ಮತ್ತೆ ತೆರೆದ ಕಾಶ್ಮೀರಿ ಫೈಲ್ಸ್ ಪುಟಗಳು…(ಭಾಗ 1)

ಸಾಯುವ ಆಟದಲ್ಲಿ ಒಮ್ಮೆ ಅವರು, ಒಮ್ಮೆ ಇವರು..." ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತದಲ್ಲಿ ಮುಂದುವರೆದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು " ಮಹಾತ್ಮ ಗಾಂಧಿ. ವಿಶ್ವದ ಸುಂದರ ಸ್ಥಳಗಳಲ್ಲಿ ಒಂದಾದ ಹಿಮಾಚ್ಛಾದಿತ ಕಾಶ್ಮೀರ ಕಣಿವೆಯು ಒಂದು ಸುಂದರ ಪ್ರದೇಶ ಪೆಹಲ್ಗಾವ್ ಎಂಬಲ್ಲಿ ರಕ್ತ ದೋಕುಳಿಯಾಟ ನಡೆದಿದೆ. ಭಯೋತ್ಪಾದಕರು ಅಮಾಯಕರನ್ನು ಹುಡುಕಿ ಹುಡುಕಿ ತೀರಾ ಹತ್ತಿರದಿಂದ ಗುಂಡಿಟ್ಟು ಕೊಂದಿದ್ದಾರೆ.
ಕಾಶ್ಮೀರದ ಗುಲ್ಮೊಹರ್ನ ಸೌಂದರ್ಯವನ್ನು ಸವಿಯಲು, ಮಧುಚಂದ್ರದ ಚಂದಮಾಮನನ್ನು ನೋಡಲು ಹೋಗಿದ್ದ ಪ್ರಣಯ ಪಕ್ಷಿಗಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟವು. ಕೋಪದಲ್ಲಿ, ಆಕ್ರೋಶದಲ್ಲಿ, ನೋವಿನಲ್ಲಿ ಭಯೋತ್ಪಾದಕರನ್ನು, ಪಾಕಿಸ್ತಾನವನ್ನು ನೇರವಾಗಿ ಮನಸ್ಸಿಗೆ ಇಷ್ಟವಾಗುವಷ್ಟು ನಿಂದಿಸಬಹುದು, ಸತ್ತವರನ್ನು ಹುತಾತ್ಮರು ಎಂದು ಕರೆಯಬಹುದು, ಭಯೋತ್ಪಾದಕರನ್ನು ಹೊಡೆದುರುಳಿಸಬಹುದು, ಪಾಕಿಸ್ತಾನದ ಮೇಲೆ ಹೇರ್ ಸ್ಟ್ರೈಕ್ ಮಾಡಬಹುದು ಎಲ್ಲವೂ ನಡೆಯುತ್ತದೆ. ಆದರೆ ಅನಾವಶ್ಯಕವಾಗಿ ಹೋದ ಜೀವಗಳು ಮರಳಿ ಬರುವುದಿಲ್ಲ. ಈ ಸೇಡಿನ, ಸಾವಿನ ಆಟ ಮುಂದುವರಿಯಬೇಕೆ ಅಥವಾ ಸಮಸ್ಯೆ ಬಗೆಹರಿದು ಕಣಿವೆ ರಾಜ್ಯದಲ್ಲಿ ನೆಮ್ಮದಿ ನೆಲೆಸಬೇಕೇ ?
