ಮಣ್ಣಿನ ಮಕ್ಕಳ ಸದ್ದಿಲ್ಲದ ಸಾಧನೆ

ಮಣ್ಣಿನ ಮಕ್ಕಳ ಸದ್ದಿಲ್ಲದ ಸಾಧನೆ

ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆ ಬಿಟ್ಟ ಥಾಕರ್ಸಿ ಸವಲಿಯಾ, ಅನಂತರ ಕಲಿತದ್ದು ಪ್ರಕೃತಿಯ ಮಡಿಲಲ್ಲಿ. ತನ್ನ ತಂದೆಯ ಹಾದಿಯಲ್ಲಿ ಮುನ್ನಡೆದ ಅವರಿಗೆ ಎಪ್ಪತ್ತರ ಹರೆಯದಲ್ಲಿ ಹೊಸ ತಳಿಯೊಂದರ ಅನ್ವೇಷಕ ಎಂಬ ಗೌರವ. ಅದುವೇ "ಮೊರಾಲೊ" ನೆಲಗಡಲೆ ತಳಿ.

ಮೊರಾಲೊ (ಅಂದರೆ ನವಿಲು) ನೆಲಗಡಲೆ ತಳಿ ಅದರ ಸಿಹಿರುಚಿ, ಉತ್ತಮ ಇಳುವರಿ ಹಾಗೂ “ಟಿಕ್ಕಾ" ರೋಗನಿರೋಧ ಗುಣಗಳಿಂದಾಗಿ ಜನಪ್ರಿಯ. 1988ರ ಒಂದು ದಿನ ತನ್ನ ಮಗ ನಿತಿನ್ ಜೊತೆ ಥಾಕರ್ಸಿ ಹೊಲದಲ್ಲಿ ಕಳೆ ಕೀಳುತ್ತಿದ್ದರು. ಆಗ ಎರಡು ವಿಶಿಷ್ಟ ನೆಲಗಡಲೆ ಸಸಿಗಳನ್ನು ಗಮನಿಸಿದರು. ಇತರ ಸಸಿಗಳ ಎಲೆಗಳಿಗಿಂತ ಜಾಸ್ತಿ ಹಸುರಾಗಿದ್ದ ಅವುಗಳ ಎಲೆಗಳ ದಪ್ಪವೂ ಜಾಸ್ತಿ. ಅವುಗಳಲ್ಲಿದ್ದ ಹೂಗಳು ಮತ್ತು ಕಾಯಿಗಳ ಸಂಖ್ಯೆಯೂ ಅಧಿಕ. ಅವನ್ನು ಗುರುತಿಸಿಟ್ಟು, ಬೀಜಕ್ಕಾಗಿ ಆ ಸಸಿಗಳನ್ನು ಕಾಪಾಡಿದರು. ಪ್ರತಿ ವರುಷವೂ ಅವುಗಳ ಬೀಜಗಳಿಂದ ಪ್ರತ್ಯೇಕವಾಗಿ ಸಸಿ ಬೆಳೆಸಿ ಪರೀಕ್ಷಿಸಿದರು. ಅವು ಇತರ ಸಸಿಗಳಿಗಿಂದ ಒಂದು ತಿಂಗಳು ಮುಂಚಿತವಾಗಿ ಅಂದರೆ 90 ದಿನಗಳಲ್ಲಿ ಕೊಯ್ಲಿಗೆ ತಯಾರಾಗುತ್ತಿದ್ದದ್ದು ವಿಶೇಷ. ಅವುಗಳ ಕಾಯಿಗಳು ನವಿಲಿನ ಆಕಾರದಲ್ಲಿದ್ದ ಕಾರಣ, ಆ ತಳಿಗೆ “ಮೊರೊಲೊ" ಎಂದು ಹೆಸರಿಟ್ಟು ಪ್ರಚಾರ ಮಾಡಿದರು.

