ಮತ್ತೆ ಕಾಶ್ಮೀರದಲ್ಲಿ ಹೆಚ್ಚಾದ ಹಿಂದೂಗಳ ಹತ್ಯೆ...

ಮತ್ತೆ ಕಾಶ್ಮೀರದಲ್ಲಿ ಹೆಚ್ಚಾದ ಹಿಂದೂಗಳ ಹತ್ಯೆ...

ಅಲ್ಪಸಂಖ್ಯಾತರನ್ನು ರಕ್ಷಿಸದ, ಅವರ ಜೀವಕ್ಕೆ ಭದ್ರತೆ ಒದಗಿಸದ, ಅವರನ್ನು ಸಹೋದರತೆಯಿಂದ ಕಾಣದ ಯಾವ ಧರ್ಮವೂ ಧರ್ಮವಲ್ಲ. ಮನುಷ್ಯ ಜೀವ ಕೊಲ್ಲುವ ಎಲ್ಲಾ ಧಾರ್ಮಿಕ ನಂಬಿಕೆಗಳು ಅಪಾಯಕಾರಿ. ಯಾವುದೇ ರೀತಿಯ ಅಲ್ಪಸಂಖ್ಯಾತರ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿ ಇಲ್ಲದಿದ್ದರೆ ಮಾನವೀಯ ಮೌಲ್ಯಗಳನ್ನು ಧಾರ್ಮಿಕ ನಂಬಿಕೆಗಳಿಗೆ ಅಡವಿಟ್ಟಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ನಿಜವಾದ ಧಾರ್ಮಿಕ ಆಚರಣೆಯ ಮೌಲ್ಯವಿರುವುದೇ ಭಿನ್ನ ಧರ್ಮದ ಜನರೊಡನೆ ಪ್ರೀತಿ ಸೌಹಾರ್ದತೆಯಿಂದ ಬದುಕಿದಾಗ. ಏಕೆಂದರೆ ನಮ್ಮ ನಮ್ಮ ಧರ್ಮಗಳನ್ನು ಇಷ್ಟಪಡುವುದರಲ್ಲಿ ವಿಶೇಷತೆ ಏನು ಇಲ್ಲ. ಅದು ಸಹಜ ಕ್ರಿಯೆ. ಆದರೆ ಇತರೆ ಧರ್ಮಗಳವರು ನಮ್ಮೊಡನೆ ವಾಸಿಸಲು ಮುಕ್ತ ಅವಕಾಶ ನೀಡದೆ ದ್ವೇಷದಿಂದ ಅವರನ್ನು ಕೊಲ್ಲುವುದು ಮತ್ತು ಅದನ್ನು ನೋಡಿಯೂ ಖಂಡಿಸದೆ ನಮ್ಮ ಧರ್ಮಗಳನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸುವುದು ಅತ್ಯಂತ ಹಾಸ್ಯಾಸ್ಪದ ಮತ್ತು ವ್ಯಂಗ್ಯ.

ಅಲ್ಪಸಂಖ್ಯಾತರಿಗೆ ಹೆಚ್ಚಿನ ಮಾನ್ಯತೆ ಕೊಡಬೇಕು ಎಂಬುದರ ಉದ್ದೇಶವೇ ಅವರಿಗೆ ಭದ್ರತೆಯ ಭರವಸೆ ಮೂಡಿಸಿ ಭಯ ಮುಕ್ತ ವಾತಾವರಣ ನಿರ್ಮಿಸುವುದು. ಆದರೆ ಈಗ ಅಲ್ಪಸಂಖ್ಯಾತ ಮೇಲೆಯೇ ಹೆಚ್ಚಿನ ದೌರ್ಜನ್ಯ ನಡೆಯುತ್ತಿದೆ. ಕಾಶ್ಮೀರದಲ್ಲಿ ಸುಮ್ಮನೆ ತಮ್ಮ ಪಾಡಿಗೆ ತಾವು ತಲತಲಾಂತರದಿಂದ ವಾಸಿಸುತ್ತಿರುವ ಹಿಂದೂಗಳನ್ನು ಧರ್ಮದ ಆಧಾರದ ಮೇಲೆ ಕೊಲ್ಲುವುದು ಅತ್ಯಂತ ಹೇಯವಲ್ಲವೇ ? ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ ಮನುಷ್ಯರನ್ನು ಪ್ರೀತಿಸದಿದ್ದರೆ ನಿಮ್ಮ ಧರ್ಮ ಕಲಿಸಿರುವುದಾದರೂ ಏನು.

