ಮತ್ತೆ ತೆರೆದ ಕಾಶ್ಮೀರಿ ಫೈಲ್ಸ್ ಪುಟಗಳು…(ಭಾಗ 2)

ಮತ್ತೆ ತೆರೆದ ಕಾಶ್ಮೀರಿ ಫೈಲ್ಸ್ ಪುಟಗಳು…(ಭಾಗ 2)

ಹುತಾತ್ಮ ಯೋಧನ 5 ವರ್ಷದ ಪುಟ್ಟ ಮಗು ಕೇಳಿತು.

" ಅಮ್ಮಾ, ಅಪ್ಪ ಎಲ್ಲಿ "

ತಾಯಿ ( ಕಣ್ಣೀರಾಗುತ್ತಾ )

 " ಕಂದ ಅಪ್ಪನನ್ನು ಕೊಂದರು ".

ಮಗು, " ಯಾರು ",?

ತಾಯಿ, " ಧರ್ಮಾಂಧ ದೇಶದ್ರೋಹಿ ಭಯೋತ್ಪಾದಕರು "

ಮಗು, " ಯಾಕೆ " ?

ತಾಯಿ, " ನಮ್ಮಲ್ಲಿ ಭಯಮೂಡಿಸಿ ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು "

ಮಗು, " ಹಾಗಾದರೆ ನಾನು ಭಯಪಡುವುದಿಲ್ಲ. ಆ ಭಯೋತ್ಪಾದಕರನ್ನು ಕೊಂದು ನನ್ನ ದೇಶವನ್ನು ರಕ್ಷಿಸುತ್ತೇನೆ. ಇದು ನನ್ನ ಶಪಥ ಅಮ್ಮ ".

ಇತ್ತ ಅದೇ ಘಟನೆಯಲ್ಲಿ ಸತ್ತ ಭಯೋತ್ಪಾದಕನ ಮನೆಯಲ್ಲಿ ಅವನ ಪುಟ್ಟ ಮಗು, " ಅಮ್ಮ ಅಪ್ಪ ಎಲ್ಲಿ. "?

ತಾಯಿ ( ಕಣ್ಣೀರಾಗುತ್ತಾ )

" ಮಗು ಅಪ್ಪನನ್ನು ಕೊಂದರು."

ಮಗು, " ಯಾರು "?

ತಾಯಿ, " ಭಾರತದ ಸೈನಿಕರು " 

ಮಗು, " ಯಾಕೆ "?

ತಾಯಿ ," ನಮ್ಮ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೇಳಿದ್ದಕ್ಕೆ "

ಮಗು, " ಹಾಗಾದರೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ನಾನು ಹೋರಾಡುತ್ತಲೇ ಇರುತ್ತೇನೆ. ಇದು ನನ್ನ ಶಪಥ ಅಮ್ಮ".

ಕಾಶ್ಮೀರ ಸಮಸ್ಯೆಯ ಎರಡು ಮುಖಗಳಿವು.

ವಿಶ್ವ ಭೂಪಟದ ಭಾರತ ದೇಶದ ಕರ್ನಾಟಕದ ಬೆಂಗಳೂರಿನಲ್ಲಿ ಕುಳಿತ ನಾವು ಈ ಮಕ್ಕಳನ್ನು ಉಳಿಸಲು ಏನು ಮಾಡಬೇಕು. ಯಾವ ದೇವರೂ ಕಾಣುತ್ತಿಲ್ಲ. ಆಡಳಿತಗಾರರಿಗೆ ಸಾಧ್ಯವಾಗುತ್ತಿಲ್ಲ. ಇಬ್ಬರ ಬಳಿಯಲ್ಲೂ ಅಣುಬಾಂಬ್ ಗಳಿವೆ. ಎರಡು ವಿರುಧ್ಧ ಧರ್ಮಗಳು ಎದುರು ಬದರು ನಿಂತಿವೆ.

ಭಯೋತ್ಪಾದಕರ ಮತ್ತೇರಿದ ಅಧರ್ಮಯುಧ್ಧ, ಸೈನಿಕರ ರಾಷ್ಟ್ರ ರಕ್ಷಣೆಯ ಧರ್ಮಯುಧ್ಧ, ಈಗ ಮಾಡುವುದೇನು  ? ನಮ್ಮ ಬಳಿ ಮಂತ್ರ ದಂಡವಿಲ್ಲ. ಎಲ್ಲವನ್ನೂ ನಮಗಿಷ್ಟಬಂದಂತೆ ಪರಿಹರಿಸಲು. ಹಾಗಾದರೆ ಯುದ್ಧ ಅನಿವಾರ್ಯವೇ?  ಆಗಲೂ ಈ ಗೋಳು ತಪ್ಪುವುದಿಲ್ಲ. ಯುಧ್ಧದ ಫಲಿತಾಂಶ ಭೀಕರ, ಅಸ್ಪಷ್ಟ ಮತ್ತು ತಾತ್ಕಾಲಿಕ. ಸೋತವನು ಕೆಲ ವರ್ಷಗಳ ನಂತರ ಮತ್ತೆ ಯುದ್ಧಕ್ಕೆ ನಿಲ್ಲುತ್ತಾನೆ. ಚಾಣಕ್ಯನ ನೀತಿ ಸೂತ್ರದಂತೆ ಶತ್ರುವಿನ ಶತ್ರುವನ್ನು ಮಿತ್ರನಾಗಿಸಿಕೊಳ್ಳುತ್ತಾನೆ.

