ಮತ್ತೆ ಬಂದಿದೆ ಸಂಕ್ರಾಂತಿ ; ಎಳ್ಳು ಬೆಲ್ಲದ ಜೊತೆಗೆ ಜಾಗ್ರತೆಯೂ ಇರಲಿ!

ಮತ್ತೆ ಬಂದಿದೆ ಸಂಕ್ರಾಂತಿ ; ಎಳ್ಳು ಬೆಲ್ಲದ ಜೊತೆಗೆ ಜಾಗ್ರತೆಯೂ ಇರಲಿ!

ಜನವರಿ ತಿಂಗಳಲ್ಲಿ ಬರುವ ಹಬ್ಬವೇ ಸಂಕ್ರಾಂತಿ. ಮಕರ ಸಂಕ್ರಾಂತಿಯ ಶುಭದಿನದಂದು ಎಲ್ಲಾ ಓದುಗರಿಗೆ ಹಾರ್ದಿಕ ಶುಭಾಶಯಗಳು. ಕೊರೊನಾ ಮಹಾಮಾರಿಯ ಕಾರಣದಿಂದ ಕಳೆದ ವರ್ಷ ನಾವು ಬಹಳಷ್ಟು ಹಬ್ಬಗಳನ್ನು ಕೇವಲ ಆಚರಣೆಗಷ್ಟೇ ಸೀಮಿತ ಮಾಡಿಕೊಂಡಿದ್ದೆವು. ನಾಗರ ಪಂಚಮಿಯಿಂದ ಪ್ರಾರಂಭಿಸಿ ಷಷ್ಟಿ ಹಬ್ಬದ ತನಕ ಎಲ್ಲವೂ ಕನಿಷ್ಟ ಸಂಭ್ರಮದಲ್ಲೇ ಆಚರಿಸಿ ತೃಪ್ತಿ ಪಟ್ಟುಕೊಂಡೆವು. ಈಗಲೂ ಸಂಪೂರ್ಣವಾಗಿ ಕೊರೊನಾ ನಮ್ಮ ನಡುವಿನಿಂದ ಹೊರಟುಹೋಗಿಲ್ಲ. ಆದರೆ ಸಂಕ್ರಾಂತಿಯ ಸಮಯಕ್ಕೆ ಸಿಕ್ಕ ಸಂತಸದ ಸುದ್ದಿ ಎಂದರೆ ಈ ವೈರಸ್ ನಿವಾರಣೆಗೆ ಲಸಿಕೆ ಲಭ್ಯವಾಗಿದೆ. ಸದ್ಯದಲ್ಲೇ ಲಸಿಕಾ ವಿತರಣಾ ಕಾರ್ಯಕ್ರಮವೂ ಪ್ರಾರಂಭವಾಗಲಿದೆ. ಆದರೂ ಸಂಕ್ರಾಂತಿ ಆಚರಿಸುವಾಗ ಜಾಗ್ರತೆ ಇದಲಿ. ಜನಸಂದಣಿ ಇರುವ ಪ್ರದೇಶಕ್ಕೆ ತೆರಳುವುದನ್ನು ಆದಷ್ಟು ಕಮ್ಮಿ ಮಾಡಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡಿರಿ.

ಸಂಕ್ರಾಂತಿ ಹಬ್ಬದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಂಧಿಕಾಲವನ್ನು ನಾವು ಮಕರ ಸಂಕ್ರಾಂತಿ ಎಂದು ಕರೆಯುತ್ತೇವೆ. ಹಾಗೆ ನೋಡಲು ಹೋದರೆ ಪ್ರತೀ ತಿಂಗಳು ಸಂಕ್ರಾಂತಿ ಬರುತ್ತದೆ. ಮಕರ ಸಂಕ್ರಾಂತಿಗೆ ಏಕೆ ಈ ಮಹತ್ವ? ಉತ್ತರಾಯಣದಲ್ಲಿ ಸೂರ್ಯ ದಕ್ಷಿಣದಿಂದ ಉತ್ತರದತ್ತ ಪಥ ಬದಲಾಯಿಸುತ್ತಾನೆ. ದಕ್ಷಿಣಾಯಣ ಆರಂಭದ ಕರ್ಕಾಟಕ ಸಂಕ್ರಮಣ ಮತ್ತು ಉತ್ತರಾಯಣ ಆರಂಭದ ಮಕರ ಸಂಕ್ರಾಂತಿಯನ್ನು ವಿಶೇಷ ದಿನಗಳೆಂದು ಪರಿಗಣಿಸಲಾಗಿದೆ. ಭಾರತ ದೇಶದಾದ್ಯಂತ ಬೇರೆ ಬೇರೆ ಹೆಸರುಗಳಿಂದ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಪೊಂಗಲ್, ಬಿಹು ಹಾಗೂ ಲೋಹ್ರಿ ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಮಕರ ಸಂಕ್ರಾಂತಿಯ ಬಳಿಕ ಚಳಿಯು ಕಮ್ಮಿಯಾಗಿ ವಸಂತ ಋತುವಿನ ಸ್ವಾಗತ ಮಾಡಲಾಗುತ್ತದೆ.

