ಮತ್ತೆ ಬಂದಿದೆ ಸ್ವಾತಂತ್ರ್ಯಹೀನ ಸ್ವಾತಂತ್ರ್ಯ ದಿನ...!

ಮತ್ತೆ ಬಂದಿದೆ ಸ್ವಾತಂತ್ರ್ಯಹೀನ ಸ್ವಾತಂತ್ರ್ಯ ದಿನ...!

ಬರಹ

ದೇಶದ ಪ್ರತಿಷ್ಠಿತ ಸಾಪ್ತಾಹಿಕಗಳಲ್ಲೊಂದಾದ "ದಿ ವೀಕ್" ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಸಂಚಿಕೆಯೊಂದನ್ನು ಹೊರತಂದಿದೆ. ಅದರಲ್ಲಿನ "ಕವರ್ ಸ್ಟೋರಿ"ಯಲ್ಲಿ ಈ ವರ್ಷ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾಜನರಾದ ಡಾ.ಪ್ರಕಾಶ್ ಆಮ್ಟೆ(ತಮ್ಮ ಪತ್ನಿ ಮಂದಾಕಿನಿಯವರೊಂದಿಗೆ)ಯವರ ಲೇಖನವೊಂದು ಪ್ರಕಟವಾಗಿದೆ.

ಈ ಲೇಖನ ಯಾಕೆ ನನಗೆ ಅಷ್ಟು ಮುಖ್ಯವಾಗುತ್ತದೆಯೆಂದರೆ, ಇಂತಹ ಲೇಖನಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಕೂತು ಯಾರು ಬೇಕಾದರೂ ಬರೆಯಬಹುದು. ಯಾಕೆಂದರೆ, ಬರೆಹವನ್ನುವುದು ಈಗಿನ ದಿನಮಾನಗಳಲ್ಲಿ ನೈತಿಕತೆಯ, ಸ್ವಾನುಭವದ ನುಡಿಗಳಾಗಿಯೇನೂ ಉಳಿದಿಲ್ಲ. ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ "ಬೌದ್ಧಿಕ" ವ್ಯಾಪಾರವಾಗಿಯಷ್ಟೇ ಉಳಿದಿದೆ(ಕೆಲವೊಂದು ಇದಕ್ಕೆ ಅಪವಾದವಿರಬಹುದು).

ಆದರೆ, ಪ್ರಸ್ತುತ ಲೇಖನ ಕೇವಲ ಒಂದು ವಸ್ತು ಅಥವಾ ವಿಷಯದ ಕುರಿತ ಕ್ರಿಯೆ, ಪ್ರತಿಕ್ರಿಯೆಗಳ ಕೇವಲ ನುಡಿಜೋಡಣೆಯಲ್ಲ. "ಮಾನವ ಸೇವೆ"ಯಲ್ಲಿಯೇ ದೇವರನ್ನು ಸಾಕ್ಷಾತ್ಕರಿಸಿಕೊಂಡಿದ್ದ ಮಹಾನ್ ಚೇತನ, ದೀನದಲಿತರ ಸೇವೆಗಾಗಿ ತನ್ನ ಜೀವನವನ್ನೇ ಮುಡುಪಾಗಿಸಿದ್ದವರು ಇತ್ತೀಚಿಗೆ ತಾನೆ ನಿಧನರಾದ "ಭಾರತ ರತ್ನ" ಬಾಬಾ ಆಮ್ಟೆ"ಯವರ ಸುಪುತ್ರರಾದ ಪ್ರಕಾಶ್ ಆಮ್ಟೆ, ತನ್ನ ತಂದೆಯ ಹಾದಿಯನ್ನೇ ತುಳಿದು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉಳಿಸಿ, ಬೆಳೆಸುತ್ತಾ ಇತರರಿಗೆ ತಾನೇ ಒಂದು ಆದರ್ಶವಾಗಿ ಬೆಳೆದು ನಿಂತು, ತನ್ನ ತಂದೆ ಮಹಾರಾಷ್ಟ್ರದ ಹೇಮಲ್ಕಾಸದಲ್ಲಿನ ಲೋಕ್ ಬಿರಾದರಿ ಪ್ರಕಲ್ಪ್ ನಲ್ಲಿ ಸ್ಥಾಪಿಸಿರುವ ಆಸ್ಪತ್ರೆ, ಶಾಲೆ ಮತ್ತಿತರ ಸಮುದಾಯ ಸೇವೆಗಳಲ್ಲಿ ತಮ್ಮನ್ನು ಹಾಗೂ ಇಡೀ ಆಮ್ಟೆ ಪರಿವಾರವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಸಮಾಜಸೇವೆಯಲ್ಲಿನ ಅವರ ಸಾಕ್ಷಾತ್ ಅನುಭವಗಳು, ಭಾರತದ ಮುಂದಿರುವ ಸವಾಲುಗಳಿಗೆ ಹೇಗೆ ದಿಟ್ಟವಾಗಿ ಉತ್ತರಿಸಬಹುದೆನ್ನುವ ಅವರ ದೂರದೃಷ್ಟಿಯ ಸಮಾಜ ಸುಧಾರಣಾ ನುಡಿಗಳನ್ನು ಇಂಗ್ಲೀಶ್‌ನಲ್ಲಿ ಓದಲು ಸಾಧ್ಯವಾಗವರಿಗೆ ಅದನ್ನು ತಲುಪಿಸುವ ಒಂದು ಸಣ್ಣ ಪ್ರಯತ್ನವಾಗಿದೆಯಷ್ಟೆ ಈ ನನ್ನ ಕನ್ನಡ ಲೇಖನ.

