ಮತೀಯತೆ ಬಿಟ್ಟು ವಿಶಾಲ ಮನೋಭಾವ ಹೊಂದಬೇಕು

ಮತೀಯತೆ ಬಿಟ್ಟು ವಿಶಾಲ ಮನೋಭಾವ ಹೊಂದಬೇಕು

ಕಳೆದ ಒಂದು ವಾರದಿಂದ ಉಡುಪಿ ಕುಂದಾಪುರ ಸರಕಾರಿ ಕಾಲೇಜುಗಳು ದೇಶದ ಗಮನ ಸೆಳೆದಿವೆ. ಅಲ್ಲಿನ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುವ ಮೂಲಕ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವೇ ಕಡ್ಡಾಯವೇ ಹೊರತು ಬೇರೇನೂ ಅಲ್ಲ. ಶಿಕ್ಷಣ ಸಂಸ್ಥೆಯಲ್ಲಿ ಧರ್ಮ, ಜಾತಿ ಮೀರಿ ಎಲ್ಲರೂ ಒಂದೇ ಎಂಬ ಭಾವನೆ, ಭಾರತ ಮಾತೆಯ ಮಕ್ಕಳು ಎಂಬ ರಾಷ್ಟ್ರ ಪ್ರೇಮ ಇರಬೇಕು. ಪೂಜೆ, ಧಾರ್ಮಿಕ ಕಾರ್ಯಗಳು ದೇವಾಲಯ, ಮಸೀದಿಗಳಲ್ಲಿ ಇರಬೇಕೇ ವಿನಹ ಜ್ಞಾನಾರ್ಜನೆ ಮಾಡಿಕೊಳ್ಳುವ ಕಾಲೇಜಿನಲ್ಲಲ್ಲ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವಂತೆ ಹೈಕೋರ್ಟ್ ನಲ್ಲಿ ಪಿಐಎಲ್ ಸಜ್ಜಾಗಿದ್ದನ್ನು ನೋಡಿದರೆ ಮೇಲ್ನೋಟಕ್ಕೆ ಇಲ್ಲಿ ಬರೀ ವಿದ್ಯಾರ್ಥಿಗಳ ಪಾತ್ರ ಇದ್ದಂತೆ ಕಾಣುತ್ತಿಲ್ಲ. ಇವರ ಹಿಂದೆ ಮತೀಯ ಸಂಘಟನೆಗಳು ಖಂಡಿತವಾಗಿಯೂ ಕೆಲಸ ಮಾಡುತ್ತಿವೆ. ಹೀಗಾಗಿ ಪೋಲೀಸರು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿರುವ ಇಂತಹ ಮತೀಯ ಸಂಘಟನೆಗಳ ಪುಡಾರಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ವಿದ್ಯಾರ್ಥಿಗಳ ತಲೆಗೆ ಇಲ್ಲಸಲ್ಲದ್ದನ್ನು ತುಂಬಿ ದಾರಿ ತಪ್ಪಿಸುವ ಮೂಲಕ ದೇಶದ ಏಕತೆಗೆ ಅಡ್ಡಗಾಲು ಹಾಕುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆಯಾ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿ ಪಡಿಸಿರುವ ಸಮವಸ್ತ್ರ ಹೊರತು ಪಡಿಸಿ ಕೇಸರಿ ಶಾಲು, ಹಿಜಾಬ್ ಧರಿಸಲು ಯಾವುದೇ ಅವಕಾಶ ಕೊಡಬಾರದು ಎಂಬ ಫರ್ಮಾನು ಹೊರಡಿಸಬೇಕಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮತೀಯತೆ ತುಂಬಿಕೊಂಡಿರುವ ವಿದ್ಯಾರ್ಥಿಗಳಿಂದ ಈ ದೇಶಕ್ಕೆ ಏನೂ ಕೊಡುಗೆ ನಿರೀಕ್ಷಿಸಲು ಆಗದು. ಹೀಗಾಗಿ ವಿದ್ಯಾರ್ಥಿಗಳು ಎಂಬ ಕರುಣೆ ತೋರದೇ ಕೂಡಲೇ ಇಂಥವರ ವಿರುದ್ಧ ಎಫ್ ಐ ಆರ್ ದಾಖಲಿಸಿ ಜೈಲಿಗಟ್ಟಬೇಕಿದೆ. ಇಲ್ಲವಾದಲ್ಲಿ ವಿದ್ಯಾಭ್ಯಾಸದ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕು ಎಂಬ ಆಶಾಭಾವನೆ ಹೊಂದಿರುವ ವಿದ್ಯಾರ್ಥಿಗಳಿಗೆ ನಿರಾಸೆಯಾಗುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಮತೀಯವಾದಕ್ಕೆ ವಿದ್ಯಾರ್ಥಿಗಳನ್ನೇ ದಾಳವಾಗಿಸಿಕೊಳ್ಳುವ ಪ್ರವೃತ್ತಿಯನ್ನು ಆರಂಭದಲ್ಲೇ ಚಿವುಟಿ ಹಾಕದಿದ್ದರೆ ಮುಂದೊಂದು ದಿನ ದೇಶಾದ್ಯಂತ ಹಬ್ಬಿ ದೇಶದ ಏಕತೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಕೃಪೆ: ವಿಶ್ವವಾಣಿ ಪತ್ರಿಕೆ, ಸಂಪಾದಕೀಯ, ದಿ. ೦೪-೦೨-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