ಇದು ಸಣ್ಣ ವಿಷಯವಲ್ಲ. ಭಾರತ ಮತ್ತು ಪಾಕಿಸ್ತಾನದ ಸುಮಾರು 175 ಕೋಟಿ ಜೀವಗಳ ಭವಿಷ್ಯ. ಹುತಾತ್ಮ ಯೋಧರಿಗೆ ಶಾಂತಿ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಬದುಕಿರುವವರ ಗೋಳು ನೋಡಲಾಗುತ್ತಿಲ್ಲ. ನಾವಿಲ್ಲಿ ಸುಖವಾಗಿ ಊಟಮಾಡುತ್ತಾ, ಸಿನಿಮಾ ನೋಡುತ್ತಾ ಆರಾಮವಾಗಿದ್ದೇವೆ. ಇದು ಸತ್ತವರಿಗೆ ಅನ್ಯಾಯ ಮಾಡಿದಂತೆ. ಏಕೆಂದರೆ ದೇಶ ಕೇವಲ ಸೈನಿಕರಿಗೆ ಮಾತ್ರ ಸೇರಿದ್ದಲ್ಲ. ನಮ್ಮದೂ ಪಾಲಿದೆ. ಒಬ್ಬರ ನೋವು ಇನ್ನೊಬ್ಬರ ನಲಿವಾಗುವ ತಾರತಮ್ಯ ಬೇಡ.  ಆ ಪುಟ್ಟ ಮಗುವಿನ ಮುಖ ನೋಡಲಾಗುವುದಿಲ್ಲ. ಬೆಳೆದಂತೆ ತಂದೆ ಇಲ್ಲದ ಆ ಮಗುವಿನ ಮಾನಸಿಕ ಯಾತನೆ ಅನುಭವಿಸಿದವರಿಗಷ್ಟೇ ಗೊತ್ತು. ಜೈಕಾರ ಹಾಕುವುದು ಸುಲಭ. ಹುತಾತ್ಮ ಪಟ್ಟಕ್ಕಿಂತ ಜೀವ ಮುಖ್ಯ.

ತಾಳ್ಮೆಯಿಂದ, ವಿವೇಚನೆಯಿಂದ, ಶಕ್ತಿಯಿಂದ, ಯುಕ್ತಿಯಿಂದ,"ಸೈನಿಕರು ನಮ್ಮ ಮಕ್ಕಳು ಅವರ ಜೀವ ಅತ್ಯಮೂಲ್ಯ " ಎಂದು ತಾಯಿ ಕರುಳಿನ ರೀತಿ ಯೋಚಿಸಿ - ಯೋಜಿಸಿದರೆ ಅವರನ್ನು ಬಹುತೇಕ ಉಳಿಸಿಕೊಳ್ಳಬಹುದು. ಎಲ್ಲಾ ಸಾಧ್ಯತೆಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಸೈನಿಕರಿರುವುದು ರಕ್ಷಣೆಗಾಗಿಯೇ ಹೊರತು ಅನಾವಶ್ಯಕ ದೇಹ ತ್ಯಾಗಕ್ಕಲ್ಲ. ಆ ಸಂಧರ್ಭ ಬಂದರೆ ಎಲ್ಲರೂ ಒಟ್ಟಿಗೆ ಹೋರಾಡುತ್ತಾ ಸಾಯೋಣ. ಸೈನಿಕರಷ್ಟಲ್ಲದಿದ್ದರೂ ನಮಗೂ ಶಕ್ತಿಯಿದೆ.

ಕೇವಲ ದೇಶಭಕ್ತಿಯ ಹೆಸರಲ್ಲಿ ಭಾವನೆಗಳನ್ನು ಕೆರಳಿಸಿ ನಮ್ಮ ಸಹೋದರರನ್ನು ಬಲಿಕೊಡಬೇಡಿ. ಸೈನಿಕರೇನೂ ಸಾಯಲು ಸಿದ್ದರಾದ ಕುರಿಗಳಲ್ಲ. ನಮ್ಮಂತೆ ಆಸೆ ಕನಸುಗಳ ಜೀವಗಳು. ಅವರನ್ನು ಉಳಿಸಿಕೊಳ್ಳುವುದು ಆಡಳಿತಗಾರರ ಕರ್ತವ್ಯ. ನಿಮ್ಮ ಅಹಂ ಬಿಟ್ಟು ವಾಸ್ತವ ಪ್ರಜ್ಞೆಯಿಂದ ಉಪಾಯ ಹುಡುಕಿದರೆ ಖಂಡಿತ ಅವರನ್ನು ಉಳಿಸಿಕೊಳ್ಳಬಹುದು. ಜೈ ಜವಾನ್ ಎಂದು ಅವರನ್ನು ಸಾವಿನ ಕೂಪಕ್ಕೆ ತಳ್ಳುವುದಲ್ಲ. ಅವರ ಪ್ರತಿ  ಜೀವವೂ 145 ಕೋಟಿ ಭಾರತೀಯರಷ್ಟೇ ಮುಖ್ಯ ಮತ್ತು ಬೆಲೆಯುಳ್ಳದ್ದು. ನಮ್ಮನ್ನು ರಕ್ಷಿಸುವವರನ್ನು ನಾವು ರಕ್ಷಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