ನೆನಪಿಡಿ ಇದು ಕಾಶ್ಮೀರಿ ಮುಸ್ಲಿಮರಿಗೆ ಮಾತ್ರ ಅನ್ವಯಿಸುವುದಿಲ್ಲ. ಭಾರತ ಇತರ ಭಾಗಗಳಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳಿಗೂ ಅನ್ವಯಿಸುತ್ತದೆ. ಅನವಶ್ಯಕವಾಗಿ ಮುಸ್ಲಿಂ ಬಹಿಷ್ಕಾರ ಅಥವಾ ಮಸೀದಿಗಳ ಮೇಲೆ ಹಕ್ಕು ಸಾಧಿಸಲು ಹೊರಡುವುದು ಸಹ ಅನ್ಯಾಯವೇ. ಇತಿಹಾಸದ ಕಹಿ ಘಟನೆಗಳಿಗೆ ಈಗ ಪ್ರತೀಕಾರ ಮಾಡುವುದು ತುಂಬಾ ಕೆಳಮಟ್ಟದ ವರ್ತನೆ. 

ಯಾವುದು ನಿಜವಾದ ಧರ್ಮ ?: ಭಗವದ್ಗೀತೆ, ಬೈಬಲ್, ಖುರಾನ್ ಅಥವಾ ಇತರೆ ಧರ್ಮದ ಪವಿತ್ರ ಎಂದು ಕರೆಯಲಾಗುವ ಗ್ರಂಥಗಳು ಏನು ಹೇಳಿವೆಯೋ ಗೊತ್ತಿಲ್ಲ. ಆದರೆ ಅದರ ಆಧಾರದಲ್ಲಿ ಜೀವನ ಕ್ರಮ ರೂಪಿಸಿಕೊಂಡು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂದು ತಮ್ಮನ್ನು ಗುರುತಿಸಿಕೊಂಡು ಈಗ ನಮ್ಮ ನಡುವೆ ಬದುಕುತ್ತಿರುವ ಜನರ ನಡವಳಿಕೆಗಳನ್ನು ನೋಡಿದರೆ ಅವರವರ ಧರ್ಮಗಳ ಮೇಲೆಯೇ ಕೋಪ ಉಕ್ಕುತ್ತದೆ. 

ಆಯಾ ಧರ್ಮದವರು ಹೇಳುತ್ತಾರೆ ನಮ್ಮ ಧರ್ಮವೇ ಅತ್ಯುತ್ತಮ ಮಾನವೀಯ ಧರ್ಮ ಆದರೆ ಅದನ್ನು ಆಚರಿಸುವ ಕೆಲವು ಜನರು ತಪ್ಪಾಗಿ ನಡೆದುಕೊಳ್ಳುತ್ತಾರೆ. ಅದಕ್ಕೆ ಧರ್ಮ ಜವಾಬ್ದಾರಿಯಲ್ಲ. ಆಯಾ ವ್ಯಕ್ತಿಗಳೇ ಜವಾಬ್ದಾರರು. ಹಾಗಾದರೆ ಧರ್ಮದ ಭೋದನೆಗಳಿಗೆ ಮನುಷ್ಯರನ್ನು ನಿಯಂತ್ರಿಸುವ ಶಕ್ತಿ ಇಲ್ಲವೆಂದಮೇಲೆ ಅದು ಇರುವುದಾದರೂ ಏತಕ್ಕೆ ? ಸಂವಿಧಾನ ರಚನೆಯಾದ ಮೇಲೆ ಧರ್ಮಗಳು ಬೇಕೆ ? ಅವಶ್ಯಕತೆಗಳು ಆಚರಣೆಗಳಾಗಿ, ಆಚರಣೆಗಳು ಸಂಪ್ರದಾಯಗಳಾಗಿ, ಸಂಪ್ರದಾಯಗಳು ನಂಬಿಕೆಗಳಾಗಿ, ನಂಬಿಕೆಗಳು ಮೂಢನಂಬಿಕೆಗಳಾಗಿ, ಮೂಢನಂಬಿಕೆಗಳು, ಭಕ್ತಿಯಾಗಿ, ಭಕ್ತಿ ಧಾರ್ಮಿಕ ಸಮರ್ಥನೆ ಪಡೆದು, ಆ ಸಮರ್ಥನೆ ಶೋಷಣೆಯಾಗಿ, ಆ ಶೋಷಣೆಯನ್ನು ಸಾಂಕೇತಿಕ ಮತ್ತು ವೈಚಾರಿಕ ಹಿನ್ನೆಲೆಯಲ್ಲಿ ಜನರಲ್ಲಿ ಭಿತ್ತಿ ಈಗ ಅದರ ಫಲವನ್ನು ಎಲ್ಲರೂ ಉಣ್ಣುವಂತಾಗಿದೆ. 

