ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ...

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ...

ಇದು ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಂ ಅವರ ಒಂದು ಜನಪ್ರಿಯ ‌ಧಾರವಾಹಿಯ ಶೀರ್ಷಿಕೆ ಗೀತೆ. ಆದರೆ ತಾಯಿಯ ಎದೆ ಹಾಲು ಕುಡಿದು, ಈ ನೆಕದ ಗಾಳಿ ನೀರು ಸೇವಿಸಿ, ತಂದೆಯ ತೋಳುಗಳಲ್ಲಿ, ಅಕ್ಕ ಅಣ್ಣನ ನೆರಳಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಮುದ್ದಿನಿಂದ  ಬೆಳೆವ ಮಗು ಮನುಷ್ಯನಾಗದೆ ರಾಕ್ಷಸನನ್ನೂ ಮೀರಿದ ರಕ್ಕಸತನದಿಂದ ವರ್ತಿಸುತ್ತಿರುವುದು ಏಕೆ?

ಇತ್ತೀಚೆಗೆ ಅತ್ಯಂತ ಕ್ರೌರ್ಯ - ಹೇಯ - ಬರ್ಬರವಾಗಿ ಕೊಲೆಗಳಾಗುತ್ತಿರುವ - ಕೊಲ್ಲುತ್ತಿರುವ ಘಟನೆಗಳು ಭಾರತದ ಬೇರೆ ಬೇರೆ ಕಡೆಗಳಿಂದ ವರದಿಯಾಗುತ್ತಿದೆ. 50 ಬಾರಿ ತಿವಿದ, ನೂರು ತುಂಡುಗಳಾಗಿ ಕತ್ತರಿಸಿದ, ಶೀತಲೀಕರಣದಲ್ಲಿಟ್ಟ, ಸೂಟ್ ಕೇಸಿನಲ್ಲಿಟ್ಟಿದ್ದ, ತಂದೂರಿ ಒಲೆಯಲ್ಲಿ ಸುಟ್ಟ, ರಕ್ತ ಕುಡಿದ, ಕರೆಂಟ್ ಶಾಕ್ ನೀಡಿ ಹಿಂಸಿಸಿ ಕೊಂದ, ಜೀವಂತ ಸಮಾಧಿ ಮಾಡಿದ, ಜೀವಂತ ಸುಟ್ಟ ಹೀಗೆ ಕೇಳಲು ಹಿಂಸೆಯಾಗುವಷ್ಟು ಭಯಂಕರ ಸುದ್ದಿಗಳು ಪ್ರಸಾರವಾಗುತ್ತಿವೆ. ಹಿಂದೆಯೂ ಈ ರೀತಿಯ ಘಟನೆಗಳು ನಡೆದಿವೆ. ಆದರೆ ಈಗ ಮಾಧ್ಯಮಗಳ ಕಾರಣದಿಂದಾಗಿ ಹೆಚ್ಚು ರೋಚಕತೆ ಪಡೆದು ಎಲ್ಲರಿಗೂ ತಲುಪುತ್ತಿದೆ.

ಪ್ರತಿ ಬಾರಿ ಚುಚ್ಚುವುದು ಅಥವಾ ಹಿಂಸಿಸುವುದು ಅಥವಾ ಕತ್ತರಿಸುವುದು ಅಥವಾ ಸತ್ತ ನಂತರವೂ ದೇಹವನ್ನು ವಿಕೃತ ಗೊಳಿಸುವುದು  ನೋಡುಗರಿಗೆ ಹಿಂಸೆಯಾದರು ಅದು ಆತ ಅಥವಾ ಆಕೆಯ ಆತ್ಮ ಸಂತೃಪ್ತಿ ಅಥವಾ ನಿರಾಸೆ ಅಥವಾ ಅಸಹಾಯಕತೆ ಅಥವಾ ಕ್ರೌರ್ಯ ಅಥವಾ ದ್ವೇಷ ಅಥವಾ ವಿಕೃತಿಯನ್ನು ತೀರಿಸಿಕೊಳ್ಳುವ ಮಾರ್ಗವಾಗಿದ್ದಂತೆ ಕಾಣುತ್ತದೆ.

