ಮತಿ ಮಾರ್ಜನ !

ಮತಿ ಮಾರ್ಜನ !

ದಂತ ಮಾರ್ಜನ, ಹಸ್ತ ಮಾರ್ಜನ, ಶರೀರ ಮಾರ್ಜನ ಹೀಗೆ ಅನೇಕ ಮಾರ್ಜನಗಳನ್ನು ಕೇಳಿದ್ದೇವೆ. “ಮತಿ ಮಾರ್ಜನ” ಏನಿದು? ಈ ಗೊಂದಲವು ಅನೇಕರಲ್ಲಿ ಈಗ ತಾನೇ ಹುಟ್ಟಿದ್ದರೆ ಅದಕ್ಕೆ ನಾನು ಕಾರಣನಲ್ಲ. ಆಂಗ್ಲ ಭಾಷೆಯಲ್ಲಿ, ‘Brain washing’ ಅಂತ ಹೇಳುವುದನ್ನೇ ನಾನು ಮತಿ ಮಾರ್ಜನ ಎಂದು ಹೇಳುತ್ತಿದ್ದೇನೆ.

ಪ್ರಪಂಚದಲ್ಲಿ ಮತಿ ಮಾರ್ಜನ ಪ್ರಕ್ರಿಯೆಗಳು ನಿರಂತರ. ನನ್ನ ಮತಿ ಮಾರ್ಜನ ಮಾಡ ಬಲ್ಲ ಬುದ್ಧಿವಂತರೇ ಹುಟ್ಟಿಲ್ಲ ಎಂದು ಬೀಗುವವರು ಅನೇಕರಿರಬಹುದು. ಆದರೆ ಅವರೆಲ್ಲರೂ ಹಲವೆಡೆ ಮತಿ ಮಾರ್ಜನ ಸಿದ್ಧಹಸ್ತರ ಬಲೆಗೆ ಬಿದ್ದ ಅತಿ ಬುದ್ಧಿವಂತರೆಂಬುದು ಮುಕ್ತ ಸತ್ಯ. ದಂತ, ದೇಹ, ಪಾತ್ರೆ, ವಸ್ತ್ರ, ಪಶು...... ಇತ್ಯಾದಿಗಳ ಮಾರ್ಜನಕ್ಕೆ ಮಾರ್ಜಕಗಳು ಬೇಕೇ ಬೇಕು. ಆದರೆ ಮತಿ ಮಾರ್ಜನಕ್ಕೆ ಬೇಕಾದ ಮಾರ್ಜಕ ವಿಶೇಷವಾದುದು ಮತ್ತು ಬಹಳ ಶಕ್ತಿಶಾಲಿಯಾದುದು. ಒಂದರಲ್ಲಿ ಮತಿ ಮಾರ್ಜನ ಮಾಡಿಸಿಕೊಂಡವರನ್ನು ಅದೇ ಮಾರ್ಜಕ ಬಳಸಿ ಇನ್ನೊಬ್ಬನು ಮಗದೊಂದು ವಿಚಾರದಲ್ಲಿ ಮತಿ ಮಾರ್ಜನ ಮಾಡಲು ಸಾಧ್ಯ. ಆದರೆ ಆತನ ಮಾರ್ಜಕದ ಸಾಮರ್ಥ್ಯ ಇನ್ನೂ ಹೆಚ್ಚು ಬಲಶಾಲಿಯಾಗಿಯೇ ಇರಬೇಕಾಗುತ್ತದೆ.

