ಮತ್ತೆ ಬಂದರು ಪರಮೇಶ್ವರ ಭಟ್ಟರು

ಮತ್ತೆ ಬಂದರು ಪರಮೇಶ್ವರ ಭಟ್ಟರು

ಬರಹ

 ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು (ಎಸ್.ವಿ. ಪರಮೇಶ್ವರ ಭಟ್ಟ) ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಕನ್ನಡದ ಕಾಳಿದಾಸ ಎಂದೇ ಹೆಸರಾದವರು.

ಕಾವ್ಯ, ವಚನ, ಮುಕ್ತಕ, ಅನುವಾದ, ವಿಮರ್ಶೆಗಳಲ್ಲಿ ಅವರ ಸೃಜನಶೀಲತೆ ಅನಾವರಣಗೊಂಡಿದೆ. ಆದರೆ, ಈ ಹೊತ್ತಿನ ಸಾಹಿತ್ಯ ಪ್ರಪಂಚದಲ್ಲಿ ಪರಮೇಶ್ವರ ಭಟ್ಟರು ಕಾಳಿದಾಸನ ಕಾವ್ಯಗಳಿಂದಲೇ ಹೆಚ್ಚು ನೆನಪಾಗುತ್ತಾರೆ.

ಅವರ ಇನ್ನಿತರೆ ಸಾಹಿತ್ಯ ಪ್ರಕಾರಗಳ ಕೃತಿಗಳು ಮರೆಯಾಗಿವೆ. ರಮ್ಯ ಪಂಥದ ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ, ಪು.ತಿ.ನ.ರಂಥವರೊಂದಿಗೆ ಗುರುತಿಸಬಹುದಾದ ಕಾವ್ಯ ಪ್ರತಿಭೆ ಭಟ್ಟರದ್ದು.

ಕಾಳಿದಾಸನ ಕಾವ್ಯದ ಅನುವಾದದಲ್ಲೇ ಅವರ ಸೃಜನಶೀಲತೆ ಅರಿವು ನಮಗಾಗುತ್ತದೆ. ಈ ಕವಿ ಕಲ್ಪನೆಯ ರಮ್ಯತೆ, ರೂಪಕ ಶಕ್ತಿಗಳನ್ನು ಅವರ ಕವನ ಸಂಕಲನ, ಮುಕ್ತಕಗಳು, ಆಧುನಿಕ ವಚನಗಳನ್ನು ಓದಿಯೇ ಸವಿಯಬೇಕು.

ಈ ಎಲ್ಲಾ ಕೃತಿಗಳಲ್ಲಿ ಭಟ್ಟರ ಪ್ರಯೋಗಶೀಲತೆ ಪ್ರಧಾನವಾಗಿ ಕಾಣುತ್ತದೆ. ಮುಖ್ಯವಾಗಿ ಭಟ್ಟರ ಕೃತಿಗಳಲ್ಲಿ ವಸ್ತುಗಳಿಗೆ ತಡಕಾಟವಿಲ್ಲ.

‘ನಿನಗೊಂದು ಗಂಟೆಯ ಆಯುವಿನ್ನುಳಿದಿದೆ

ಆರನಾದರು ನೋಡಬೇಕೆ'

ಹೀಗೆಂದ ವೈದ್ಯರಿಗೆಂದನು ಮುದುಕನು

‘ಬೇರೆ ವೈದ್ಯರ ನೋಡಬೇಕು'

‘ನಿಮ್ಮ ಹೆಂಡತಿಯನು ಮಣ್ಣು ಮಾಡಿದಿರಂತೆಅಯ್ಯೋ ಏನಾಗಿತ್ತು ಸ್ವಾಮಿ

'

‘ಆಕೆಗೇನಾಗಿತ್ತು ಎಂದು ಕೇಳಿದಿರೇನು?

ಸತ್ತು ಹೋಗಿದ್ದಳು ಸ್ವಾಮಿ'

‘ನನ್ನನ್ನು ಮದುವೆಯಾಗೆನ್ನುತೆ ಪೇಳ್ವರು

ನಿತ್ಯವು ಬಹು ಪೀಡಿಸುವರು'

ಯಾರು ನಿನ್ನನು ಹೀಗೆ ಮದುವೆಯಾಗೆಂಬರು?

