ಮಣ್ಣೆ

ಮಣ್ಣೆ

ಪುಸ್ತಕದ ಲೇಖಕ/ಕವಿಯ ಹೆಸರು
ಎಚ್ ಎಸ್ ಗೋಪಾಲ ರಾವ್
ಪ್ರಕಾಶಕರು
ಅಭಿನವ ಪ್ರಕಾಶನ, ವಿಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೫೦.೦೦ , ಮುದ್ರಣ: ೨೦೨೧

‘ಮಣ್ಣೆ' ಕೃತಿಯು ಎಚ್ ಎಸ್ ಗೋಪಾಲ ರಾವ್ ಅವರ ಒಂದು ಪರಿಚಯಾತ್ಮಕ ಅಧ್ಯಯನವಾಗಿದೆ. ಈ ಕೃತಿಯು ೧೨ ಅನುಕ್ರಮಗಳನ್ನು ಒಳಗೊಂಡಿದೆ. ಮಣ್ಣೆ : ಒಂದು ಪರಿಚಯಾತ್ಮಕ ಅಧ್ಯಯನ, ರಾಜಕೀಯ ಹಿನ್ನಲೆಯಲ್ಲಿ ಮಣ್ಣೆ. ಮಣ್ಣೆಯಲ್ಲಿ ದೊರೆತಿರುವ ಮತ್ತು ಮಣ್ಣೆಗೆ ಸಂಬಂಧಿಸಿದ ಶಿಲಾಶಾಸನಗಳು, ಸಾಂಸ್ಕೃತಿಕವಾಗಿ ಮಣ್ಣೆ, ಸಾಹಿತ್ಯಕ್ಷೇತ್ರದಲ್ಲಿ ಮಣ್ಣೆ, ಧಾರ್ಮಿಕವಾಗಿ ಮಣ್ಣೆ, ಸಾಮಾಜಿಕವಾಗಿ ಮಣ್ಣೆ, ಮಣ್ಣೆಯ ಶಾಸನಗಳು, ಪದಸೂಚಿ, ಶಾಸನ ಪುಟ, ಮಣ್ಣೆ ಬಸದಿಯ ಉಹಾ ನಕ್ಷೆಗಳು, ನೇಮಿನಾಥ ಬಸದಿ, ಮಣ್ಣೆ ಚಿತ್ರಗಳು ಇವುಗಳನ್ನು ಒಳಗೊಂಡಿದೆ.

ಕೃತಿಗೆ ಮುನ್ನುಡಿ ಬರೆದಿರುವ ಎಸ್. ನಾಗರಾಜು ಅವರು, ಮಣ್ಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನಲ್ಲಿ, ನೆಲಮಂಗಲದಿಂದ ಸು.೨೫ ಕಿ.ಮೀ ದೂರದಲ್ಲಿರುವ ಗ್ರಾಮ. ಇಲ್ಲಿ ಸುಮಾರು ೮೦ ಮನೆಗಳಿವೆ. ಜನಸಂಖ್ಯೆ ೩೩೬; ಈ ಅಂಕೆ-ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ. ಏಕೆಂದರೆ ೨೦೦೯ರ ಮಾಹಿತಿಯ ಪ್ರಕಾರ ಇಲ್ಲಿ ೩೭೯ ಮನೆಗಳಿದ್ದು, ಜನಸಂಖ್ಯೆ ೧೪೨೯. ಒಟ್ಟಾರೆ ಇದೊಂದು ಚಿಕ್ಕ ಗ್ರಾಮ. ಈ ಗ್ರಾಮದ ಬಗ್ಗೆ ‘ಮಣ್ಣೆ' ಕೃತಿಯನ್ನು ಬರೆಯಲು ಸಾಧ್ಯವೇ ಎಂಬ ಪ್ರಶ್ನೆ ನನ್ನಂತೆಯೇ ನಿಮ್ಮ ಮನಸ್ಸಿನಲ್ಲೂ ಹಾದು ಹೋಗಬಹುದು. ಸೃಜನಾತ್ಮಕ ಗ್ರಂಥಗಳನ್ನು ಬರೆಯಬಲ್ಲ ಸಾಮರ್ಥ್ಯದ ಜೊತೆಗೆ ಇತಿಹಾಸರಂಗದಲ್ಲಿ ಸಾಕಷ್ಟು ಕೃಷಿ ಮಾಡಿರುವ ಡಾ. ಎಚ್ ಎಸ್ ಗೋಪಾಲ ರಾಯರಂತಹ ಸಮರ್ಥರಿಗೆ ಇದೇನೂ ಕಷ್ಟದ ಕೆಲಸವಲ್ಲ. ಮಣ್ಣೆಯ ಬಗ್ಗೆ ಅವರ ನಂಟು ಸುಮಾರು ೫೦ ವರ್ಷಗಳಷ್ಟು ಹಳೆಯದು. ಮಣ್ಣೆಗೆ ಸುಮಾರು ೧೫೦೦ ವರ್ಷಗಳ ದೀರ್ಘವಾದ ಇತಿಹಾಸವಿದೆ ಎಂದು ತಿಳಿದಿರುವ ಅನೇಕ ಹಿರಿಯ ಹಾಗೂ ಕಿರಿಯ ವಿದ್ವಾಂಸರು ಮಣ್ಣೆಯನ್ನು ನೋಡಲು ಬಂದಾಗ ಅವರ ಜೊತೆಯಲ್ಲಿರುವುದು ಗೋಪಾಲ ರಾಯರೇ.  ನಾನೂ ಅವರ ವಿದ್ವದಾತಿಥ್ಯವನ್ನು ಎಷ್ಟೋ ಬಾರಿ ಸ್ವೀಕರಿಸಿದ್ದೇನೆ. 