(ನಮ್ಮ ದೇಶ ಸ್ವಾತಂತ್ರ್ಯ ಗಳಿಸಿ 60 ವರುಷಗಳನ್ನು ಪೂರೈಸಿ 61ನೇ ವರುಷಕ್ಕೆ ಕಾಲಿರಿಸಿರುವ ಸಂದರ್ಭದಲ್ಲಿ, ಈ ವಾರದ "ಕರ್ಮವೀರ
"ದಲ್ಲಿ ಎಚ್.ಆನಂದರಾಮಶಾಸ್ತ್ರೀಯವರು ತಮ್ಮ "ಎಲ್ಲಿದೆ ಸ್ವಾತಂತ್ರ್ಯ" ಲೇಖನದಲ್ಲಿ ವಿಷಾದಿಸಿರುವ ಹಾಗೆ, "ಸರ್ಕಾರಿ ಸಿಬ್ಬಂದಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವಾಗ, ಆರಕ್ಷಕರು ರಾಕ್ಷಸರಾಗಿರುವಾಗ, ಐಎಸ್‌ಗಳು ಭೂರಿಭೋಜನಪ್ರಿಯರಾಗಿರುವಾಗ ಮತ್ತು ಪುಢಾರಿಗಳು ಇವರೆಲ್ಲರನ್ನು ಮೀರಿಸುವ ಮುತ್ಸದ್ದಿ, ಊಹ್ಞೂ, ಕುತ್ಸದ್ದಿಗಳಾಗಿರುವಾಗ ಶ್ರೀಸಾಮಾನ್ಯ ಪ್ರಜೆಗಳಾದ ನಾವು ಅಸಹಾಯಕರಾಗಿ ಇವರೊಡನೆ ಹೊಂದಿಕೊಂಡು, ಕಷ್ಟನಷ್ಟಗಳನ್ನು ಅನುಭವಿಸಿಕೊಂಡು ದಿನ ದೂಡುತ್ತಿದ್ದೇವಲ್ಲಾ, ನಮಗೆಲ್ಲಿದೆ ನಮ್ಮ ಹಕ್ಕಿನನುಸಾರ ಬಾಳುವ ಸ್ವಾತಂತ್ರ್ಯ? ಆಗಸ್ಟ್ 15 ಮತ್ತೆ ಬಂದಿದೆ. ವರುಷ ಕಳೆಯುಷ್ಟರಲ್ಲಿ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ. ಕೆಂಪುಕೋಟೆಯ ಭಾಷಣ".)

ಇನ್ನು ಆಮ್ಟೆಯವರ ಲೇಖನದ ವಿಷಯಕ್ಕೆ ಬರುವುದಾದರೆ, "ಉತ್ತರಗಳಿಗಾಗಿ ಹಸಿವು"(Hungry for answers) ಎನ್ನುವ ತಲೆಬರಹದ ಈ ಲೇಖನದ ಆರಂಭದಲ್ಲಿಯೇ ಸ್ವಾತಂತ್ರ್ಯ ಪಡೆದು 60 ವರುಷಗಳಾದರೂ ಹೇಗೆ ನಮ್ಮ ದೇಶ ತನ್ನ "ಜನ ಸಾಮಾನ್ಯ"ನಲ್ಲಿ ಇನ್ನೂ ವಿಶ್ವಾಸವನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿಲ್ಲ ಎನ್ನುವುದಕ್ಕೆ ತಾವು ಕಂಡ ಘಟನೆಯೊಂದನ್ನು ಹೀಗೆ ವಿವರಿಸುತ್ತಾರೆ ಆಮ್ಟೆ.