ಪ್ರತಿಯೊಬ್ಬರೂ ಹುಟ್ಟುವಾಗಲೇ ಮತಿ ಮಾರ್ಜಕವನ್ನು ಧರಿಸಿ ಹುಟ್ಟುತ್ತಾರೆ. ಭಗವಂತನ ಸೃಷ್ಟಿಯಲ್ಲಿ ಕುರುಡರಿರಬಹುದು, ಕಿವುಡರಿರಬಹುದು, ಅಂಗವಿಕಲರಿರಬಹುದು. ಅವರು ಮೂಕರಾಗಿದ್ದರೂ ನಾಲಿಗೆಯಿರದ ಮನುಷ್ಯರಿಲ್ಲ. ಇದ್ದರೆ ಅವರು ಬದುಕುವಂತಿಲ್ಲ. ಹೊಟ್ಟೆಗೆ ಆಹಾರವನ್ನು ತಳ್ಳಲು ನಾಲಿಗೆಯ ಹೊರತು ಬೇರೇನಾದರೂ ಇದ್ದರೆ, ಅದು ಆಹಾರ ಚುಚ್ಚುವ ವೈದ್ಯ ವಿಧಾನ ಮಾತ್ರ. ನಾಲಿಗೆಯಿಲ್ಲದೇ ಇದ್ದರೆ ಮತಿ ಮಾರ್ಜನ ಸಾಧ್ಯವೇ ಇಲ್ಲ. ನಾಲಿಗೆಯ ಮೂಲಕ ತನ್ನ ವಿಚಾರಗಳನ್ನು ಪುಂಖಾನುಪುಂಖವಾಗಿ ಹರಿಯಬಿಡಲು ಯಾರಿಗೆ ಸಾಧ್ಯವಾಗುತ್ತದೆಯೋ ಅವರಿಗೆ ಮಾತ್ರ ಮತಿ ಮಾರ್ಜನ ಬಹಳ ಸುಲಭ. ನಾಲಗೆಯಲ್ಲಿ ವಿಶೇಷ ಶಕ್ತಿಯಿರುವವರಿಗೆ ಅತ್ಯದ್ಭುತವಾಗಿ ಮತಿ ಮಾರ್ಜನ ಮಾಡುವುದು ಲೀಲಾಜಾಲ.

ಮತಿ ಮಾರ್ಜನದ ಮೂಲಕ ವ್ಯಕ್ತಿಯ ನಿರ್ಧಾರಗಳನ್ನು ಕೈಬಿಡುವಂತೆ ಅಥವಾ ಬದಲಾಯಿಸುವಂತೆ ಮಾಡುತ್ತಾರೆ. ಇಲ್ಲಿಯೂ ಮಾತಿನ ಚುರುಕುತನ ಮತ್ತು ಮೇಧಾ ಶಕ್ತಿಗಳು ಕೆಲಸ ಮಾಡುತ್ತವೆ. ಆತ್ಮಹತ್ಯೆಗೆ ಹೊರಟವರನ್ನೂ ಮತಿ ಮಾರ್ಜನದ ಮೂಲಕ, ಅವರು ಬದುಕು ಮುಂದುವರಿಸುವಂತೆ ಮಾಡುವರು. ಜೀವರಕ್ಷಣೆ ಮಾಡುವ ಮತಿ ಮಾರ್ಜನ ಸುರಕ್ಷಿತ ಮತ್ತು ಅಪೇಕ್ಷಿತ. ಹೆತ್ತವರನ್ನು ಮನೆಯಿಂದ ಹೊರದಬ್ಬಿದ ಮಕ್ಕಳ ಮತಿ ಮಾರ್ಜನ ಮಾಡಿ ಹೆತ್ತವರು ಮತ್ತು ಮನೆ ಸೇರುವಂತೆ ಮಾಡುವುದೂ ಸುಯೋಗ್ಯ.. ಸಮಾಜದಲ್ಲಿ ಧನಾತ್ಮಕತೆ ತುಂಬುವಂತಹ ಎಲ್ಲ ಮತಿ ಮಾರ್ಜನಗಳೂ ಹಿತಾನುಭವವನ್ನೇ ನೀಡುತ್ತವೆ.