ಧರ್ಮಗಳ ಮೂಲ ಆಶಯಗಳಿಗೆ ವಿರುದ್ದವಾಗಿ ಆಚರಣೆಗಳೇ ಧರ್ಮದ ಸಂಕೇತಗಳಾಗಿರುವ ಕೃತಕ ಕಾಲಘಟ್ಟದಲ್ಲಿ ನಾವಿದ್ದೇವೆ. ರಂಜಾನ್ ಉಪವಾಸ ಧರ್ಮ, ಸಂಕಷ್ಟ ಚತುರ್ಥಿ ಉಪವಾಸ ಧರ್ಮ, ಟೋಪಿ ಧರ್ಮ, ನಾಮ ಕುಂಕುಮ ಧರ್ಮ, ಕ್ರಾಸ್ ಧರ್ಮ, ಬಿರಿಯಾನಿ ಧರ್ಮ, ಹೋಳಿಗೆ ಧರ್ಮ, ಪ್ರಾರ್ಥನೆ ಧರ್ಮ, ಪೂಜೆ ಧರ್ಮ, ವಿಭೂತಿ ಧರ್ಮ, ಮಂತ್ರ ಧರ್ಮ, ಬಿಳಿ ನಿಲುವಂಗಿ ಕೈಯಲ್ಲಿ ಶಿಲುಬೆ ಇರುವುದು ಧರ್ಮ, ಆಜಾನ್ ಕೂಗುವುದು ಧರ್ಮ, ಭಾನುವಾರದ ಚರ್ಚ್‌ ಪ್ರಾರ್ಥನೆ, ಗಣೇಶನನ್ನು ಕೂರಿಸುವುದು ಕಡ್ಡಾಯ ಮತ್ತು ಅದೇ ಧರ್ಮ...

ಹಾಗಾದರೆ ಈಗ ಸಮಾಜದಲ್ಲಿ ನಡೆಯುತ್ತಿರುವ, ಕೊಲೆ ಮಾಡುವುದು ಯಾವ ಧರ್ಮ, ಅತ್ಯಾಚಾರ ಮಾಡುವುದು ಯಾವ ಧರ್ಮ, ಭ್ರಷ್ಟಾಚಾರ ಮಾಡುವುದು ಯಾವ ಧರ್ಮ, ಕಳ್ಳ ಭಟ್ಟಿ ಮಾರುವುದು ಯಾವ ಧರ್ಮ, ಗಾಂಜಾ ಮಾರುವುದು ಯಾವ ಧರ್ಮ, ಮಸೀದಿ ಚರ್ಚು ದೇವಸ್ಥಾನಗಳ ಮೇಲೆ ದಾಳಿ ಮಾಡುವುದು ಯಾವ ಧರ್ಮ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವುದು ಯಾವ ಧರ್ಮ, ಮಹಾರಾಷ್ಟ್ರದಲ್ಲಿ ಸಾಧುಗಳನ್ನು ಹೊಡೆದು ಕೊಂದದ್ದು ಯಾವ ಧರ್ಮ.

ನಿಜವಾದ ಧರ್ಮ ಯಾವುದು ಗೊತ್ತೆ? ತಮ್ಮ ತಮ್ಮ ಕರ್ತವ್ಯಗಳನ್ನು ಒಂದು ದೇಶದ ಸಂವಿಧಾನದ ಅಡಿಯಲ್ಲಿ, ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ನಿರ್ವಹಿಸುವುದು ಧರ್ಮ. ಸಮಾಜದಲ್ಲಿ ಶಾಂತಿ ಕಾಪಾಡುವುದು ಧರ್ಮ, ಇನ್ನೊಬ್ಬರ ಸ್ವಾತಂತ್ರ್ಯ ಗೌರವಿಸುವುದು ಧರ್ಮ, ತನ್ನ ವೃತ್ತಿಯಲ್ಲಿ ಪ್ರಾಮಾಣಿತೆಯಿಂದ ಕಾರ್ಯನಿರ್ವಹಿಸುವುದು ಧರ್ಮ, ಜೀವಸಂಕುಲ ಸಸ್ಯ  ಸಂಕುಲ ಕಾಪಾಡಿಕೊಳ್ಳುವುದು ಧರ್ಮ, ಜಾತಿ ಭೇದವಣಿಸದೆ ಎಲ್ಲರನ್ನೂ ಸಮನಾಗಿ ಕಾಣುವುದು ಧರ್ಮ, ಪ್ರೀತಿ ಧರ್ಮ, ಕರುಣೆ ಧರ್ಮ, ಕ್ಷಮಾಗುಣ ಧರ್ಮ...

