ಮತ್ತೆ ಕರೋನಾ ಭೀತಿ : ಇರಲಿ ಎಚ್ಚರ

ಮತ್ತೆ ಕರೋನಾ ಭೀತಿ : ಇರಲಿ ಎಚ್ಚರ

ವಿಶ್ವದಾದ್ಯಂತ ಪ್ರತಿದಿನ ೫.೮೭ ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ದಿನಗಳಿಂದ ಚೀನಾದಲ್ಲಿ ಸೋಂಕಿನ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ, ಫ್ರಾನ್ಸ್, ಗ್ರೀಸ್, ಇಟಲಿ ಸೇರಿ ಹಲವು ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಭಾರತದಲ್ಲಿ ದಿನಕ್ಕೆ ಸರಾಸರಿ ೧೫೩ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಎರಡು ವರ್ಷಗಳ ಹಿಂದೆ ಕೋವಿಡ್ ಕಲಿಸಿದ ಪಾಠಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾದ ಸಂದರ್ಭ ಬಂದಿದೆ. ಎರಡು ವರ್ಷಗಳ ಹಿಂದೆ ಕೋವಿಡ್ ೨ನೇ ಅಲೆ ಬಂದಾಗ ಲಾಕ್ಡೌನ್ ಅನಿವಾರ್ಯವಾಗಿತ್ತು. ಆ ಸಮಯದಲ್ಲಿ ಜನಸಾಮಾನ್ಯರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ. ರೋಗ ಭೀತಿಯ ಜೊತೆಗೆ, ದುಡಿಮೆಯ ಅವಕಾಶಗಳೂ ಇಲ್ಲದೆ ಜನಸಾಮಾನ್ಯರು ಪಡಿಪಾಟಲು ಅನುಭವಿಸುವಂತಾಯಿತು. ಪರಿಣಾಮವಾಗಿ ದೇಶದ ಆರ್ಥಿಕತೆಗೆ ಭಾರೀ ಪೆಟ್ಟುಬಿತ್ತು. ಕರೋನಾ ತೀವ್ರತೆ ಇಳಿಮುಖವಾದ ನಂತರ ಜನಜೀವನ ಬಹುತೇಕ ಯಥಾಸ್ಥಿತಿಗೆ ಮರಳಿದ್ದರೂ ಆರ್ಥಿಕ ವ್ಯವಸ್ಥೆ ಸುಧಾರಿಸಲು ಬಹಳಷ್ಟು ಸಮಯ ಬೇಕಿತ್ತು. ಇಂಥ ಸಂದಿಗ್ಧ ಸಂದರ್ಭದಲ್ಲಿ ಕರೋನಾದ ಮತ್ತೊಂದು ಅಲೆ ದಾಳಿಯಿಟ್ಟಿದೆ. ಈ ಐದನೇ ಅಲೆ ಕೈ ಮೀರದಂತೆ ನೋಡಿಕೊಳ್ಳಬೇಕಾದ ಸವಾಲು ನಮ್ಮ ಎದುರಿಗಿದೆ. ಪ್ರತಿಯೊಬ್ಬರೂ ಉದಾಸೀನ ಮಾಡದೆ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಸೋಂಕನ್ನು ನಿಯಂತ್ರಿಸುವ ಹೋರಾಟದಲ್ಲಿ ಪರಿಣಾಮಕಾರಿಯಾದ ತಂತ್ರ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಹಾಗೂ ಶುಚಿತ್ವದ ಪಾಠಗಳ ಅನುಸರಣೆಯು ಕರೋನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲವು ಎನ್ನುವುದು ಈಗಾಗಲೇ ಸಾಬೀತಾಗಿದೆ. ಈ ಸರಳ ಸಂಗತಿಗಳನ್ನು ನಿರ್ಲಕ್ಷ್ಯ ಮಾಡದೆ ಪಾಲಿಸುವುದು ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯವಾದುದು. ಮುಂಬರುವ ಹಬ್ಬಗಳು ಮತ್ತು  ಹೊಸ ವರ್ಷಾಚರಣೆಯ ವೇಳೆ ಜನರು ವೈಯಕ್ತಿಕ ಅಂತರ, ಸ್ವಚ್ಛತೆ ಕಾಯ್ದುಕೊಳ್ಳುವುದು, ಕಡ್ಡಾಯ ಮಾಸ್ಕ್ ಧರಿಸುವಿಕೆ ಹಾಗೂ ಕೋವಿಡ್ ಮಾರ್ಗಸೂಚಿ ಪಾಲನೆಗೆ ಒತ್ತು ಕೊಡಬೇಕಾಗಿದೆ. ಇಲ್ಲವಾದರೆ ಸರಕಾರಕ್ಕೆ ಮತ್ತೊಂದು ಲಾಕ್ಡೌನ್ ಮಾಡುವುದು ಅನಿವಾರ್ಯವಾಗುತ್ತದೆ. ಆಗ ಸಹಜವಾಗಿಯೇ ಜನಸಮೂಹ ಕಂಗಾಲಾಗಬೇಕಾಗುತ್ತದೆ. ಆ ಸ್ಥಿತಿಯನ್ನು ತಂದು ಕೊಳ್ಳದಿರುವುದು ನಮ್ಮ ಕೈಯಲ್ಲೇ ಇದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೩-೧೨-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