ಬಹುತೇಕ ಮಾಧ್ಯಮಗಳು ಸೇಡಿಗೆ ತಹತಹಿಸುತ್ತಿವೆ. ಜನರ ಭಾವನಾತ್ಮಕ ಉದ್ರೇಕಕ್ಕೇ ತುಪ್ಪ ಸುರಿಯುತ್ತಿವೆ. ಒಂದು ವಿಷಯ ಅರ್ಥ ಮಾಡಿಕೊಳ್ಳಿ, ಭಯೋತ್ಪಾದಕರ ಸರ್ವನಾಶಕ್ಕೆ ಎಲ್ಲಾ ಸಾಮಾನ್ಯ ಜನರ, ಶಾಂತಿ ಪ್ರಿಯರ ಬೆಂಬಲ ಸದಾ ಇರುತ್ತದೆ. ಆದರೆ ಹೇಗೆ ? ಧರ್ಮ ಎಂಬ ಅಫೀಮಿಗೆ ಬಹುತೇಕ ಎಲ್ಲರೂ ದಾಸರಾಗಿರುವ ಸನ್ನಿವೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು ಹೇಗೆ ? ತುಂಬಾ ತುಂಬಾ ಕಷ್ಟ.
ಬಹುಶಃ ಭಾರತ ಸರ್ಕಾರದ ಈಗಿನ ನಿಲುವುಗಳನ್ನು ಗಮನಿಸಿದರೆ ಕೆಲವು ರಾಜತಾಂತ್ರಿಕ ಕಠಿಣ ಕ್ರಮಗಳನ್ನು ಮೀರಿ ಈ ಘಟನೆಯನ್ನೇ ಮುಖ್ಯವಾಗಿಟ್ಟುಕೊಂಡು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಶೀಘ್ರದಲ್ಲೇ ದಾಳಿ ಮಾಡಬಹುದು ಅಥವಾ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಬಹುದು. ಆಗ ಭಾರತ - ಪಾಕಿಸ್ತಾನದ ಮಧ್ಯೆ ನೇರ ಯುದ್ಧ ನಡೆಯಲೂಬಹುದು. ಏಕೆಂದರೆ ಬಲೂಚಿಸ್ತಾನ್ ರೈಲು ಅಪಹರಣ ಘಟನೆಯಲ್ಲಿ ಪಾಕಿಸ್ತಾನದ ಸೈನ್ಯಕ್ಕೆ ಭಾರಿ ಹಿನ್ನಡೆ ಮತ್ತು ಅವಮಾನವಾಗಿದೆ. ಬಲೂಚಿ ಉಗ್ರರಿಗೆ ಭಾರತ ಸಹಾಯ ಮಾಡಿದೆ ಎಂಬ ಕೋಪ ಪಾಕಿಸ್ತಾನ ಸೈನ್ಯಕ್ಕಿದೆ. ಅದಕ್ಕೆ ಪ್ರತೀಕಾರವಾಗಿ ಕಾಶ್ಮೀರಿ ಭಯೋತ್ಪಾದಕರಿಗೆ ಅದು ತಕ್ಷಣದಲ್ಲಿ ಹೆಚ್ಚಿನ ಪ್ರಚೋದನೆ ನೀಡಿರುವ ಸಾಧ್ಯತೆಗಳಿವೆ. ಇತ್ತೀಚಿನ ಪಾಕಿಸ್ತಾನ ಸೈನ್ಯದ ಮುಖ್ಯಸ್ಥನ ಹೇಳಿಕೆ ಕೂಡ ಇದಕ್ಕೆ ಪೂರಕವಾಗಿದೆ.
