಣ್ಣಿನಿಂದ ಮರಳು ತೆಗೆಯುವ ದಂಧೆ

ಮಣ್ಣಿನಿಂದ ಮರಳು ತೆಗೆಯುವ ದಂಧೆ

ಮಣ್ಣಿನಿಂದ ಮರಳು ತೆಗೆದು ಮಾರುವುದೇ? ಹೌದು, ಬೆಂಗಳೂರಿನ ಆಸುಪಾಸಿನಲ್ಲಿ ಬಿರುಸಿನಿಂದ ನಡೆಯುತ್ತಿದೆ, ಈ ದಂಧೆ.

ಮಣ್ಣು ಅಗೆದು, ತೊಳೆದು, ಜರಡಿ ಹಿಡಿದಾಗ ಸಿಗುವ ಮರಳನ್ನು ಲಾರಿಗಳಲ್ಲಿ ಬೆಂಗಳೂರಿಗೆ ಸಾಗಿಸಿ ಮಾರುತ್ತಿದ್ದಾರೆ ರೈತರು. ಕೃಷಿಯಲ್ಲಿ ಬರುವ ಲಾಭಕ್ಕಿಂತ ಅಧಿಕ ಲಾಭ ಈ ದಂಧೆಯಲ್ಲಿದೆ. ಬೆಂಗಳೂರಿನಲ್ಲಂತೂ ಮರಳಿಗೆ(ಹೊಯಿಗೆ) ಭಾರೀ ಬೇಡಿಕೆ. ಅಲ್ಲಿಯ ಕಟ್ಟಡ ಹಾಗೂ ಕಾಂಕ್ರೀಟ್ ರಸ್ತೆ, ಫ್ಲೈ ಓವರುಗಳ ನಿರ್ಮಾಣ ಕಾಮಗಾರಿಗಳಿಗೆ ನದಿ ತಳದಿಂದ ಲಾರಿಗಳಲ್ಲಿ ತರುವ ಮರಳು ಏನೂ ಸಾಲದು. ಹಾಗಾಗಿ ಮಣ್ಣಿನಿಂದ ತೊಳೆದು ಬೇರ್ಪಡಿಸಿದ ಮರಳಿಗೆ ಭಾರೀ ಬೇಡಿಕೆ.

ಕಳೆದ ಕೆಲವು ವರುಷಗಳಲ್ಲಿ ಜೋರಾಗಿ ಬೆಳೆದಿದೆ ಈ ವ್ಯವಹಾರ. ಕೃಷಿ ಜಮೀನಿನಿಂದ, ಕೆರೆಗಳ ತಳದಿಂದ ಮತ್ತು ಗೋಮಾಳ ಇತ್ಯಾದಿ ಸಮುದಾಯ ಜಾಗದಿಂದ ಮೇಲ್ಮಣ್ಣು ಅಗೆದು, ನೀರಿನಿಂದ ತೊಳೆದು, ಜರಡಿಯಿಂದ ಜಾಲಿಸಿ ಮರಳು ತೆಗೆಯುತ್ತಿದ್ದಾರೆ ರೈತರು. ಬೆಂಗಳೂರಿನ ದಿನದಿನದ ಒಟ್ಟು ಬೇಡಿಕೆಯ ಮರಳಿನಲ್ಲಿ ಶೇಕಡಾ 75 ನದಿತಳದಿಂದ ಸರಬರಾಜು, ಉಳಿದ ಶೇಕಡಾ 25 ಮಣ್ಣಿನಿಂದ ಬೇರ್ಪಡಿಸಿದ ಮರಳಿನ ಸರಬರಾಜು. ಪ್ರತಿ ದಿನ ಮಹಾನಗರ ಬೆಂಗಳೂರಿನ ಕಾಮಗಾರಿಗಳಿಗೆ ಸರಬರಾಜಾಗುವ ಮಣ್ಣಿನಿಂದ ತೆಗೆದ ಮರಳಿನ ಪರಿಮಾಣ 4,000 ಟ್ರಕ್ ಲೋಡುಗಳು.