ಮಿಥ್ಯ ಮತ್ತು ಚಾಣಾಕ್ಷ ಮಾತುಗಳ ಮೂಲಕ ಕುಟುಂಬ ಛಿನ್ನಗೊಳಿಸುವ ಮತಿ ಮಾರ್ಜನಗಳು ಅಪಾಯಕಾರಿ. ಬಹಳಷ್ಟು ವಿವಾಹ ವಿಚ್ಛೇದನಗಳ ಹಿಂದೆ ಯಾರೋ ಒಬ್ಬರ ಅಥವಾ ಅನೇಕರ ಮತಿ ಮಾರ್ಜಕ ತಂತ್ರಗಳ ನೆರಳಿರುವುದೂ ಇದೆ. ತಮ್ಮ ಧರ್ಮ, ಮತ ಅಥವಾ ಆಚಾರಗಳು ಹೆಚ್ಚು ಶ್ರೇಷ್ಠ ಎಂದು ವಾದಿಸುವ ಮತಿ ಮಾರ್ಜಕರೂ ಇದ್ದಾರೆ. ರಾಜಕೀಯ ವ್ಯಕ್ತಿಗಳೂ ಅವರ ಗೆಲುವಿಗಾಗಿ ಮತಿ ಮಾರ್ಜನ ಮಾಡುತ್ತಾರೆ. ಅವರ ಅಸಲೀಯತ್ತು ಅಧಿಕಾರವೇರಿದೊಡನೆ ಬಹಿರಂಗವಾಗಿ ತಲೆಚಚ್ಚುವುದೂ ಇದೆ.

ಮಾರುಕಟ್ಟೆಯಲ್ಲಿ ತಮ್ಮ ಉತ್ಪಾದನೆಗಳಿಗೆ ಹೆಚ್ಚು ಬೇಡಿಕೆ ಬರುವಂತೆ ಮಾಡುವ, ಸ್ವಂತ ಲಾಭದ ಉದ್ದೇಶದಲ್ಲಿಯೂ ಮತಿ ಮಾರ್ಜನಗಳು ನಡೆಯುತ್ತವೆ. ಜಾಹೀರಾತು ಎಂದು ನಾವು ಹೇಳುವ ಸಂಗತಿಯೊಳಗೂ ಮತಿ ಮಾರ್ಜನದ ಸೊಗಡಿದೆ. ಕೆಲವು ಉತ್ಪಾದಕ ಸಂಸ್ಥೆಗಳು ತಮ್ಮ ಗ್ರಾಹಕರ ಸಂಖ್ಯೆಯನ್ನು ಅಧಿಕರಿಸಲು ಮತಿ ಮಾರ್ಜಕ ದಲ್ಲಾಳಿಗಳನ್ನು ನೇಮಿಸಿ ಕೊಳ್ಳುವುದೂ ಇದೆ. ಅವರು ಮತಿ ಮಾರ್ಜನ ನಡೆಸಲು ಅನುಸರಿಸಬೇಕಾದ ತಂತ್ರ ಕುತಂತ್ರಗಳ ಬಗ್ಗೆ ಮಾರ್ಜನ ಪರಿಣತರಿಂದ ತರಬೇತನ್ನೂ ನೀಡಲಾಗುತ್ತದೆ. ನಾಲಿಗೆಯ ಚತುರತನವನ್ನು ಬಳಸಿ ಮೋಸಗೊಳಿಸುವ ಪೂರೈಕೆದಾರರ ವರ್ಗವೂ ಇದೆ. ಉತ್ತಮ ಗುಣ ಮಟ್ಟ, ದೀರ್ಘಬಾಳಿಕೆ, ಕಡಿಮೆ ಬೆಲೆ, ಬಳಕೆ ಸುಲಭ, ಸುಲಭ ದುರಸ್ತಿ ಹೀಗೆ ಹಲವು ಅದ್ಭುತ ಆಮಿಷಗಳ ಮೂಲಕ ಮತಿ ಮಾರ್ಜನ ಮಾಡಿ ಗ್ರಾಹಕರನ್ನು ವಶಗೊಳಿಸುವ ಆದರೆ ಕಳಪೆ ವಸ್ತುಗಳನ್ನು ಪೂರೈಸುವ ಮೋಸವೂ ಇರುತ್ತದೆಂಬ ಸತ್ಯದ ಅರಿವಿದ್ದರೂ ನಾವು ನಾಲಿಗೆಯ ಚಾತುರ್ಯಕ್ಕೆ ಬಲಿಬೀಳುತ್ತೇವೆ, ನಮ್ಮ ಜೇಬಿಗೆ ಕತ್ತರಿ ಹಾಕಿಸುತ್ತೇವೆ. 