ಒಟ್ಟಿನಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಶಾಂತಿ ಬೇಕಾಗಿಲ್ಲ. ಈ ಭೂಮಿ ರಕ್ತತರ್ಪಣವನ್ನು ಬಯಸುತ್ತಿದೆ. ಅದರಲ್ಲೂ ನಮ್ಮ ಕಾಶ್ಮೀರದ ನೆಲ ಸದಾ ರಕ್ತಸಿಕ್ತವಾಗಿಯೇ ಇರುವಂತೆ ತೋರುತ್ತಿದೆ. ಈ ಕ್ಷಣದಲ್ಲಿ ಭಯೋತ್ಪಾದಕರ ಅಡಗು ತಾಣಗಳನ್ನು ನಾಶಪಡಿಸಬಹುದು. ಭಯೋತ್ಪಾದಕರನ್ನು ಹುಡುಕಿ ಕೊಲ್ಲಬಹುದು. ಆದರೂ ಕಾಶ್ಮೀರ ಸಮಸ್ಯೆ ಮಾತ್ರ ಹಾಗೆಯೇ ಉಳಿಯುತ್ತದೆ. ಒಂದಲ್ಲ ಒಂದು ದಿನ ಮತ್ತೆ ಉಗ್ರರು ಸಂಘಟಿತರಾಗಿ ದಾಳಿ ಮಾಡಬಹುದು. ಈ ತೂಗು ಕತ್ತಿ ಸದಾ ಕಾಶ್ಮೀರದ ಮೇಲೆ ಇರುತ್ತದೆ.
ಏಕೆಂದರೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐ ಎಸ್ ಐ ಭಾರತದ ಮೇಲೆ ಸದಾ ನಿಗಾ ಇಟ್ಟಿರುತ್ತದೆ. ಭಾರತದಲ್ಲಿ ತ್ರಿವಳಿ ತಲಾಕ್ ನಿಷೇಧ, ರಾಮಜನ್ಮಭೂಮಿ ವಿವಾದ, ಸಿಐಎ ಕಾನೂನು, ವಕ್ಫ್ ತಿದ್ದುಪಡಿ ಮುಂತಾದ ವಿಷಯಗಳಿಂದ ಮುಸ್ಲಿಂ ಸಮುದಾಯದಲ್ಲಿ ಉಂಟಾಗಿರುವ ಅಸಮಾಧಾನವನ್ನು ಉಪಯೋಗಿಸಿಕೊಳ್ಳಲು ಸದಾ ಪ್ರಯತ್ನಿಸುತ್ತದೆ. ಶೇಕಡ 0.0001 ಅತೃಪ್ತರನ್ನು ಅದು ಮನವೊಲಿಸಲು ಯಶಸ್ವಿಯಾದರೂ ಭಯೋತ್ಪಾದನೆ ನಿಲ್ಲುವುದಿಲ್ಲ. ಆದ್ದರಿಂದ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಅಲ್ಲಿನ ಅಭಿವೃದ್ಧಿ, ರಕ್ಷಣೆ, ಭದ್ರತೆಯ ಹೆಚ್ಚಳ, ಅಲ್ಲಿನ ಸ್ಥಳಿಯ ಜನರ ವಿಶ್ವಾಸ ಈ ಎಲ್ಲವೂ ಒಂದು ಕಡೆಯಾದರೆ, ನೆರೆಯ ದೇಶ ಪಾಕಿಸ್ತಾನದೊಂದಿಗೆ ಈ ವಿವಾದವನ್ನು ಬಗೆಹರಿಸಿ ಭಯೋತ್ಪಾದನೆಗೆ ಇತಿಶ್ರೀ ಆಡಲು ಮಾತುಕತೆಯ ಅವಶ್ಯಕತೆಯೂ ಇದೆ ಎನಿಸುತ್ತದೆ. ಏಕೆಂದರೆ ಎಷ್ಟೇ ಬಾರಿ ವಿಫಲವಾದರೂ ಮಾತುಕತೆಯ ಅಸ್ತ್ರವನ್ನು ಸದಾ ಪ್ರಯೋಗಿಸುತ್ತಲೇ ಇರಬೇಕು. ಒಂದಲ್ಲ ಒಂದು ದಿನ ಅದಕ್ಕೆ ಪರಿಹಾರ ದೊರೆಯಬಹುದು.
