ಮತದಾರ ಪ್ರಭು ಯೋಚನೆ ಮಾಡು...
ಪಕ್ಷಾಂತರಿ ಶಾಸಕನೊಬ್ಬನ ಬಡಬಡಿಕೆ, ಕೆಲವೇ ತಿಂಗಳುಗಳಲ್ಲಿ ಚುನಾವಣೆ ಇರುವಾಗ...ಒಬ್ಬ ಶಾಸಕ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಉವಾಚ..." ಭಾರತೀಯ ಜನತಾ ಪಕ್ಷ ಒಂದು ಕೋಮುವಾದಿ ಪಕ್ಷ. ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತದೆ. ಬಂಡವಾಳ ಶಾಹಿಗಳನ್ನು ಮಾತ್ರ ಪ್ರೋತ್ಸಾಹಿಸಿ ಕಾರ್ಮಿಕರು - ಬಡವರನ್ನು ಶೋಷಿಸುತ್ತದೆ. ದಲಿತರು - ಅಲ್ಪಸಂಖ್ಯಾತರನ್ನು ದ್ವೇಷಿಸುತ್ತದೆ. ಹುಸಿ ದೇಶ ಭಕ್ತಿಯನ್ನು ಯುವಕರಲ್ಲಿ ತುಂಬಿ ಅವರನ್ನು ಭಾವನಾತ್ಮಕವಾಗಿ ಸೆಳೆದು ದಾರಿ ತಪ್ಪಿಸಿ ಅಧಿಕಾರವನ್ನು ಪಡೆಯುವುದಷ್ಟೇ ಅದರ ಉದ್ದೇಶ. ಇದು ದೇಶಕ್ಕೆ ಅಪಾಯಕಾರಿ. ಅದು ಒಂದು ಸ್ವಯಂ ಸೇವಕ ಸಂಘದ ಮುಖವಾಡ......." ಹೀಗೆ ಬಹಿರಂಗವಾಗಿ ಸಾಕಷ್ಟು ಟೀಕಿಸುತ್ತಾನೆ.
ಹಾಗೆಯೇ ಯಾವುದೋ ಕಾರಣದಿಂದಾಗಿ ಆತನಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಕೋಪ ಬರುತ್ತದೆ ಮತ್ತು ಭಾರತೀಯ ಜನತಾ ಪಕ್ಷ ಆತನಿಗೆ ಮತ್ತೆ ಶಾಸಕನಾಗಿಸುವ ಭರವಸೆ ನೀಡಿ ಆ ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆ. ಆಗ ಆದೇ ವ್ಯಕ್ತಿಯ ಬಾಯಿಂದ ಹೊರಡುವ ಅಣಿ ಮುತ್ತುಗಳು....
" ಕಾಂಗ್ರೆಸ್ ಅತ್ಯಂತ ಭ್ರಷ್ಟ ಪಕ್ಷ. ವಂಶಪಾರಂಪರ್ಯವನ್ನು ಒಪ್ಪಿಕೊಂಡ ಗುಲಾಮಿ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ. ಅದು ಹಿಂದೂ ಧರ್ಮದ ವಿರೋಧಿ ನಿಲುವು ಹೊಂದಿದೆ. ಅಲ್ಪಸಂಖ್ಯಾತರನ್ನು ಸದಾ ಓಲೈಸುತ್ತದೆ. ಜಾತಿ ರಾಜಕಾರಣ ಮಾಡುತ್ತದೆ. ಅನೇಕ ಉಚಿತ ಘೋಷಣೆಗಳನ್ನು ಮಾಡಿ ಇಡೀ ದೇಶವನ್ನು ದಿವಾಳಿ ಮಾಡುತ್ತದೆ. ಇದು ದೇಶಕ್ಕೆ ಅಪಾಯಕಾರಿ. ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು......."