ಮಕರ ಸಂಕ್ರಾಂತಿಯ ದಿನದಂದೇ ರಾಮನು ರಾವಣನ ವಧೆ ಮಾಡಿ ಸೀತೆಯನ್ನು ಕರೆದುಕೊಂಡು ಬಂದಿದ್ದನಂತೆ. ನಮ್ಮನ್ನು ಅಗಲಿದ ಪಿತೃಗಳೆಲ್ಲಾ ಈ ದಿನದಂದು ನಮ್ಮ ಮನೆಗೆ ಬಂದಿಳಿಯುತ್ತಾರೆ ಎಂದು ಪ್ರತೀತಿ ಇದೆ. ದೇವಾಲಯಗಳಲ್ಲಿ ಎಳ್ಳಿನೆಣ್ಣೆಯ ದೀಪವನ್ನು ಹಚ್ಚುತ್ತಾರೆ ಕಪ್ಪು ಎಳ್ಳು ಹಾಕಿ ಸ್ನಾನ ಹಾಗೂ ಬ್ರಾಹ್ಮಣರಿಗೆ ಎಳ್ಳನ್ನು ದಾನ ಮಾಡುತ್ತಾರೆ. ಉತ್ತರಾಯಣದ ಕಾಲದಲ್ಲಿ ನಾವು ಮಾಡುವ ದಾನವು ನಮ್ಮನ್ನು ಜನ್ಮ ಜನ್ಮಾಂತರದಲ್ಲಿ ಕಾಪಾಡುತ್ತದೆಯಂತೆ. ಸಂಕ್ರಮಣ ಕಾಲದಲ್ಲಿ ಎಳ್ಳು ದಾನ ಮಾಡಿದರೆ ಅಕ್ಷಯವಾದ ಫಲವನ್ನು ಕೊಡುತ್ತದೆ ಎಂದು ಯಮಧರ್ಮನೇ ಹೇಳಿರುವನೆಂದು ಪುರಾಣದಲ್ಲಿ ತಿಳಿಸಲಾಗಿದೆ..

ಸಂಕ್ರಾಂತಿಯಂದು ನಾವು ಪ್ರಧಾನವಾಗಿ ಎಳ್ಳು ಬಳಸುತ್ತೇವೆ. ಎಳ್ಳು ಸುಗ್ಗಿಯ ಸಂಕೇತ. ಸಂಕ್ರಾಂತಿ ಸುಗ್ಗಿಯ ಹಬ್ಬ. ಒಬ್ಬ ಜಾನಪದ ಕವಿ ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೊಳ ಭೂತಾಯಿ ಎದ್ದೊಂದು ಗಳಿಗೆ ನೆನೆದೇನು' ಎಂದು ಹಾಡಿದ್ದಾನೆ. ಹೀಗೆ ಎಳ್ಳು ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವವಾದ ದ್ರವ್ಯ. ಬೇರೆ ಬೇರೆ ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ತೆಗೆದರೂ ಯಾವುದಕ್ಕೂ ತಿಲದ ಎಣ್ಣೆಯ ಮಹತ್ವ ಇಲ್ಲ. ದೀಪ ಎಣ್ಣೆ ಎಂದರೆ ಎಳ್ಳು ಎಣ್ಣೆ. ಬಿಳಿಯ ಎಳ್ಳು ಅಧಿಕ ಎಣ್ಣೆಯ ಅಂಶವನ್ನು ಹೊಂದಿರುತ್ತದೆ. ಆ ಕಾರಣದಿಂದ ಸಂಕ್ರಾಂತಿಯಲ್ಲಿ ನಾವು ಬಿಳಿ ಎಳ್ಳನ್ನೇ ಅಧಿಕ ಪ್ರಮಾಣದಲ್ಲಿ ಬಳಸುತ್ತೇವೆ. ಕರಿಯ ಎಳ್ಳು ಪಿತೃ ಕಾರ್ಯಕ್ಕೆ ಶ್ರೇಷ್ಟವಾದದ್ದು. 

ಎಳ್ಳಿನ ಎಣ್ಣೆಯಿಂದ ದೀಪ ಹಚ್ಚುವುದು, ಎಳ್ಳೆಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದು, ಎಳ್ಳನ್ನು ಹೋಮಕ್ಕೆ ಬಳಸುವುದು, ಎಳ್ಳನ್ನು ದಾನ ಮಾಡುವುದು, ಎಳ್ಳನ್ನು ತಿನ್ನುವುದು ಮತ್ತು ಎಳ್ಳನ್ನು ಬಿತ್ತುವುದು ಈ ಆರು ಪ್ರಕಾರಗಳನ್ನು ಬಳಸುವವರ ನಾಶ ಸಾಧ್ಯವಿಲ್ಲವಂತೆ. ಸಂಕ್ರಾಂತಿಯ ಸಮಯದಲ್ಲಿ ಈ ಎಳ್ಳಿನ ಜೊತೆಗಾರನೆಂದರೆ ಅದು ಬೆಲ್ಲ. ಎಳ್ಳಿನ ಒಗರಿನ ರುಚಿಯನ್ನು ಬೆಲ್ಲವು ಸರಿತೂಗಿಸುತ್ತದೆ. ಎಳ್ಳಿನ ಜೊತೆ ನಾವು ಸಂಕ್ರಾಂತಿಯಂದು ಬಳಸುವ ಕಡಲೆಬೇಳೆ ಹಾಗೂ ಕೊಬ್ಬರಿಯು ನಮಗೆ ಪಿತ್ತದ ಕಾರಣ ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇರುವುದರಿಂದ ಅದರ ನಿವಾರಣೆಗಾಗಿ ಬೆಲ್ಲವನ್ನು ಸೇರಿಸುತ್ತಾರೆ. ಬೆಲ್ಲ ಸಕ್ಕರೆಗಿಂತಲೂ ತಂಪು. ಆ ಕಾರಣದಿಂದ ಸಂಕ್ರಾಂತಿಯ ಹಬ್ಬದಂದು ಎಳ್ಳಿನ ಜೊತೆ ಬೆಲ್ಲವನ್ನು ಬಳಸುತ್ತಾರೆ.

