ಮತಾಂತರ ಏನು ಎತ್ತ

ಮತಾಂತರ ಏನು ಎತ್ತ

ಬರಹ

ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ. ಇನ್ನೊಬ್ಬ ಮನುಷ್ಯನನ್ನು ಮನುಷ್ಯನಂತೆಯೇ ಕಾಣಬೇಕು, ಅಸಹಾಯಕರಿಗೆ ನೆರವಾಗಬೇಕು, ಶೋಷಿತರಿಗೆ ಸಾಂತ್ವನ, ರೋಗಿಗಳಿಗೆ ಉಪಚಾರ, ಖಿನ್ನರಿಗೆ ಧೈರ್ಯ, ಅಪರಾಧಿಗಳಿಗೆ ಆತ್ಮೋದ್ಧಾರ, ದುಶ್ಚಟದಾಸರಿಗೆ ಹಿತನುಡಿ ಇವುಗಳೆಲ್ಲ ಕ್ರಿಸ್ತನ ಸಂದೇಶ ಸಾರುವ ಕ್ರಿಯಾರೂಪಗಳಾಗಿವೆ. ವಾಸ್ತವವಾಗಿ ಧರ್ಮಪ್ರಚಾರ ನಮ್ಮ ಸಂವಿಧಾನಬದ್ದ ಹಕ್ಕು. ’ಹೋಗಿ ಎಲ್ಲೆಡೆ ನನ್ನ ಸಂದೇಶವನ್ನು ಸಾರಿರಿ’ ಎಂದ ಯೇಸುಕ್ರಿಸ್ತನ ನುಡಿ ನಮ್ಮ ಮನದಲ್ಲಿದೆ.

ಕ್ರಿಸ್ತನ ಸಂದೇಶವನ್ನು ಸಾರುವ ಈ ಪ್ರಕ್ರಿಯೆಗಳನ್ನು ಇಂದು ಸಂದೇಹಾಸ್ಪದವಾಗಿ ಕಾಣಲಾಗುತ್ತಿದೆ. ತಾವು ಮಾಡದೇ ಇದ್ದ ಕಾರ್ಯವನ್ನು ಈತ ಮಾಡಿದ್ದರಿಂದ ನಮ್ಮವನೇ ಆಗಿದ್ದು ನಮ್ಮಿಂದ ತುಳಿತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ನಮ್ಮನ್ನು ತೊರೆದು ಆತನೊಂದಿಗೆ ಸೇರಿಕೊಂಡನಲ್ಲಾ ಎಂಬ ಈರ್ಷ್ಯೆಯಿಂದ ಬಳಲುವ ಕೆಲವರು ಮತಾಂತರ ಮತಾಂತರ ಎಂದು ಬೊಬ್ಬಿಡುತ್ತಾರೆ.

ಕ್ರೈಸ್ತಧರ್ಮದ ವ್ಯಾಖ್ಯೆಯಲ್ಲಿ ಕ್ರಿಸ್ತತತ್ವಗಳನ್ನು ಜಗತ್ತಿನೆಲ್ಲೆಡೆ ಸಾರಬೇಕೆನ್ನುವ ಕಾಳಜಿ ಇದೆಯೇ ಹೊರತು ಮತಾಂತರ ಮಾಡಬೇಕು ಎಂದಿಲ್ಲ. ಹಣದ ಎದುರಲ್ಲಿ, ಕತ್ತಿಯ ತುದಿಯಲ್ಲಿ ನಡೆಯುವ ಮತಾಂತರ ಮತಾಂತರವೇ ಅಲ್ಲವೆಂದು ಕ್ರೈಸ್ತಧರ್ಮ ಹೇಳುತ್ತದೆ. ಹಿಂದೆ ಧಾರ್ಮಿಕತೆ ಗೊತ್ತಿಲ್ಲದ ರಾಜಕೀಯ ನಾಯಕರು ತಮ್ಮ ಸ್ವಲಾಭಕ್ಕಾಗಿ ಆ ರೀತಿ ಮಾಡಿದ್ದು ಇತಿಹಾಸದ ದುರಂತ. ಆದರೆ ಕ್ರೈಸ್ತಧರ್ಮ ಅದನ್ನು ಮಾನ್ಯಗೊಳಿಸಲಿಲ್ಲವೆಂಬುದೂ ಅಷ್ಟೇ ಸತ್ಯ. ವ್ಯಕ್ತಿಯೊಬ್ಬ ಪೂರ್ಣ ಪರಿವರ್ತನೆಗೊಂಡು ತಾನೇ ತಾನಾಗಿ ಕ್ರೈಸ್ತನಾಗುತ್ತೇನೆಂದು ಮುಂದೆ ಬಂದರೂ ಚರ್ಚು ಒಮ್ಮಿಂದೊಮ್ಮೆಲೇ ಕ್ರೈಸ್ತದೀಕ್ಷೆ ಕೊಟ್ಟುಬಿಡುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿನೀತಿಗಳಿವೆ. ಅದು ಸುಲಭದ ಮಾತಲ್ಲ. ಅಲ್ಲದೆ ನೆಲದ ನಿಯಮದನ್ವಯ ಅದು ಇನ್ನಷ್ಟು ಕ್ಲಿಷ್ಟಕರ ಪ್ರಕ್ರಿಯೆಯಾಗಿದೆ. ಇದನ್ನರಿಯದ ಮೂಢಜನರು ಚರ್ಚಿಗೆ ತೆರಳಿ ತೀರ್ಥ ಪ್ರೋಕ್ಷಣೆಯಾದ ಕೂಡಲೇ ತಾವು ಕ್ರೈಸ್ತರಾದೆವೆಂದು ಭಾವಿಸಿಕೊಳ್ಳುತ್ತಾರೆ. ಇತರರೂ ಇದು ಹೌದೆಂದು ತಿಳಿದುಕೊಳ್ಳುತ್ತಾರೆ. ಕ್ರೈಸ್ತಧರ್ಮವೆಂಬುದು ಕೆಲವರಿಗೆ ವಂಶಪಾರಂಪರ್ಯದ ಬಳುವಳಿ ಮತ್ತೆ ಕೆಲವರಿಗೆ ಅದು ಒಂದು ದಿವ್ಯ ಅನುಭವ.

ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು, ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ ಎಂಬುದು ಕ್ರೈಸ್ತಧರ್ಮದ ತಿರುಳು. ಈ ತತ್ವವನ್ನಾಚರಿಸಿದವನೇ ನಿಜಕ್ರೈಸ್ತ. ಕ್ರೈಸ್ತ ಎನಿಸಿಕೊಳ್ಳವುದು ಉದಾತ್ತ ಮನೋವಿಕಾಸದ ಪರಮಾವಧಿ. ಹಾಗೆ ನೋಡಿದರೆ ಮಹಾತ್ಮಗಾಂಧಿಯವರು ಒಬ್ಬ ಅಪ್ಪಟ ಕ್ರೈಸ್ತ. ಇದರರ್ಥ ಕ್ರಿಸ್ತನನ್ನು ಅರಿಯಲು ಚರ್ಚಿಗೇ ಹೋಗಬೇಕೆಂದಿಲ್ಲ. ವಿಪರ್ಯಾಸವೆಂದರೆ ನಮ್ಮ ಚರ್ಚಿನ ಎಷ್ಟೋ ಪಾದ್ರಿಗಳು ಬಿಷಪರು ಕ್ರೈಸ್ತರೇ ಅಲ್ಲ. ಶಾಲೆ ಆಸ್ಪತ್ರೆಗಳಲ್ಲಿ ಹಣ ಸುಲಿಯುವ ಮನುಷ್ಯತ್ವವಿಲ್ಲದ ಕ್ರೈಸ್ತ ಸಂನ್ಯಾಸಿನಿಯರೂ ಕ್ರೈಸ್ತರೆನಿಸಿಕೊಳ್ಳಲು ಯೋಗ್ಯರಲ್ಲ.

ಶತಮಾನಗಳ ಹಿಂದೆಯೂ ಚರ್ಚು ಹೀಗೆ ತನ್ನ ಮೇರೆ ಮಿರಿದಾಗ ಮಾರ್ಟಿನ್ ಲೂಥರನು ಬಂಡಾಯವೆದ್ದು ಚರ್ಚಿನ ಹುಳುಕುಗಳನ್ನು ಎತ್ತಿ ತೋರಿದ. ತರುವಾಯ ಚರ್ಚು ತನ್ನ ಆತ್ಮಶೋಧನೆ ನಡೆಸಿ ಸ್ವಜನಪಕ್ಷಪಾತವನ್ನೂ ರಾಜಕೀಯವನ್ನೂ ದೂರವಿಟ್ಟು ವಿಚಾರವಂತಿಕೆಗೆ ಹಾಗೂ ಪ್ರಗತಿಪರ ಧೋರಣೆಗೆ ಪಕ್ಕಾಗಿದೆ. ಇಂದು ಚರ್ಚು ಪವಿತ್ರಬೈಬಲ್ ಮತ್ತು ತನ್ನದೇ ಆದ ನೀತಿಸಂಹಿತೆಗಳನ್ನು ಮುಂದಿಟ್ಟರೂ ನೆಲದ ನಿಯಮಗಳನ್ನೂ ವಿಜ್ಞಾನದ ಆವಿಷ್ಕಾರಗಳನ್ನೂ ಗೌರವಿಸುತ್ತಾ ಬರುತ್ತಿದೆ.