ಇತ್ತೀಚೆಗೆ ನಾವು ನಡೆಸುವ ಆಸ್ಪತ್ರೆಗೆ ಇತ್ತೀಚೆಗೆ ಗೊಂಡ್ ಬುಡಕಟ್ಟಿನ ಒಬ್ಬ ವ್ಯಕ್ತಿಯೊಬ್ಬ ಬಂದಿದ್ದ. ಟಿಬಿ ರೋಗಿ. 200 ಕಿ.ಮೀ.ದೂರ ಕ್ರಮಿಸಿ ದಾರಿಯಲ್ಲಿ ನಾಲ್ಕೈದು ಸರಕಾರಿ ಆರೋಗ್ಯ ಕೇಂದ್ರಗಳಿಗೆ ಹೋಗಿ ಬಂದಿದ್ದ. ಅಲ್ಲಿ ಆತ ನಾವು ಕೊಡುವಂತಹ ಚಿಕಿತ್ಸೆಯನ್ನೇ ಪಡೆಯುತ್ತಿದ್ದ. ಆದರೂ, ಆತ ತನ್ನ ಸರಕಾರಕ್ಕಿಂತ ನಮ್ಮನ್ನು ಹೆಚ್ಚು ನಂಬಿ ಬಂದಿದ್ದ. ಇದಕ್ಕೆ ನನಗೆ ಸಂತೋಷವಾಗಬೇಕಿತ್ತು. ಆದರೆ, ಬದಲಿಗೆ ನನಗೆ ದುಃಖವಾಯಿತು. ಕಾರಣ, ಸ್ವಾತಂತ್ರ್ಯ ಪಡೆದು 60 ವರುಷಗಳಾದರೂ ಹೇಗೆ ನಮ್ಮ ದೇಶ ತನ್ನ "ಜನ ಸಾಮಾನ್ಯ"ನಲ್ಲಿ ಇನ್ನೂ ವಿಶ್ವಾಸವನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿಲ್ಲವಲ್ಲ ಎಂದು.

ಪದೇ ಪದೇ ಅವಲತ್ತುಕೊಂಡರೂ ಅದಕ್ಕೆ ಯಾವ ರೀತಿಯೂ ಸ್ಪಂದಿಸದ ವ್ಯಕ್ತಿಯನ್ನು ಮರಾಠಿಯಲ್ಲಿ "ಕೊಡ್ಗ"(kodga) ಎನ್ನುತ್ತಾರೆ. ನಮ್ಮನ್ನಾಳುತ್ತಿರುವ ವ್ಯವಸ್ಥೆಯನ್ನು ವಿವರಿಸಲು ಇದಕ್ಕಿಂತ ಒಳ್ಳೆಯ ಪದ ಇನ್ನೊಂದಿಲ್ಲ. ನಾವು ಚಂದ್ರಯಾನ, ತಂತ್ರಜ್ಞಾನಿಕ ಪ್ರಗತಿಯ ಬಗ್ಗೆ ಮಾತನಾಡುತ್ತೇವೆ. ಆದರೆ, ನಮ್ಮೊಂದಿಗಿನ ವಾಸ್ತವದ ಬಗ್ಗೆ ಕಾಳಜಿಹೀನರಾಗಿದ್ದೇವೆ.

1960 ಹಾಗೂ 70ರ ದಶಕಗಳಲ್ಲಿ ಹಲವಾರು ಸಾಮಾಜಿಕ ಚಳುವಳಿಗಳು ಹಲವಾರು ಸಿದ್ಧಾಂತಗಳ ತಳಹದಿಯ ಮೇಲೆ ಹುಟ್ಟಿಕೊಂಡಿದ್ದವು. ಇವೆಲ್ಲವೂ ತಕ್ಕ ಮಟ್ಟಿಗೆ ತಾವು ಸಕ್ರಿಯವಾಗಿರುವಂತಹ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಿದವು ಕೂಡ. ಆದರೂ, ಅಂತಹ ಪ್ರಯತ್ನಗಳು ಕ್ರಮೇಣ ರಾಜಕೀಕರಣಗೊಂಡು ನೀರಸವಾದವು. ಇಂತಹ ಬೆಳವಣಿಗೆಗಳು ರಾಜಕೀಯ ನಾಯಕತ್ವದ ಮೌಲ್ಯಗಳ ಅಧಃಪತನಕ್ಕೆ ಕಾರಣವಾದವು.

ಹೀಗೆ ನಾವು ನಡೆದುಬಂದ ಹಾದಿಯ ಎಡರುತೊಡರುಗಳನ್ನು ಮೆಲುಕು ಹಾಕುವ ಆಮ್ಟೆಯವರು, "ಹಣ" ಇಂದಿನ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ(ಅಷ್ಟಕ್ಕೂ ಹಣ ಬೇಡ ಎನ್ನುವುದಕ್ಕೆ ನಾವೇನೂ ಸನ್ಯಾಸಿಗಳಲ್ಲ ಅಲ್ಲವೇ ಎಂದು ವಾದಿಸುತ್ತ ತಮ್ಮ ನಿಲುವನ್ನೇ ಸಮರ್ಥಿಸಿಕೊಳ್ಳುವ ನಮ್ಮ ಪ್ರಜಾಪ್ರತಿನಿಧಿಗಳ ಬಗ್ಗೆ)ಎಂದು ನಿರ್ಲಜ್ಜರಾಗಿ ಹೇಳುವ ಈಗಿನ ರಾಜಕೀಯ ಪಕ್ಷಗಳ ಬಗ್ಗೆ ಅಸಹ್ಯವನ್ನು ವ್ಯಕ್ತಪಡಿಸುತ್ತಾರೆ.