ಈಗ ಕಾಶ್ಮೀರ ಸಮಸ್ಯೆ ಕೇವಲ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗದೆ ಭಾರತ ಪಾಕಿಸ್ತಾನ, ಹಿಂದೂ ಮುಸ್ಲಿಂ ಎಂದು ವಿಭಜನೆಯಾಗಿ ಹೋಗಿದೆ. ಅದನ್ನು ಸರಿ ಮಾಡಿ ಪರಿಹಾರ ಸೂತ್ರ ರೂಪಿಸದೆ ಅದೊಂದು ಶಾಶ್ವತ ಸಾವಿನಾಟವಾಗಿಯೇ ಉಳಿದು ಹೋಗಬಹುದು. ಇತ್ತೀಚಿನ ಬೆಳವಣಿಗೆ ಎಂದರೆ ಕಾಶ್ಮೀರದ ಬಹಳಷ್ಟು ಜನ ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಸ್ಥಳೀಯ ಮುಸ್ಲಿಮರು ಸಹ ಈ ಆಂತರಿಕ ಯುದ್ಧ ವಿರೋಧಿಸುತ್ತಿದ್ದಾರೆ. ಕೆಲವರು ಹೇಳುವಂತೆ ಅಲ್ಲಿನ ಪ್ರವಾಸೋದ್ಯಮ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದೆ. ಸ್ಥಳೀಯರು ಪ್ರವಾಸಿಗಳನ್ನು ಅತಿಥಿಗಳಂತೆ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ.
ಆದರೆ ಎಲ್ಲೋ ಕೆಲವು ಹುಚ್ಚು ಮತಾಂಧರು ಮಾತ್ರ ಈ ಭಯೋತ್ಪಾದನೆಗೆ ಇಳಿದಿದ್ದಾರೆ. ಆದ್ದರಿಂದ ಸೂಕ್ಷ್ಮವಾಗಿ ಈ ವ್ಯತ್ಯಾಸವನ್ನು ಗಮನಿಸಬೇಕು. ಅಲ್ಲಿನ ಎಲ್ಲಾ ಮುಸ್ಲಿಮರು ದೇಶ ವಿರೋಧಿಗಳಲ್ಲ. ಈ ವ್ಯವಸ್ಥೆಯೊಂದಿಗೆ ಸೇರಿ ಹೋಗಿದ್ದಾರೆ ಎಂಬುದನ್ನು ಮರೆಯಬಾರದು. ಭಾರತದ ಅನೇಕ ಮುಸ್ಲಿಮರು ಈ ಘಟನೆಯನ್ನು ಖಂಡಿಸಿದ್ದಾರೆ. ಇಸ್ಲಾಂ ಭಯೋತ್ಪಾದನೆ ಮತ್ತು ಹಿಂಸೆಯನ್ನು ಸಹಿಸುವುದಿಲ್ಲ. ಕೊಲ್ಲುವ ಮನಸ್ಥಿತಿಯ ವ್ಯಕ್ತಿ ಮುಸ್ಲಿಂಮನೇ ಅಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ.
ಇದನ್ನೂ ಗಮನಿಸಬೇಕು. ಕೆಲವು ಪತ್ರಕರ್ತರು ಮತ್ತು ನಿವೃತ್ತ ಸೈನಿಕರ ಯುದ್ಧೋನ್ಮಾದಕ್ಕೆ ಸಾಮಾನ್ಯ ಜನ ಮರುಳಾಗಬಾರದು. ಯುದ್ದ ಅನಿವಾರ್ಯವಾಗುವವರೆಗೆ ಸಂಯಮವಿರಲಿ. ಯುದ್ಧದ ಪರಿಣಾಮ ಇದಕ್ಕಿಂತ ಭೀಕರ. ಬಡದೇಶ ಪಾಕಿಸ್ತಾನಕ್ಕಿಂತ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಇದು ಹೆಚ್ಚು ತೊಂದರೆಯಾಗುತ್ತದೆ. ಚೀನಾ ಇದರ ಲಾಭ ಪಡೆಯಬಹುದು ಎಚ್ಚರ...
(ಇನ್ನೂ ಇದೆ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