ಮಣ್ಣೆತ್ತಿನ ಅಮಾವಾಸ್ಯೆ

ಮಣ್ಣೆತ್ತಿನ ಅಮಾವಾಸ್ಯೆ

ಕವನ

ನೇಸರನ ಉದಯದ ಮೊದಲೆದ್ದು

ಹೊಲಕೆ ಸಾಗಿ ಮಣ್ಣನು ತಂದು

ಜೋಡಿ ಮಣ್ಣಿನ ಎತ್ತುಗಳ ಮಾಡಿ

ಪೂಜಿಪರು ಭಕ್ತಿ ಭಾವದಲಿ ಕೂಡಿ||

 

ತನುವಿಗೆ ತೈಲವ ಹಚ್ಚಿ ನಿಲುವರು

ಬಿಸಿಬಿಸಿ ನೀರಲಿ ಜಳಕ ಗೈಯುವರು

ಉಂಡೆ ಚಕ್ಕುಲಿ ಹೋಳಿಗೆ ಮಾಡುತಲಿ

ಭಕ್ಷ್ಯಭೋಜ್ಯಂಗಳ ಮಾಡಿ ಹರ್ಷಿಸುತಲಿ||

 

ರೈತಾಪಿ ಮಿತ್ರ ಎತ್ತು ನೊಗ ನೇಗಿಲು

ಭೂಮಿತಾಯಿ ಪೊರೆದು ಸಲಹುವಳು

ಮಣ್ಣೆತ್ತಿನ ಮೂರುತಿಗಳ ಹೊಲದಿ ಪ್ರತಿಷ್ಠಾಪಿಸಿ

ನೈವೇದ್ಯ ಮಾಡಿ ಸಲಹೆಂದು ಬೇಡಿಕೊಳ್ವರು||

 

ಮುಂಗಾರು ಮಳೆ ಚೆನ್ನಾಗಿ ಬರಲಿ

ಕಣಜವದು ಧಾನ್ಯಗಳಿಂದ ತುಂಬಿ 

ತುಳುಕಲಿ

ಇಷ್ಟಾರ್ಥಗಳ ನೆರವೇರಿಸಿ ಹರಸುತಲಿ

ರೈತಾಪಿ ಜನರ ಸಲಹು ಎನುತಲಿ||

 

ಮಣ್ಣೆತ್ತಿನ ಅಮಾವಾಸ್ಯೆ ದಿನ ವಿಶೇಷವಿದು

ಕೃಷಿ ಕುಟುಂಬದವರಿಗೆ ಸಡಗರವಿದು

ಮಣ್ಣಿನ ಬಸವ ಮೂರುತಿಗೆ ನಮನವಿದು

ರೈತಮಿತ್ರ ವರ್ಗದವರ ಭಕ್ತಿ ಪೂಜೆಯಿದು||

 

-ರತ್ನಾ ಕೆ.ಭಟ್ ತಲಂಜೇರಿ

(ಜೂನ್ ೨೮ರ ದಿನ ವಿಶೇಷಕ್ಕೊಂದು ಕವನ)

ಚಿತ್ರ್