ಪ್ರತಿ ಸರಕಾರ ತಾನು ಜಾರಿಗೆ ತರುವ ಸಾಮಾಜಿಕ ಅಭಿವೃದ್ಧಿ ಯೋಜನೆಗಳು ವಿಫಲವಾಗುವುದಕ್ಕೆ ಹೇಗೆ ತಾವೇ ಕಾರಣವಾಗುತ್ತವೆ ಎನ್ನುವುದನ್ನು ವಿವರಿಸುತ್ತ, ಅವುಗಳನ್ನು ಜಾರಿಗೆ ತರುವುದಕ್ಕೆ ಬೇಕಾದ ಪ್ರೇರಣಶಕ್ತಿಯ ಗೈರೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳುತ್ತಾರೆ.
ವ್ಯಕ್ತಿಯ ಯಶಸ್ಸನ್ನು ವೇಗವಾಗಿ ಹಣಗಳಿಸುವದರೊಂದಿಗೆ ಸಮೀಕರಿಸಲಾಗುತ್ತಿರುವ ಈಗಿನ ಕಾಲದಲ್ಲಿ ಹೆಚ್ಚಿನವರಿಗೆ ಅಂತಹ ಯೋಜನೆಗಳ ಬಗ್ಗೆ ಉತ್ಸಾಹವಿಲ್ಲ. ಪ್ರತಿಯೊಬ್ಬರ ತಕ್ಷಣದ ಏಕೈಕ ಗುರಿ ದಿಢೀರ್ ಶ್ರೀಮಂತರಾಗಬೇಕೆನ್ನುವುದಾಗಿದೆ. ಈ ಭರದಲ್ಲಿ ನಾವು ಬಡವರನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸುತ್ತಾರೆ ಆಮ್ಟೆ.

(ಅವರ ವಿಷಾದಕ್ಕೂ ಕಾರಣಗಳೂ ಸ್ಪಷ್ಟವಾಗಿಯೇ ಇವೆ. ಇಂದಿನ ಪ್ರತಿಯೊಂದು ಮಾಧ್ಯಮವೂ ತಮ್ಮ ಜನಪ್ರಿಯತೆಗೋಸ್ಕರ ಜನರು ಹೇಗೆ ದಿಢೀರ್ ಶ್ರೀಮಂತರಾಗಬಹುದು ಎನ್ನುವ ಕನ್ನಡಿಯೊಳಗಿನ ಗಂಟು" ತೋರಿಸಿ ಹಣದ ಆಮಿಷದ ಜೂಜಿನಲ್ಲಿ ಪಾಲ್ಗೊಳ್ಳುವುದಕ್ಕೆ ಮುಕ್ತ ಆಹ್ವಾನವನ್ನು ನೀಡುವ ಕಾರ್ಯಕ್ರಮಗಳನ್ನು ಪೈಪೋಟಿಯ ಮೇಲೆ ಹೊಸೆಯುತ್ತ ಅದಕ್ಕೆ ಜನಪ್ರಿಯ ತಾರಾಬಳಗವನ್ನೇ ಭಾರೀ ಮೊತ್ತಕ್ಕೆ ಖರೀದಿಸುತ್ತಾ ನಡೆಯುತ್ತಿರುವುದನ್ನು ನಾವು ಇಂದು ಕಾಣುತ್ತಲೇ ಇದ್ದೇವೆ. ಉದಾಹರಣೆಗೆ, ಕೌನ್ ಬನೇಗಾ ಕರೋಡ್‌ಪತಿ, ಕ್ಯಾ ಆಪ್ ಪಾಸ್ವೀ ಪಾಸ್ ಸೆ ತೇಜ್ ಹೈ, ದಸ್ ಕಾ ದಮ್ ಮುಂತಾದ ಕಾರ್ಯಕ್ರಮಗಳನ್ನು ಹೆಸರಿಸಬಹುದು.)

ವಿಶ್ವದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದಲ್ಲಿ "ನಮ್ಮ" ಭಾರತದವರೇ 3 ಮಂದಿ. ನಮ್ಮ ದೇಶದ ಸೋ ಕಾಲ್ಡ್ "ಪ್ರಗತಿ" "ಅಭಿವೃದ್ಧಿ"ಗೆ ಜ್ವಲಂತ ಉದಾಹರಣೆಯಾಗಿ ನಿಂತಿರುವ ಈ ಮಂದಿ ಒಂದೆಡೆ. ಮತ್ತೊಂದೆಡೆ, ದಿನಕ್ಕೆ 12 ಗಂಟೆಗಳ ಕಾಲ ಬೆನ್ನುಮೂಳೆ ಮುರಿಯುವ ಹಾಗೆ ದುಡಿದು ದಿನಕ್ಕೆ 40 ರೂಪಾಯಿ ಗಳಿಸುವ ನತದೃಷ್ಟ ಮಂದಿ. ಆತಂಕದ ಸಂಗತಿಯೆಂದರೆ, ನಾವಿಂದು ಕಡೆಗಣಿಸುತ್ತಿರುವ ಪಟ್ಟಿಯಲ್ಲಿ ಇರುವ ಬಡಮಂದಿ ಅಲ್ಪಸಂಖ್ಯಾತರಲ್ಲ. ಅವರು 110 ಕೋಟಿ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ. (ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತ-ಬಡವನ ನಡುವಿನ ಅಂತರ ಹಿಂದೆಂದಿಗಿಂತಲೂ ಹಿಗ್ಗುತ್ತಲಿರುವುದು ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಸಾಧಿಸುತ್ತಿರುವ "ಅಭಿವೃದ್ಧಿ"ಗೆ ಸಾಕ್ಷಿ. ಇದರ ಅಭಿವೃದ್ಧಿಯ ಕಿರೀಟಕ್ಕೆ ಮತ್ತೊಂದು ಗರಿಯಾಗಿ ಈಗ "ಅಣು ಒಪ್ಪಂದ"ದ ಸೇರ್ಪಡೆ ಬೇರೆ. ಈ ಅಂತರ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಸಂಖ್ಯೆಗೆ ಕಾರಣವಾಗಿಲ್ಲವೆನ್ನುತ್ತೀರಾ?)