ಕ್ಷಮಿಸಿ, ಧರ್ಮಗಳಲ್ಲಿ ಬಹುತೇಕ ಒಳ್ಳೆಯ ಅಂಶಗಳು ಇರಬಹುದು. ಆದರೆ ಅವು ಇದೇ ಸತ್ಯ ಎಂದು ನಿರ್ದಿಷ್ಟವಾಗಿ ಹೇಳಿ ನಮ್ಮ ಯೋಚನಾ ಶಕ್ತಿಯನ್ನೇ ಕುಂದಿಸುತ್ತವೆ. ನಮ್ಮ ಸ್ವತಂತ್ರ ವ್ಯಕ್ತಿತ್ವ ಅರಳಲು ಅವಕಾಶವೇ ಕೊಡುವುದಿಲ್ಲ. ಆಯಾ ಧರ್ಮದ ಮೌಲ್ವಿ ಪೂಜಾರಿ ಫಾದರ್ ಗಳು ದೇವರ ಧರ್ಮದ ಪ್ರತಿನಿಧಿಗಳಂತೆ ಮಾತನಾಡುತ್ತಾ ನಮ್ಮನ್ನು ಅವರ ಯೋಚನೆಗಳಿಗೆ ತಕ್ಕಂತೆ ಬದಲಾಯಿಸುತ್ತಾರೆ.

ಅದರ ಪರಿಣಾಮವೇ ಕೆಲವು ಕ್ರಿಶ್ಚಿಯನ್ ಮಿಷನರಿಗಳ ಮತಾಂತರ, ಕೆಲವು ಹಿಂದೂಗಳು ಬಾಬರಿ ಮಸೀದಿ ಒಡೆದು ಹಾಕಿದ್ದು ಈಗ ಕೆಲವು ಮುಸ್ಲಿಮರು ಕಾಶ್ಮೀರರದ ಹಿಂದೂಗಳ ಮೇಲೆ ದಾಳಿ ಮಾಡುತ್ತಿರುವುದು. ಇದರ ಮೂಲ ಧರ್ಮಭೋದಕರ ಆಧರ್ಮದಲ್ಲಿ ಅಡಗಿದೆ. ಹಿಂದೆ ಧರ್ಮಗಳು ನಮ್ಮ ‌ಸಮಾಜವನ್ನು‌ ಶಾಂತಿಯುತವಾಗಿ ಮುನ್ನಡೆಸಿದ್ದು ನಿಜ.ಆದರೆ ಅದು ನಿಂತ ನೀರಿನಂತೆ ಕೊಳೆತು ನಾರುತ್ತಿರುವುದು ಅಥವಾ ಅದರ ಅನುಯಾಯಿಗಳ ಮನಸ್ಸು ಬುದ್ದಿ ಕೊಳೆತಿರುವುದು ಅವರ ವರ್ತನೆಗಳಿಂದಲೇ ತಿಳಿಯುತ್ತಿದೆ.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡು ವಿಶ್ವ ಮಾನವ ಪ್ರಜ್ಞೆ ಸಾಧ್ಯವಾಗದಿದ್ದರೂ ಕನಿಷ್ಠ ಭಾರತೀಯ ಪ್ರಜ್ಞೆ ಬೆಳೆಸಿಕೊಂಡರೆ ನಾವು ಒಂದಷ್ಟು ನೆಮ್ಮದಿಯಿಂದ ಬದುಕಬಹುದು. ಇಲ್ಲದಿದ್ದರೆ ಕೋಮು ದ್ವೇಷವೆಂಬ ಜ್ವಾಲಾಮುಖಿಯ ಮೇಲೆ ಕುಳಿತು ಧರ್ಮದ ಮುಖವಾಡ ತೊಟ್ಟು ಎಷ್ಟು ದಿನ ಈ ಧರ್ಮಗಳ ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಪಾತ್ರ ಮಾಡುವುದು. ಧರ್ಮ ಮತ್ತು ಸಂವಿಧಾನದ ನಡುವೆ ಬ್ಯಾಲೆನ್ಸ್ ಮಾಡುತ್ತಾ ಸದಾ ಆತಂಕದಿಂದ ಜೀವಿಸುವುದು ಬೇಡ. ಅತಿಹೆಚ್ಚು ಎಂದರೆ ಧರ್ಮವನ್ನು ಒಂದು ಖಾಸಗಿ ಚಿಂತನೆ ಎಂದು ಭಾವಿಸಿ ನಮ್ಮ ನಮ್ಮ ಮನೆಯೊಳಗೆ, ಮನಸ್ಸಿನೊಳಗೆ ಆಚರಿಸಿಕೊಂಡರೆ ಸಾಕಾಗುತ್ತದೆ. ಸಾರ್ವಜನಿಕ ಪ್ರದರ್ಶನದ ಅವಶ್ಯಕತೆ ಇಲ್ಲ. ಈಗ ಯೋಚಿಸುವ ಸರದಿ ನಮ್ಮೆಲ್ಲರದು.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