ರೈತರಿಗೆ ತಕ್ಷಣದಲ್ಲಿ ಇದರಿಂದಾಗಿ ಮಣ್ಣಿನ ಉತ್ಪಾದಕತೆಯಲ್ಲಿ ಶೇಕಡಾ 10ರಿಂದ 50 ನಷ್ಟ. ಅಂದರೆ ಹೀಗೆ ಮರಳು ತೆಗೆದ ಜಮೀನಿನಲ್ಲಿ ಮುಂದಿನ ವರುಷಗಳಲ್ಲಿ ಬೆಳೆ ಬೆಳೆಸಿದಾಗ ಇಷ್ಟರ ಮಟ್ಟಿಗೆ ಇಳುವರಿ ಕುಸಿತ. ಮಣ್ಣು ಸುಧಾರಣೆಯಾಗಿ, ಮುಂಚಿನ ಪ್ರಮಾಣದಲ್ಲಿ ಇಳುವರಿ ಸಿಗಲು 8ರಿಂದ 10 ವರುಷ ತಗಲುತ್ತದೆ. ಇದು ವೈಜ್ನಾನಿಕ ಅಧ್ಯಯನವೊಂದರ ಸಾರಾಂಶ. ಬೆಂಗಳೂರಿನ ನ್ಯಾಷನಲ್ ಬ್ಯುರೋ ಆಫ್ ಸಾಯಿಲ್ ಸರ್ವೆ ಆಂಡ್ ಲ್ಯಾಂಡ್ ಯೂಸ್ ಪ್ಲಾನಿಂಗ್ ಸಂಸ್ಥೆಯ ಐವರು ತಜ್ನರು ನಡೆಸಿದ ಈ ಅಧ್ಯಯನದ ವರದಿ 25 ಜುಲಾಯಿ 2008ರ “ಕರೆಂಟ್ ಸೈನ್ಸ್” ಪತ್ರಿಕೆಯಲ್ಲಿ ಪ್ರಕಟ. ಅಧ್ಯಯನದ ಶೀರ್ಷಿಕೆ: “ಬೆಂಗಳೂರಿನ ಸುತ್ತಲಿನ ಕೃಷಿ ಜಮೀನುಗಳಿಂದ ಮರಳು ತೆಗೆಯುವುದು: ಇಕಾಲಜಿಕಲ್ ವಿನಾಶ ಅಥವಾ ಆರ್ಥಿಕ ವರದಾನ?”

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಕಾರಹಳ್ಳಿ ಮತ್ತು ಮಾರಸಂದ್ರ ಗ್ರಾಮಗಳಿಗೆ ಹೋಗಿ ನೋಡಿದರೆ ಆಗಿರುವ ಅನಾಹುತ ಅರಿವಾಗುತ್ತದೆ. ಅಲ್ಲಿನ ರಾಗಿ ಹೊಲಗಳಲ್ಲಿ ಮತ್ತು ತೆಂಗಿನ ತೋಟಗಳಲ್ಲಿ ಅಲ್ಲಲ್ಲಿ ದೊಡ್ಡ ಹೊಂಡಗಳಿವೆ. ಇವೇ ಮಣ್ಣಿನಿಂದ ಮರಳು ಬೇರ್ಪಡಿಸುವ ಘಟಕಗಳು. ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ರಾಮನಗರಗಳಲ್ಲಿಯೂ ಇಂತಹ ಘಟಕಗಳನ್ನು ಕಾಣಬಹುದು. ಈ ಆಯತಾಕಾರದ ಹೊಂಡಗಳು ಒಂದು ದಿಕ್ಕಿಗೆ ಇಳಿಜಾರಾಗಿರುತ್ತವೆ. ಮಣ್ಣು ತೊಳೆದಾಗ ಸಿಗುವ ಕೆಸರು ಆ ದಿಕ್ಕಿಗೆ ಹರಿದು ಶೇಖರವಾಗುತ್ತದೆ. ಮೇಲ್ಮಣ್ಣು ಅಗೆದು, "ತೊಳೆಯುವ ಹೊಂಡ"ದಲ್ಲಿ ಪೇರಿಸುತ್ತಾರೆ.