ಯಾಕೆ ಮನುಷ್ಯನಿಗೆ  ಇಷ್ಟೊಂದು ಹಿಂಸಾ ಪ್ರವೃತ್ತಿ ಜಾಗೃತವಾಗುತ್ತಿದೆ. ಪೋಲಿಸ್, ಕಾನೂನು, ಧರ್ಮ, ದೇವರು, ಮಾನವೀಯತೆ ಇನ್ನೂ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದರು ಅದನ್ನು ಮೀರಿ ಈ ಕೃತ್ಯಗಳು ನಡೆಯುತ್ತಿವೆ. ಮಾನಸಿಕ ಅಸ್ವಸ್ಥರು ಮತ್ತು ಮಾದಕ ವ್ಯಸನನಿಗಳನ್ನು ಹೊರತುಪಡಿಸಿ ಕೂಡ ಸಾಮಾನ್ಯ ಜನರು ಹಿಂಸೆಯ ಪರಾಕಾಷ್ಠೆ ತಲುಪುತ್ತಿರುವುದು ಅತ್ಯಂತ ಅಪಾಯಕಾರಿ ನಡವಳಿಕೆಯಾಗಿದೆ. ಇದು ತೀರಾ ಅಪರೂಪ ಎಂಬುದು ನಿಜವಾದರು ಆ ಕೆಲವೇ ಘಟನೆಗಳು ಸಮಾಜದ ಮೇಲೆ ಬೀರುತ್ತಿರುವ ದುಷ್ಪರಿಣಾಮ ಮತ್ತು ಇದನ್ನು ನಿರ್ಲಕ್ಷಿಸಿದರೆ ಮುಂದೆ ಇದು ಹೆಚ್ಚಾಗಬಹುದು ಎಂಬ ಆತಂಕವೂ ಇದೆ.

ಬೇರೆ ದೇಶಗಳಲ್ಲಿ ಸಹ ಈ ರೀತಿಯ ಭಯಾನಕ ಪ್ರಕರಣಗಳು ನಡೆಯುತ್ತವೆ. ಆದರೆ ಭಾರತದಂತ ನಮ್ಮ ದೇಶದಲ್ಲಿ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಕನಸಿನಲ್ಲಿಯೂ ಬೆಚ್ಚಿ ಬೀಳಿಸುವಂತಾಗುತ್ತಿದೆ. ನಾವುಗಳು ಹೆಚ್ಚು ಶಾಂತಿ ಪ್ರಿಯರು ಮತ್ತು ಹಿಂಸಾ ವಿರೋಧಿಗಳು ಎಂಬ ಮೂಲಭೂತ ಗುಣ ಇದಕ್ಕೆ ಕಾರಣವಾಗಿದೆ. ಇದಕ್ಕೆ ವೈಜ್ಞಾನಿಕ ಕಾರಣವನ್ನು ಸಮಾಜ ಶಾಸ್ತ್ರಜ್ಞರು, ಮಾನವ ಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಸರ್ಕಾರ ಇದಕ್ಕಾಗಿ ಒಂದು ಅಧ್ಯಯನ ಮತ್ತು ಪರಿಹಾರ ಸಮಿತಿ ರಚಿಸಿ ಕೂಡಲೇ ಒಂದಷ್ಟು ಕ್ರಮ ಕೈಗೊಳ್ಳುವುದು ಒಳಿತು.

