ಮತದಾನ - ಸರ್ವಶ್ರೇಷ್ಠ ದಾನ....

ಮತದಾನ - ಸರ್ವಶ್ರೇಷ್ಠ ದಾನ....

ಬಿಸಿಲಿರಲಿ, ಮಳೆಯಿರಲಿ, ಬಿರುಗಾಳಿಯಿರಲಿ, ನಡುಗುವ ಚಳಿಯಿರಲಿ, ಜಗ್ಗದೆ, ಕುಗ್ಗದೆ, ಬಗ್ಗದೆ, ಮತದಾನ ಮಾಡಿ…

ಜ್ವರವಿರಲಿ, ನೆಗಡಿಯಿರಲಿ,  ಕೆಮ್ಮಿರಲಿ, ತಲೆ ನೋವಿರಲಿ, ಗ್ಯಾಸ್ಟ್ರಿಕ್ ಇರಲಿ, ಮರೆಯದೆ ಮತದಾನ ಮಾಡಿ…

ಕೆಲಸವಿರಲಿ, ಇಲ್ಲದಿರಲಿ, ಕ್ಯೂ ಇರಲಿ, ಖಾಲಿ ಇರಲಿ, ದೂರವಿರಲಿ, ಹತ್ತಿರವಿರಲಿ, ತಾಳ್ಮೆಯಿಂದ ನಿಂತು, ಮತದಾನ ಮಾಡಿ…

ಮತದಾನ ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ,

ನಿಮ್ಮ ಮತ ದೇಶಕ್ಕೆ ಹಿತ,

ನಿಮ್ಮ ರಕ್ಷಣೆಗಾಗಿ ಮತದಾನ ಮಾಡಿ,

ಪ್ರಜಾಪ್ರಭುತ್ವ ಉಳಿಸಲು ಮತದಾನ ಮಾಡಿ,

ನಿಮ್ಮ ಪ್ರತಿನಿಧಿಯಾಗಿ ನನ್ನನ್ನು ಚುನಾಯಿಸಲು ಮತದಾನ ಮಾಡಿ,

ಆಮೇಲೆ ಮಂತ್ರಿಯಾಗಲು ಲಾಬಿ ನಾನು ಮಾಡುವೆನು,

ನೀವು ನೋಡನೋಡುತ್ತಿದ್ದಂತೆ ನಿಮ್ಮ ಭೇಟಿಯ ಅನುಕೂಲಕ್ಕಾಗಿ,

ಒಂದು ಬೃಹತ್ ಬಂಗಲೆ ನಾನು ಮಾಡುತ್ತೇನೆ,

ನನ್ನ ನಂತರ ನಿಮ್ಮ ಸೇವೆಗಾಗಿ ನನ್ನ ಮಗ/ಮಗಳನ್ನು ವಿದ್ಯಾಭ್ಯಾಸಕ್ಕಾಗಿ

ವಿದೇಶಕ್ಕೆ ಕಳಿಸುತ್ತೇನೆ,

ಗಣೇಶ, ಅಣ್ಣಮ್ಮ, ರಾಜ್ಯೋತ್ಸವದ ನಿಮ್ಮ ಉತ್ಸವಕ್ಕೆ, ಹಣ ಹೊಂದಿಸಲು ತಿಂಗಳ ಆದಾಯಕ್ಕಾಗಿ COMMERCIAL COMPLEX ಕಟ್ಟಿಸಿ ಬಾಡಿಗೆ ಬಿಡುತ್ತೇನೆ. ನನ್ನ ಸುತ್ತಮುತ್ತಲ ಜನರಿಗೆ ಬೇರೆ ಬೇರೆ CONTRACT ಕೊಡಿಸಿ, ಮುಂದಿನ ಚುನಾವಣೆಗಾಗಿ ಹಣ ಮಾಡುತ್ತೇನೆ, ಯಾವುದಕ್ಕೂ ಇರಲಿ ಎಂದು ಎಲ್ಲಾ ಪಕ್ಷಗಳ ನಾಯಕರ ಜೊತೆಗೂ

CONTACT ನಲ್ಲಿರುತ್ತೇನೆ, ಸಂಬಂಧ ಬೆಳೆಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತೇನೆ, ಏಕೆಂದರೆ PROBLEMS ಇದ್ದರೇನೆ ನಿಮಗೆ ನನ್ನ ನೆನಪಾಗುವುದು.

ನಿಮ್ಮಿಂದಲೇ ನಾವು, 

ನಿಮ್ಮ ಒಂದು ಮತ, 

ನನಗಷ್ಟೇ ಅಲ್ಲದೆ,

ಮಾಧ್ಯಮದವರು, ಕಾಂಟ್ರಾಕ್ಟರ್ ಗಳು, ಅಧಿಕಾರಿಗಳು, 

ಪುಢಾರಿಗಳು,

ಎಲ್ಲರನ್ನೂ ಚೆನ್ನಾಗಿಟ್ಟಿರುತ್ತದೆ,

ಇದರಲ್ಲಿ ಮುಚ್ಚುಮರೆ ಏನೂ ಇಲ್ಲ,

ನನ್ನದು ನೇರವಾದ ಮಾತು, ಸತ್ಯವಾದ ಮಾತು,

ಬೇಕಾದರೆ ಇನ್ನೊಂದು 1000 ರೂಪಾಯಿ ಹೆಚ್ಚಿಗೆ ತೆಗೆದುಕೊಳ್ಳಿ,

ಆದರೆ, 

ಮತದಾರ ಬಂಧುಗಳೇ,

ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ,

Public ಆಗಿ ಯಾರಿಗೂ ಹೇಳಬೇಡಿ, ನಿಮ್ಮಲ್ಲೇ ಇರಲಿ,

ಚುನಾವಣಾಧಿಕಾರಿಗಳು ಕೇಳಿಸಿಕೊಂಡಾರು..

ಇದು ನನ್ನ - ನಿಮ್ಮ ನಡುವಿನ ವ್ಯವಹಾರ..

ವಂದೇ ಮಾತರಂ,

ಜೈಹಿಂದ್,

ಬೋಲೋ ಭಾರತ್ ಮಾತಾ ಕೀ ಜೈ.

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