ಮನಾರಾಮ್ ಚೌಧರಿ ಅವರು ವಯೋವೃದ್ಧರು. ಕೃಷಿಯೇ ಅವರ ಬದುಕು. ಕಳೆದ ಹಲವು ದಶಕಗಳಿಂದ ಈರುಳ್ಳಿ ಅವರ ಪ್ರಧಾನ ಬೆಳೆ.

ಸಿಕಾರ್ ಪ್ರದೇಶದಲ್ಲಿ ನೀರಿಗೆ ತತ್ವಾರ. ಇದುವೇ ಕಡಿಮೆ ನೀರುಣಿಸಿ ಬೆಳೆಯಬಹುದಾದ ಈರುಳ್ಳಿ ತಳಿ ಅಭಿವೃದ್ಧಿ ಪಡಿಸಲು ಮನಾರಾಮ್ ಚೌಧರಿ ಅವರಿಗೆ ಪ್ರೇರಣೆ. ಅವರ ನಿರಂತರ ಪ್ರಯೋಗದ ಫಲ ಹೊಸ ಈರುಳ್ಳಿ ತಳಿಯ ಅನ್ವೇಷಣೆ. ಅದೀಗ ಹರಿಯಾಣ, ಢೆಲ್ಲಿ ಮತ್ತು ರಾಜಸ್ಥಾನ ರಾಜ್ಯಗಳ ಕೃಷಿಕರ ಮನಗೆದ್ದ ತಳಿ. ಅಧಿಕ ಇಳುವರಿ, ಬೇಗನೇ ಕೊಯ್ಲಿಗೆ ಬರುವುದು ಮತ್ತು ಬರನಿರೋಧಕತೆ ಅದರ ವಿಶೇಷ ಗುಣಗಳು. ಸಿಹಿರುಚಿಯ ಈ ತಳಿಯ ಹೆಸರು “ರಶಿದ್‌ಪುರ.”

ಸಬು ವರ್ಗೀಸ್ ಹಲವು ಬೆಳೆ ಬೆಳೆಸುವ ಅನುಭವಿ ಕೃಷಿಕ. ಅವರ ಐದೆಕ್ರೆ ತೋಟದಲ್ಲಿ ಏಲಕ್ಕಿ, ಕರಿಮೆಣಸು, ರಬ್ಬರ್, ಲವಂಗ, ವೆನಿಲ್ಲಾ, ತೆಂಗು, ಬಾಳೆಗಿಡಗಳ ಸಮೃದ್ಧಿ.

ಏಲಕ್ಕಿ ಗಿಡಗಳ ಒಡನಾಟದಲ್ಲಿ ಅವರ ಗಮನ ಸೆಳೆಯಿತು ಒಂದು ವಿಶೇಷ ಗಿಡ. ಹೆಚ್ಚು ಎತ್ತರವಾಗಿದ್ದ ಆ ಗಿಡದಲ್ಲಿ ಹಲವಾರು ಪುಳ್ಳೆಗಳು. ಅದರ ಏಲಕ್ಕಿ ಕಾಯಿಗಳು ಇತರ ಗಿಡಗಳ ಕಾಯಿಗಳಿಗಿಂತ ದೊಡ್ಡವು. ಅದರ ಹಣ್ಣಾದ ಕಾಯಿಗಳನ್ನು ಜೋಪಾನ ಮಾಡಿ, ಬಿತ್ತಿ, ಹೊಸ ಸಸಿಗಳನ್ನು ಅವರು ಬೆಳೆಸಿದ್ದು 1992ರಲ್ಲಿ. ಈ ಸಸಿಗಳು ಪುಷ್ಟಿಯಾಗಿ ಬೆಳೆದಾಗ ಸಿಕ್ಕಿದ್ದೂ ದೊಡ್ಡ ಕಾಯಿಗಳ ಫಸಲು. ಹೀಗೆ ಗುರುತಿಸಲ್ಪಟ್ಟ ಹೊಸ ತಳಿಯ ಸಸಿಗಳನ್ನು ತಮಿಳುನಾಡು ಮತ್ತು ಕರ್ನಾಟಕದ ರೈತರಿಗೆ ಸಬು ವರ್ಗೀಸ್ ಒದಗಿಸಿದ್ದಾರೆ - ಒಂದೆರಡಲ್ಲ, 50,000 ಸಸಿಗಳನ್ನು.