ಆದರೆ ನಮ್ಮ ಬದುಕಿನ ಅನುಭವದ ಆಧಾರದ ಮೇಲೆ ಗ್ರಹಿಸಿ ಹೇಳುವುದಾದರೆ, ವೇಗ ಮತ್ತು ಸ್ಪರ್ಧಾತ್ಮಕ ಜಗತ್ತು ಸೃಷ್ಟಿ ಮಾಡುತ್ತಿರುವ ಒತ್ತಡ ಮತ್ತು ಅದಕ್ಕೆ ಪೂರಕವಾಗಿ ಮನರಂಜನಾ ಉದ್ಯಮಗಳು ಮುಖ್ಯವಾಗಿ ಸಿನಿಮಾ ಧಾರವಾಹಿಗಳು ಹಿಂಸೆ ಮತ್ತು ಮಾನವ ಹತ್ಯೆಗಳನ್ನು ವಿವಿಧ ರೀತಿಯಲ್ಲಿ ವಿಜೃಂಭಿಸುತ್ತಿರುವ ರೀತಿ, ಆರ್ಥಿಕ ಅಸಮಾನತೆ, ಜಾಹೀರಾತುಗಳು ಮತ್ತು ಕೊಳ್ಳುಬಾಕ ಸಂಸ್ಕೃತಿ ನಮ್ಮನ್ನು ಅತಿಯಾಸೆಗೆ ತಳ್ಳಿ ಅದು ಸಿಗದಿದ್ದಾಗ ಆಗುವ ಅಸಹಾಯಕತೆಯ ನೋವು, ಮಹಿಳಾ ಸ್ವಾತಂತ್ರ್ಯವನ್ನು ಮತ್ತು ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗ್ರಹಿಸುವ ಮತ್ತು ಒಪ್ಪಿಕೊಳ್ಳುವ ಮನಸ್ಥಿತಿ ಪುರುಷರಿಗೆ ಸಾಧ್ಯವಾಗದೆ ಪ್ರೇಮ‌ ವೈಫಲ್ಯಗಳ ನೆಪಗಳು, ಪುಸ್ತಕ ಜ್ಞಾನಕ್ಕಿಂತ ಸಿನಿಮಾದ ಜ್ಞಾನವನ್ನೇ ಹೆಚ್ಚಾಗಿ‌ ಅವಲಂಬಿಸಿ ಅದರ ಪ್ರಭಾವಕ್ಕೆ ಒಳಗಾಗುತ್ತಿರುವ ಯುವ ಸಮೂಹ, ಕಾನೂನುಗಳ ದುರ್ಬಳಕೆ ಮತ್ತು ಅದು ಜನ ಸಾಮಾನ್ಯರ ಅರಿವಿಗೆ ಬರುತ್ತಿರುವುದು, ಆಡಳಿತ ಯಂತ್ರ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡದಿರುವುದು, ಏಕಾಂತ ಅಥವಾ ಅನಾಥ ಪ್ರಜ್ಞೆ ಕೆಲವರನ್ನು ಕಾಡುತ್ತಿರುವುದು, ಮಾಧ್ಯಮಗಳು ಕೆಲವು ಘಟನೆಗಳನ್ನು ಅತಿಯಾಗಿ ಸುದ್ದಿ ಮಾಡುವುದರಿಂದ ಪರೋಕ್ಷವಾಗಿ ಇದು ಇತರರಿಗೂ ಪ್ರೇರಣೆಯಾಗಿ ತಮ್ಮ ವಿರೋಧಿಗಳ ವಿರುದ್ಧ ಸೇಡಿಗೆ ಇದೇ ಸರಿಯಾದ ಕ್ರಮ ಎನಿಸುವುದು, ಹಲವಾರು ಕಾರಣಗಳಿಂದ ಮಾನಸಿಕ ನಿಯಂತ್ರಣ ಕಳೆದುಕೊಳ್ಳುವುದು, ಕೊಲೆ ಮಾಡಲು ಪ್ರೇರೇಪಣೆ ನೀಡುವಂತೆ ಕೊಲೆಯಾಗುವವರು ಅನೇಕ ಬಾರಿ ತಪ್ಪು ಪ್ರತಿಕ್ರಿಯೆ ಕೊಡುವುದು, ನ್ಯಾಯ ಅನ್ಯಾಯಕ್ಕಿಂತ ಸಾಮಾನ್ಯ ಜ್ಞಾನವೇ ಮುಖ್ಯ ಎಂಬ ಅರಿವಿಲ್ಲದಿರುವುದು, ಪ್ರೀತಿ ಪ್ರೇಮದ ಉತ್ಕಟ ಭಾವನೆಯ ಆಳ ಅಗಲಗಳ ಅರಿವಿಲ್ಲದಿರುವುದು, ಮೌಡ್ಯ ಮತ್ತು ಗೊಡ್ಡು ಸಂಪ್ರದಾಯಗಳ ಕಾರಣದಿಂದ ಸಂಕುಚಿತ ಮನಸ್ಥಿತಿ ಬೆಳೆಸಿಕೊಂಡಿರುವುದು ಹೀಗೆ ಹಲವಾರು ಕಾರಣಗಳು ಕಂಡುಬರುತ್ತದೆ.