ಆ ಮೇಲ್ಮಣ್ಣು ತೊಳೆಯುವುದು ಬೋರ್-ವೆಲ್ಲಿನ ನೀರಿನಿಂದ. ಅದಕ್ಕಾಗಿ ಬೋರ್-ವೆಲ್ ಪಕ್ಕದಲ್ಲೇ ಈ ತೊಳೆಯುವ ಹೊಂಡಗಳ ನಿರ್ಮಾಣ. ಅಧ್ಯಯನದ ಪ್ರಕಾರ, ಒಂದು ಟ್ರಕ್ ಲೋಡ್ ಮರಳು ತೊಳೆಯಲಿಕ್ಕಾಗಿ 1,32,000 ಲೀಟರ್ ನೀರು ಬೇಕು. ಇದರಂತೆ ಲೆಕ್ಕಾಚಾರ ಮಾಡಿದಾಗ, ಮಣ್ಣಿನಿಂದ ಮರಳು ಬೇರ್ಪಡಿಸಲಿಕ್ಕಾಗಿ ಈ ದಂಧೆಗೆ ವಾರ್ಷಿಕ ಸುಮಾರು ಎಂಟು ಮಿಲಿಯ ಲೀಟರ್ ನೀರು ಅಗತ್ಯ. ಇದೆಲ್ಲವೂ ಅಂತರ್ಜಲ. ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಈಗಾಗಲೇ ಕುಸಿದಿದ್ದು, ತೆರೆದ ಬಾವಿಗಳೆಲ್ಲ ನೀರಿನ ಒಸರಿಲ್ಲದೆ ಬತ್ತಿ ಹೋಗಿವೆ.

ಕಾರಹಳ್ಳಿಯ ರೈತ ಎಸ್. ಕೃಷ್ಣಪ್ಪ ಅವರಿಗೆ ಒಂದು ಟ್ರಕ್ ಲೋಡ್ (ಮಣ್ಣಿನಿಂದ ಬೇರ್ಪಡಿಸಿದ) ಮರಳಿಗೆ ಸಿಗುವ ದರ
ರೂ.1,500. ಪ್ರತಿ ದಿನ ಅವರ ಜಮೀನಿನಿಂದ ಎರಡು ಲೋಡ್ ಮರಳು ಹೋಗುತ್ತದೆ. “ಬೆಂಗಳೂರಿನಲ್ಲಿ ಮರಳಿನ ಕೊರತೆ. ಅಲ್ಲಿ ಮಣ್ಣಿಗಿಂತ ಸುಲಭವಾಗಿ ಚಿನ್ನ ಖರೀದಿಸಬಹುದು” ಎಂಬ ಕೃಷ್ಣಪ್ಪರ ಮಾತು ಮಾರ್ಮಿಕ. ಮರಳು ಸಾಗಾಟಕ್ಕೆ ಅವರಿಗೆ ಅವರದ್ದೇ ಟ್ರಕ್‌ಗಳಿವೆ. ಅವರಂತೆ ಸ್ವಂತ ಟ್ರಕ್‌ಗಳಿಲ್ಲದ ಬಡ ರೈತರು ಒಂದು ಟ್ರಾಕ್ಟರ್ ಟ್ರಾಲಿ ಲೋಡಿಗೆ ಕೇವಲ ರೂ.50 ದರದಲ್ಲಿ ಮಣ್ಣು ಮಾರುತ್ತಾರೆ ಅಥವಾ ಮರಳು ಬೇರ್ಪಡಿಸುವ ಘಟಕಗಳಲ್ಲಿ ಕೂಲಿಗಳಾಗಿ ದುಡಿಯುತ್ತಾರೆ.
ಒಂದು ವರುಷದ ಮುನ್ನ, ಪೊಲೀಸರು ಮತ್ತು ಗಣಿ ಹಾಗೂ ಭೂವಿಜ್ನಾನ ಇಲಾಖೆಯ ಅಧಿಕಾರಿಗಳಿಂದ ಕೃಷಿ ಜಮೀನಿನ ಮಣ್ಣಿನಿಂದ ಮರಳು ಬೇರ್ಪಡಿಸುವ ಘಟಕಗಳಿಗೆ ದಾಳಿ. ಕಾನೂನು ಉಲ್ಲಂಘಿಸಿದ್ದಕ್ಕಾಗಿ 44 ಪ್ರಕರಣಗಳ ದಾಖಲು. ಯಾಕೆಂದರೆ, ಆ ಇಲಾಖೆ ಗುರುತಿಸಿದ ತಾಲೂಕುಗಳಲ್ಲಿ ಮಾತ್ರ ನದಿ ತಳದಿಂದ ಮರಳು ತೆಗೆಯಲು ಪರವಾನಗಿ ನೀಡಲಾಗುತ್ತದೆ (ಅಂದರೆ, ಕೃಷಿ ಜಮೀನಿನ ಮೇಲ್ಮಣ್ಣಿನಿಂದ ಮರಳು ಬೇರ್ಪಡಿಸುವುದು ಕಾನೂನಿನ ಉಲ್ಲಂಘನೆ). ಅನಂತರ ಪೊಲೀಸರು ಅಥವಾ ಇಲಾಖೆ ಈ ದಂಧೆಯ ನಿರ್ಬಂಧಕ್ಕೆ ಕಠಿಣ ಕ್ರಮ ಕೈಗೊಂಡಿಲ್ಲ.