ಈ ಶುಭದಿನದಂದು ಸೂರ್ಯ ಉತ್ತರದತ್ತ ಪ್ರಯಾಣಿಸುವಂತೆ, ನಾವೂ ತ್ರಿಕರಣ ಶುದ್ಧಿಗಳಾಗಬೇಕು. ವಿವೇಕವಂತರೂ, ಜ್ಞಾನಿಗಳೂ ಆಗಬೇಕು. ಸೂರ್ಯ ಅತ್ಯಂತ ಶ್ರೇಷ್ಟ ಕರ್ಮ ಯೋಗಿ. ಪ್ರತಿಫಲಾಪೇಕ್ಷೆ ಇಲ್ಲದೇ ಸೂರ್ಯ ನಮಗೆ ಬೆಳಕು ಮತ್ತು ಶಕ್ತಿಯನ್ನು ಪ್ರಧಾನ ಮಾಡುತ್ತಾನೆ. ಮಕರ ಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಮ್ಮ ಸುತ್ತಲಿನ ವಾತಾವರಣವು ಅತ್ಯಂತ ಚೈತ್ರನ್ಯಯುತವಾಗಿರುತ್ತದೆ. 

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಸ್ವಾಮಿ ಅಯ್ಯಪ್ಪನ ಆರಾಧನೆ ನಡೆಯುತ್ತದೆ. ರೈತರ ಪಾಲಿಗೆ ಸಂಕ್ರಾಂತಿ ಸುಗ್ಗಿಯ ಹಬ್ಬ. ತಮ್ಮ ದನ ಕರುಗಳನ್ನು ಅಲಂಕಾರ ಮಾಡುತ್ತಾರೆ. ತಮಿಳುನಾಡು ರಾಜ್ಯದಲ್ಲಿ ಮತ್ತು ನಮ್ಮ ರಾಜ್ಯದ ಕೆಲವೆಡೆ ಎತ್ತುಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯವಿದೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಸಂಪ್ರದಾಯವಿದೆ. ಮಹತ್ವವಿದೆ. ಕೋವಿಡ್ ಸಂಕಷ್ಟದ ಕಾಲವಾದುದರಿಂದ ನಾವು ನಮ್ಮ ಇತಿಮಿತಿಯಲ್ಲೇ ಹಬ್ಬ ಮಾಡಬೇಕಾದ ಅನಿವಾರ್ಯತೆ ಇದೆ. ಈ ಸಂಕಷ್ಟದ ಕಾರ್ಮೋಡವು ಬಹುಬೇಗನೇ ಕರಗಲಿದೆ ಎಂಬ ಆಶಾಭಾವನೆ ಎಲ್ಲರಲ್ಲೂ ಇದೆ.

ಎಳ್ಳಿನ ಜೊತೆ ಕಬ್ಬು, ಬೆಲ್ಲ ಮತ್ತು ಹಣ್ಣುಗಳನ್ನು ಹಂಚುತ್ತಾರೆ. ಪರಸ್ಪರ ಭಾಂಧ್ಯವ್ಯ ವೃದ್ಧಿಸಲು ಸಂಕ್ರಾಂತಿ ಹಬ್ಬ ಸಹಕಾರಿಯಾಗಲಿ. ದೇವತೆಗಳ ಹಗಲು ಪ್ರಾರಂಭವಾಗುವ ಈ ಶುಭ ಸಂದರ್ಭವು ಸರ್ವರಿಗೂ ಸುಖ, ಶಾಂತಿ ಮತ್ತು ನೆಮ್ಮದಿ ತರಲಿ. ಎಳ್ಳು, ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ನುಡಿಯಂತೆಯೇ, ಇಂದು ಮಾತ್ರವಲ್ಲ ವರ್ಷವಿಡೀ ನಾವು ಸವಿ ನುಡಿಯನ್ನೇ ಆಡೋಣ. ಸುಖ ಸಂಮೃದ್ಧಿಯ ಬಾಳು ಎಲ್ಲರದ್ದಾಗಲಿ ಎಂದು ಪ್ರಾರ್ಥಿಸೋಣ