ಮತಾಂಧರ ಪೈಶಾಚಿಕ ಕೃತ್ಯ

ಮತಾಂಧರ ಪೈಶಾಚಿಕ ಕೃತ್ಯ

ರಾಜಸ್ಥಾನದಲ್ಲಿ ಕನ್ನಯ್ಯಲಾಲ್ ಎಂಬ ಹಿಂದೂ ದರ್ಜಿಯೊಬ್ಬನನ್ನು ಇಬ್ಬರು ಮುಸ್ಲಿಂ ಮತಾಂಧರು ಶಿರಚ್ಛೇದ ಮಾಡಿ ಹತ್ಯೆ ಮಾಡಿರುವುದು ಗಮನಿಸಿದರೆ ನಾವು ಭಾರತದಲ್ಲಿ ವಾಸಿಸುತ್ತಿದ್ದೇವೋ ಅಥವಾ ಅಫ್ಘಾನಿಸ್ತಾನದಲ್ಲೋ ಎಂಬ ಭೀತಿ ಹುಟ್ಟುವುದು ಸಹಜ. ಶಿರಚ್ಛೇದ ಮಾಡಿರುವ ವಿಡಿಯೋ ಕೂಡ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದನ್ನು ನೋಡಿದರೆ ಮುಸ್ಲಿಂ ಮತಾಂಧರ ಮಾನಸಿಕತೆಯು ಅದೆಷ್ಟು ಸೈತಾನೀಕರಣಗೊಂಡಿದೆ ಎಂದು ಅನಿಸದಿರದು. ನೂಪುರ್ ಶರ್ಮ ಕುರಿತಾದ ಪೋಸ್ಟೊಂದನ್ನು ಕನ್ನಯ್ಯಲಾಲ್ ನ ಪುತ್ರ ಅರಿವಿಲ್ಲದೇ ಶೇರ್ ಮಾಡಿದ ಕಾರಣಕ್ಕಾಗಿ ಕನ್ನಯ್ಯಲಾಲ್ ರನ್ನು ಈ ರೀತಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಕುರಿತಂತೆ ಈಗ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುತ್ತಿರುವುದು ಹಾಗೂ ಹಂತಕರಿಗೆ ವಿದೇಶಿ ನಂಟಿರುವ ಕುರಿತಂತೆ ಶೋಧಿಸಹೊರಟಿರುವುದು ಎಲ್ಲವೂ ಸರಿ. ಆದರೆ ಕೃತ್ಯವೆಸಗಿದವರು ಇದೇ ದೇಶದವರು ಎಂಬುದನ್ನಂತೂ ಮರೆಯಲಾಗದು. ಇವರಷ್ಟೇ ಅಲ್ಲ, ಇದೇ ಬಗೆಯ ಮನಸ್ಥಿತಿಯ ಮಂದಿಗಳು ದೇಶದೆಲ್ಲಡೆ ಹರಡಿ ಕೊಂಡಿದ್ದಾರೆ ಎಂಬುದೇ ಆತಂಕಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ "ಭಾರತದಲ್ಲಿಯೇ ಹಿಂದುಗಳೇ ಸುರಕ್ಷಿತರಲ್ಲ" ಎಂಬುದಾಗಿ ಬಾಂಗ್ಲಾ ದೇಶದ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿರುವ ಮಾತುಗಳು ಈ ಮತಾಂಧರ ಬೆದರಿಕೆಯು ದೇಶದ ಬಹುಸಂಖ್ಯಾತರಿಗೆ ಅದೆಷ್ಟು ಅಪಾಯಕಾರಿಯಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ.

ರಾಜಸ್ಥಾನ ಪೋಲೀಸರ ಕರ್ತವ್ಯ ಚ್ಯುತಿ ಕೂಡ ಕನ್ನಯ್ಯಲಾಲ್ ಹತ್ಯೆಗೆ ಹೇತುವಾಗಿದೆ. ತಮಗೆ ಜೀವಬೆದರಿಕೆ ಇರುವ ಕುರಿತಂತೆ ಕನ್ನಯ್ಯಲಾಲ್ ಪೋಲೀಸರಿಗೆ ಕೆಲವು ಬಾರಿ ದೂರು ನೀಡಿದ್ದರು. ಮುಸ್ಲಿಮರು ಅವರಿಗೆ ಅಂಗಡಿ ತೆರೆಯದಂತೆ ಅಡ್ಡಿ ಪಡಿಸುತ್ತಿರುವುದರ ಕುರಿತಂತೆ ತಿಳಿಸಿದ್ದರು. ಹಂತಕರಲ್ಲೊಬ್ಬನು ಕೆಲವು ದಿನಗಳ ಹಿಂದೆಯೇ ತಾನು ಕನ್ನಯ್ಯಲಾಲ್ ರನ್ನು ಕೊಲೆ ಮಾಡುವುದಾಗಿ ಹೇಳುವ ವಿಡಿಯೋ ಮಾಡಿ ಹರಿಬಿಟ್ಟಿರುವುದನ್ನು ಪೋಲೀಸರ ಗಮನಕ್ಕೆ ತಂದಿದ್ದರು. ಆದರೂ ಪೋಲೀಸರು ಈ ಕುರಿತಂತೆ ಯಾವುದೇ ಕ್ರಮ ತೆಗೆದುಕೊಂಡಿರದೆ ತೆಪ್ಪಗೆ ಕೂತಿದ್ದರು. ಎಷ್ಟಾದರೂ ಅಲ್ಲಿರುವುದು "ಜಾತ್ಯಾತೀತ ಸರಕಾರ" ತಾನೇ!

ನಮ್ಮಲ್ಲಿನ ಬುದ್ಧಿಜೀವಿಗಳು, ತಥಾಕಥಿತ ಜಾತ್ಯಾತೀತ ಮುಖಂಡರು, ಲಿಬರಲ್ ವಾದಿಗಳು ಈಗ ತುಟಿಗೆ ಬೀಗ ಹಾಕಿ ಕೂತಿದ್ದಾರೆ. ಮುಸ್ಲಿಮರೊಬ್ಬರ ಕಲ್ಲಂಗಡಿ ಹಣ್ಣು ಒಡೆದುದಕ್ಕೆ ಕುಯ್ಯೋಮುರ್ರೋ ಎಂದೆಲ್ಲಾ ಕೂಗು ಹಾಕಿದ ಮಂದಿ ಈಗ ಬಾಲ ಮಡಚಿ ಕೂತಿದ್ದಾರೆ. ದನಕಳ್ಳರಿಗೆ ಎರಡೇಟು ಹೊಡೆಯುವುದನ್ನೇ ಅಂತಾರಾಷ್ಟ್ರೀಯ ಸುದ್ದಿ ಮಾಡಿ ಬೊಬ್ಬೆ ಹಾಕುವ ಮಾಧ್ಯಮಗಳೆಲ್ಲ ಸಾಮಾಜಿಕ ಜಾಲತಾಣದ ಪ್ರಭೃತಿಗಳೆಲ್ಲ, ಮಾನವ ಹಕ್ಕು ಸಂಘಟನೆಗಳೆಲ್ಲ ಈಗ ಏನೂ ನಡೆದೇ ಇಲ್ಲವೇನೋ ಎಂಬಂತೆ ಕುರುಡಾಗಿ ಕೂತಿದ್ದಾರೆ. ಒಂದಂತೂ ನಿಜ, ಭಾರತವನ್ನು ಅಫ್ಘಾನಿಸ್ತಾನವನ್ನಾಗಿ ಮಾಡುವ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದೂ ಆಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೩೦-೦೬-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