ಮಣ್ಣಿನ ಫಲವತ್ತತೆಯನ್ನು ಉಳಿಸೋಣ ಬನ್ನಿ..!

ಮಣ್ಣಿನ ಫಲವತ್ತತೆಯನ್ನು ಉಳಿಸೋಣ ಬನ್ನಿ..!

ಡಿಸೆಂಬರ್ ೫ ವಿಶ್ವ ಮಣ್ಣಿನ ದಿನ. ೨೦೦೨ನೇ ಇಸವಿಯಲ್ಲಿ ಇಂಟರ್ ನ್ಯಾಷನಲ್ ಯೂನಿಯನ್ ಆಫ್  ಸಾಯಿಲ್ (ಮಣ್ಣು) ಸೈನ್ ಎಂಬ ಸಂಸ್ಥೆಯು ಮೊತ್ತ ಮೊದಲಿಗೆ ಮಣ್ಣಿನ ದಿನವನ್ನು ಆಚರಿಸಿತು. ನಂತರದ ದಿನಗಳಲ್ಲಿ ಮಣ್ಣಿನ ಮೇಲೆ ರಾಸಾಯನಿಕಗಳ, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳ ಹಾವಳಿಗಳನ್ನು ಗಮನಿಸಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ೨೦೧೪ರಲ್ಲಿ ವಿಶ್ವ ಸಂಸ್ಥೆಯು ಡಿಸೆಂಬರ್ ೫ ನ್ನು ಅಧಿಕೃತವಾಗಿ ಮಣ್ಣಿನ ದಿನವೆಂದು ಘೋಷಣೆ ಮಾಡಿತು. ಪ್ರಸಕ್ತ ವರ್ಷವನ್ನು ‘ಮಣ್ಣಿನ ಜೀವ ವೈವಿಧ್ಯತೆಯನ್ನು ರಕ್ಷಿಸಿ' ಎಂಬ ಧ್ಯೇಯವಾಕ್ಯವನನ್ನು ಮುಂದಿಟ್ಟು ಮಣ್ಣಿನ ದಿನವನ್ನು ಆಚರಿಸಲಾಗಿತ್ತಿದೆ.

ಮಣ್ಣು ಸಕಲ ಜೀವರಾಶಿಗಳಿಗೆ ಜೀವವನ್ನು ಕೊಡುವ ಅಮೃತ. ನಮ್ಮ ಬದುಕಿಗೆ ನೀರು ಹೇಗೆ ಅನಿವಾರ್ಯವೋ, ಫಲವತ್ತಾದ ಮಣ್ಣೂ ಅತೀ ಮುಖ್ಯ. ಸಾರವಿಲ್ಲದ ಮಣ್ಣು ಯಾವುದಕ್ಕೂ ಪ್ರಯೋಜನವಿಲ್ಲ. ಮಣ್ಣಿನಲ್ಲಿ ಜೀವಾಂಶಗಳು ಇಲ್ಲದೇ ಹೋದರೆ ಅದರಲ್ಲಿ ಯಾವ ಬೆಳೆಯೂ ಬೆಳೆಯುವುದಿಲ್ಲ. ಬೆಳೆ ಬೆಳೆಯದೇ ಇದ್ದರೆ ಅದನ್ನು ನಂಬಿರುವ ಪ್ರಾಣಿ, ಪಕ್ಷಿಗಳೂ ಬದುಕುವುದಿಲ್ಲ. ಇದರಿಂದ ಸಕಲ ಜೀವ ನಷ್ಟ ಸಂಭವಿಸುತ್ತದೆ. ನಾವಿಂದು ಮಣ್ಣಿನ ಮೇಲೆ ವಿಪರೀತ ಆಕ್ರಮಣವನ್ನು ಮಾಡುತ್ತಿದ್ದೇವೆ. ಫಲವತ್ತಾದ ಮಣ್ಣು ಹೊಂದಿರುವ ಜಮೀನಿಗೆ ರಾಸಾಯನಿಕಗಳನ್ನು ಸುರಿದು ಅದನ್ನು ಬಂಜರು ಮಾಡುತ್ತಿದ್ದೇವೆ. ಫಲವತ್ತಾದ ಮಣ್ಣು ಜೀವ ಕಳೆದುಕೊಳ್ಳುತ್ತಿದೆ. ಅದರ ಬದಲಾಗಿ ನಾವು ಸಾವಯವ ಗೊಬ್ಬರಗಳನ್ನು ಬಳಸಿದರೆ ಮಣ್ಣಿಗೆ ಅಪಾಯವಿಲ್ಲ. ಮಣ್ಣನ್ನೇ ನಂಬಿ ಬದುಕುವ ರೈತ ಮಿತ್ರ ಎರೆಹುಳುಗಳೂ ಬದುಕುತ್ತವೆ. ಇದರಿಂದ ಮಣ್ಣಿನ ಆರೋಗ್ಯವೂ ಸರಿಯಾಗಿರುತ್ತದೆ. ರಾಸಾಯನಿಕಗಳ ಯಥೇಚ್ಛ ಬಳಕೆಯಿಂದ ಮಣ್ಣಿನಲ್ಲಿರುವ ಉಪಕಾರೀ ಸೂಕ್ಷ್ಮ ಜೀವಿಗಳು ಸಾಯುತ್ತಿವೆ. ಭೂಮಿಗೆ ಎರೆಗೊಬ್ಬರ, ಜೈವಿಕ ಗೊಬ್ಬರ, ಪ್ರಾಣಿಗಳ ಮಲ ಮೂತ್ರ, ಮೀನಿನ ಹುಡಿ, ಕಾಂಪೋಸ್ಟ್ ಮೊದಲಾದುವುಗಳನ್ನು ಬಳಸಿದರೆ ನಮ್ಮ ಮಣ್ಣೂ ಚೆನ್ನಾಗಿರುತ್ತದೆ, ಬೆಳೆಯೂ ಸೊಗಸಾಗಿ ಬರುತ್ತದೆ. 

ಇನ್ನು ಮುಂದಾದರೂ ನಾವು ಬದುಕುವ ಭೂಮಿಯನ್ನು ಉಳಿಸುವ ನಿರ್ಧಾರ ಮಾಡೋಣ. ಪ್ಲಾಸ್ಟಿಕ್ ಉಪಯೋಗವನ್ನು ಕಮ್ಮಿ ಮಾಡೋಣ, ರಾಸಾಯನಿಕಗಳ ಬಳಕೆಯನ್ನು ತೀರಾ ಅವಶ್ಯಕವಾದಲ್ಲಿ ಮಾತ್ರ ಮಾಡೋಣ. ಮಣ್ಣು ಉಳಿದರೆ ನಾವು ಉಳಿದೇವು. ಆದುದರಿಂದ ಮಣ್ಣಿನ ದಿನದಂದು ಮಣ್ಣನ್ನು ಉಳಿಸುವ ಪಣ ತೊಡೋಣ.

ಚಿತ್ರ ಕೃಪೆ: ಅಂತರ್ಜಾಲ ತಾಣ