ಹೀಗೆಯೇ ಸಾಮಾಜಿಕ ಅಸಮತೋಲನದ ಸೃಷ್ಟಿಗೆ ಹೇಗೆ ಸರಕಾರಗಳೇ ಕಾರಣವಾಗುತ್ತಿವೆ ಎನ್ನುವುದನ್ನು ವಿವರಿಸುತ್ತಾ ಸಾಗುವ ಆಮ್ಟೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಉದಾಹರಣೆ ನೀಡುತ್ತಾರೆ: ನಾನು ವೈದ್ಯಕೀಯ ಶಿಕ್ಷಣ ನಡೆಸುತ್ತಿದ್ದ ಕಾಲದಲ್ಲಿ, ವಾರ್ಷಿಕ ಶುಲ್ಕ 350 ರೂ. ಆದರೆ, ಇಂದು ಲೆಕ್ಕವಿಲ್ಲದಷ್ಟು ವೈದ್ಯಕೀಯ ವಿದ್ಯಾರ್ಥಿಗಳು ಪದವಿಗಾಗಿ ಲಕ್ಷಾಂತರ ಹಣ ಸುರಿಯಲು ಸಿದ್ಧರಿದ್ದಾರೆ. ಇಷ್ಟು ಹಣ ಸುರಿದು ಪದವಿ ಪಡೆವ ಇವರ "ಮಹದೋದ್ದೇಶ" ಮೊದಲು ತಾವು ಪದವಿ ಗಳಿಕೆಗಾಗಿ ಹೂಡಿರುವ ಹಣವನ್ನು ಎಷ್ಟು ಬೇಗ ಗಳಿಸಬೇಕೆಂಬುದು. ಅಂತಹ ಮಹದೋದ್ದೇಶ ಸಾಧನೆ ಎಲ್ಲಾದರೂ ದೀನದಲಿತರ, ಬುಡಕಟ್ಟಿನವರ, ಆದಿವಾಸಿಗಳ ಸೇವೆಯಿಂದ ಸಾಧ್ಯವೇ? ಎಂದು ಪ್ರಶ್ನಿಸುತ್ತಾರೆ.

(ಖಂಡಿತ ಇಲ್ಲ ಸಾರ್, ಅಂತಹ ಸೇವೆ ಮಾಡಿದರೆ ಹೆಚ್ಚೆಂದರೆ ನಿಮ್ಮಂತೆ ಒಂದು "ಮ್ಯಾಗ್ಸೆಸ್ಸೆ ಪ್ರಶಸ್ತಿ" ಗಳಿಸಬಹುದಷ್ಟೆ. ಇಂತಹ ಸೇವೆಗಿಳಿದರೆ ಕಡೆಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುವುದಿಲ್ಲ. ನೀವೇನೋ ಸಮಾಜ ಸುಧಾರಣೆ ಬಗ್ಗೆ ಭಾಷಣ ಬಿಗಿಯುತ್ತೀರಿ. ಸಮಾಜ ಸುಧಾರಣೆ ಮಾಡೋಣ ಎಂದು ಯಾರಾದರೂ ಸರಳ ವಿವಾಹ, ಅಂತರಜಾತಿ ವಿವಾಹ ಬಯಸಿ, ವರದಕ್ಷಿಣೆ, ವರೋಪಚಾರ ವಿರೋಧಿಸಿದರು ಎಂದಿಟ್ಟುಕೊಳ್ಳಿ. ಅವರಿಗೆ ಕಡೆಗೆ ಸಿಗುವುದು "ದೋಷಾರೋಪಣೆ"ಯಷ್ಟೆ ಎಂದು ಅವರಿಗೆ ಮರುಪ್ರಶ್ನೆ ಹಾಕಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳಬಹುದು.)