ನಮ್ಮ ಪಕ್ಕದ ಮನೆಗೊಬ್ಬ ತಗಣೆ ಕೊಲ್ಲುವ ಯಂತ್ರದ ಮಾರಾಟಗಾರನೊಬ್ಬ ಬಂದಿದ್ದ. ಇದರ ಬೆಲೆ ಕೇವಲ ಇನ್ನೂರು ರೂಪಾಯಿಗಳು ಮಾತ್ರ ಎಂದು ಹೇಳಿ ಹಣ ಪಡೆಯುತ್ತಿದ್ದ. ತನ್ನ ಯಂತ್ರದ ಅತಿ ಮಹಾತ್ಮ್ಯೆಗಳನ್ನು ವರ್ಣಿಸಿ ಎಲ್ಲರ ಮತಿ ಮಾರ್ಜನ ಮಾಡಿದ. ಒಂದುವಾರದಲ್ಲಿ ಈ ಉಪಕರಣ ನಿಮ್ಮ ಮನೆ ಸೇರುತ್ತದೆಂದು ಹೇಳುತ್ತಾ ಮನೆ ಮನೆಗೆ ಹೋಗುತ್ತಾ ವಿಳಾಸ ಮತ್ತು ಹಣ ಸಂಗ್ರಹಿಸಿ ರಶೀದಿ ನೀಡುತ್ತಿದ್ದ. ಎಲ್ಲರೂ ಈ ಸುಲಭ ಬೆಲೆಯ ಯಂತ್ರಕ್ಕೆ ದಾರಿ ನೋಡ ತೊಡಗಿದರು. ಹತ್ತು ದಿನ ಕಳೆದಾಗ ಅವರೆಲ್ಲರಿಗೂ ಕೊರಿಯರ್ ಬಂತು. ಸಣ್ಣ ಪೆಟ್ಟಿಗೆ. ಅದರೊಳಗೆ ಎರಡು ಬೆಂಕಿ ಪೊಟ್ಣಣ ಮತ್ತೊಂದು ಸಣ್ಣ ವಿವರಣಾ ಪತ್ರ. “ಬೆಂಕಿ ಪೆಟ್ಟಿಗೆಯಿಂದ ಒಂದು ಕಡ್ಡಿ ತೆಗೆದು ಗೀರಿ ತಿಗಣೆಯ ಮೇಲಿಡಿ. ತಿಗಣೆ ಢಮಾರ್. ಒಂದು ತಿಗಣೆಗೆ ಬಳಸಿದ ಕಡ್ಡಿ ಇನ್ನೊಂದು ತಿಗಣೆಗೆ ಬಳಸುವಂತಿಲ್ಲ. ಮಕ್ಕಳಿಗೆ ಎಟುಕದಂತೆ ಪೆಟ್ಟಿಗೆಯನ್ನು ಅಡಗಿಸಿಡಿ. ಕಡ್ಡಿ ಗೀರುವಾಗ ಕಿಡಿಗಳು ಹಾರದಿದ್ದರೆ ಪೆಟ್ಟಿಗೆಯನ್ನು ಸೂರ್ಯನ ಶಾಖದಲ್ಲಿಡಿ. ಎಚ್ಚರಿಕೆಯಿರಲಿ. ನಮಸ್ಕಾರ".

ಆತ ಒಂದು ಹಳ್ಳಿಯಲ್ಲೇ ತಗಣೆಯಂತ್ರದ ಬಗ್ಗೆ ಮತಿ ಮಾರ್ಜನ ಮಾಡಿ ಬಹಳಷ್ಟು ಸಂಪಾದಿಸಿದ. ಒಬ್ಬನಿಗೆ ಮಾರಾಟಗಾರನ ವ್ಯಯ ಹೆಚ್ಚೆಂದರೆ ಇಪ್ಪತ್ತೈದು ರೂಪಾಯಿಗಳು. ಉಳಿದ ಹಣ ಗುಳುಂ. ಕೈಜಾರಿದ ಮೇಲೆ ಏನೂ ಮಾಡಲಾಗದು. ಜಾರುವ ಮೊದಲು ನಮ್ಮನ್ನು ನಾವೇ ಮತಿ ಮಾರ್ಜನ ಮಾಡುವ ಅಗತ್ಯವಿದೆ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