ಮತ್ತೆ ಅಳಬಾರದು

ಮತ್ತೆ ಅಳಬಾರದು

ಕವನ



ಮರುಭೂಮಿಯ ಉರಿಬಿಸಿಲಲ್ಲಿ
ಸುಡುತ್ತಿವೆ ಬೆತ್ತಲೆ ಪಾದಗಳು
ನೆರಳನ್ನರಸಿ ಹೊರಟಿದ್ದೇನೆ
ಕಾಲಿನ ಬೊಬ್ಬೆಗಳನ್ನು ಲೆಕ್ಕಿಸದೆ,
ಅಳಬಾರದೆಂಬ ನಿಶ್ಚಯದೊಡನೆ .

ಬರಡು ನೆಲದ ಮೇಲೆ ಬಿರುಗಾಳಿಯಬ್ಬರ
ಧೂಳಿನಬ್ಬರಕ್ಕೆ ಮುಚ್ಚಿವೆ ಎರಡೂ ಕಣ್ಣುಗಳು
ಗುರಿ ಅಸ್ಪಷ್ಟ, ಆದರೂ ಭರವಸೆ,
ಮುಂದೆ ಸಾಗುತ್ತಿದೆ ಪಯಣ
ಅಳಬಾರದೆಂಬ ನಿಶ್ಚಯದೊಡನೆ.

ಕಾನನದ ನಡುವೆ ಕಾರ್ಗತ್ತಲು
ಜೊತೆ, ಮುಂದೇನಾಗುವುದೋ ಎಂಬ ಭಯ,
ಹೆಜ್ಜೆ ಹೊರಳಿದ್ದೇ ದಾರಿ?
ಮಿನುಗು ಹುಳಗಳ ಬೆಳಕಿನಾಶ್ರಯದಲ್ಲಿ,
ಮತ್ತೆ ಅಳಬಾರದೆಂಬ ನಿಶ್ಚಯದೊಡನೆ.

ಝರಿ ತೊರೆಗಳ ಹಾದಿಯಲ್ಲಿ
ಏರು ತಗ್ಗುಗಳ ಅಡೆತಡೆಯಲ್ಲಿ,
ಮುಳ್ಳು ಗೀರಿನ ಗಾಯಕೆ
ಹಸಿ ಸೊಪ್ಪಿನ ರಸವ ಲೇಪಿಸಿ,
ಮತ್ತೆ ಅಳಬಾರದೆಂಬ ನಿಶ್ಚಯದೊಡನೆ ..

ಇಳಿಸಂಜೆಯ ಹೊತ್ತಲ್ಲಿ,
ಸಮುದ್ರ ತೀರದ ಬಿಸಿ ಬೀಸುಗಾಳಿಗೆ
ಮುಖವೊಡ್ಡಿ ನಿಂತಿದ್ದೇನೆ
ಕಣ್ಣೀರು ಆರಲೆಂದು,
ಮತ್ತೆ ಅಳಬಾರದೆಂಬ ನಿಶ್ಚಯದೊಡನೆ.

ಜಡಿಮಳೆಗೆ ಮಯ್ಯೊಡ್ಡಿ
ಮಳೆಹನಿಗಳ ಜೊತೆಗೆ ಮತ್ತೆರಡು ಕಂಬನಿಗಳ ಸೇರಿಸಿ
ಗಮ್ಯದತ್ತ ಭಾರವಾದ ಹೆಜ್ಜೆಗಳನ್ನಿಟ್ಟು ಸಾಗುತ್ತಿದ್ದೇನೆ,
ಮತ್ತೆ ಅಳಲೇ ಬಾರದು,
ಅತ್ತರೂ ಇನ್ನಾರೂ ನೋಡಲೇ ಬಾರದು ಎನ್ನುವ ನಿಶ್ಚಯದೊಡನೆ ..!!

 
 

ಚಿತ್ರ್