ನಾವು ದೀನದಲಿತರಿಗೆ ಎಂದು ಅವಕಾಶಗಳನ್ನು ಸೃಷ್ಟಿಸಿಕೊಡಬಲ್ಲೆವು? ಅವರು ಘನತೆಯ ಜೀವನವನ್ನು ನಡೆಸಲು ಮೂಲಭೂತ ಸೌಕರ್ಯಗಳನ್ನು ಎಂದು ಖಾತ್ರಿಪಡಿಸಬಲ್ಲೆವು?ಎಂದು ಪ್ರಶ್ನೆಗಳನ್ನು ಹಾಕುವ ಆಮ್ಟೆ, ಎಂದು ಸಮಾಜದ ಅತ್ಯಂತ ಹಿಂದುಳಿದ ಸಮುದಾಯ ಪ್ರಗತಿ ಹೊಂದುತ್ತಾರೋ ಅಂದೇ ನಮ್ಮ ದೇಶ ನಿಜವಾಗಿಯೂ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಸಾಧ್ಯ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ.

ಕೆಲವೊಮ್ಮೆ ನಮ್ಮ ಸೋ ಕಾಲ್ಡ್ ಸಂಸ್ಕೃತಿ, ಪರಂಪರೆಗಳ ಬಗ್ಗೆ ನಾವು ಹೆಮ್ಮೆಪಡಬೇಕೆ ಎಂದು ಕೆಲವೊಮ್ಮೆ ನನಗನಿಸುತ್ತೆ ಎಂದು ದಿಟ್ಟವಾಗಿ ನುಡಿಯುವ ಅವರು, ಇದೇ ಸಂಸ್ಕೃತಿ ತಾನೇ "ಅಸ್ಪೃಶ್ಯತೆ"ಗೆ ಪ್ರೋತ್ಸಾಹವಿತ್ತದ್ದು? ನಾವು ಈಗಲೂ ವಿಕಲಚೇತನರಿಗೆ ಅವಕಾಶಗಳನ್ನು ಸೃಷ್ಟಿಸುವ ಬದಲು ಅವರನ್ನು ಆಡಿಕೊಂಡು ನಗುವುದಿಲ್ಲವೇ? ನನ್ನಪ್ಪ ಬಾಬಾ ಆಮ್ಟೆ, ಒಬ್ಬ ಜಾಡಮಾಲಿಯ ಸಂಕಷ್ಟವೇನು ಎಂದು ತಿಳಿದುಕೊಳ್ಳುವುದಕ್ಕೋಸ್ಕರ ತನ್ನ ತಲೆಯ ಮೇಲೆ ಮಲ ಹೊತ್ತಿದ್ದರು. ಆಗ ಅವರು, ಮಾನವ ದೇಹ ವಿಸರ್ಜಿಸುವುದನ್ನು ಅವರು ತಲೆ ಮೇಲೆ ಹೊರುತ್ತಾರೆ ಎನ್ನುವ ಕಾರಣಕ್ಕಾದರೂ ನಾವು ಜಾಡಮಾಲಿಗಳನ್ನು ಗೌರವಿಸಬೇಕು. ಆದರೆ, ನಾವೇನು ಮಾಡುತ್ತೇವೆ? ಅವರನ್ನು "ಅಸ್ಪೃಶ್ಯರು" ಎಂದು ಹೇಳಿ ನಮ್ಮ ಸಾಕುಪ್ರಾಣಿಗಳಿಗೆ ತೋರಿಸುವಷ್ಟು ಕನಿಷ್ಟ ಪ್ರೀತಿಯನ್ನೂ ತೋರಿಸದೆ, ಅವರನ್ನು ಗೌರವಹೀನರಾಗಿ ಕಾಣುತ್ತೇವೆ ಎಂದು ನೊಂದು ನುಡಿದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

(ನಮ್ಮೂರಿನಲ್ಲಿ ಸ್ವತಃ ನಾನೆ ಕಂಡಿದ್ದೇನೆ: ನಮ್ಮ "ಸನಾತನ ಹಿಂದೂ ಧರ್ಮ" ಸಮಾಜದಲ್ಲಿ "ಕೀಳು" ಎಂದು ಪರಿಗಣಿಸಿ, ಚಾತುರ್ವರ್ಣದಲ್ಲಿಯೂ ಸ್ಥಾನ ಕೊಡದೆ, ಅತಿಶೂದ್ರರು, ಚಾಂಡಾಲರು, ಪಂಚಮರು, ಹೊಲೆಮಾದಿಗರು ಎಂದು ಕರೆದಿರುವ ಜನ ಕೂಡ ಮಲ ಹೊರುವ ಜಾಡಮಾಲಿಗಳನ್ನು ಜರೆಯುತ್ತಿದ್ದರು. ಇನ್ನು ಉಳಿದ ಮೇಲ್ಜಾತಿಯವರು ಹೇಗೆ ತಾನೇ ಅವರನ್ನು ಗೌರವಿಸಿಯಾರೂ?)