ಇತಿಹಾಸರಂಗದ ಬಗ್ಗೆ ಅವರಿಗಿರುವ ಆಸೆ, ಉತ್ಸಾಹಗಳು ಈ ಪುಸ್ತಕದ ಪ್ರತಿಪುಟದಲ್ಲೂ ಬಿಂಬಿತವಾಗಿವೆ. ಇದನ್ನು ಓದುಗರು ಗುರುತಿಸಬಹುದು. ಎಲ್ಲದಕ್ಕಿಂತಲೂ ಗಮನಾರ್ಹವಾದುದು ಎಲ್ಲೂ ಯಾವ ರೀತಿಯ ತಪ್ಪು ಕಾಣದ ಅವರ ಬರವಣಿಗೆ ಕನ್ನಡವಾಗಲಿ, ಸಂಸ್ಕೃತವಾಗಲಿ, ಗದ್ಯವಾಗಲಿ, ಪದ್ಯವಾಗಲಿ ಎಲ್ಲೂ ಯಾವ ತಪ್ಪುಗಳೂ ಕಾಣಬರದಿರುವುದು ಅವರ ಬರವಣಿಗೆಯ ವೈಶಿಷ್ಟ್ಯ. ಈ ಪುಸ್ತಕದ ವಸ್ತು ಒಂದು ಚಿಕ್ಕ ಗ್ರಾಮವಾದರೂ, ಸುಮಾರು ೧೫ ಶತಮಾನಗಳ ದೀರ್ಘ ಇತಿಹಾಸ ಇದಕ್ಕಿದೆ. ಅದರ ನಿರೂಪಣೆಯನ್ನು ಓದಲು ಪ್ರಾರಂಭಿಸಿ ಕೊನೆಯ ಪುಟ ತಲುಪುವವರೆಗೂ ಏಕತಾನವಾಗಿ ಸಾಗುವ ಗುಣ ಈ ಬರವಣಿಗೆಯಲ್ಲಿ ಇದೆ. ಇದು ಲೇಖಕರ ಸಮರ್ಥ ಕಾಯಕಕ್ಕೆ ಸಲ್ಲುವ ಒಂದು ಗರಿ. ರಾಜರ ಪೇಟಗಳ ಮೇಲೆ ಎದ್ದು ಕಾಣುವ ನವಿಲುಗರಿಯ ಅಲಂಕಾರದಂತೆ' ಎಂದು ವಿಶ್ಲೇಷಿಸಿದ್ದಾರೆ.