"ನದಿ ತಳದಿಂದ ಪರವಾನಗಿಯಿಲ್ಲದೆ ಮರಳು ತೆಗೆಯುವ ಬಗ್ಗೆ ಮತ್ತು ಬೆಂಗಳೂರಿನ ಸುತ್ತಲೂ ಮೇಲ್ಮಣ್ಣಿನಿಂದ ಮರಳು ಬೇರ್ಪಡಿಸಿ ಮಾರುವ ಬಗ್ಗೆ ನಮಗೆ ವರದಿಗಳು ಬರುತ್ತಿವೆ" ಎನ್ನುತಾರೆ ಕರ್ನಾಟಕದ(ಆಗಿನ) ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ.

ಪ್ರಕೃತಿ ನಮಗಿತ್ತ ಕೊಡುಗೆ ಮಣ್ಣು. ಪ್ರಕೃತಿಯಲ್ಲಿ ಸುಮಾರು ಐದು ಸಾವಿರ ವರುಷಗಳ ಪ್ರಕ್ರಿಯೆಯ ಫಲವಾಗಿ ನಮಗೆ ಸಿಗುವ ಪ್ರಸಾದ ಮೇಲ್ಮಣ್ಣು. ಎಲ್ಲ ಬೆಳೆಗಳಿಗೂ ಆಸರೆ ಮೇಲ್ಮಣ್ಣು. ಅಂದರೆ ಮಾನವಕುಲದ ಉಳಿವೆಗೆ ಬೇಕೇಬೇಕು ಮೇಲ್ಮಣ್ಣು. ಆದ್ದರಿಂದಲೇ ಕೊಯಂಬತ್ತೂರಿನ ಈಶಾ ಪ್ರತಿಷ್ಠಾನದ ಸದ್ಗುರು, ಮಣ್ಣು ಉಳಿಸುವ ಬಗ್ಗೆ ಜನಜಾಗೃತಿ ಮೂಡಿಸಲಿಕ್ಕಾಗಿ 2022ರ ಆರಂಭದಲ್ಲಿ 100 ದಿನಗಳ “ಮಣ್ಣು ಉಳಿಸಿ” (ಸೇವ್ ಸೊಯಿಲ್) ಆಂದೋಲನ ಕೈಗೊಂಡರು.

ಹಣದಾಸೆಯಿಂದ ಮೇಲ್ಮಣ್ಣು ಕಳೆದುಕೊಂಡರೆ, ಮುಂದೆ ದೊಡ್ಡ ಬೆಲೆ ತೆರಬೇಕಾದೀತು. ಯಾಕೆಂದರೆ, ಮಣ್ಣಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ಫಸಲಿಲ್ಲ, ಫಸಲಿಲ್ಲದೆ ಆಹಾರವಿಲ್ಲ.

ಫೋಟೋ: ಮಣ್ಣೆಂಬ ಚಿನ್ನ  … ಕೃಪೆ: ದಸ್ಪ್ರುಸ್.ಕೋಮ್