ಏನೇ ಆಗಲಿ ಈ ವಿಕೃತ ಮನಸ್ಥಿತಿ ಸಮಾಜದ ಇತರ ವರ್ಗಗಳಿಗೂ ಹಬ್ಬುವ ಮೊದಲು ನಾವೆಲ್ಲರೂ ಮಾನವೀಯ ಮೌಲ್ಯಗಳ ಪುನರುಜ್ಜೀವನಕ್ಕಾಗಿ ಏನಾದರೂ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಇದೊಂದು ಸಾಮಾಜಿಕ ಪಿಡುಗಾಗಿ ನಮ್ಮ ಮಾನಸಿಕ ಆರೋಗ್ಯವನ್ನೇ ಹಾಳು ಮಾಡಬಹುದು ಎಚ್ಚರ. ಕರ್ನಾಟಕದ ಜೈನ ಮುನಿಯೊಬ್ಬರ ಅತ್ಯಂತ ಹೇಯ ಕೊಲೆಯ ಸುದ್ದಿಯ ಹಿನ್ನೆಲೆಯಲ್ಲಿ ಮೂಡಿದ ಭಾವನೆಗಳ ಅಕ್ಷರ ರೂಪ..

***

ನಿನ್ನೆ 09/07/2023 ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಸಮಾನ ಮನಸ್ಕ ಗೆಳೆಯರು ಏರ್ಪಡಿಸಿದ್ದ " ಮಣಿಪುರ ಫೈಲ್ಸ್ " ಎಂಬ ಮುಕ್ತ ಸಂವಾದ ಕಾರ್ಯಕ್ರಮ ಅತ್ಯಂತ ಸರಳವಾಗಿ, ಮುಕ್ತವಾಗಿ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಮಾನವೀಯ ಮನಸ್ಸುಗಳು‌ ಮಣಿಪುರದ ಜನರಿಗಾಗಿ ಮಿಡಿದ ಭಾವಗಳು  ಮತ್ತು ಅಹಿಂಸೆಯ ಪರವಾದ ಕನ್ನಡದ ಧ್ವನಿಗಳು  ನಿಜಕ್ಕೂ ಭರವಸೆ ಮೂಡಿಸಿದವು. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಕನಿಷ್ಠ ನಮ್ಮ ಆತ್ಮ ತೃಪ್ತಿಗಾಗಿಯಾದರು, ಮಾನಸಿಕ ನೆಮ್ಮದಿಗಾಗಿಯಾದರು ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಮ್ಮ ಸಾಮಾಜಿಕ ಸ್ಪಂದನೆ ಮತ್ತು ಕರ್ತವ್ಯ ವ್ಯಾವಹಾರಿಕತೆಯನ್ನು ಮೀರಿ ಜೀವಪರವಾಗಿರಲಿ ಎಂದು ಆಶಿಸುತ್ತಾ........

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