ಮತ್ತಾರು? ತಾಯಿ ತಂದೆಯರು

‘ನಗ್ನ ಚಿತ್ರಗಳನ್ನು ಏಕೆ ಮೆಚ್ಚುವೆ ನೀನು' ಎಂದು ಬೆಸಗೊಂಡಾಗ ನಾನು

ಒಡನೆಯೆ ಆತನು ಕೊಟ್ಟನುತ್ತರವನು ‘ಹುಟ್ಟಿದ್ದು ಹಾಗೇನೆ ನಾನು'

ನಾವೆಲ್ಲರೂ ಭಗವಂತನಚ್ಚಿನ

ಮನೆಯಿಂದ ಬಂದ ಪ್ರೂಫುಗಳು

ಕೆಲವನು ತಿದ್ದಿಕಳುಹಿರುವನು, ಕೆಲವಿವು

ತಿದ್ದದೆ ಬಂದ ಪ್ರೂಪುಗಳು.

ಹೀಗೆ ಅವರ ಮುಕ್ತಕಗಳಿಗೆ ವಸ್ತುಗಳ ಆಯ್ಕೆ ಬಗ್ಗೆ ಯಾವುದೇ ನಿಬಂಧನ ಇಲ್ಲ. ಸಂಪ್ರದಾಯ ಮಡಿವಂತಿಕೆಗಳಿಂದ ದೂರವಾಗಿ ರಾಗೋದ್ರೇಕಗಳಿಗೆ ಪಕ್ಕಾಗದೆ, ಸಮರಸ ಕೃತಿಗಳ ರಚಿಸಿ ಕನ್ನಡ ಸಾಹಿತ್ಯ ಎಲ್ಲೆಯನ್ನು ವಿಸ್ತರಿಸಿದ ಮೇರು ಪ್ರತಿಭೆ ಎಸ್‌ವಿಪಿ.

ಭಟ್ಟರು ಇಂದಿನ ಓದುಗರಿಗೆ ಅಲಭ್ಯ ಎಂಬ ವೇಳೆಯಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಭಟ್ಟರ ಕೃತಿಗಳಲ್ಲಿ ಆಯ್ದ ಕವನಗಳು, ಮುಕ್ತಕಗಳು, ವಚನಗಳ ‘ಪ್ರೆ. ಎಸ್.ವಿ. ಪರಮೇಶ್ವರ ಭಟ್ಟರ ಕಾವ್ಯ ಸಂಗ್ರಹ' ಎಂಬ ೩೪೦ ಪುಟಗಳ ಕೃತಿ ಈ ಪ್ರಯತ್ನದ ಫಲ. ( ಸಂಪಾದಕ ಡಾ. ಜೆ.ಕೆ. ರಮೇಶ).

ಕನ್ನಡ ಮಹತ್ವದ ಸಾಹಿತಿಗಳ ಅಲಭ್ಯವಾದ ಸಾಹಿತ್ಯವನ್ನು ಪುನರ್‌ಮುದ್ರಣ ಮಾಡುವ ಸಂಘದ ಯೋಜನೆಯ ಮೊದಲ ಕಂತಾಗಿ ಈ ಕೃತಿ ಹೊರ ಬಂದಿದೆ. ಆಗಾದ ಸಾಗರದಂತಿರುವ ಭಟ್ಟರ ಸಾಹಿತ್ಯದಲ್ಲಿ ಪ್ರಕಟಣೆಗೆ ಸಂಪಾದನೆ ಮಾಡುವ ಕಾರ್ಯದಲ್ಲಿ ಡಾ. ಜೆ.ಕೆ. ರಮೇಶರ ಶ್ರಮ ಗುರುತಿಸುವಂತಾದ್ದು.

ಭಟ್ಟರ ಪ್ರಯೋಗಶೀಲತೆ ಮುಕ್ತಕಗಳು, ಕವನಗಳು, ವಚನಗಳು ಕೃತಿಯಲ್ಲಿವೆ. ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲಿರುವ ಕವನ ಭಾಗದಲ್ಲಿ ರಾಗಿಣಿ, ಜಹನಾರ, ಗಗನಚುಕ್ಕಿ, ಅಂಚೆಯ ಪೆಟ್ಟಿಗೆ, ಇಂದ್ರಗೋಪ, ಕೃಷ್ಣಮೇಘ, ಸಂಜೆಮಲ್ಲಿಗೆ ಕವನ ಸಂಕಲನದ ಪದ್ಯಗಳಿವೆ.

ಈ ಭಾಗದಲ್ಲಿರುವ ‘ದೀಪ ಹಚ್ಚಾ' ಪದ್ಯದಲ್ಲಿರುವ

ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ

ನೀ ಬಂದು ನಿಂದಿಲ್ಲಿ

ದೀಪ ಹಚ್ಚಾ

...

ಕರಿಗೆಜ್ಜೆ ಕುಣಿಸುತ್ತ ಕಣ್ಣೀರು ಮಿಡಿಯುತ್ತ

ಇರುಳಾಕೆ ಬಂದಳು

ದೀಪ ಹಚ್ಚಾ

ಮುಂತಾದ ಭಾವ ಪ್ರಧಾನ ಪದ್ಯಗಳಿವೆ.

