ಮತ್ತಷ್ಟು ಹನಿಗಳು !
ಕಾಲಮಾನ
ಹೋಗುವಾಗ
ವಿತಂಡವಾದದ
ಉದ್ರಿಕ್ತ ಮನ;
ಬೇರೆ ಬೇರೆ
ವಿಶೇಷ ವಿಮಾನ
ಪ್ರಯಾಣ...
ಬರುವಾಗ
ಒಂದು ಗೂಡಿದ
ಉಲ್ಲಸಿತ ಮನ;
ಒಂದೇ ವಿಮಾನದಲಿ
ಒಂದುಗೂಡಿದ
ಯಾನ!
ನಾವೇನು
ಮಾಡುವುದು
ನಮ್ಮದೇನಿಲ್ಲ...
ಎಲ್ಲಾ ನಮ್ಮ
ಕೆಟ್ಟ ವಿಧಿಯ
ಕಾಲಮಾನ!
***
ಗದ್ದುಗೆಯಾಟ
ಕೊಂಬ ಟಗರು
ಯಾರಿಗೂ
ಗುದ್ದದೇ
ಗೆದ್ದಿತಲ್ಲ...
ಶಿವನುರಿ
ಬಂಡೆಯೂ
ತಣ್ಣಗೆ ಕರಗಿ
ಸರಿಯಿತಲ್ಲಾ...
ಕನ್ನಡಿಗರು
ಕನ್ನಡಿಯ
ಗಂಟಿಗಾಗಿ
ಕಾಯುತಿಹರಲ್ಲ!
***
ಸರ್ಕಾರ
ಹಿಂದಿನದು
ಡಬಲ್ ಎಂಜಿನ್
ಸರ್ಕಾರ;
ಮುಂದಿನದು
ಜೋಡೆತ್ತಿನ ಗಾಡಿ
ಪ್ರಾಕಾರ;
ಇರಲಿ ನಿಮಗೊಂದು
ಮೂಗುದಾರ...
ವೇಗಾವೇಗಗಳು
ಮುಖ್ಯವಲ್ಲ;
ನೀವೆಷ್ಟು ಭಾರವ
ಹೊತ್ತು ಸರಕನು
ತರುವಿರೆಂಬುದೇ
ಜನರ ನಿರೀಕ್ಷೆ;
ಹುಸಿ ಮಾಡದಿರಿ
ಇದು ಜನಾಪೇಕ್ಷೆ!
***
ಭ್ರಷ್ಟ
ಜನರನ್ನು
ದುಡಿದು
ತಿನ್ನುವಂತೆ
ಮಾಡುವುದೇ
ಯೋಗ್ಯ
ಸರ್ಕಾರ...
ನಾನೇ
ಅಯೋಗ್ಯ;
ಸೋಮಾರಿ
ಎನ್ನುತ್ತಿದ್ದಾನೆ
ಈ ಭ್ರಷ್ಟ
ಮತದಾರ!
***
ಶ್ರೀ ಸಾಮಾನ್ಯ
ಸತ್ಯ ಹೇಳಿ
ಹರಿಶ್ಚಂದ್ರ
ಸ್ಮಶಾನ ಕಾದ;
ಸುಳ್ಳು ಹೇಳಿ
ಧರ್ಮರಾಯ
ಕುರುಕ್ಷೇತ್ರ ಗೆದ್ದ....
ನಾನು
ಹೇಗಿರಲಿ?
ಎಂದು
ಶ್ರೀಸಾಮಾನ್ಯ
ಹತಾಶೆಯಲಿ
ಚಿಂತೆಗೆ ಬಿದ್ದ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