ಜೊತೆಗೆ ಕರ್ನಾಟಕದಲ್ಲಿ ಆತನೇ ಎರಡೂ ಪಕ್ಷಗಳಲ್ಲಿ ಇರುವಾಗ ಆತನ ನಾಲಿಗೆಯಿಂದ ಹೊರಡುವ ಮಾತುಗಳು... " ಜಾತ್ಯಾತೀತ ಜನತಾದಳ ಪಕ್ಷ ಒಂದು ಕುಟುಂಬದ ಅಪ್ಪ ಮಕ್ಕಳ ಪಕ್ಷ. ಅತ್ಯಂತ ಭ್ರಷ್ಟ ಪಕ್ಷ. ಸೂಟ್ ಕೇಸ್ ತುಂಬಾ ಹಣ ನೀಡಿದರೆ ಮಾತ್ರ ಪಕ್ಷದ ಟಿಕೆಟ್ ನೀಡಲಾಗುತ್ತದೆ. ಜಾತ್ಯಾತೀತ ಎಂದು ಹೆಸರಿದ್ದರು ಅದು ಪಕ್ಕಾ ಜಾತಿವಾದಿ ಪಕ್ಷ. ಯಾವುದೇ ಸಿದ್ದಾಂತ ಇಲ್ಲದೇ ಅವಕಾಶವಾದಿಯಾಗಿ ಅಧಿಕಾರ ಹಿಡಿಯಲು ಸದಾ ಹೊಂಚು ಹಾಕುತ್ತಿರುತ್ತದೆ "
ಮತ್ತೆ ಅದೇ ಶಾಸಕ ಬೇರೆ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷ ಸೇರಿದಾಗ, " ಈ ದೇಶದ ನಿಜವಾದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಇಡೀ ದೇಶವನ್ನು ಒಗ್ಗಟ್ಟಾಗಿ ಮುನ್ನಡೆಸಿ, ಸಾಮಾಜಿಕ ಸಾಮರಸ್ಯ ಸಾಧಿಸಿ, ಬಡತನ ನಿರ್ಮೂಲನೆ ಮಾಡಿ, ನಿರುದ್ಯೋಗ ಸಮಸ್ಯೆ ನಿವಾರಿಸಿ ಜನರ ಜೀವನಮಟ್ಟ ಸುಧಾರಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ರಾಹುಲ್ ಗಾಂಧಿ ಈ ದೇಶದ ಭವಿಷ್ಯ ಮತ್ತು ಯುವಕರ ಆಶಾಕಿರಣ....."
ಅದೇ ವ್ಯಕ್ತಿ ಮತ್ತೆ ಭಾರತೀಯ ಜನತಾ ಪಕ್ಷ ಸೇರಿದಾಗ ಆತನಿಂದ ಹೊರಟ ನುಡಿ ಮುತ್ತುಗಳು… " ಈ ದೇಶವನ್ನು ವಿಶ್ವ ಗುರುವಾಗಿ ಮಾಡಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ. ಈ ದೇಶವನ್ನು ಅಖಂಡವಾಗಿ ಉಳಿಸಿ ಇಲ್ಲಿನ ಸನಾತನ ಧರ್ಮ ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಏರಿಸಲು, ಆರ್ಥಿಕ ಅಭಿವೃದ್ಧಿ ಸಾಧಿಸಲು ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇರಬೇಕು. ನರೇಂದ್ರ ಮೋದಿ ಈ ದೇಶದ ನಿಜವಾದ ನಾಯಕ. ಅಭಿವೃದ್ಧಿಯ ಹರಿಕಾರ... "
ಎರಡೂ ಪಕ್ಷಗಳಿಂದ ದೂರವಾಗಿ ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ಸೇರಿದಾಗ.....ಆತನ ಅಭಿಪ್ರಾಯ ಮಾತಿನ ರೂಪದಲ್ಲಿ..... " ಎರಡೂ ರಾಷ್ಟ್ರೀಯ ಪಕ್ಷಗಳು ಇಲ್ಲಿಯವರೆಗೂ ಕರ್ನಾಟಕವನ್ನು ಹಾಳು ಮಾಡುತ್ತಾ ಬಂದಿದೆ. ಇಲ್ಲಿನ ಪ್ರಾದೇಶಿಕ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸದೆ ಹೈಕಮಾಂಡ್ ಸಂಸ್ಕೃತಿಗೆ ಶರಣಾಗಿ ಅವರ ಬೂಟು ನೆಕ್ಕುವ ಕೆಲಸ ಮಾಡಿಸುತ್ತವೆ. ಜಾತ್ಯಾತೀತ ಜನತಾದಳ ಮಾತ್ರ ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ. ಕರ್ನಾಟಕದ ಜನರ ಸ್ವಾಭಿಮಾನ ರಕ್ಷಿಸುವ ಏಕೈಕ ಪಕ್ಷ. ಮಣ್ಣಿನ ಮಗ ದೇವೇಗೌಡರಿಂದ ಮಾತ್ರ ರೈತರ ಹಿತಾಸಕ್ತಿ ಕಾಪಾಡಲು ಸಾಧ್ಯ... "
ಹೀಗೆ ವಿವಿಧ ಪಾತ್ರಗಳನ್ನು ಒಬ್ಬ ಶಾಸಕ ತನ್ನ ಜೀವಿತಾವಧಿಯಲ್ಲಿ ನಿರ್ವಹಿಸುತ್ತಾನೆ. ನಾವು ಕೂಡ ಆತನ ಪಾತ್ರವನ್ನು ಮೆಚ್ಚಿ ಬೆಂಬಲಿಸುತ್ತಲೇ ಇರುತ್ತೇವೆ. ಈ ಮುಗಿಯದ ನಾಟಕ ನಿರಂತರ. ನಮ್ಮ ಬದುಕು ಮಾತ್ರ. ಯೋಚಿಸಲು ಸಾಧ್ಯವಾದರೆ, ಆಸಕ್ತಿ ಇದ್ದರೆ ದಯವಿಟ್ಟು ಯೋಚಿಸಿ, ಇಲ್ಲವೇ ಕರ್ಮ ಫಲವೆಂದು ಅನುಭವಿಸಿ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