ಹೇಮಂತ ಋತುರಾಜನಿಳೆಗೆ ಬಂದಿಳಿವಂದು

ಹೂವಿಲ್ಲ ಹಸುರಿಲ್ಲ ಚಿಗುರೆಲೆಗಳಿಲ್ಲ

ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ

ಕುಸುಮ ಗಂಧವ ತರುವ ಮರುತನಿಲ್ಲ (ಹೇಮಂತ)

ಎಂಬಂತ ಸಾಲುಗಳು ಭಟ್ಟರ ಕಾವ್ಯದ ಶಕ್ತಿಯನ್ನು ತೋರುತ್ತವೆ

ಮುಕ್ತಕ ವಿಭಾಗದಲ್ಲಿ ಇಂದ್ರಚಾಪ, ಚಂದ್ರವೀಧಿ, ಚಿತ್ರಪಥೆ, ಮಳೆ ಬಿಲ್ಲು, ಸುರಗಿ ಸುರಹೊನ್ನೆ, ತುಂಬೆ ಹೂ, ಕೇದಗೆ ಮುಕ್ತಕಗಳಿವೆ.

ವಚನ ವಿಭಾಗದಲ್ಲಿ ಉಪ್ಪು ಕಡಲು, ಪಾಮರ, ಉಂಬರ ಕೃತಿಗಳ ಆಯ್ದ ವಚನಗಳು ಇವೆ.

‘ವಚನಗಳು' ಶರಣರ ಕಾಲದಿಂದಲ ಜೀವಂತ ಕಾವ್ಯವಾಹಿನಿ. ಜಚನಿ, ಎಸ್.ವಿ.ರಂಗಣ್ಣ, ಸಿದ್ಧಯ್ಯ ಪುರಾಣಿ ಮುಂತಾದವರಂತೆ ಸಾವಿರಾರು ವಚನಗಳನ್ನು ಬರೆದಿರುವ ಎಸ್ ವಿ ಪಿ ಅವರು ‘ವಚನಬ್ರಹ್ಮ' ಎಂದು ಕರೆಸಿಕೊಂಡವರು.

ಸಮಕಾಲೀನ ಬದುಕಿನ ವಿಭಿನ್ನ ಅನುಭವಗಳನ್ನು ಸದಾಶಿವಗುರು ಎಂಬ ಅಂಕಿತದ ವಚನಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಹಳೆಯ ಒಳ್ಳೆಯ ಕಾಲ ಹೋಯಿತು

ಹೀಗೆ ಎಲ್ಲಾ ಕಾಲದ ಹೊಸಬರು

ತಾವು ಹಳಬರಾಗುತ್ತ ಬಂದಂತೆ ಹೇಳುತ್ತಲೇ ಬಂದಿದ್ದಾರೆ.

ಹೀಗಾಗಿ ಎಲ್ಲಾ ಕಾಲವೂ ಒಳ್ಳೆಯದೆಂದೇ ನನ್ನ ಮತ ಸದಾಶಿವಗುರು

ಹೊದಿಕೆಯನೆತ್ತಿ ಕೊಡವಿದರೆ ಬಿರುಗಾಳಿ ಹುಟ್ಟೀತೆ

ಹಂಡೆಯ ಮಗುಚಿ ಸುರವಿದರೆ ಜಲಪಾತವೆನಿಸೀತೆ

ಅಲ್ಪಂದಿದ ಮಹತ್ತನು ಪಡೆವುದು ಎಂದಿಗಾದರಾದೀತೆ ಸದಾಶಿವಗುರು

ಎಂಬ ವಚನಗಳು ಈ ಕೃತಿಯಲ್ಲಿವೆ.

ಇವೊತ್ತಿನ ಓದಿನ ಖಷಿಗೆ ಆವೊತ್ತಿನ ಒಂದು ಕೃತಿಯನ್ನು ಕೊಟ್ಟ ಕರ್ನಾಟಕ ಸಂಘದ ಯತ್ನ ಸಾರ್ಥಕ್ಯ.

ಕೃತಿ: ಪ್ರೆ. ಎಸ್.ವಿ. ಪರಮೇಶ್ವರ ಭಟ್ಟರ ಕಾವ್ಯ ಸಂಗ್ರಹ

ಸಂಪಾದಕ: ಡಾ.ಜೆ.ಕೆ. ರಮೇಶಪ್ರಕಾಶಕರು

: ಕರ್ನಾಟಕ ಸಂಘ ಶಿವಮೊಗ್ಗ

ಪುಟಗಳು: ೩೪೦

ಬೆಲೆ: ೧೨೦ ರುಪಾಯಿ.