ಕೆ.ಜೆ. ಬೇಬಿ ಅವರ 20 ಎಕ್ರೆಗಳ ತೋಟದ ತುಂಬ ಏಲಕ್ಕಿ ಸಸಿಗಳು. 66 ವರುಷ ವಯಸ್ಸಿನ ಬೇಬಿಯವರದ್ದೂ ಅನ್ವೇಷಕ ಪ್ರವೃತ್ತಿ. ಹೆಂಡತಿ, ಮಗಳು ಮತ್ತು ಮೂವರು ಮಗಂದಿರಿಂದ ಇವರ ಅನ್ವೇಷಣೆಗಳಿಗೆ ಸಹಾಯ.

ಇವರು ಅಭಿವೃದ್ಧಿ ಪಡಿಸಿರುವುದು ಬಿಳಿ ಹೂ ಬಿಡುವ ಏಲಕ್ಕಿ ತಳಿಯನ್ನು. ಸ್ಥಳೀಯ ಜನಪ್ರಿಯ ತಳಿಗಳಿಗೆ ಹೋಲಿಸಿದಾಗ ಈ ತಳಿಯ ಇಳುವರಿ ಮತ್ತು ತೈಲಾಂಶ ಅಧಿಕ. ಜೌಗುಮಣ್ಣಿನಲ್ಲಿ ಹಾಗೂ ನೆರಳಿನ ಜಾಗದಲ್ಲಿಯೂ ಇದನ್ನು ಬೆಳೆಸಬಹುದು. ಪುಷ್ಟ ಪುಳ್ಳೆಗಳು ಹಾಗೂ ಆಳವಾದ ಬೇರುಗಳು ಇದರ ವಿಶೇಷತೆ. ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯು ಬೇಬಿ ಅವರ ತಳಿಸಂಕರ ಕೌಶಲ್ಯಕ್ಕೆ ಮನ್ನಣೆ ನೀಡಿದೆ. ಈ ತಳಿಯನ್ನು ಕೇರಳ, ಕರ್ನಾಟಕ ಮತ್ತು ತಮಿಳ್ನಾಡು ರಾಜ್ಯಗಳ ನೂರಾರು ರೈತರು ಬೆಳೆಯುತ್ತಿದ್ದಾರೆ.

ಕೇರಳದ ಪಾಪಚ್ಚನ್ ಸೋಲಿಗೆ ಮಣಿಯದ ವ್ಯಕ್ತಿ. ಅಲ್ಲಿನ ಚಕತಬಾರ್ ಗ್ರಾಮದಲ್ಲಿ ತನ್ನ ಪೂರ್ವಿಕರ ಜಮೀನಿನಲ್ಲಿ ನೆಲೆಸಿದ್ದ ಅವರು ಊರು ಬಿಟ್ಟು ಹೋಗಬೇಕಾಯಿತು - ಬೆಳೆಗಳಿಗೆ ತಗಲಿದ ರೂಟ್-ಬ್ಲೈಟ್ ರೋಗದ ದೆಸೆಯಿಂದಾಗಿ.

ಅನಂತರ ಹೊಸ ಜಾಗದಲ್ಲಿ ನೆಲೆಸಿದ ಪಾಪಚ್ಚನ್ ಅಲ್ಲಿ ಕರಿಮೆಣಸು ಮತ್ತು ರಬ್ಬರ್ ತೋಟ ಎಬ್ಬಿಸಿದರು. ಅಲ್ಲಿನ ಫಲವತ್ತಾದ ಮಣ್ಣು ಸಾವಯವ ಕೃಷಿಗೆ ಸೂಕ್ತ. ಅವರದು ಉಳುಮೆಯಿಲ್ಲದ ಕೃಷಿ. ಅವರು ಅನುಸರಿಸುವ ಸುಧಾರಿತ ಕೃಷಿಪದ್ಧತಿಯಿಂದಾಗಿ ಅವರ ಇಳುವರಿ ಇಮ್ಮಡಿ (ಸಾಂಪ್ರದಾಯಿಕ ಕೃಷಿಪದ್ಧತಿಯ ಇಳುವರಿಗೆ ಹೋಲಿಸಿದಾಗ).