ಇಂದಿನ ನಮ್ಮ ಸಮಾಜ ಅನುಕರಣ ಧೋರಣೆಯನ್ನು ತಾಳಿದೆ. ಹಳ್ಳಿಗರು ಪಟ್ಟಣಿಗರನ್ನು, ಪಟ್ಟಣಿಗರು ನಗರಿಗರನ್ನು ಹಾಗೂ ನಗರಿಗರು ಪಾಶ್ಚಿಮಾತ್ಯರನ್ನು ಅನುಕರಿಸುವುದೇ ಆಗಿದೆ. ಆದರೆ, ಈ ಮಾದರಿಗಳು ಅನುಕರಣಾಯೋಗ್ಯವೇ? ಅವು ನಮಗೆ ಹೊಂದುತ್ತವೆಯೇ? ನಮ್ಮ ಸಮಾಜದಲ್ಲಿ ತಕ್ಷಣ ಗಮನಹರಿಸಬೇಕಾದ ಹಲವಾರು ಪ್ರಶ್ನೆಗಳಿವೆ. ಅವುಗಳಿಗೆ ಉತ್ತರಗಳೇನು ಸರಳವಾಗಿಲ್ಲ. ಆದರೂ, ಉತ್ತರಗಳು ಹಾಗೂ ಪರಿಹಾರಗಳು ನಮ್ಮಿಂದಾಚೆಗೆ ನಾವು ನೋಡಿದಾಗ ಮಾತ್ರ ಆರಂಭವಾಗುತ್ತವೆ ಎಂದು ಆಮ್ಟೆಯವರು ಇಂದಿನ ಜರೂರಿನ ಬಗ್ಗೆ ಹೇಳುತ್ತಾರೆ.

ಎಲ್ಲರೂ ನಾವು ಇಲ್ಲಿ ಹೇಮಲ್ಕಾಸದಲ್ಲಿ ಮಾಡುತ್ತಿರುವ ಹಾಗೆಯೇ ಮಾಡಬೇಕೆಂದೇನಿಲ್ಲ. ಆದರೆ, ನೀವು ನಿಮ್ಮ ಪ್ರದೇಶದ ಕೊಳಗೇರಿಗಳಿಗೆ ಭೇಟಿ ಕೊಡಿ. ಒಮ್ಮೆ ನೀವು ಬೇಟಿ ಕೊಟ್ಟಲ್ಲಿ, ಖಂಡಿತವಾಗಿಯೂ ನಿಮಗನಿಸುತ್ತದೆ ಕೊಳಗೇರಿವಾಸಿಗರಿಗೆ ಉತ್ತಮ ಜೀವನದ ಅವಶ್ಯಕತೆಯಿದೆ ಎಂದು. ಇಂತಹ ಭಾವನೆ ಹೊರಹೊಮ್ಮಿದಾಗಲೇ ನಿಜವಾದ ಸುಧಾರಣೆ ಆರಂಭವಾಗುತ್ತದೆ. ಅದನ್ನು ಬೆಳೆಸಿಕೊಳ್ಳಿ, ನಿಮಗೆ ಸಾಧ್ಯವಾದಷ್ಟನ್ನು ನೀವು ಖಂಡಿತ ಮಾಡಬಲ್ಲಿರಿ. (ಜಲವೊಂದೇ ಹೊಲಗೇರಿ ಶಿವಾಲಯಕೆ!)

ನಾನು ಅಂತಹ ಸುಧಾರಣೆಯನ್ನು ಕಂಡಿದ್ದೇನೆ. ನಮ್ಮ ಯೋಜನೆಗಳಿಗೆ ಭೇಟಿ ಕೊಟ್ಟ ವೈದ್ಯರುಗಳು, ವಕೀಲರು ಉಚಿತ ಸೇವೆಯನ್ನು ಒದಗಿಸುತ್ತಿದ್ದಾರೆ. ಹೇಮಲ್ಕಾಸದಲ್ಲಿನ ನಮ್ಮ ಶಾಲೆಯಲ್ಲಿ ತೇರ್ಗಡೆ ಹೊಂದಿದ ಮಕ್ಕಳಲ್ಲಿ ಶೇ.90ರಷ್ಟು ಮಂದಿ ತಮ್ಮ ತಮ್ಮ ಹಳ್ಳಿಗಳಲ್ಲಿಯೇ ಉಳಿದಿದ್ದಾರೆ. ಕೆಲವರು ಶಿಕ್ಷಕರು, ವೈದ್ಯರು, ವಕೀಲರಾಗಿದ್ದಾರೆ. ಈ ಶ್ರೀಮಂತಿಕೆಯ ಹುಚ್ಚನ್ನು ಅವರು ಪ್ರಜ್ಞಾಪೂರ್ವಕವಾಗಿ ತೊರೆದಿದ್ದಾರೆ ಎಂದು ಹೇಳುವ ಮೂಲಕ ಆಮ್ಟೆಯವರು ಇಂದಿನ ಸಮಾಜದ ಸುಧಾರಣೆಗಾಗಿ ಎಲ್ಲರಿಗೂ ಕರೆಯಿತ್ತಿದ್ದಾರೆ.

