ಮತ್ತಷ್ಟು ಹನಿಗಳು...!
ಕವನ
ಮಹಾ ಸಾಗರ...
ವಿಶಾಲ ಸಾಗರದ
ಗಾಂಧಿಯೆಂಬ
ಮಹಾತ್ಮನನೇ
ಈ ಜಗ ಮರೆತು
ಮೋಜಿನಲಿ
ಮೈ ಮರೆತಿರುವಾಗ...
ಪರಿಮಿತಿಯ
ಬಾವಿಯಲಿರುವ
ಮದೋದಕ
ಮಂಡೂಕಗಳ
ಸ್ಥಿತಿಯದೇನೋ
ಮಹದೇಶ್ವರಾ...?
***
ನಮ್ಮದೇನು ಮಹಾ...?
ಬಾ ಪ್ರಿಯೇ-
ವಿಶ್ವದ ಅತಿರಥ
ಮಹಾರಥರಾದ
ಆಮ್ಲಜನಕ
ಇಂಗಾಲ
ಜಲಜನಕಗಳೆಂಬ ಹವಾ...
ಸೋತು ಸಹಕರಿಸಿ
ಸಹ ಬಾಳ್ವೆಯಲಿ ಬೆರೆತು
ಸಹಸ್ರ ಸಹಸ್ರ
ವಸ್ತುಗಳ ಸೃಷ್ಟಿಗೆ
ಕಾರಣರಾಗಿಹರಲ್ಲ-
ನಮ್ಮದೇನು ಮಹಾ...?
***
ತೊಳೆಯೆ ಬಾ...
ಎನ್ನ
ಹೊರಗೆಲ್ಲಿದೆ
ಕೊಳೆ...?
ಅಂತರಂಗದಲ್ಲಿಹುದೇ
ಕೊಳೆಯ
ಹೊಳೆ...
ನನ್ನ
ಅಂತರಂಗ
ಬಹಿರಂಗಗಳ
ತೊಳೆಯ ಬಾ
ಓ ಸದ್ಬುದ್ಧಿಯ
ಮಳೆ!
***
ಅಸಾಧ್ಯ
ನನ್ನ ನೋವು-ನಲಿವು
ಭಾವವ ನೀನರ್ಥ
ಮಾಡಿಕೊಳ್ಳುವುದು
ಅಷ್ಟು
ಸುಲಭವಲ್ಲ
ಗೆಳೆಯಾ...
ನನ್ನಂತರಾಳಕೆ
ನೀನಿಳಿಯಲಾರೆ;
ನೀನಿಳಿದೊಡೆ-
ನಾನಾಗಿಬಿಡುವೆ!
ಈ ಜನ್ಮದಲಿ
ಆದಾಗದು ತಿಳಿಯ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್