ಇವರೆಲ್ಲ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನದ (ನ್ಯಾಷನಲ್ ಇನ್ನೊವೇಷನ್ ಫೌಂಡೇಷನ್) ನಾಲ್ಕನೇ ದ್ವೈ-ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಕೃಷಿಕರು.

ಗಮನಿಸಿ: ಇವರಲ್ಲಿ ಯಾರೊಬ್ಬರೂ ವಿಜ್ನಾನಿಗಳಲ್ಲ. ವಿಶ್ವವಿದ್ಯಾಲಯಗಳ ಮತ್ತು ಸರಕಾರಿ ಕೃಪಾಪೋಷಿತ ಸಂಶೋಧನಾಲಯಗಳ ವಿಜ್ನಾನಿಗಳಿಗಿರುವ ಯಾವುದೇ ಸೌಲಭ್ಯಗಳು ಇವರಿಗಿಲ್ಲ. ವೇತನ, ತುಟ್ಟಿಭತ್ತೆ, ಪ್ರವಾಸ ಭತ್ತೆ ಮತ್ತು ಯಾವುದೇ ರಜೆಗಳೂ ಇವರಿಗಿಲ್ಲ. ಪ್ರಯೋಗಾಲಯ, ಸಾಧನಸಲಕರಣೆಗಳು, ವಿಶೇಷ ಉಪಕರಣಗಳು, ಸಹಾಯಕ ಸಿಬ್ಬಂದಿಯೂ ಇವರಿಗಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಇವರ ಸಾಧನೆ ವಿಜ್ನಾನಿಗಳ ಸಾಧನೆಗಿಂತಲು ಮಿಗಿಲು, ಅಲ್ಲವೇ? ಭಾರತದ ಮೂಲೆಮೂಲೆಯ ಹಳ್ಳಿಗಳಲ್ಲಿ ಸದ್ದಿಲ್ಲದ ಸಾಧನೆ ಮಾಡಿರುವ ಇಂತಹ ಮಣ್ಣಿನ ಮಕ್ಕಳನ್ನು ತಳಮಟ್ಟದ ವಿಜ್ನಾನಿಗಳೆಂದು ಗುರುತಿಸುವ ವ್ಯವಸ್ಥೆಯನ್ನು ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ ಜ್ಯಾರಿಗೆ ತಂದಿರುವುದರಿಂದ ಇವರ ಸಾಧನೆಗಳು ಸುದ್ದಿಯಾಗಿವೆ. ಅನುಭವದಿಂದ ಮಾಗಿದ ಈ ಕೃಷಿಕರ ಅನುಶೋಧನೆಗಳು ಹೆಚ್ಚೆಚ್ಚು ಮಣ್ಣಿನ ಮಕ್ಕಳನ್ನು ತಲಪಲಿ. ಇವರ ಸಾಧನೆಗಳಿಂದಾಗಿ ಇನ್ನಷ್ಟು ಕೃಷಿಕರು ಪ್ರೇರಣೆ ಪಡೆಯಲಿ.

ಫೋಟೋ 1 ಮತ್ತು 2 : ನೆಲಗಡಲೆ ಫಸಲು ಮತ್ತು ಬೆಳೆ …. ಕೃಪೆ: ಇಕ್ರಿಸಾಟ್.ಆರ್ಗ್
ಫೋಟೋ 3 ಮತ್ತು 4 : ಈರುಳ್ಳಿ ರಾಶಿ ಮತ್ತು ಸಸಿಗಳು …. ಕೃಪೆ: ಇಕನಾಮಿಕ್ ಟೈಮ್ಸ್ ಮತ್ತು ದ ಸ್ಪ್ರುಸ್ ಜಾಲತಾಣ