ಇಂದು ನಮ್ಮ ರಾಷ್ಟ್ರ ವಾರ್ಷಿಕವಾಗಿ 58,000 ಕೋಟಿ ರೂಪಾಯಿ ಮೌಲ್ಯದ ಆಹಾರವನ್ನು ವ್ಯರ್ಥವಾಗಿ ಚೆಲ್ಲುತ್ತದೆ. ಆದರೆ, ಇಲ್ಲಿ ಹಸಿವಿನಿಂದ ಸಾವಿಗೀಡಾಗುವವರ ಸಂಖ್ಯೆ ಎಷ್ಟು ಎಂದು ಹೇಳಲು ಬಾರದು. ಇಂದಿನ ಯುವಜನತೆಯಲ್ಲಿ ನಾನು Positive restlessness ಅನ್ನು ಕಾಣುತ್ತೇನೆ. ಈ Positive restlessness ಅನ್ನು ಸೃಷ್ಟಿಶೀಲ ಪ್ರಯತ್ನವಾಗಿಸಬೇಕಾದ ಬಲವಾದ ಅವಶ್ಯಕತೆಯಿದೆ. ಪ್ರತಿಯೊಬ್ಬರೂ ತಮ್ಮ ಯೌವ್ವನದಲ್ಲಿ ನೋವು, ಕಾಳಜಿ ಹಾಗೂ ಸಹಾನುಭೂತಿ ಹೊಂದಿರುತ್ತಾರೆ. ಆದರೂ, ಕ್ರಮೇಣ ಶ್ರೀಮಂತಿಕೆಯನ್ನು ಅರಸಿ ಹೊರಟು ಇವೆಲ್ಲವನ್ನೂ ಬದಿಗಿಡುತ್ತಾರೆ. ಇಂತಹ ಸಂದರ್ಭದಲ್ಲೇ ಅಲ್ಲವೇ ಅವರು ನಮ್ಮ "ಉಳಿದ ಭಾರತ"ದ ಬಗ್ಗೆ ಕಾಳಜಿ ಹೊಂದುವ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿರುವುದು.

ಹೀಗೆ ಸಮಾಜಸೇವೆಗೆ ತಮ್ಮ ತನುಮನಧನವನ್ನು ಅರ್ಪಿಸಿ ಸಮರ್ಪಣಾ ಮನೋಭಾವದಿಂದ ಮಾನವ ಕುಲದ ಸೇವೆಯಲ್ಲಿ ಅವಿರತವಾಗಿ ತೊಡಗಿಕೊಂಡಿರುವ ಆಮ್ಟೆ ಕುಟುಂಬದ ಈ "ಭಾರತ ರತ್ನ" ನಮ್ಮ ರಾಷ್ಟ್ರದ ಇಂದಿನ ಸಮಾಜಕ್ಕೆ ನೀಡಿರುವ ಈ ಸಂದೇಶ, ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ಧ್ವಜವೇರಿಸಿ ವರ್ಷಕ್ಕೊಮ್ಮೆ "ದೇಶಪ್ರೇಮದ ಸಿದ್ಧಪಾಠ"ವನ್ನು ಒಪ್ಪಿಸುವ ನಮ್ಮ ರಾಷ್ಟ್ರನಾಯಕರ ಸಂದೇಶಕ್ಕಿಂತ ಎಷ್ಟು ಅರ್ಥಪೂರ್ಣ ಅಲ್ಲವೇ?

ಬನ್ನಿ ಗೆಳೆಯರೇ, ಈ "ಭಾರತ ರತ್ನ" ನೀಡಿರುವ ಸಂದೇಶವನ್ನು ನಮ್ಮ ಕೈಲಾದಷ್ಟು ಪಾಲಿಸುವುದಕ್ಕೆ ಮುಂದಾಗೋಣ. ನಮ್ಮ ದೇಶದ "ಅಮರ ಚೇತನಗಳು" ತಮ್ಮ ನೆತ್ತರಿನ ಹೊಳೆಯನ್ನು ಹರಿಸಿ ಆಂಗ್ಲರಿಂದ ಬಂಧಮುಕ್ತರಾಗಿಸಿ ನಮಗೆ ತಂದುಕೊಟ್ಟಿರುವ ಈ ಸ್ವಾತಂತ್ರ್ಯವನ್ನು "ಅರ್ಹತೆಗೆ ಸಂದ ಜಯ" ಎನ್ನುವಂತೆ ಮಾಡುವುದಕ್ಕಾಗಿ ಶ್ರಮಿಸೋಣ!

"ಕಟ್ಟೋಣ ನಾವು ಹೊಸ ನಾಡೊಂದನು, ರಸದ ಬೀಡೊಂದನು...!"

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ

[ಸೂಚನೆ: ಚೌಕಟ್ಟಿನ ಒಳಗಿರುವ ( ) ವಾಕ್ಯಗಳು ನನ್ನವು. ಈಗಿನ ಸಮಾಜ ಹೇಗೆ ಆಮ್ಟೆಯವರ ಪ್ರಶ್ನೆಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದಕ್ಕೆ ಸಣ್ಣ ಉದಾಹರಣೆಯಾಗಿ ನೀಡಿದ್ದೇನೆ ಹಾಗೂ ಅವರ ಪ್ರಶ್ನೆಗಳೊಂದಿಗೆ ನನ್ನ ಕೆಲವು ಪ್ರಶ್ನೆಗಳನ್ನು ಮುಖಾಮುಖಿಯಾಗಿಸಿದ್ದೇನೆ.]